ಊಟದ ತಟ್ಟೆಯಲ್ಲಿ ಕಾಂಚಾಣ ನರ್ತನ

ಆರೋಗ್ಯ ಆಶಯ – ವಿಜಯ ಕರ್ನಾಟಕ: ಊಟದ ತಟ್ಟೆಯಲ್ಲಿ ಕಾಂಚಾಣ ನರ್ತನ [ಅಕ್ಟೋಬರ್ 16, 2013, ಬುಧವಾರ] [ನೋಡಿ | ನೋಡಿ]

ಆಹಾರ ಉತ್ಪಾದನೆ ಉದ್ಯಮವಾದಂತೆಲ್ಲ ಹಸಿವು ನೀಗಿಸುವ ಗುರಿ ಕಳೆದುಹೋಗಿ ಲಾಭ-ನಷ್ಟದ ಲೆಕ್ಕಾಚಾರಗಳಷ್ಟೆ ಮೇಲುಗೈ ಸಾಧಿಸಿದವು

‘ಆಹಾರದ ಸುರಕ್ಷತೆಗಾಗಿ ಹಾಗೂ ಪೋಷಣೆಗಾಗಿ ಸುಸ್ಥಿರ ಆಹಾರ ವ್ಯವಸ್ಥೆಗಳು’ ಎಂಬ ಹೊಸ ಉದ್ಘೋಷದೊಂದಿಗೆ ಅಕ್ಟೋಬರ್ 16ರ ವಿಶ್ವ ಆಹಾರ ದಿನಾಚರಣೆ ಮತ್ತೆ ಬಂದಿದೆ. ವಿಶ್ವದೆಲ್ಲೆಡೆ ದಶಕಗಳಿಂದ ಇದನ್ನು ಆಚರಿಸಲಾಗುತ್ತಿದ್ದರೂ ವರ್ಷದಿಂದ ವರ್ಷಕ್ಕೆ ಆಹಾರದ ಪೂರೈಕೆ ಇಳಿಯುತ್ತಲೇ ಇದೆ, ಹಸಿದವರ ಸಂಖ್ಯೆ ಹಾಗೆಯೇ ಉಳಿದಿದೆ. ವರ್ಷಕ್ಕೆ ನಾಲ್ಕು ಕೋಟಿ ಜನ ಸರಿಯಾದ ಊಟವಿಲ್ಲದೆ ಸಾಯುತ್ತಿದ್ದಾರೆ, ಮೂರರಲ್ಲೊಂದು ಮಗು ನ್ಯೂನಪೋಷಣೆಯಿಂದ ನರಳುತ್ತಿದೆ.

ವಿಶ್ವದ ಜನರೆಲ್ಲರಿಗೆ ಸಾಕಾಗುವಷ್ಟು ಆಹಾರವು ಲಭ್ಯವಿಲ್ಲವೇ? ಇದೆ. ಏಳ್ನೂರು ಕೋಟಿ ಹೊಟ್ಟೆಗಳನ್ನು ತುಂಬುವುದಕ್ಕೆ ಸಾಕಾಗುವಷ್ಟು ಧಾನ್ಯಗಳನ್ನು ನಾವು ಬೆಳೆಯುತ್ತಿದ್ದೇವೆ. ಅದರ ಜೊತೆಗೆ ತರಕಾರಿಗಳು, ಬೀಜಗಳು, ಹಣ್ಣುಗಳು, ಮೀನು-ಮಾಂಸ-ಮೊಟ್ಟೆ ಇತ್ಯಾದಿಗಳೂ ಇವೆ. ಹಾಗಿದ್ದರೂ ನೂರು ಕೋಟಿ ಜನರಿಗೆ ಇವು ದಕ್ಕುವುದೇ ಇಲ್ಲ. ಕಳೆದ ವರ್ಷ 70 ಲಕ್ಷ ಟನ್ ಗೋಧಿಯನ್ನೂ, 85 ಲಕ್ಷ ಟನ್ ಅಕ್ಕಿಯನ್ನೂ ರಫ್ತು ಮಾಡಿದ ಭಾರತದಲ್ಲಿ ಪ್ರತಿ ನಿತ್ಯವೂ 30 ಕೋಟಿ ಜನ ಹಸಿವಿನಲ್ಲಿ ಮಲಗುತ್ತಾರೆ, 3000 ಮಕ್ಕಳು ಹಸಿವಿನಿಂದ ಸಾಯುತ್ತಾರೆ. ಅಂದರೆ, ನಾವು ಬೆಳೆಯುತ್ತಿರುವ ಆಹಾರವು ಬೇರೆ ದಾರಿ ಹಿಡಿಯುತ್ತಿದೆ ಎಂದಾಯಿತು.

ಎರಡು ಲಕ್ಷ ವರ್ಷಗಳಷ್ಟು ಹಿಂದೆ ಮಾನವ ಸಂತತಿ ವಿಕಾಸ ಹೊಂದಿದಾಗ ಎಲೆಯಿಂದ ಹಿಡಿದು ಬೀಜದವರೆಗೆ, ಇರುವೆಯಿಂದ ಹಿಡಿದು ಆನೆಯವರೆಗೆ ಪ್ರಕೃತಿದತ್ತವಾದ ಎಲ್ಲವನ್ನೂ ತಿನ್ನಬಲ್ಲ ಸಾಮರ್ಥ್ಯವು ಅವನಿಗೆ ದಕ್ಕಿತ್ತು. ಸುಮಾರು ಹತ್ತು ಸಾವಿರ ವರ್ಷಗಳ ಹಿಂದಿನವರೆಗೂ ಮನುಷ್ಯರು ಕಾಡುಮೇಡುಗಳಲ್ಲಿ ಅಲೆಯುತ್ತಾ ಬಗೆಬಗೆಯ ಸಸ್ಯ-ಮಾಂಸಗಳನ್ನು ತಿನ್ನುತ್ತಿದ್ದರು. ಅಲ್ಲಿಂದೀಚೆಗೆ ಶರಾಬಿನ ಆಸೆಗಾಗಿ ಧಾನ್ಯಗಳನ್ನು ಬೆಳೆಯತೊಡಗಿ, ಅದೇ ಮುಖ್ಯ ಆಹಾರವಾಗಿಬಿಟ್ಟಿತು. ಜೊತೆಗೆ ಕೆಲವೊಂದು ಪ್ರಾಣಿ-ಪಕ್ಷಿಗಳನ್ನು ಸಾಕಿ ಆಹಾರಕ್ಕಾಗಿ ಬಳಸುವ ಕ್ರಮವೂ ಆರಂಭಗೊಂಡಿತು. ಹೀಗೆ ಕೃಷಿ ಮತ್ತು  ನಾಗರಿಕತೆ ಹುಟ್ಟಿಕೊಂಡಲ್ಲಿಂದಲೇ ಆಹಾರದ ಸಂಕಟವೂ ಆರಂಭಗೊಂಡಿತು. ವೈವಿಧ್ಯತೆ ಕಡಿಮೆಯಾಗಿ ಸಾಕಿ-ಬೆಳೆಸಿದ್ದನ್ನಷ್ಟೇ ತಿನ್ನುವುದಾಯಿತು.

ಬೇಸಾಯದೊಂದಿಗೆ ಆಸ್ತಿ-ರಾಜ್ಯಗಳು ಹುಟ್ಟಿಕೊಂಡವು, ದುಡಿಯುವವರು ಮತ್ತು ದುಡಿಸುವವರು ಬೇರೆಯಾದರು. ದುಡಿದವನು ಬೆಳೆಸಿದ ಆಹಾರವು ದುಡಿಸಿದವನ ಸುಪರ್ದಿಗೆ ಸೇರಿತು; ದುಡಿಸಿದವನ ಹೊಟ್ಟೆ ಸದಾ ತುಂಬಿದ್ದರೆ, ದುಡಿದವನು ತಾನೇ ಬೆಳೆದ ಅನ್ನಕ್ಕಾಗಿ ಬೇಡಬೇಕಾದ ಅವಸ್ಥೆಯುಂಟಾಯಿತು. ಮುಂದೆ ಕೃಷಿ ಭೂಮಿಗಳೂ, ಧಾನ್ಯಗಳ ಉಗ್ರಾಣಗಳೂ ಜಮೀನ್ದಾರರು ಹಾಗೂ ರಾಜರುಗಳ ಪಾಲಾದವು. ಇವರೆಲ್ಲರೂ ಹಸಿದವರ ಸಿಟ್ಟನ್ನು ನೇರವಾಗಿ ಎದುರಿಸಬೇಕಾಗಿದ್ದುದರಿಂದ ಆಹಾರದ ವಿತರಣೆಯಲ್ಲಿ ಹೆಚ್ಚು ಮೋಸ ಮಾಡುವುದಾಗುತ್ತಿರಲಿಲ್ಲ.

ಬ್ರಿಟಿಷ್ ಚಕ್ರಾಧಿಪತ್ಯವು ಸೂರ್ಯ ಮುಳುಗದ ತನ್ನ ಸಾಮ್ರಾಜ್ಯದುದ್ದಕ್ಕೂ ಆಹಾರವಸ್ತುಗಳನ್ನು ಬೆಳೆದು ಬ್ರಿಟಿಷ್ ಪ್ರಜೆಗಳಿಗಾಗಿಯೂ, ಇತರೆಡೆ ಮಾರುವುದಕ್ಕಾಗಿಯೂ ಹೊತ್ತೊಯ್ಯುತ್ತಿತ್ತು. ಇತ್ತ ವಸಾಹತುಗಳಲ್ಲಿ ದುಡಿಯುತ್ತಿದ್ದವರು ತಮ್ಮ ಹೊಟ್ಟೆ ತುಂಬಿಸಲು ಬ್ರಿಟಿಷರೆದುರು ಕೈಯೊಡ್ಡಬೇಕಾಗಿತ್ತು. ಆ ಮೂರು ಶತಮಾನಗಳಲ್ಲಿ ಮೂರು ಭೀಕರ ಕ್ಷಾಮಗಳಾಗಿ, ಕೋಟಿಗಟ್ಟಲೆ ಭಾರತೀಯರು ಊಟಕ್ಕಿಲ್ಲದೆ ಸತ್ತರು, ಆದರೆ ಆಹಾರದ ರಫ್ತು ಮಾತ್ರ ನಿಲ್ಲಲಿಲ್ಲ: 1875-1900ರ ನಡುವೆ ಮೂರು ಕೋಟಿ ಜನ ಹಸಿವಿನಿಂದ ಸತ್ತರೆ, ಆಹಾರದ ರಫ್ತಿನ ಪ್ರಮಾಣವು ವರ್ಷಕ್ಕೆ ಮೂವತ್ತು ಲಕ್ಷ ಟನ್ ನಿಂದ ಒಂದು ಕೋಟಿ ಟನ್ನಿಗೇರಿತು.

ಹೊಸ ತಂತ್ರಜ್ಞಾನಗಳು, ಹೊಸ ರಾಜಕೀಯ-ಆರ್ಥಿಕ ವ್ಯವಸ್ಥೆಗಳು ನೆಲೆಗೊಂಡಂತೆ ಆಹಾರದ ಉತ್ಪಾದನೆ ಹಾಗೂ ವಿತರಣೆಗಳು ದುಡಿಯುವವರ ಕೈಗಳಿಂದ ಇನ್ನಷ್ಟು ದೂರವಾದವು. ಆಹಾರದ ಉತ್ಪಾದನೆಯು ಬೃಹತ್ ಉದ್ಯಮಗಳ ಪಾಲಾಯಿತು, ಆಹಾರವು ಜನರ ತಟ್ಟೆಗಳಿಂದ ಖಾಸಗಿ ಗೋದಾಮುಗಳನ್ನು ಸೇರಿತು, ಹೊಟ್ಟೆಗಳು ತುಂಬುವ ಬದಲು ಆರೇಳು ಬಹುರಾಷ್ಟ್ರೀಯ ಕಂಪೆನಿಗಳ ತಿಜೋರಿಗಳು ತುಂಬತೊಡಗಿದವು. ಆಹಾರವು ಬದುಕಿನ ಅನಿವಾರ್ಯತೆಗಿಂತಲೂ ಕಂಪೆನಿಗಳ ಲಾಭದ ಸರಕಾಯಿತು. ಈ ಲಾಭವನ್ನು ಹೆಚ್ಚಿಸುವುದಕ್ಕಾಗಿ ಆಹಾರದ ಉತ್ಪಾದನೆ ಹಾಗೂ ಸಂಸ್ಕರಣೆಗಳ ತಂತ್ರಜ್ಞಾನಗಳು ಅಭಿವೃದ್ಧಿಗೊಂಡವು. ಹಿಂದೆ ನೆಲದ ಸಾರವನ್ನು ಕಾಪಾಡುವುದಕ್ಕೆ ಬೆಳೆಗಳ ಆವರ್ತನೆಯಾಗುತ್ತಿತ್ತು. ಕೃತಕ ರಸಗೊಬ್ಬರಗಳು ಬಂದ ಬಳಿಕ ಬೆಳೆದದ್ದನ್ನೇ ಬೆಳೆಯುವುದಾಯಿತು. ಅಲ್ಲದೆ ಕೃಷಿಯು ನೈಸರ್ಗಿಕ ಅನಿಲ ಹಾಗೂ ತೈಲಗಳ ವ್ಯವಹಾರದೊಂದಿಗೆ ತಳುಕು ಹಾಕಿ ತೈಲದ ಬೆಲೆಯು ಆಹಾರದ ಬೆಲೆಗೂ ತಟ್ಟಿತು. ಮಣ್ಣಿನಲ್ಲಿ ಕೃತಕ ಸಾರಜನಕ ತುಂಬಿದಂತೆ ಪೈರಿನ ಶಕ್ತಿಗುಂದಿ ಕೀಟಗಳ ಕಾಟ ಹೆಚ್ಚಿತು; ಹೀಗೆ ಕೀಟನಾಶಕಗಳು ನಮ್ಮ ಆಹಾರದೊಳಕ್ಕೆ ಹೊಕ್ಕವು. ರೈತರು ರಸಗೊಬ್ಬರ ಮತ್ತು ಕೀಟನಾಶಕ ತಯಾರಕರ ದಾಸರಾದರು. ಉತ್ಪಾದನೆ ಹೆಚ್ಚಿತು, ಊಟ ಕೆಟ್ಟಿತು.

ದೈತ್ಯ ಕಂಪೆನಿಗಳ ದಾಹ ಇಷ್ಟಕ್ಕೇ ತೀರಲಿಲ್ಲ. ಹೆಚ್ಚು ಇಳುವರಿಯ ತಳಿಗಳು ಬಂದವು. ಕಳೆನಾಶಕಗಳನ್ನು ಸಹಿಸಿಕೊಳ್ಳುವ, ಕೀಟಗಳನ್ನು ನಿರೋಧಿಸುವ, ಮತ್ತೆ ಮೊಳೆಯದ ಅಂತಕ ಬೀಜಗಳ ಕುಲಾಂತರಿ ಸಸ್ಯಗಳು ಬಂದವು. ರೈತರ ದಾಸ್ಯ ಇನ್ನಷ್ಟು ಕಠಿಣವಾಗಿ ಬೀಜಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದೇ ಅಪರಾಧವಾಯಿತು. ಶತಮಾನಗಳಿಂದ ಮನುಕುಲದ ಬಳಿಯಿದ್ದ ಬೀಜ ವೈವಿಧ್ಯತೆ ನಶಿಸತೊಡಗಿ ಮೊನ್ಸಾಂಟೋ, ಕಾರ್ಗಿಲ್ ಮುಂತಾದ ದೈತ್ಯ ಕಂಪೆನಿಗಳ ಏಕಸ್ವಾಮ್ಯತೆ ಮೆರೆಯತೊಡಗಿತು. ಒಂದೊಂದೂರಿನ ಒಂದೊಂದು ಆಹಾರದ ಬದಲು ವಿಶ್ವದೆಲ್ಲೆಡೆ ಒಂದೇ ಆಹಾರವೆಂಬ ದುರ್ಗತಿ ಮೂಡಿತು.

ಆಹಾರದ ಉತ್ಪಾದನೆ ಹೆಚ್ಚಿದಂತೆ ವ್ಯಾಪಾರವೂ ಹೆಚ್ಚಬೇಕಲ್ಲ? ಆದರೆ ಜನಸಂಖ್ಯೆಯಾಗಲೀ, ತಿನ್ನುವ ಪ್ರಮಾಣವಾಗಲೀ ಹಾಗೆಲ್ಲ ಹೆಚ್ಚವು. ಇನ್ನು ದುಡ್ಡಿಲ್ಲದವರಿಗೆ ಆಹಾರವನ್ನು ಒದಗಿಸಿದರೆ ಲಾಭವಾಗದು. ಹಾಗಾಗಿ ಹೇರಳವಾಗಿ ಬೆಳೆಯುವ ಜೋಳವನ್ನು ಮಾಂಸಕ್ಕಾಗಿ ಸಾಕುವ ಪ್ರಾಣಿಗಳಿಗೆ ತಿನ್ನಿಸಲಾರಂಭಿಸಲಾಯಿತು. ಅಡ್ಡಾಡಿ ಹುಲ್ಲು ಮೇಯುವ ಪಶುಗಳು ಬಲಿಯುವುದಕ್ಕೆ ನಾಲ್ಕು ವರ್ಷಗಳಾಗುವಲ್ಲಿ ಕೂಡಿಹಾಕಿ ಜೋಳ ಮುಕ್ಕಿಸಿದವುಗಳು ಒಂದೂವರೆ ವರ್ಷಗಳಲ್ಲೇ ಬಲಿಯುವುದರಿಂದ ಮಾಂಸದ ವ್ಯಾಪಾರಕ್ಕೂ ಒಳಿತಾಯಿತು! ಧಾನ್ಯಗಳನ್ನು ತಿಂದ ಪಶುಗಳಿಗೆ ಸೋಂಕು ಹೆಚ್ಚುವುದರಿಂದ ಪ್ರತಿಜೈವಿಕಗಳ ಬಳಕೆಯೂ ಹೆಚ್ಚಿತು, ಅದರಲ್ಲೂ ಲಾಭ ಹುಟ್ಟಿತು. ಆಕಳು, ಹಂದಿಗಳು, ಕೋಳಿಗಳು ಹಾಗೂ ಕೆಲಬಗೆಯ ಮೀನುಗಳಿಗೆ ಇಂದು ಜೋಳ, ಸೋಯಾ ಮುಂತಾದ ಧಾನ್ಯಗಳನ್ನು ಆಹಾರವಾಗಿ ನೀಡಲಾಗುತ್ತಿದೆ. ಬ್ರೆಜಿಲಿನ ಅಮೆಜಾನ್ ಕಾಡುಗಳನ್ನು ಕತ್ತರಿಸಿ, ಅಲ್ಲಿ ಬೆಳೆದ ಸೋಯಾವನ್ನು ಚೀನಾ ಹಾಗೂ ಜಪಾನಿನ ಕೋಳಿಗಳಿಗಾಗಿ ರಫ್ತು ಮಾಡಲಾಗುತ್ತಿದೆ.

ವಾಹನಗಳ ಸಂಖ್ಯೆ ಹೆಚ್ಚಿ ತೈಲ ದುಬಾರಿಯಾದಂತೆ ಬದಲಿ ಇಂಧನವಾಗಿ ಜೋಳದಿಂದ ತಯಾರಿಸಿದ ಎಥನಾಲ್ ಬಳಕೆಗೆ ಬಂತು. ಹೀಗೆ ಆಹಾರದ ದೊಡ್ಡ ಪಾಲು ಸಾಕು ಪ್ರಾಣಿ-ಪಕ್ಷಿಗಳಿಗೂ, ಜೀವವಿಲ್ಲದ ವಾಹನಗಳಿಗೂ ಹಂಚಲ್ಪಟ್ಟಿತು. ಶ್ರೀಮಂತನೊಬ್ಬನ ಕಾರಿಗೆ ಒಮ್ಮೆ ತುಂಬುವ ಇಥನಾಲ್ ಗೆ ಬೇಕಾಗುವ ಜೋಳವು ಒಬ್ಬ ಬಡವನ ಹೊಟ್ಟೆಗೆ ಇಡೀ ವರ್ಷದ ಆಹಾರವಾಗಬಲ್ಲದು ಎಂದರೆ ಈ ವ್ಯವಸ್ಥೆಯ ಕ್ರೌರ್ಯವು ಸ್ಪಷ್ಟವಾಗುತ್ತದೆ.

ಆಹಾರ ಸಂಸ್ಕರಣೆಯೂ ದೊಡ್ಡ ಉದ್ಯಮವಾಗಿ ಬೆಳೆದಿದ್ದು ನಿಸರ್ಗದತ್ತ ಆಹಾರವೇನೆನ್ನುವುದು ನಮಗೆ ಮರೆತೇ ಹೋಗುವಂತಾಗಿದೆ. ಗೋಧಿ, ಜೋಳ ಹಾಗೂ ಸೋಯಾಗಳ ಸಿಪ್ಪೆಯಿಂದ ತಿರುಳಿನವರೆಗೆ ಎಲ್ಲವನ್ನೂ ಹಿಂಡಿ ಹಿಪ್ಪೆ ಮಾಡಿ ಸಕ್ಕರೆ, ಪಿಷ್ಠ ಹಾಗೂ ಎಣ್ಣೆಗಳನ್ನು ಬೇರ್ಪಡಿಸಿ, ಅತ್ತಿತ್ತ ಬೆರೆಸಿ, ಆಕರ್ಷಕ ಪೊಟ್ಟಣಗಳಲ್ಲಿರಿಸಿ ಅದನ್ನೇ ಆಹಾರವೆಂದು ಮಾರಲಾಗುತ್ತಿದೆ; ಎರಡು ರೂಪಾಯಿಯ ಜೋಳದಿಂದ ಇನ್ನೂರು ರೂಪಾಯಿಯ ಉತ್ಪನ್ನಗಳಾಗುತ್ತಿವೆ. ಇವುಗಳನ್ನು ತಿನ್ನುವವರನ್ನೂ ಇದೇ ದೈತ್ಯ ಕಂಪೆನಿಗಳು ಸಿದ್ಧ ಪಡಿಸುತ್ತವೆ. ಆಹಾರದ ಉತ್ಪಾದನೆ, ಶೇಖರಣೆ, ಸಂಸ್ಕರಣೆ ಹಾಗೂ ಮಾರಾಟಗಳೆಲ್ಲವೂ ಆರೇಳು ದೈತ್ಯ ಕಂಪೆನಿಗಳ ಅಧೀನವಾಗಿ, ಸಣ್ಣ ಕೃಷಿಕರು ತಮ್ಮ ಜಮೀನುಗಳನ್ನು ತೊರೆದು ನಗರಗಳ ಕೊಳೆಗೇರಿಗಳಿಗೆ ವಲಸೆ ಹೋಗುವಂತಾಗಿದೆ. ಹೀಗೆ ಗುಳೆ ಹೋದ ರೈತರು ಅಗ್ಗವಾಗಿ ದಿನವಿಡೀ ದುಡಿಯುತ್ತಾ, ಊಟಕ್ಕೂ ಸಮಯವಿಲ್ಲದೆ ಸಂಸ್ಕರಿತ ಬ್ರೆಡ್ಡು-ಬಿಸ್ಕತ್ತುಗಳನ್ನು ತಿಂದು ಬದುಕುವಂತಾಗಿದೆ. ಅದರಿಂದಾಗಿ ಬೊಜ್ಜು, ಮಧುಮೇಹ, ಹೃದ್ರೋಗ, ಕ್ಯಾನ್ಸರ್ ಮುಂತಾದ ಕಾಯಿಲೆಗಳೆಲ್ಲವೂ ವಿಪರೀತವಾಗುತ್ತಿದ್ದು, ದೈತ್ಯ ಕಂಪೆನಿಗಳಿಗೆ ಇನ್ನಷ್ಟು ಲಾಭವಾಗುತ್ತಿದೆ.

ಆಹಾರದ ಈ ಬಿಕ್ಕಟ್ಟಿನಿಂದ ವಿಮೋಚಿತರಾಗಲು ಪರಂಪರಾಗತ ಆಹಾರ ವ್ಯವಸ್ಥೆಯತ್ತ ಹೊರಳುವುದೊಂದೇ ದಾರಿಯಾಗಿದೆ. ತಮ್ಮ ಪರಂಪರಾಗತ ಆಹಾರವನ್ನು ಬಿಟ್ಟುಕೊಡದಿರುವ ಅದೆಷ್ಟೋ ಬುಡಕಟ್ಟುಗಳು ಈ ಕಷ್ಟಗಳಿಂದ ತಪ್ಪಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ಇಂದು ವಿಶ್ವದ ಮೂಲೆ ಮೂಲೆಗಳಲ್ಲಿ ರೈತ ಸಂಘಟನೆಗಳು ಆಹಾರ ಸುರಕ್ಷತೆಯ ಬದಲಿಗೆ ಆಹಾರದ ಸಾರ್ವಭೌಮತೆಯ ಹಕ್ಕೊತ್ತಾಯಿಸತೊಡಗಿವೆ. ತಿನ್ನುವುದಕ್ಕೆಂದು ಏನನ್ನೋ ಒದಗಿಸಿದರಾಗದು, ನಮ್ಮ ಆಹಾರವೇನೆಂದು ನಿರ್ಧರಿಸುವ ಸ್ವಾತಂತ್ರ್ಯ ನಮಗೇ ಇರಬೇಕು. ಭೂ ಒಡೆತನ, ಕೃಷಿಗೆ ಅಗತ್ಯವಾದ ನೀರು ಮತ್ತಿತರ ಸಂಪನ್ಮೂಲಗಳ ಒದಗಣೆ,  ಕೃಷಿಸಂಬಂಧಿ ನೀತಿನಿರೂಪಣೆಯಲ್ಲಿ ಭಾಗೀದಾರಿಕೆಗಳಿಗಾಗಿ ಹಾಗೂ ಉದ್ಯಮಶಾಹಿಯಿಂದ ಪರಿಸರ ವಿನಾಶವನ್ನು ತಡೆಯುವುದಕ್ಕಾಗಿ ಹೋರಾಟಗಳು ಬಲಗೊಳ್ಳುತ್ತಿವೆ. ವಿವೇಕಹೀನವಾದ, ಮಾನವ ವಿರೋಧಿಯಾದ ಪ್ರಸಕ್ತ ವ್ಯವಸ್ಥೆಯು ಕೊನೆಗೊಂಡು ನಮ್ಮ ಪಕ್ಕದ ಹೊಲದಲ್ಲಿ ನಮ್ಮೂರಿನ ಬೀಜಗಳಿಂದ ನಮಗೆ ಬೇಕಾದ ಧಾನ್ಯಗಳನ್ನೂ, ನಮಗೆ ಬೇಕಾದ ಮೀನು-ಪ್ರಾಣಿ-ಪಕ್ಷಿಗಳನ್ನೂ ಸಾಕಿ-ಬೆಳೆಸಿ ನಮ್ಮ ಆಹಾರಕ್ಕಾಗಿ ಬಳಸಿಕೊಳ್ಳುವ ಸಾರ್ವಭೌಮ ಹಕ್ಕು ನಮಗೆ ದೊರೆಯಬೇಕು.

ಮೂಲಾಹಾರದಿಂದ ಮಧುಮೇಹ ವಿಮೋಚನೆ

ಆರೋಗ್ಯ ಆಶಯ – ವಿಜಯ ಕರ್ನಾಟಕ: ಮೂಲಾಹಾರದಿಂದ ಮಧುಮೇಹ ವಿಮೋಚನೆ [ನವಂಬರ್ 13, 2013, ಬುಧವಾರ] [ನೋಡಿ | ನೋಡಿ]

ನಮ್ಮನ್ನು ಕಾಡುತ್ತಿರುವ ಆಧುನಿಕ ರೋಗಗಳಿಂದ ಮುಕ್ತಿ ಪಡೆಯಬೇಕೆಂದರೆ ಹಳೆ ಶಿಲಾಯುಗದ ಆಹಾರಕ್ಕೆ ಮರಳಬೇಕು

ಈಗ ವಿಶ್ವದಾದ್ಯಂತ ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ ಸುಮಾರು 37 ಕೋಟಿ, ಅದರ ಚಿಕಿತ್ಸೆಗೆ ಮಾಡಲಾಗುತ್ತಿರುವ ಖರ್ಚು ಸುಮಾರು 46500 ಕೋಟಿ ಡಾಲರುಗಳು, ಇದರಲ್ಲಿ ಔಷಧಗಳ ವಹಿವಾಟು ಸುಮಾರು 3500 ಕೋಟಿ ಡಾಲರುಗಳು. ಇನ್ನೈದು ವರ್ಷಗಳಲ್ಲಿ ರೋಗಿಗಳ ಸಂಖ್ಯೆ ಸುಮಾರು 45 ಕೋಟಿಯಷ್ಟಾಗಿ, ಔಷಧಗಳ ವಹಿವಾಟು 5800 ಕೋಟಿ ಡಾಲರುಗಳನ್ನು ಮೀರಬಹುದೆನ್ನುವುದು ಕಂಪೆನಿಗಳ ಲೆಕ್ಕಾಚಾರ.

ಎಂಭತ್ತು ವರ್ಷಗಳಿಗೂ ಹಿಂದೆ ಇನ್ಸುಲಿನ್ ಸ್ರಾವವನ್ನು ಗುರುತಿಸಿದ್ದೊಂದು ಮನ್ವಂತರವಾಗಿತ್ತು. ಅದರೊಂದಿಗೆ, ನಮ್ಮ ಶರೀರವು ಆಹಾರವನ್ನು ಹೇಗೆ ಬಳಸಿಕೊಳ್ಳುತ್ತದೆ, ಇನ್ಸುಲಿನ್ ಹೇಗೆ ಸ್ರವಿಸಲ್ಪಡುತ್ತದೆ ಮತ್ತು ಹೇಗೆ ಕೆಲಸ ಮಾಡುತ್ತದೆ, ಮಧುಮೇಹವು ಹೇಗೆ ಉಂಟಾಗುತ್ತದೆ ಇತ್ಯಾದಿ ವಿವರಗಳೆಲ್ಲವೂ ಅನಾವರಣಗೊಂಡವು. ಮೇದೋಜೀರಕಾಂಗದ ಬೀಟಾ ಕಣಗಳು ನಾಶವಾಗಿ ಇನ್ಸುಲಿನ್ ಸ್ರಾವವೇ ಇಲ್ಲವಾದರೆ ಜೀವಕ್ಕೇ ಅಪಾಯವುಂಟಾಗುವುದನ್ನು ಒಂದನೇ ವಿಧದ ಮಧುಮೇಹವೆಂದೂ, ಇನ್ಸುಲಿನ್ ಸ್ರವಿಸುವಿಕೆ ಅಥವಾ ಅದರ ಕಾರ್ಯಕ್ಷಮತೆಯಲ್ಲಿ ವ್ಯತ್ಯಯವುಂಟಾದಾಗ ರಕ್ತದ ಗ್ಲೂಕೋಸ್ ಏರಿಕೆಯಾಗತೊಡಗುವುದನ್ನು ಎರಡನೇ ವಿಧದ ಮಧುಮೇಹವೆಂದೂ ಗುರುತಿಸಲಾಯಿತು. ಒಂದನೇ ವಿಧದ ಮಧುಮೇಹವುಳ್ಳವರು ಜೀವವುಳಿಸಿಕೊಳ್ಳಲು ಇನ್ಸುಲಿನ್ ಚುಚ್ಚುವಿಕೆ ಅತ್ಯಗತ್ಯವೆಂದಾಯಿತು; ಎರಡನೇ ವಿಧದ ಮಧುಮೇಹವನ್ನು ನಿಯಂತ್ರಿಸಲು ಮೊದಲಲ್ಲಿ ಮಾತ್ರೆಗಳನ್ನು, ಅದಾಗದಿದ್ದರೆ ಇನ್ಸುಲಿನ್ ಅನ್ನು ನೀಡುವ ಚಿಕಿತ್ಸಾ ಕ್ರಮವು ಗಟ್ಟಿಗೊಂಡಿತು.

ಮಧುಮೇಹವನ್ನು ತಡೆಯುವುದಕ್ಕಿಂತಲೂ ಅದರ ಚಿಕಿತ್ಸೆಯೇ ಆದ್ಯತೆಯಾಗಿ, ಹೊಸ ಹೊಸ ಔಷಧಗಳನ್ನು ಅಭಿವೃದ್ಧಿಪಡಿಸುವುದಕ್ಕೆ ಪೈಪೋಟಿಯುಂಟಾಯಿತು. ದುಬಾರಿಯಾದ ಹೊಸ ಬಗೆಯ ಇನ್ಸುಲಿನ್ ಗಳು, ಅವನ್ನು ಚುಚ್ಚುವ ಯಂತ್ರ-ತಂತ್ರಗಳು, ಹಲಬಗೆಯ ಮಾತ್ರೆಗಳು ಲಭ್ಯವಾದಂತೆ ಮಧುಮೇಹದ ವಹಿವಾಟು ಭರ್ಜರಿಯಾಗಿ ಬೆಳೆಯಿತು. ಆದರೆ, ಈ ಹೊಸ ಚಿಕಿತ್ಸೆಗಳು ಹಳೆಯ ಇನ್ಸುಲಿನ್ ಗಳನ್ನು ಯಾ ಔಷಧಗಳನ್ನು ಬಹಳಷ್ಟು ಮೀರಿಸುತ್ತವೆ ಎನ್ನಲಾಗದು, ತೆರುವ ಹೆಚ್ಚು ಹಣಕ್ಕೆ ತಕ್ಕಷ್ಟು ಹೆಚ್ಚು ಪರಿಣಾಮಕಾರಿಯಾಗಿವೆ ಎಂದೂ ಹೇಳಲಾಗದು.

ಇನ್ಸುಲಿನ್ ಬಳಕೆಗೆ ಬಂದ ಮೊದಲ ಆರು ದಶಕಗಳಲ್ಲಿ ಅದನ್ನು ಅನ್ಯ ಪ್ರಾಣಿಗಳ ಮೇದೋಜೀರಕಾಂಗಗಳಿಂದ ಪ್ರತ್ಯೇಕಿಸಿ, ಶುದ್ಧೀಕರಿಸಿ, ಸಿದ್ಧಪಡಿಸಲಾಗುತ್ತಿತ್ತು. ಎಂಭತ್ತರ ದಶಕದಿಂದೀಚೆಗೆ ತಳಿ ತಂತ್ರಜ್ಞಾನದಿಂದ ಕೃತಕವಾಗಿ ಉತ್ಪಾದಿಸಿದ ಇನ್ಸುಲಿನ್ ಬಳಕೆಯಲ್ಲಿದೆ. ಪ್ರಾಣಿಜನ್ಯ ಇನ್ಸುಲಿನ್ ಕೇವಲ 20 ರೂಪಾಯಿಗಳಿಗೆ ದೊರೆಯುತ್ತಿದ್ದರೆ, ಈ ಕೃತಕ ಇನ್ಸುಲಿನ್ ಆರು ಪಟ್ಟು ದುಬಾರಿಯಾಗಿದೆ. ಈಗ ನಾಲ್ಕು ವರ್ಷಗಳಿಂದ ಪ್ರಾಣಿಜನ್ಯ ಇನ್ಸುಲಿನ್ ಮರೆಯಾಗಿದ್ದು, ಎಲ್ಲರೂ ಕೃತಕ ಇನ್ಸುಲಿನ್ ಅನ್ನೇ ಚುಚ್ಚಿಕೊಳ್ಳುವಂತಾಗಿದೆ. ಮೊದಲು ಇನ್ಸುಲಿನ್ ಜೊತೆ ಬೇರೊಂದು ಪ್ರೊಟೀನನ್ನೋ, ಸತುವಿನ ಕಣಗಳನ್ನೋ ಬೆರೆಸಿ ಅದು ನಿಧಾನವಾಗಿ, ಹೆಚ್ಚು ಹೊತ್ತು ವರ್ತಿಸುವಂತೆ ಮಾಡಲಾಗುತ್ತಿತ್ತು. ಇತ್ತೀಚೆಗೆ ಇನ್ಸುಲಿನ್ ತಳಿಯನ್ನೇ ಬದಲಾಯಿಸಿ, ಕ್ಷಿಪ್ರವಾಗಿ ಅಥವಾ ನಿಧಾನವಾಗಿ ವರ್ತಿಸಬಲ್ಲ ಸದೃಶ ಇನ್ಸುಲಿನ್ ಗಳನ್ನು ಬಳಕೆಗೆ ತರಲಾಗಿದೆ. ಇವು ಸಾಮಾನ್ಯ ಇನ್ಸುಲಿನ್ ಗಿಂತ ನಾಲ್ಕರಿಂದ ಎಂಟು ಪಟ್ಟು ದುಬಾರಿಯಾಗಿವೆ. ಪ್ರತಿಷ್ಠಿತ ಕೊಕ್ರೇನ್ ವಿಮರ್ಶೆಯನುಸಾರ, ಈ ಕೃತಕ ಇನ್ಸುಲಿನ್ ಗಳು ಅಥವಾ ಸದೃಶ ಇನ್ಸುಲಿನ್ ಗಳು ಪ್ರಾಣಿಜನ್ಯ ಇನ್ಸುಲಿನ್ ಗಳಿಗಿಂತ ಹೆಚ್ಚು ಪ್ರಯೋಜಕ ಅಥವಾ ಸುರಕ್ಷಿತವಾಗಿವೆ ಎನ್ನುವುದಕ್ಕೆ ಇನ್ನೂ ಆಧಾರಗಳಿಲ್ಲ [ಕೊಕ್ರೇನ್ ವಿಮರ್ಶೆಗಳು 2005(1):ಸಿಡಿ003816; 2007(2):ಸಿಡಿ005613; 2006(2):ಸಿಡಿ003287].

ನಾವು ತಿನ್ನುವ ವಿವಿಧ ಶರ್ಕರಗಳು ಕರುಳಲ್ಲಿ ಹೀರಲ್ಪಡುವಲ್ಲಿಂದ ತೊಡಗಿ, ಮೇದೋಜೀರಕಾಂಗದ ಬೀಟಾಕಣಗಳಲ್ಲಿ ಇನ್ಸುಲಿನ್ ಸ್ರಾವವನ್ನು ಉತ್ತೇಜಿಸಿ, ದೇಹದ ವಿವಿಧ ಅಂಗಗಳಲ್ಲಿ ಅವು ಬಳಸಲ್ಪಡುವ ಸಂಕೀರ್ಣವಾದ ಪ್ರಕ್ರಿಯೆಗಳನ್ನು ಆಧುನಿಕ ವೈದ್ಯವಿಜ್ಞಾನವಿಂದು ಅರಿತುಕೊಂಡಿದೆ. ಈ ಪ್ರಕ್ರಿಯೆಗಳ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸಿ,ರಕ್ತದ ಗ್ಲೂಕೋಸ್ ಪ್ರಮಾಣವನ್ನು ನಿಯಂತ್ರಿಸುವ ಅನೇಕ ಔಷಧಗಳು ಇಂದು ಲಭ್ಯವಿವೆ: ಆಹಾರದ ಶರ್ಕರಗಳು ಕರುಳಿನಲ್ಲಿ ಹೀರಲ್ಪಡದಂತೆ ತಡೆಯುವುದು, ಕರುಳಿನಲ್ಲಿರುವ ಗ್ರಾಹಿಗಳಿಂದ ಬೀಟಾ ಕಣಗಳ ಪ್ರಚೋದನೆಯನ್ನು ಹೆಚ್ಚಿಸುವುದು, ನೇರವಾಗಿ ಬೀಟಾ ಕಣಗಳಲ್ಲಿ ಇನ್ಸುಲಿನ್ ಸ್ರಾವವನ್ನು ಉತ್ತೇಜಿಸುವುದು ಮತ್ತು ಸ್ರವಿಸಲ್ಪಟ್ಟ ಇನ್ಸುಲಿನಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಇತ್ಯಾದಿ. ಎರಡನೇ ವಿಧದ ಮಧುಮೇಹವುಳ್ಳವರಿಗೆ ಈ ಔಷಧಗಳನ್ನು ಒಂಟಿಯಾಗಿ ಅಥವಾ ಜೊತೆಯಾಗಿ ನೀಡಲಾಗುತ್ತದೆ; ಅವು ವಿಫಲವಾದಾಗ ಇನ್ಸುಲಿನ್ ಚುಚ್ಚಬೇಕಾಗುತ್ತದೆ.

ಇನ್ಸುಲಿನ್ ಹಾಗೂ ಇತರ ಔಷಧಗಳ ನಿರಂತರ ಬಳಕೆಯಿಂದ ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು, ಮಧುಮೇಹದ ತೀವ್ರತರನಾದ ಸಮಸ್ಯೆಗಳನ್ನು ನಿಭಾಯಿಸಿ ಜೀವವುಳಿಸಬಹುದು ಹಾಗೂ ದೂರಗಾಮಿ ಸಮಸ್ಯೆಗಳನ್ನು ಮುಂದೂಡಬಹುದು. ಆದರೆ ಈ ಸಮಸ್ಯೆಗಳನ್ನು ಸಂಪೂರ್ಣವಾಗಿ ತಡೆಯುವುದಕ್ಕೆ, ರೋಗವನ್ನು ಗುಣಪಡಿಸುವುದಕ್ಕೆ ಅಥವಾ ಬಾರದಂತೆ ತಡೆಯುವುದಕ್ಕೆ ಇನ್ನೂ ಸಾಧ್ಯವಾಗಿಲ್ಲ. ಅಲ್ಲದೆ, ಮಧುಮೇಹ ಪೀಡಿತರಲ್ಲಿ ಸಾಮಾನ್ಯವಾಗಿರುವ ಬೊಜ್ಜು, ಮೇದಸ್ಸಿನ ಸಮಸ್ಯೆಗಳು, ರಕ್ತನಾಳಗಳ ಕಾಯಿಲೆಗಳು ಇವೇ ಮುಂತಾದ ಸಮಸ್ಯೆಗಳನ್ನು ಈ ಔಷಧಗಳು ಇನ್ನಷ್ಟು ಹೆಚ್ಚಿಸಬಹುದು. ಈ ಔಷಧಗಳನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿದರೆ ಅಥವಾ ತಿಂದ ಆಹಾರವು ಕಡಿಮೆಯಾದರೆ ರಕ್ತದ ಸಕ್ಕರೆಯು ಒಮ್ಮೆಗೇ ಕೆಳಗಿಳಿಯುವ ಸಮಸ್ಯೆಯೂ ಉಂಟಾಗುತ್ತದೆ. ಒಟ್ಟಿನಲ್ಲಿ,ಮಧುಮೇಹವುಳ್ಳವರಿಗೆ ಅತ್ತ ದರಿ, ಇತ್ತ ಪುಲಿ ಎನ್ನುವ ದುಸ್ಥಿತಿ.

ಆಧುನಿಕ ಚಿಕಿತ್ಸೆಯ ಇತಿಮಿತಿಗಳಿಂದಾಗಿ ಕೆಲವು ಮಧುಮೇಹಿಗಳು ಬದಲಿ ಚಿಕಿತ್ಸಾ ಪದ್ಧತಿಗಳ ದೊಡ್ಡ ಜಾಹೀರಾತುಗಳತ್ತ ಆಕರ್ಷಿತರಾಗುತ್ತಾರೆ. ವೈದ್ಯಕೀಯ ಪದ್ಧತಿಯೇ ಅಲ್ಲದ ಯೋಗಾಭ್ಯಾಸದಿಂದಲೂ ಮಧುಮೇಹ ಚಿಕಿತ್ಸೆ ಸಾಧ್ಯವೆಂದು ನಂಬಿ ಬಿಡುತ್ತಾರೆ. ಇಂದು ಇವೆಲ್ಲವುಗಳ ವ್ಯವಹಾರವೂ ಕೋಟಿಗಟ್ಟಲೆಯಾಗಿದೆ. ಆದರೆ ಆಯುರ್ವೇದ, ಹೋಮಿಯೋಪತಿ, ಪ್ರಕೃತಿ ಚಿಕಿತ್ಸೆ ಮುಂತಾದ ಯಾವುದೇ ಬದಲಿ ಪದ್ಧತಿಗಳಿಂದ ಯಾ ಯೋಗಾಭ್ಯಾಸದಿಂದ ಮಧುಮೇಹವನ್ನು ತಡೆಯುವಲ್ಲಿ ಅಥವಾ ಚಿಕಿತ್ಸೆಯಲ್ಲಿ ನಿರ್ದಿಷ್ಟವಾದ ಪ್ರಯೋಜನಗಳಿವೆಯೆನ್ನುವುದಕ್ಕೆ ದೃಢವಾದ ಆಧಾರಗಳು ಇದುವರೆಗೆ ದೊರೆತಿಲ್ಲ.

ಹಾಗೆಂದು ಮಧುಮೇಹಿಗಳು ಹತಾಶರಾಗಬೇಕಿಲ್ಲ. ಮಧುಮೇಹವನ್ನು ನಿಯಂತ್ರಿಸುವಲ್ಲಿ ನಿರೀಕ್ಷಿತ ಯಶಸ್ಸನ್ನು ಪಡೆಯಲಾಗದಿರುವುದು ಒಂದಷ್ಟು ಆಧುನಿಕ ವೈದ್ಯವಿಜ್ಞಾನಿಗಳಲ್ಲಿ ಹೊಸ ಚಿಂತನೆಯನ್ನು ಪ್ರೇರೇಪಿಸಿದೆ, ಹೊಸ ದಾರಿಗಳನ್ನು ತೆರೆದಿದೆ. ನಮ್ಮ ಶರೀರದ ಕಣಕಣಗಳಲ್ಲಿ ನಡೆಯುವ ಅತಿ ಸಂಕೀರ್ಣವಾದ ಪ್ರಕ್ರಿಯೆಗಳು, ನಮ್ಮ ಆಹಾರವು ಅವುಗಳ ಮೇಲುಂಟು ಮಾಡುವ ಪರಿಣಾಮಗಳು, ನಮ್ಮ ಹಸಿವು-ಸಂತೃಪ್ತಿಗಳ ನಿಯಂತ್ರಣ, ನಮ್ಮ ಪಚನಾಂಗಗಳಲ್ಲಿರುವ ಲಕ್ಷ ಕೋಟಿಗಟ್ಟಲೆ ಸೂಕ್ಷ್ಮಾಣುಗಳ ಪಾತ್ರ, ವಿಭಿನ್ನ ಜನಸಮುದಾಯಗಳ ಜೀವನಶೈಲಿಗಳಿಗೂ, ರೋಗಗಳಿಗೂ ಇರುವ ಸಂಬಂಧಗಳು ಇತ್ಯಾದಿಗಳ ಬಗ್ಗೆ ಅತ್ಯಂತ ಆಸಕ್ತಿದಾಯಕವಾದ ಅಧ್ಯಯನಗಳಾಗುತ್ತಿದ್ದು, ಮಧುಮೇಹವೂ ಸೇರಿದಂತೆ ಎಲ್ಲಾ ಆಧುನಿಕ ರೋಗಗಳ ಮೇಲೆ ಹೊಸ ಬೆಳಕನ್ನು ಚೆಲ್ಲುತ್ತಿವೆ.

ವಾನರರಿಂದ ಮಾನವರು ವಿಕಾಸಗೊಂಡ ಸುಮಾರು ಇಪ್ಪತ್ತೈದು ಲಕ್ಷ ವರ್ಷಗಳಿಂದ ಹತ್ತು ಸಾವಿರ ವರ್ಷಗಳ ಹಿಂದಿನ ಹಳೆ ಶಿಲಾಯುಗದ ಕಾಲದಲ್ಲಿ ಮೀನು, ಇತರ ಜಲಚರಗಳು, ಪ್ರಾಣಿಗಳು ಹಾಗೂ ಪಕ್ಷಿಗಳ ಮಾಂಸ, ಹಲಬಗೆಯ ಎಲೆಗಳು ಮತ್ತು ತರಕಾರಿಗಳು, ಬೀಜಗಳು ಹಾಗೂ ಅಪರೂಪಕ್ಕೊಮ್ಮೆ ದೊರೆಯುತ್ತಿದ್ದ ಹಣ್ಣುಗಳೇ ನಮ್ಮ ಪೂರ್ವಜರ ಆಹಾರವಾಗಿದ್ದವು. ಇಂದಿಗೂ ಹಳೆ ಶಿಲಾಯುಗದ ಆಹಾರಕ್ರಮವನ್ನೇ ಪಾಲಿಸುತ್ತಿರುವ ಭಾರತ, ಆಫ್ರಿಕಾ, ಅಮೆರಿಕಾ, ಆಸ್ಟ್ರೇಲಿಯಾ, ಪಪುಅ ನ್ಯೂಗಿನಿ ಮುಂತಾದೆಡೆ ವಾಸವಾಗಿರುವ ಹಲವು ಮೂಲನಿವಾಸಿ ಸಮುದಾಯಗಳಲ್ಲಿ ಮಧುಮೇಹ, ಬೊಜ್ಜು, ಮೂಳೆಸವೆತ, ಕ್ಯಾನ್ಸರ್, ರಕ್ತನಾಳಗಳ ಸಮಸ್ಯೆಗಳಂತಹಾ ಆಧುನಿಕ ರೋಗಗಳಾವುವೂ ಕಾಣಸಿಗುವುದಿಲ್ಲ. ನಮ್ಮ ಆಧುನಿಕ ಆಹಾರದಲ್ಲಿ ಶರ್ಕರಭರಿತವಾದ ಅಕ್ಕಿ,  ಗೋಧಿ,  ರಾಗಿ,  ಓಟ್ಸ್,  ಬಾರ್ಲಿ ಮುಂತಾದ ಧಾನ್ಯಗಳು, ಚಮಚದ ಸಕ್ಕರೆ, ಬಗೆಬಗೆಯ ಹಣ್ಣುಗಳು, ಹಾಲು ಮತ್ತದರ ಉತ್ಪನ್ನಗಳು ಹಾಗೂ ಸಂಸ್ಕರಿತ ಖಾದ್ಯ ತೈಲಗಳೇ ಯಥೇಷ್ಟವಾಗಿದ್ದು, ಹಳೆ ಶಿಲಾಯುಗಕ್ಕೆ ಸೇರಿದ ನಮ್ಮ ದೇಹಕ್ಕೆ ಇವು ಸರಿಹೊಂದದಿರುವುದೇ ಆಧುನಿಕ ರೋಗಗಳಿಗೆ ಕಾರಣವೆನ್ನುವುದು ಸ್ಪಷ್ಟವಾಗುತ್ತಲಿದೆ. ಈ ಆಧುನಿಕ ಆಹಾರದತ್ತ ಹೊರಳಿದ ಮೂಲನಿವಾಸಿಗಳು ಅತಿ ಬೇಗನೆ ಮಧುಮೇಹ ಪೀಡಿತರಾಗುವುದನ್ನೂ, ಮೂಲಾಹಾರಕ್ಕೆ ಮರಳಿದ ಮಧುಮೇಹಿಗಳಲ್ಲಿ ರಕ್ತದ ಸಕ್ಕರೆ ಹಾಗೂ ಮೇದಸ್ಸಿನ ಪ್ರಮಾಣಗಳು ಶೀಘ್ರವೇ ನಿಯಂತ್ರಿಸಲ್ಪಡುವುದನ್ನೂ ಹಲವು ಅಧ್ಯಯನಗಳಲ್ಲಿ ಗುರುತಿಸಲಾಗಿದೆ. (ಡಯಾ ಕೇರ್ 2006;29:1866, ಕಾರ್ಡಿವಾಸ್ಕ್ ಡಯಾಬಿಟೋ 2009;8:35, ಜ ಡಯಾ ಸಯ ಟೆಕ್ 2009;3:1229). ಆಹಾರದಲ್ಲಿ ಶರ್ಕರಗಳ ಪ್ರಮಾಣವನ್ನು ಕಡಿತಗೊಳಿಸುವುದರಿಂದ ಅನೇಕ ಲಾಭಗಳಿವೆಯೆನ್ನುವುದೀಗ ದಿಟವಾಗಿದೆ (ನ್ಯೂಟ್ರಿ ಮೆಟ 2005;2:16, ನ್ಯೂಟ್ರಿ ಮೆಟ 2008;5:9, ಅಮೆ ಜ ಕ್ಲಿನಿ ನುಟ್ರಿ 2007;86:276).

ಹೊಟ್ಟೆ ತುಂಬ ಶರ್ಕರಭರಿತವಾದ ಆಹಾರವನ್ನು ಸೇವಿಸಿ, ರಕ್ತದಲ್ಲಿ ಏರುವ ಗ್ಲೂಕೋಸನ್ನು ನಿಯಂತ್ರಿಸಲು ಬಾಯಿ ತುಂಬ ಔಷಧಗಳನ್ನು ನುಂಗಿ, ಎಲ್ಲಾ ಸಮಸ್ಯೆಗಳಿಂದ ನರಳಿ ಒದ್ದಾಡುವುದಕ್ಕಿಂತ ಆಹಾರವನ್ನೇ ಬದಲಿಸಿಕೊಂಡು ಮಧುಮೇಹ ಮಾತ್ರವಲ್ಲ, ಇತರೆಲ್ಲಾ ಆಧುನಿಕ ರೋಗಗಳಿಂದಲೂ ಮುಕ್ತರಾಗುವುದೇ ಒಳಿತಲ್ಲವೇ?

ಕೊಲೆಸ್ಟರಾಲನ್ನು ಬದಿಗಿಟ್ಟು ಕೊಲೆಸ್ಟರಾಲಿಗೆ ಚಿಕಿತ್ಸೆ

ಆರೋಗ್ಯ ಆಶಯ – ವಿಜಯ ಕರ್ನಾಟಕ: ಕೊಲೆಸ್ಟರಾಲನ್ನು ಬದಿಗಿಟ್ಟು ಕೊಲೆಸ್ಟರಾಲಿಗೆ ಚಿಕಿತ್ಸೆ [ಡಿಸೆಂಬರ್ 11, 2013, ಬುಧವಾರ] [ನೋಡಿ | ನೋಡಿ]

ರಕ್ತದ ಕೊಲೆಸ್ಟರಾಲ್ ಪ್ರಮಾಣಕ್ಕನುಗುಣವಾಗಿ ಸ್ಟಾಟಿನ್ ಔಷಧಗಳನ್ನು ಸೇವಿಸುವ ಅಗತ್ಯ ಇನ್ನಿಲ್ಲ

ಮಧ್ಯವಯಸ್ಕರ ಮಹಾಗುಮ್ಮ ಕೊಲೆಸ್ಟರಾಲ್. ಅದು ಹೆಚ್ಚಿದ್ದರೆ ಹೃದಯಾಘಾತ ಖಂಡಿತವೆಂದು ಹೆದರಿ ಬಹಳಷ್ಟು ಮಂದಿ ವರ್ಷಕ್ಕೆ 2-3 ಬಾರಿ ತಮ್ಮ ರಕ್ತದ ಕೊಲೆಸ್ಟರಾಲ್ ಅನ್ನು ಅಳೆಯುತ್ತಿರುತ್ತಾರೆ. ಅಂತಹಾ ಪರೀಕ್ಷೆಗಳಲ್ಲಿ ಕೊಲೆಸ್ಟರಾಲ್ ಮಟ್ಟವು ಒಂದಿಷ್ಟು ಹೆಚ್ಚಿದ್ದರೂ ಸಾಕು, ಅದನ್ನು ದಪ್ಪಕ್ಷರಗಳಲ್ಲಿ, ಅಡಿಗೆರೆ ಹಾಕಿ ಮುದ್ರಿಸಲಾಗುತ್ತದೆ. ಅದನ್ನು ಕಂಡಾಗಲೇ ಹೃದಯದ ಬಡಿತ ಕಿವಿಗೆ ಹತ್ತಿರವಾಗತೊಡಗುತ್ತದೆ. ಅಲ್ಲಿಂದ ಬಾಳಿನ ದಾರಿಯೇ ಬದಲಾಗಿ, ಆ ದಪ್ಪಕ್ಷರದ ಗುಮ್ಮನನ್ನು ತೆಳುವಾಗಿಸುವ ಹೋರಾಟ ಆರಂಭಗೊಳ್ಳುತ್ತದೆ.

ಇಂದು ಜಗತ್ತಿನ ಸುಮಾರು 30 ಕೋಟಿಗೂ ಹೆಚ್ಚು ಜನ, ಅಮೆರಿಕಾದಲ್ಲಿ 45 ವಯಸ್ಸಿಗೆ ಮೇಲ್ಪಟ್ಟವರಲ್ಲಿ ನಾಲ್ಕರಲ್ಲೊಬ್ಬರು, ಕೊಲೆಸ್ಟರಾಲ್ ಮಟ್ಟವನ್ನು ಕೆಳಗಿಳಿಸುವ ಸ್ಟಾಟಿನ್ ಇತ್ಯಾದಿ ಔಷಧಗಳನ್ನು ಪ್ರತಿನಿತ್ಯವೂ ಸೇವಿಸುತ್ತಾರೆ. ಈ ಔಷಧಗಳ ಜಾಗತಿಕ ವಹಿವಾಟು ವರ್ಷಕ್ಕೆ 155000 ಕೋಟಿ ರೂಪಾಯಿಗಳಷ್ಟು; ಎರಡೇ ಕಂಪೆನಿಗಳ ಎರಡೇ ಮಾತ್ರೆಗಳಿಗೆ ಅದರಲ್ಲಿ ಅರ್ಧದಷ್ಟು ಪಾಲು. ಭಾರತದಲ್ಲೂ ಅವುಗಳ ವಾರ್ಷಿಕ ವಹಿವಾಟು ರೂ. 350 ಕೋಟಿಗೂ ಹೆಚ್ಚು. ಅಂತಿರುವಲ್ಲಿ, ಜಗತ್ತಿನ ಎಲ್ಲ ಪ್ರಜೆಗಳೂ ತಮ್ಮ ರಕ್ತದ ಕೊಲೆಸ್ಟರಾಲ್ ಪ್ರಮಾಣವನ್ನು ಒಂದೇ ಮಟ್ಟಕ್ಕಿಳಿಸುವ ಅಗತ್ಯ ಇನ್ನಿಲ್ಲವೆಂದು ಇದೇ ನವೆಂಬರ್ 15ರಂದು ಘೋಷಿಸಲಾಗಿದೆ; ಕೊಲೆಸ್ಟರಾಲ್ ಪ್ರಮಾಣವನ್ನು ಕಟ್ಟುನಿಟ್ಟಾಗಿ ಇಂತಿಷ್ಟೇ ಮಟ್ಟಕ್ಕಿಳಿಸಿಕೊಳ್ಳುವುದರಿಂದ ವಿಶೇಷವಾದ ಲಾಭವಿಲ್ಲವೆಂದು ಹೇಳಲಾಗಿದೆ. ಅಂತಹಾ ನಿಯಂತ್ರಣದ ಅಗತ್ಯವಿದೆಯೆಂದು ಎಂಭತ್ತರ ದಶಕದಿಂದಲೂ ಸಲಹೆ ನೀಡುತ್ತಾ ಬಂದಿದ್ದವರೇ ಈಗ ಬೇಡವೆನ್ನುತ್ತಿದ್ದಾರೆ!

ರಕ್ತದಲ್ಲಿ ಕೊಲೆಸ್ಟರಾಲ್ ಪ್ರಮಾಣ ಎಷ್ಟಿರಬೇಕು, ಅದಕ್ಕೆ ಯಾವಾಗ ಚಿಕಿತ್ಸೆ ಬೇಕು ಇತ್ಯಾದಿಗಳನ್ನು ಹೇಳುವವರು ಯಾರು? ಅಮೆರಿಕಾದ ರಾಷ್ಟ್ರೀಯ ಆರೋಗ್ಯ ಸಂಸ್ಥೆಯಡಿಯಲ್ಲಿ ರಾಷ್ಟ್ರೀಯ ಹೃದಯ,ಶ್ವಾಸಾಂಗ ಹಾಗೂ ರಕ್ತ ಆರೋಗ್ಯ ಸಂಸ್ಥೆ ಎಂಬುದಿದೆ. ಹೃದ್ರೋಗಗಳು ಹಾಗೂ ರಕ್ತನಾಳಗಳ ಕಾಯಿಲೆಗಳ ಬಗ್ಗೆ ನಡೆಸಲಾಗುತ್ತಿರುವ ಅತ್ಯುನ್ನತ ಮಟ್ಟದ ಸಂಶೋಧನೆಗಳಿಗೆ ಈ ಸಂಸ್ಥೆಯ ಕೊಡುಗೆ ಪಾರವಿಲ್ಲದ್ದು. ಹಾಗಾಗಿ, ಈ ಸಂಸ್ಥೆಯಿಂದ ಹೊರಬರುವ ಸಲಹೆ-ಸೂಚನೆಗಳಿಗೆ ವಿಶೇಷವಾದ ಮಾನ್ಯತೆಯಿರುತ್ತದೆ. ರಾಷ್ಟ್ರೀಯ ಕೊಲೆಸ್ಟರಾಲ್ ಶಿಕ್ಷಣ ಕಾರ್ಯಕ್ರಮದ ಅಂಗವಾಗಿ 80ರ ದಶಕದಿಂದ ಇದುವರೆಗೆ ಈ ಸಂಸ್ಥೆಯಿಂದ ತಜ್ಞರ ನಾಲ್ಕು ಸಮಿತಿಗಳು (ಎಟಿಪಿ 1-4) ನೇಮಕಗೊಂಡಿದ್ದು, ಮೊನ್ನೆಯ ವರದಿಯು ಅವುಗಳಲ್ಲಿ ನಾಲ್ಕನೆಯದು.

ಕಾಲಕಾಲಕ್ಕೆ ಲಭ್ಯವಿರುವ ಹೊಸ ಸಂಶೋಧನೆಗಳ ಆಧಾರದಲ್ಲಿ ಈ ಸಮಿತಿಗಳು ಸಲಹೆಗಳನ್ನು ರೂಪಿಸುತ್ತವೆ. ಮೊದಲ ಎಟಿಪಿ ವರದಿಯಲ್ಲಿ (1988) ಹೃದ್ರೋಗವನ್ನು ತಡೆಯುವುದಕ್ಕಾಗಿ ಎಲ್ ಡಿ ಎಲ್ ಕೊಲೆಸ್ಟರಾಲ್ ಪ್ರಮಾಣವನ್ನು 130ಮಿಗ್ರಾಂ%ಗಿಂತ ಕೆಳಗಿಳಿಸಬೇಕೆಂದು ಹೇಳಿ, ಅದಕ್ಕಾಗಿ ಆಹಾರ ನಿಯಂತ್ರಣ ಹಾಗೂ ಔಷಧಗಳನ್ನು ಸೂಚಿಸಲಾಯಿತು. ಎರಡನೇ ಎಟಿಪಿ ವರದಿಯಲ್ಲಿ (1993),ಹೃದ್ರೋಗವುಳ್ಳವರು ಎಲ್ ಡಿ ಎಲ್ ಕೊಲೆಸ್ಟರಾಲ್ ಪ್ರಮಾಣವನ್ನು 100 ಮಿಗ್ರಾಂ%ಗೂ, ಇನ್ನುಳಿದವರು 130ಮಿಗ್ರಾಂ%ಗೂ ಇಳಿಸಿಕೊಳ್ಳಬೇಕೆಂದು ಹೇಳಲಾಯಿತು. ಮೂರನೇ ಎಟಿಪಿ ವರದಿಯಲ್ಲಿ (2002),ಕೊಲೆಸ್ಟರಾಲ್ ಜೊತೆಗೆ, ಧೂಮಪಾನ, ರಕ್ತದ ಏರೊತ್ತಡ ಇತ್ಯಾದಿಗಳಿಂದ ಹೃದ್ರೋಗದ ಅಪಾಯವು ಹೆಚ್ಚುಳ್ಳವರು ಕೂಡಾ ಈ ಔಷಧಗಳನ್ನು ಸೇವಿಸಬೇಕೆಂಬ ಸಲಹೆಯನ್ನು ಮುಂದಿಡಲಾಯಿತು. ಅದನ್ನು 2004ರಲ್ಲಿ ಪರಿಷ್ಕರಿಸಿ, ಹೃದ್ರೋಗವುಳ್ಳವರು ತಮ್ಮ ಎಲ್ ಡಿ ಎಲ್ ಕೊಲೆಸ್ಟರಾಲ್ ಪ್ರಮಾಣವನ್ನು 70 ಮಿಗ್ರಾಂ%ಗೆ ಇಳಿಸಿಕೊಳ್ಳಬೇಕೆಂದು ಸೂಚಿಸಲಾಯಿತು. ಈಗ ನವಂಬರ್ 15ರಂದು ಪ್ರಕಟವಾಗಿರುವ ಎಟಿಪಿ ನಾಲ್ಕನೇ ವರದಿಯಲ್ಲಿ ಕೊಲೆಸ್ಟರಾಲ್ ಮಟ್ಟವನ್ನು ಇಂತಿಷ್ಟೇ ಮಿಗ್ರಾಂಗಳಿಗೆ ಇಳಿಸಬೇಕೆಂಬ ಸಲಹೆಯನ್ನು ಕೈಬಿಡಲಾಗಿದೆ!

ಯಾಕೆ ಹೀಗೆ? ಈ ಹೊಸ ಸಮಿತಿಯು ಪರಿಶೀಲಿಸಿದ 25 ದೊಡ್ಡ ಅಧ್ಯಯನಗಳಲ್ಲಿ ಎಲ್ ಡಿ ಎಲ್ ಕೊಲೆಸ್ಟರಾಲ್ ಪ್ರಮಾಣವನ್ನು 100 ಅಥವಾ 70ಮಿಗ್ರಾಂ% ಮಟ್ಟಕ್ಕೆ ಇಳಿಸುವ ಪ್ರಯತ್ನಗಳೇ ಆಗಿರಲಿಲ್ಲ. ಅಂದರೆ, 1988ರಿಂದ 2013ರವರೆಗಿನ ಮೂರು ಎಟಿಪಿ ವರದಿಗಳ ಸಲಹೆಗಳನ್ನು ಪ್ರಮಾಣೀಕರಿಸುವ ಒಂದೇ ಒಂದು ಅಧ್ಯಯನವೂ ಎಟಿಪಿ 4ನೇ ಸಮಿತಿಗೆ ಕಾಣಸಿಗಲಿಲ್ಲ! ಇಲ್ಲಿಯವರೆಗೂ ರಕ್ತದ ಕೊಲೆಸ್ಟರಾಲ್ ಪ್ರಮಾಣವು ನೂರಕ್ಕಿಂತ ಹೆಚ್ಚಿದ್ದರೆ ದಪ್ಪಕ್ಷರಗಳಲ್ಲಿ, ಅಡಿಗೆರೆ ಹಾಕಿ ಹೆದರಿಸಿ, ಕೋಟಿಗಟ್ಟಲೆ ಜನರಿಗೆ ಲಕ್ಷ ಕೋಟಿಗಟ್ಟಲೆಯ ಮಾತ್ರೆಗಳನ್ನು ನುಂಗಿಸಿ ನೀರು ಕುಡಿಸಿದ್ದಕ್ಕೆ ಯಾವ ಆಧಾರವೂ ಈ ಸಮಿತಿಗೆ ದೊರೆಯಲಿಲ್ಲ.

ಕೊಲೆಸ್ಟರಾಲ್ ಪ್ರಶ್ನೆಗೆ ಮೊದಲಿನಿಂದಲೂ ಸಮರ್ಪಕವಾದ ಉತ್ತರಗಳಿರಲೇ ಇಲ್ಲ. ಕೊಲೆಸ್ಟರಾಲ್ ನಮ್ಮ ಕಣಕಣಗಳಲ್ಲೂ ಅಡಕವಾಗಿದ್ದು, ಅದಿಲ್ಲದೆ ನಾವು ಬದುಕಲಾರೆವು. ಜೀವಕಣಗಳ ಉಳಿಯುವಿಕೆಗೆ, ಅವುಗಳೊಳಗಿನ ಸಂವಹನಕ್ಕೆ, ರಕ್ತನಾಳಗಳ ಆರೋಗ್ಯಕ್ಕೆ, ನರಮಂಡಲದ ಸುಸೂತ್ರವಾದ ಕಾರ್ಯಗಳಿಗೆ, ರೋಗರಕ್ಷಣೆಗೆ, ಪಿತ್ತರಸಸ್ರಾವಕ್ಕೆ,  ಎ, ಡಿ, ಇ, ಕೆ ಮುಂತಾದ ಅನ್ನಾಂಗಗಳಿಗೆ, ಹಲಬಗೆಯ ಹಾರ್ಮೋನುಗಳ ತಯಾರಿಗೆ ಕೊಲೆಸ್ಟರಾಲ್ ಬೇಕೇ ಬೇಕು. ಮೂವತ್ತರ ದಶಕದಲ್ಲಿ ಪೆಡಸಾದ ರಕ್ತನಾಳಗಳ ಭಿತ್ತಿಯಲ್ಲಿ ಕೊಲೆಸ್ಟರಾಲ್ ಗುರುತಿಸಲ್ಪಡುವುದರೊಂದಿಗೆ ಅದರ ಮಾನಹರಣದ ಪಿಡುಗು ಆರಂಭಗೊಂಡಿತು. ರಕ್ತದ ಕೊಲೆಸ್ಟರಾಲಿಗೂ, ಪೆಡಸಾದ ನಾಳಗಳಲ್ಲಿ ಅದರ ಶೇಖರಣೆಗೂ ಸಂಬಂಧಗಳಿಲ್ಲವೆನ್ನುವುದನ್ನು ಅದೆಷ್ಟೋ ಅಧ್ಯಯನಗಳು ಸುಸ್ಪಷ್ಟವಾಗಿ ತೋರಿಸಿದರೂ, ಈ ತೆಗಳುವಿಕೆ ನಿಲ್ಲಲಿಲ್ಲ. ಕೊಲೆಸ್ಟರಾಲ್ ಸಂಶ್ಲೇಷಣೆಯನ್ನು ತಡೆಯಬಲ್ಲ ಸ್ಟಾಟಿನ್ ಔಷಧಗಳನ್ನು ಎಟಿಪಿ ವರದಿಗಳು ಬೆಂಬಲಿಸಿದ ಬಳಿಕ ಇದು ಇನ್ನಷ್ಟು ಗಟ್ಟಿಗೊಂಡಿತು.

ಸ್ಟಾಟಿನ್ ಔಷಧಗಳ ಸುರಕ್ಷತೆಯ ಬಗೆಗೂ ಪ್ರಶ್ನೆಗಳಿವೆ. ಅವನ್ನು ಬಳಸತೊಡಗಿದವರಲ್ಲಿ ಸ್ನಾಯುವೇದನೆ ಹಾಗೂ ಸ್ನಾಯುಗಳ ಗಂಭೀರ ಸಮಸ್ಯೆಗಳು, ಮಧುಮೇಹ, ಯಕೃತ್ತಿನ ತೊಂದರೆಗಳು, ಕಣ್ಣಿನ ಪೊರೆ, ಲೈಂಗಿಕ ನಿಶ್ಶಕ್ತಿ, ಮರೆಗುಳಿತನ ಮತ್ತಿತರ ನರಮಂಡಲದ ತೊಂದರೆಗಳು, ಮೂತ್ರಪಿಂಡಗಳ ವೈಫಲ್ಯ, ರಕ್ತನಾಳಗಳ ಕ್ಯಾಲ್ಸೀಕರಣ ಹಾಗೂ ಮುಚ್ಚವಿಕೆ, ಕೆಲವು ಕ್ಯಾನ್ಸರ್ ಗಳು, ಸೋಂಕುಗಳು ಇವೇ ಮುಂತಾದ ಹಲವು ಗಂಭೀರ ಸಮಸ್ಯೆಗಳನ್ನು ಗುರುತಿಸಲಾಗಿದೆ. ಹೃದಯದ ವೈಫಲ್ಯವುಳ್ಳವರಲ್ಲೂ, ಹಿರಿವಯಸ್ಕರಲ್ಲೂ ಈ ಔಷಧಗಳು ಲಾಭಕ್ಕಿಂತ ಹೆಚ್ಚು ಹಾನಿಯನ್ನೇ ಉಂಟುಮಾಡಬಹುದು. ಅದಾಗಲೇ ಹೃದಯಾಘಾತಕ್ಕೊಳಗಾಗಿರುವವರಲ್ಲಿ ಈ ಔಷಧಗಳಿಂದ ಅತ್ಯಲ್ಪ ಪ್ರಯೋಜನವಾಗಬಹುದಾದರೂ, ರಕ್ತನಾಳಗಳ ಕಾಯಿಲೆಯಿಲ್ಲದವರಲ್ಲಿ ಅವು ಉಪಯುಕ್ತವೆನ್ನಲು ಬಲವಾದ ಆಧಾರಗಳೇ ಇಲ್ಲ. (ಒಜೆಇಎಂಡಿ 2013;3:179)

ಆದರೆ, ಕೊಲೆಸ್ಟರಾಲ್ ಮಟ್ಟವನ್ನು ಇಳಿಸುವುದಕ್ಕಲ್ಲದಿದ್ದರೂ ಹೃದಯದ ಒಳಿತಿಗಾಗಿ ಇನ್ನೂ ಹೆಚ್ಚು ಜನರು ಸ್ಟಾಟಿನ್ ಗಳನ್ನು ಸೇವಿಸಬೇಕು ಎಂದು ಹೊಸ ಎಟಿಪಿ ಸೂತ್ರಗಳು ಸಲಹೆ ನೀಡಿವೆ! ಅದಾಗಲೇ ಹೃದಯಾಘಾತ, ಪಾರ್ಶ್ವವಾಯುಗಳಿಗೆ ತುತ್ತಾದವರು, ಅನುವಂಶೀಯವಾಗಿ ಕೊಲೆಸ್ಟರಾಲ್ ಹೆಚ್ಚುಳ್ಳವರು (ಎಲ್ ಡಿ ಎಲ್ >190ಮಿಗ್ರಾಂ%), 40-75 ವಯಸ್ಸಿನ ಎಲ್ಲಾ ಮಧುಮೇಹಿಗಳು ಹಾಗೂ ಇವಿಲ್ಲದಿದ್ದರೂ, ಮುಂದಿನ 10 ವರ್ಷಗಳಲ್ಲಿ ರಕ್ತನಾಳಗಳ ತೊಂದರೆಯುಂಟಾಗುವ ಸಾಧ್ಯತೆ ಶೇ. 7.5ಕ್ಕಿಂತ ಹೆಚ್ಚುಳ್ಳವರು ಸ್ಟಾಟಿನ್ ಗಳನ್ನು ಸೇವಿಸಬೇಕು ಎಂದು ಈ ವರದಿಯಲ್ಲಿ ಹೇಳಲಾಗಿದೆ. ಲಿಂಗ, ವಯಸ್ಸು, ಜನಾಂಗ, ಕೊಲೆಸ್ಟರಾಲ್ ಮಟ್ಟ, ರಕ್ತದೊತ್ತಡ, ಮಧುಮೇಹ ಹಾಗೂ ಧೂಮಪಾನಗಳ ಆಧಾರದಲ್ಲಿ ಹತ್ತು ವರ್ಷಗಳ ಅಪಾಯವನ್ನು ಲೆಕ್ಕ ಹಾಕುವುದಕ್ಕೆ ಒಂದು ಗಣಕವನ್ನು ಸಮಿತಿಯೇ ಅಂತರಜಾಲದಲ್ಲಿ ಉಚಿತವಾಗಿ ಒದಗಿಸಿದೆ! ರಕ್ತದೊತ್ತಡ >110, ಒಟ್ಟು ಕೊಲೆಸ್ಟರಾಲ್ >170, ಎಚ್ ಡಿ ಎಲ್ <50 ಇದ್ದರೆ ಈ ಗಣಕದ ಲೆಕ್ಕ ಶುರುವಾಗುತ್ತದೆ. ನಲುವತ್ತರ ವಯಸ್ಸನ್ನು ಮೀರಿದ ಹಲವರನ್ನೂ, 63 ಮೀರಿದ ಎಲ್ಲಾ ಪುರುಷರು ಹಾಗೂ 71 ಮೀರಿದ ಎಲ್ಲಾ ಮಹಿಳೆಯರನ್ನೂ ಇದು ಚಿಕಿತ್ಸೆಗೆ ದೂಡುತ್ತದೆ.

ಅಂತೂ ಇಂತೂ ಸ್ಟಾಟಿನ್ ಮಾತ್ರೆಗಳನ್ನು ನುಂಗಿಸಲೆಳಸುವ ಇಂತಹಾ ವರದಿಗಳನ್ನು ಬದಿಗೊತ್ತಬಾರದೇಕೆ? ಆಧುನಿಕ ಆಹಾರ ಹಾಗೂ ಜೀವನಶೈಲಿ, ದೈಹಿಕ ವ್ಯಾಯಾಮವಿಲ್ಲದ ಆಲಸ್ಯ, ಧೂಮಪಾನ, ನಿಯಂತ್ರಣದಲ್ಲಿಲ್ಲದ ರಕ್ತದೊತ್ತಡ ಹಾಗೂ ಮಧುಮೇಹಗಳು ರಕ್ತನಾಳಗಳ ಪೆಡಸಾಗುವಿಕೆಗೂ, ಕೊಲೆಸ್ಟರಾಲ್ ಹೆಚ್ಚಳಕ್ಕೂ ಮುಖ್ಯ ಕಾರಣಗಳಾಗಿವೆ. ಆದ್ದರಿಂದ ಹಾಲು, ಸಕ್ಕರೆ, ಇತರ ಸಿಹಿಪದಾರ್ಥಗಳು, ಸಂಸ್ಕರಿತ ಧಾನ್ಯಗಳು, ಕರಿದ ತಿನಿಸುಗಳು ಇತ್ಯಾದಿಗಳನ್ನು ಸಂಪೂರ್ಣವಾಗಿ ವರ್ಜಿಸುವುದು, ಧೂಮಪಾನ, ಮದ್ಯಪಾನಗಳಿಂದ ದೂರವಿರುವುದು, ರಕ್ತದೊತ್ತಡ ಹಾಗೂ ಮಧುಮೇಹಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವುದು ಅತ್ಯಗತ್ಯ. ತರಕಾರಿಗಳು, ಬೀಜಗಳು, ಮೀನು ಇತ್ಯಾದಿಗಳನ್ನು ಹೆಚ್ಚಾಗಿ ಸೇವಿಸುವುದು ರಕ್ತನಾಳಗಳ ಆರೋಗ್ಯಕ್ಕೆ ಒಳ್ಳೆಯದು. ಆಹಾರದಲ್ಲಿರುವ ಕೊಲೆಸ್ಟರಾಲ್ ರಕ್ತದ ಕೊಲೆಸ್ಟರಾಲ್ ಮೇಲೆ ಕೇವಲ 0-4%ದಷ್ಟೇ ಪ್ರಭಾವ ಬೀರುವುದರಿಂದ ಮೊಟ್ಟೆ ಹಾಗೂ ಮಾಂಸಾಹಾರವನ್ನು ಹಿತಮಿತವಾಗಿ ಸೇವಿಸಬಹುದು. ನಿತ್ಯವೂ ಒಂದಷ್ಟು ದೈಹಿಕ ವ್ಯಾಯಾಮದ ಜೊತೆಗೆ ಬಿಸಿಲಿಗೆ ಮೈಯೊಡ್ಡುವುದರಿಂದಲೂ ರಕ್ತನಾಳಗಳನ್ನು ಸುಸ್ಥಿತಿಯಲ್ಲಿಡಲು ನೆರವಾಗುತ್ತದೆ.

ಅಂತೂ ದಪ್ಪಕ್ಷರಗಳಲ್ಲಿ ಅಡಿಗೆರೆ ಹಾಕಿದ ಕೊಲೆಸ್ಟರಾಲ್ ವರದಿಗಳನ್ನು ಕಂಡು ಹೌಹಾರುವ ದಿನಗಳು ಮುಗಿದವೆನ್ನಲು ಅಡ್ಡಿಯಿಲ್ಲ. ಅದಾಗಲೇ ಹೃದಯಾಘಾತವಾದವರು ಅಡ್ಡಪರಿಣಾಮಗಳಿಲ್ಲದಿದ್ದರೆ ಕೆಲಕಾಲ ಸ್ಟಾಟಿನ್ ಔಷಧಗಳನ್ನು ಸೇವಿಸಬಹುದು; ಇನ್ನುಳಿದವರಲ್ಲಿ ಈ ಔಷಧಗಳಿಂದ ಪ್ರಯೋಜನವಿದೆಯೆನ್ನಲು ಸದ್ಯಕ್ಕೆ ಆಧಾರಗಳಿಲ್ಲ.

ಎಗ್ಗಿಲ್ಲದೆ ಬೆಳೆಯುತ್ತಿರುವ ಕ್ಯಾನ್ಸರ್

ಆರೋಗ್ಯ ಆಶಯ – ವಿಜಯ ಕರ್ನಾಟಕ: ಎಗ್ಗಿಲ್ಲದೆ ಬೆಳೆಯುತ್ತಿರುವ ಕ್ಯಾನ್ಸರ್ [ಎಪ್ರಿಲ್ 30, 2014, ಬುಧವಾರ] [ನೋಡಿ | ನೋಡಿ]

ಹಸಿವು ಕ್ಯಾನ್ಸರನ್ನು ಕೊಲ್ಲುತ್ತದೆ, ಭೂರಿ ಭೋಜನ ಕ್ಯಾನ್ಸರನ್ನು ಸಲಹುತ್ತದೆ

ಆಧುನಿಕ ಆಹಾರ ಹಾಗೂ ಸುಲಭ-ಸುಖಮಯ ಜೀವನಶೈಲಿಯೊಂದಿಗೆ ನಿಕಟ ಸಂಬಂಧವನ್ನು ಹೊಂದಿರುವ ಹೃದ್ರೋಗ, ಮಧುಮೇಹ, ಪಾರ್ಶ್ವವಾಯು ಇತ್ಯಾದಿಗಳನ್ನು ನಿಯಂತ್ರಿಸಲು ನಾವು ಹೆಣಗಾಡುತ್ತಿರುವಾಗ ಕ್ಯಾನ್ಸರ್ ಇನ್ನೊಂದು ಪೆಡಂಭೂತವಾಗಿ ಬೆಳೆಯುತ್ತಿದೆ. ಹೊಸ ತಂತ್ರಜ್ಞಾನ ಹಾಗೂ ಚಿಕಿತ್ಸೆಗಳಿಂದ ಕ್ಯಾನ್ಸರನ್ನು ಶೀಘ್ರವಾಗಿ ಪತ್ತೆ ಹಚ್ಚುವುದಕ್ಕೂ,  ಕೆಲವನ್ನು ಗುಣಪಡಿಸುವುದಕ್ಕೂ ಸಾಧ್ಯವಾಗಿದೆ. ಆದರೂ ಕ್ಯಾನ್ಸರ್ ಅಂದರೆ ಭಯವೂ ಹೆಚ್ಚು, ವೆಚ್ಚವೂ ಹೆಚ್ಚು.

ಪ್ರತಿಷ್ಠಿತ ಲಾನ್ಸೆಟ್ ವಿದ್ವತ್ಪತ್ರಿಕೆಯ ಎಪ್ರಿಲ್ 11 ರ ಸಂಚಿಕೆಯಲ್ಲಿ ಭಾರತ, ಚೀನಾ ಹಾಗೂ ರಷ್ಯಾಗಳಲ್ಲಿ ಕ್ಯಾನ್ಸರ್ ನಿಯಂತ್ರಣದ ಬಗ್ಗೆ 50 ಪುಟಗಳ ವರದಿಯಿದೆ. ಈ ದೇಶಗಳಲ್ಲಿ ಬೆಳೆಯುತ್ತಿರುವ ಆರ್ಥಿಕತೆ, ಆಧುನಿಕ ಜೀವನಶೈಲಿಯ ಹುಚ್ಚು, ಪರಿಸರ ಮಾಲಿನ್ಯ ಇತ್ಯಾದಿಗಳು ಕ್ಯಾನ್ಸರ್ ಹೆಚ್ಚಳಕ್ಕೆ ಕಾರಣವಾಗುತ್ತಿವೆಯೆಂದೂ, ಅಲ್ಲಿನ ಜನರಲ್ಲಿರುವ ವಿರಕ್ತಿ, ಜುಗುಪ್ಸೆ, ಆಧುನಿಕ ಚಿಕಿತ್ಸೆಯ ಬಗ್ಗೆ ಅವಿಶ್ವಾಸ, ಸಾಮಾಜಿಕ ಕಟ್ಟುಪಾಡುಗಳು, ಜಾತಿ, ಮತ, ಲಿಂಗಾಧಾರಿತ ಅಸಮಾನತೆಗಳು, ಬಡತನ, ಅಜ್ಞಾನ, ಮೂಢನಂಬಿಕೆ, ಸೌಲಭ್ಯಗಳ ಕೊರತೆ ಇತ್ಯಾದಿಗಳು ಕ್ಯಾನ್ಸರ್ ಪತ್ತೆ ಹಾಗೂ ಚಿಕಿತ್ಸೆಗಳಲ್ಲಿ ನಿರ್ಲಕ್ಷ್ಯಕ್ಕೂ, ಲೋಪಗಳಿಗೂ ಕಾರಣವಾಗುತ್ತಿವೆಯೆಂದೂ ಆ ವರದಿಯಲ್ಲಿ ಹೇಳಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಗ್ಲೋಬೋಕಾನ್ ವರದಿಯನುಸಾರ, 2012ರಲ್ಲಿ ವಿಶ್ವದಲ್ಲಿದ್ದ ಒಟ್ಟು ಕ್ಯಾನ್ಸರ್ ಪೀಡಿತರ ಸಂಖ್ಯೆ 3.26 ಕೋಟಿ, ಅದೇ ವರ್ಷ ಹೊಸದಾಗಿ ಕ್ಯಾನ್ಸರ್ ಪತ್ತೆಯಾದವರ ಸಂಖ್ಯೆ 1.41 ಕೋಟಿ, ಅದರಿಂದಾಗಿ ಸಾವನ್ನಪ್ಪಿದವರು 82 ಲಕ್ಷ. ಹೊಸದಾಗಿ ಕ್ಯಾನ್ಸರಿಗೆ ತುತ್ತಾಗುವವರ ಸಂಖ್ಯೆಯು 2025ರಲ್ಲಿ 1.9 ಕೋಟಿಗೆ, 2035ರಲ್ಲಿ 2.4 ಕೋಟಿಗೆ ಏರಲಿವೆ ಎನ್ನುವುದು ಗ್ಲೋಬೋಕಾನ್ ಅಂದಾಜು.

ಭಾರತದಲ್ಲೀಗ ಕ್ಯಾನ್ಸರ್ ಪೀಡಿತರ ಸಂಖ್ಯೆ ಸುಮಾರು 25 ಲಕ್ಷ, ಹೊಸದಾಗಿ ಕ್ಯಾನ್ಸರ್ ಪತ್ತೆಯಾಗುತ್ತಿರುವವರು ವರ್ಷಕ್ಕೆ 10 ಲಕ್ಷ, ಹಾಗೂ ಸಾವನ್ನಪ್ಪುವವರು ವರ್ಷಕ್ಕೆ ಮೂರೂವರೆ ಲಕ್ಷ. ಬೆಂಗಳೂರಿನ ಕಿದ್ವಾಯಿ ಗಂತಿ ಸಂಸ್ಥೆಯನುಸಾರ, ಕರ್ನಾಟಕದಲ್ಲಿ ಕ್ಯಾನ್ಸರ್ ಪೀಡಿತರು ಸುಮಾರು ಒಂದೂವರೆ ಲಕ್ಷ, ಪ್ರತೀ ವರ್ಷ ಹೊಸದಾಗಿ ಸೇರ್ಪಡೆಯಾಗುತ್ತಿರುವವರು 35 ಸಾವಿರದಷ್ಟು. ಅಮೆರಿಕಾ-ಬ್ರಿಟನ್ ಗಳಲ್ಲಿ ಮೂವರಿಂದ ನಾಲ್ವರಲ್ಲೊಬ್ಬರಿಗೆ ಕ್ಯಾನ್ಸರ್ ತಗಲುವ ಸಾಧ್ಯತೆಗಳಿದ್ದರೆ, ನಮ್ಮ ದೇಶದಲ್ಲಿ ಹತ್ತರಲ್ಲೊಬ್ಬರಿಗಿದೆ, ಬೆಂಗಳೂರಿನಲ್ಲಿ ಆರರಲ್ಲೊಬ್ಬರಿಗಿದೆ. ಅಮೆರಿಕಾ-ಬ್ರಿಟನ್ ಗಳಲ್ಲಿ ಶೇ.33-40ರಷ್ಟು ಕ್ಯಾನ್ಸರ್ ಪೀಡಿತರು ಸಾವನ್ನಪ್ಪಿದರೆ, ನಮ್ಮಲ್ಲಿ ಶೇ. 70ರಷ್ಟು ಸಾಯುತ್ತಾರೆ. ಅಂದರೆ, ನಮ್ಮಲ್ಲಿ ಕ್ಯಾನ್ಸರ್ ಉಂಟಾಗುವ ಅಪಾಯವು ಅಮೆರಿಕಾಕ್ಕಿಂತ ಕಡಿಮೆಯಿದ್ದರೂ, ಅದರಿಂದ ಸಾವನ್ನಪ್ಪುವ ಸಾಧ್ಯತೆಗಳು ಹೆಚ್ಚಿರುತ್ತವೆ. ನಮ್ಮಲ್ಲಿ  ಕ್ಯಾನ್ಸರ್ ಪ್ರಕರಣಗಳು ನಗರವಾಸಿಗಳಲ್ಲಿ ಹೆಚ್ಚು ಪತ್ತೆಯಾಗುತ್ತಿದ್ದರೂ, ಅದರಿಂದಾಗುವ ಸಾವುಗಳ ಪ್ರಮಾಣವು ಹಳ್ಳಿಗಳಲ್ಲೇ ಹೆಚ್ಚು.

ನಮ್ಮ ಗಂಡಸರಲ್ಲಿ ಗಂಟಲು, ಬಾಯಿ, ಅನ್ನನಾಳ, ಜಠರ, ಶ್ವಾಸಕೋಶ ಹಾಗೂ ರಕ್ತದ ಕ್ಯಾನ್ಸರ್ ಗಳು ಹೆಚ್ಚು ಸಾಮಾನ್ಯವಾಗಿದ್ದರೆ, ಹೆಂಗಸರಲ್ಲಿ ಗರ್ಭನಾಳ, ಸ್ತನ, ಬಾಯಿ, ಅನ್ನನಾಳ ಹಾಗೂ ಅಂಡಾಶಯ ಕ್ಯಾನ್ಸರ್ ಗಳು ಹೆಚ್ಚಾಗಿ ಕಂಡುಬರುತ್ತವೆ. ಕ್ಯಾನ್ಸರ್ ಪೀಡಿತ ಗಂಡಸರಲ್ಲಿ ಅರ್ಧಕ್ಕೂ ಹೆಚ್ಚು ಸಾವುಗಳು ಬಾಯಿ ಹಾಗೂ ಶ್ವಾಸಕೋಶಗಳ ಕ್ಯಾನ್ಸರಿಗೆ ಸಂಬಂಧಿಸಿದ್ದರೆ, ಹೆಂಗಸರಲ್ಲಿ ಸ್ತನ ಹಾಗೂ ಗರ್ಭನಾಳದ ಕ್ಯಾನ್ಸರಿನಿಂದಾಗುತ್ತವೆ.

ಕ್ಯಾನ್ಸರ್ ಹೇಗುಂಟಾಗುತ್ತದೆ ಎನ್ನುವುದಕ್ಕೆ ಇನ್ನೂ ಖಚಿತವಾದ ಉತ್ತರವಿಲ್ಲ. ನಮ್ಮ ದೇಹದಲ್ಲಿ ಹತ್ತು ಲಕ್ಷ ಕೋಟಿ ಜೀವಕೋಶಗಳು ಸುನಿಯಂತ್ರಿತವಾಗಿ ಬಾಳುತ್ತಿರುತ್ತವೆ. ಕೆಲವು ಜೀವಕಣಗಳು ಸಹಜವಾಗಿ ಸವೆದು ಸಾಯುವುದು, ಅವುಗಳಿದ್ದಲ್ಲಿ ಹೊಸ ಕಣಗಳು ಹುಟ್ಟುವುದು, ಹಾನಿಯಾದ ಜೀವಕಣಗಳನ್ನು ಸರಿಪಡಿಸುವುದು ಅಥವಾ ಕೆಟ್ಟ ಕಣಗಳನ್ನು ನಾಶಪಡಿಸುವುದು ಎಲ್ಲವೂ ಸುಸಂಯೋಜಿತವಾಗಿ ನಡೆಯುತ್ತಿರುತ್ತವೆ. ನಾವು ಸೇವಿಸುವ ನೀರು ಮತ್ತು ಆಹಾರ, ಉಸಿರಾಡುವ ಗಾಳಿ, ನಮ್ಮ ದಿನನಿತ್ಯದ ಚಟುವಟಿಕೆಗಳು, ನಮ್ಮ ಪರಿಸರ ಮುಂತಾದ ಭೌತಿಕ-ರಾಸಾಯನಿಕ-ಜೈವಿಕ ಕಾರಣಗಳಿಂದ ಈ ಅತಿ ಸಂಕೀರ್ಣವಾದ ವ್ಯವಸ್ಥೆಯಲ್ಲಿ ಏರುಪೇರುಗಳಾದರೆ ಕ್ಯಾನ್ಸರ್ ಕಣಗಳು ಹುಟ್ಟಬಹುದು.

ಹಾಗೆ ಹುಟ್ಟಿದ ಕ್ಯಾನ್ಸರ್ ಕಣಗಳು ಅನಿಯಂತ್ರಿತವಾಗಿ ವೃದ್ಧಿಸುತ್ತವೆ. ಸಾಮಾನ್ಯ ಜೀವಕಣಗಳ ಬೆಳವಣಿಗೆಯನ್ನು ನಿಯಂತ್ರಿಸುವ, ಕೆಟ್ಟಕಣಗಳನ್ನು ನಾಶಗೊಳಿಸುವ ವ್ಯವಸ್ಥೆಗಳು ಕ್ಯಾನ್ಸರ್ ಕಣಗಳನ್ನು ತಟ್ಟುವುದಿಲ್ಲ. ರೋಗರಕ್ಷಣಾ ವ್ಯವಸ್ಥೆಯೂ ಅವಕ್ಕೆ ಶರಣಾಗುತ್ತದೆ. ರಕ್ತನಾಳಗಳನ್ನೂ ಸೃಷ್ಟಿಸಿಕೊಂಡು ಬೆಳೆಯುತ್ತಲೇ ಸಾಗುವ ಕ್ಯಾನ್ಸರ್ ಕಣಗಳು, ತಾವಿದ್ದಲ್ಲಿಂದ ಕಳಚಿಕೊಂಡು ಬೇರೆ ಅಂಗಗಳಿಗೂ ಹರಡಿ, ಅಲ್ಲೂ ತಳವೂರಿ ಬೆಳೆಯುತ್ತವೆ.

ನಮ್ಮ ದೇಶದಲ್ಲಿ ಶೇ. 40ಕ್ಕೂ ಹೆಚ್ಚು ಕ್ಯಾನ್ಸರ್ ಪ್ರಕರಣಗಳು ತಂಬಾಕು ಸೇವಿಸುವವರಲ್ಲೇ ಉಂಟಾಗುತ್ತವೆ. ಅದನ್ನು ಬಾಯೊಳಗಿಟ್ಟುಕೊಳ್ಳುವವರ ಬಾಯಿಗಳಲ್ಲಿ, ಜಗಿದು ನುಂಗುವವರ ಗಂಟಲು-ಅನ್ನನಾಳ-ಜಠರಗಳಲ್ಲಿ, ಬೀಡಿ-ಸಿಗರೇಟುಗಳ ಮೂಲಕ ಅದರ ಹೊಗೆಯನ್ನು ಸೇದುವವರ ಶ್ವಾಸನಾಳಗಳಲ್ಲಿ ಕ್ಯಾನ್ಸರುಗಳು ಹುಟ್ಟುತ್ತವೆ. ತಂಬಾಕಿನ ಹೂಕಾ, ಉಪ್ಪುಭರಿತ ಚಹಾ, ಒಣಹಣ್ಣುಗಳನ್ನು ಹೆಚ್ಚಾಗಿ ಸೇವಿಸುವ ಕಾಶ್ಮೀರದಲ್ಲಿ ಅನ್ನನಾಳದ ಕ್ಯಾನ್ಸರ್; ತಂಬಾಕಿನ ಹೊಗೆಮಿಶ್ರಿತ ನೀರನ್ನೂ, ಸಿಗರೇಟನ್ನೂ ಬಳಸುವ ಮಿಜೋರಾಂನಲ್ಲಿ ನಾಲಗೆ ಹಾಗೂ ಜಠರದ ಕ್ಯಾನ್ಸರ್; ತಂಬಾಕು ಮಿಶ್ರಿತ ಬೀಡಾ-ಬೀಡಿಗಳನ್ನು ಹೆಚ್ಚಾಗಿ ಬಳಸುವ ಕೇರಳದಲ್ಲಿ ಬಾಯಿಯ ಕ್ಯಾನ್ಸರ್; ಮೂಗಿನೊಳಕ್ಕೆ ನಾಟಿಮದ್ದನ್ನು ತೂರಿಸಿಡುವ ನಾಗಾಲ್ಯಾಂಡಿನಲ್ಲಿ ಮೂಗಿನೊಳಗಿನ ಕ್ಯಾನ್ಸರ್; ಆಧುನಿಕ ಜೀವನಶೈಲಿಯ ಜೊತೆಗೆ ಕರಿದ ಪದಾರ್ಥಗಳನ್ನೂ, ತಂಬಾಕನ್ನೂ ಅಧಿಕವಾಗಿ ಬಳಸುವ ದಿಲ್ಲಿಯಲ್ಲಿ ಪಿತ್ತಕೋಶದ ಕ್ಯಾನ್ಸರ್ – ಹೀಗೆ ವಿವಿಧೆಡೆ ವಿವಿಧ ಕಾರಣಗಳಿಂದ ಕ್ಯಾನ್ಸರ್ ಉಂಟಾಗಬಹುದು. ಪಂಜಾಬಿನ ಮಾಲ್ವಾ ಪ್ರದೇಶವು ದೇಶದಲ್ಲೇ ಅತಿ ಹೆಚ್ಚು ಕ್ಯಾನ್ಸರ್ ಪೀಡಿತರನ್ನು ಹೊಂದಿರುವ ಕುಖ್ಯಾತಿಗೊಳಗಾಗಿದೆ. ಅಲ್ಲಿನ ಬೃಹತ್ ಉದ್ದಿಮೆಗಳು, ಕಲ್ಲಿದ್ದಲು ಆಧಾರಿತ ವಿದ್ಯುತ್ ಘಟಕಗಳು ಹಾಗೂ ಆಧುನಿಕ ಕೃಷಿಪದ್ಧತಿಗಳಿಂದಾಗಿ ನೆಲ-ಜಲ-ಗಾಳಿಗಳೆಲ್ಲವೂ ವಿಕಿರಣಕಾರಿ ಯುರೇನಿಯಂ, ಆರ್ಸೆನಿಕ್,ಬಗೆಬಗೆಯ ಕೀಟನಾಶಕಗಳಿಂದ ತುಂಬಿರುವುದೇ ಇದಕ್ಕೆ ಕಾರಣವೆನ್ನಲಾಗಿದೆ.

ಇಂತಹಾ ಕ್ಯಾನ್ಸರ್ ಕಾರಕಗಳಿಂದ ಜೀವಕಣಗಳ ವಂಶವಾಹಿಗಳು ಹಾನಿಗೊಂಡು ಕ್ಯಾನ್ಸರ್ ಹುಟ್ಟುತ್ತದೆಯೆಂದು ಹೇಳಲಾಗುತ್ತಿತ್ತು. ಆದರೆ ಕಳೆದ ಹತ್ತು ವರ್ಷಗಳಿಂದ ಅಂತಹ ವಂಶವಾಹಿಗಳಿಗಾಗಿ ಭಾರೀ ಹುಡುಕಾಟವೇ ನಡೆದಿದ್ದರೂ ನಿರೀಕ್ಷಿತ ಫಲ ದೊರೆತಿಲ್ಲ; ಆದ್ದರಿಂದ ಈ ಸಿದ್ಧಾಂತವನ್ನೇ ಈಗ ಪ್ರಶ್ನಿಸುವಂತಾಗಿದೆ.

ಎಲ್ಲಾ ಕ್ಯಾನ್ಸರ್ ಕಣಗಳು ಗ್ಲೂಕೋಸನ್ನು ವಿಪರೀತ ಪ್ರಮಾಣದಲ್ಲಿ ವಿಶೇಷ ರೀತಿಯಿಂದ ಬಳಸಿಕೊಳ್ಳುತ್ತವೆ ಎನ್ನುವುದನ್ನು 1930ರಷ್ಟು ಹಿಂದೆಯೇ ಜರ್ಮನಿಯ ವಿಜ್ಞಾನಿ ಒಟೊ ವಾರ್ಬರ್ಗ್ ತೋರಿಸಿದ್ದರು, ಅದಕ್ಕಾಗಿ ನೊಬೆಲ್ ಪ್ರಶಸ್ತಿಯನ್ನೂ ಪಡೆದಿದ್ದರು. ಈಗ ವಾರ್ಬರ್ಗ್ ಸಿದ್ಧಾಂತದತ್ತ ಮತ್ತೆ ಆಸಕ್ತಿ ಹೊರಳಿದ್ದು, ಸಕ್ಕರೆ ಭರಿತ ಆಹಾರದ ವಿಪರೀತ ಸೇವನೆಯು ಗ್ಲೂಕೋಸ್ ಪ್ರಿಯ ಕ್ಯಾನ್ಸರನ್ನು ಹುಟ್ಟಿಸಿ, ಬೆಳೆಸುತ್ತದೆಯೇ ಎನ್ನುವ ಬಗ್ಗೆ ಅಧ್ಯಯನಗಳಾಗುತ್ತಿವೆ. ಸಕ್ಕರೆ ಹಾಗೂ ಸಂಸ್ಕರಿತ ಶರ್ಕರಗಳ ಸೇವನೆಯು ಜೀವಕಣಗಳಲ್ಲಿ ಉತ್ಕರ್ಷಕ ಒತ್ತಡವನ್ನು ಹೆಚ್ಚಿಸಿ, ಶಕ್ತ್ಯುತ್ಪಾದನೆಯ ಕೇಂದ್ರಗಳಾಗಿರುವ ಮೈಟೋಕಾಂಡ್ರಿಯಾಗಳನ್ನು ಹಾನಿಗೊಳಿಸಿ ಕ್ಯಾನ್ಸರ್ ಹುಟ್ಟಿಗೆ ಕಾರಣವಾಗಬಹುದೆಂದು ಹೇಳಲಾಗುತ್ತಿದೆ. ಮೇಲೆ ಹೇಳಲಾಗಿರುವ ಕ್ಯಾನ್ಸರ್ ಕಾರಕಗಳು ಕೂಡಾ ಮೈಟೋಕಾಂಡ್ರಿಯಾಗಳನ್ನು ಹಾನಿಗೊಳಿಸುತ್ತವೆಯೆಂದೂ, ಆ ಮೂಲಕ ವಂಶವಾಹಿಗಳಲ್ಲಿ ಬದಲಾವಣೆಗಳಿಗೆ ಕಾರಣವಾಗುತ್ತವೆ ಎಂದೂ ಹೇಳಲಾಗುತ್ತಿದೆ. ಊಟವಿಲ್ಲದೆ ಹಸಿದಿರುವಾಗ ಕೆಟ್ಟಕಣಗಳೆಲ್ಲ ಭಕ್ಷಿಸಲ್ಪಟ್ಟು, ಕ್ಯಾನ್ಸರ್ ಕಣಗಳು ಕೂಡ ನಾಶವಾಗುತ್ತವೆ; ಆದರೆ ನಿತ್ಯದ ಭೂರಿ ಭೋಜನವು ಕ್ಯಾನ್ಸರ್ ಕಣಗಳಿಗೆ ಪೋಷಣೆಯೊದಗಿಸುತ್ತದೆ ಎನ್ನಲಾಗುತ್ತಿದೆ. ಅದಾಗಲೇ ಕ್ಯಾನ್ಸರ್ ಪೀಡಿತರಾದವರಿಗೆ ತಜ್ಞ ಚಿಕಿತ್ಸೆಯ ಜೊತೆಗೆ ಸಕ್ಕರೆರಹಿತವಾದ ಆಹಾರಸೇವನೆಯು ಕ್ಯಾನ್ಸರ್ ಗುಣಪಡಿಸುವಲ್ಲಿ ನೆರವಾಗುತ್ತದೆನ್ನುವ ವರದಿಗಳೂ ಹಲವಿವೆ.

ಆದ್ದರಿಂದ ಕ್ಯಾನ್ಸರ್ ಮಾರಿಯನ್ನು ದೂರವಿಡಬೇಕಾದರೆ ಸಕ್ಕರೆ ಹಾಗೂ ಸಂಸ್ಕರಿತ ಆಹಾರಗಳನ್ನು, ಪಶು ಹಾಲಿನ ಉತ್ಪನ್ನಗಳನ್ನು, ಕರಿದ ತಿನಿಸುಗಳನ್ನು, ಅತಿಯಾಗಿ ಸುಟ್ಟ ಮಾಂಸವನ್ನು, ತಂಬಾಕು ಹಾಗೂ ಶರಾಬುಗಳನ್ನು ವರ್ಜಿಸಬೇಕು, ಪರಿಸರ ಮಾಲಿನ್ಯವನ್ನು ತಡೆಯಬೇಕು. ಪ್ರಕೃತಿದತ್ತ ಆಹಾರದ ಹಿತಮಿತವಾದ ಸೇವನೆ ಹಾಗೂ ನಿಯತ ವ್ಯಾಯಾಮಗಳು ಎಲ್ಲಾ ಆಧುನಿಕ ರೋಗಗಳನ್ನು ತಡೆಯಲು ಸಹಕಾರಿ.

ಅಷ್ಟೇ ಮುಖ್ಯವಾಗಿ, ಕ್ಯಾನ್ಸರ್ ಉಂಟಾಗುವ ಅಪಾಯವುಳ್ಳವರು ಆ ಕುರಿತು ನಿಗಾ ವಹಿಸುತ್ತಿರುವುದೊಳ್ಳೆಯದು. ಕ್ಯಾನ್ಸರ್ ಗುರುತಿಸಲ್ಪಟ್ಟರೆ ಹತಾಶರಾಗಿ ಧೃತಿಗೆಡುವ ಬದಲು ಕೂಡಲೇ ತಜ್ಞರನ್ನು ಕಂಡು ಸೂಕ್ತ ಪರೀಕ್ಷೆ ಹಾಗೂ ಚಿಕಿತ್ಸೆಗಳನ್ನು ಮಾಡಿಸಿಕೊಳ್ಳಬೇಕು. ಬದಲಿ ಚಿಕಿತ್ಸೆ, ಪ್ರಾರ್ಥನೆ, ಮಂತ್ರ-ತಂತ್ರಗಳ ಪೊಳ್ಳು ಭರವಸೆಗಳನ್ನು ನಂಬಿದರೆ ಕ್ಯಾನ್ಸರ್ ಉಲ್ಬಣಿಸಿ ಚಿಕಿತ್ಸೆಯೇ ಅಸಾಧ್ಯವಾಗಬಹುದು.

ವಿಪರೀತವಾದರೆ ತಿನ್ನುವುದರಿಂದ ಸಂತಾನಶಕ್ತಿ ಹರಣ

ಆರೋಗ್ಯ ಆಶಯ – ವಿಜಯ ಕರ್ನಾಟಕ: ವಿಪರೀತವಾದರೆ ತಿನ್ನುವುದರಿಂದ ಸಂತಾನಶಕ್ತಿ ಹರಣ [ಜೂನ್ 25, 2014, ಬುಧವಾರ] [ನೋಡಿ | ನೋಡಿ]

ಸಂತಾನಹೀನತೆಗೆ ಲೆಪ್ಟಿನ್, ಇನ್ಸುಲಿನ್ ನಂತಹ ಹಾರ್ಮೋನುಗಳ ಸಮಸ್ಯೆಯೇ ಕಾರಣ, ದೋಷ-ಪಾಪ-ಶಾಪಗಳಲ್ಲ

ಸಂತಾನಭಾಗ್ಯವಿಲ್ಲದವರಿಗೆ ಗರ್ಭಧಾರಣೆಗೆ ನೆರವಾಗುವ ಸೌಲಭ್ಯಗಳ ಬಗ್ಗೆ ಬೃಹತ್ ಗಾತ್ರದ ಜಾಹೀರಾತುಗಳು ಎಲ್ಲೆಂದರಲ್ಲಿ ಸಾಮಾನ್ಯವಾಗಿಬಿಟ್ಟಿವೆ. ಸಂತಾನೋತ್ಪತ್ತಿಯ ವಯೋಮಾನದವರಲ್ಲಿ ಫಲಹೀನತೆ ಹೆಚ್ಚುತ್ತಿರುವುದರಿಂದ ಪ್ರನಾಳೀಯ ಫಲೀಕರಣದಂತಹ ತಂತ್ರಜ್ಞಾನಕ್ಕೆ ಬೇಡಿಕೆ ಹೆಚ್ಚುತ್ತಿದೆ. ವಿಪರ್ಯಾಸವೆಂದರೆ, ವಯಸ್ಕರು ಫಲಹೀನರಾಗುತ್ತಿರುವಲ್ಲಿ ಇಂದಿನ ಮಕ್ಕಳು ಬೇಗನೇ ಪ್ರೌಢರಾಗುತ್ತಿದ್ದಾರೆ. ಒಟ್ಟಿನಲ್ಲಿ ಈ ಪೀಳಿಗೆಯ ಸಂತಾನಶಕ್ತಿಯಲ್ಲಿ ವಿಶೇಷವಾದ ಬದಲಾವಣೆಗಳಾಗುತ್ತಿವೆ.

ಕಳೆದೆರಡು ದಶಕಗಳಲ್ಲಿ ಸಂತಾನಹೀನತೆಯ ಪ್ರಮಾಣವು ದುಪ್ಪಟ್ಟಾಗಿದೆ: 1990ರಲ್ಲಿ ಶೇ. 8ರಷ್ಟು ದಂಪತಿಗಳಲ್ಲಿ ಸಂತಾನವನ್ನು ಪಡೆಯುವ ಸಮಸ್ಯೆಯಿದ್ದರೆ ಈಗ ಶೇ.12-18ರಷ್ಟು, ಅಂದರೆ ಆರರಲ್ಲೊಬ್ಬರು, ಅಂತಹಾ ಸಮಸ್ಯೆಯನ್ನು ಹೊಂದಿದ್ದಾರೆ. ಕಳೆದೈದು ವರ್ಷಗಳಲ್ಲಿ ನಮ್ಮ ದೇಶದಲ್ಲಿ ಸಂತಾನಹೀನತೆಯುಳ್ಳವರ ಸಂಖ್ಯೆಯಲ್ಲಿ ಶೇ.20-30ರಷ್ಟು ಏರಿಕೆಯಾಗಿದೆ. ದೊಡ್ಡ ನಗರಗಳಷ್ಟೇ ಅಲ್ಲದೆ ಸಣ್ಣ ಪಟ್ಟಣಗಳಲ್ಲೂ, ಹಳ್ಳಿಗಳಲ್ಲೂ ಈ ಸಮಸ್ಯೆಯು ಹೆಚ್ಚುತ್ತಲಿದೆ. ಹೆಂಗಸರಲ್ಲೂ, ಅವರಿಗಿಂತ ಹೆಚ್ಚಾಗಿ ಗಂಡಸರಲ್ಲೂ, ಫಲಹೀನತೆಯು ಹೆಚ್ಚುತ್ತಿದೆ.

ಇದೇ ಕಾಲಾವಧಿಯಲ್ಲಿ ಮಕ್ಕಳು ಪ್ರೌಢಾವಸ್ಥೆಗೆ ಕಾಲಿಡುವ ವಯಸ್ಸಿನಲ್ಲಿ ಗಣನೀಯವಾದ ಇಳಿಕೆಯಾಗಿದೆ. ನಾಲ್ಕೈದು ದಶಕಗಳ ಹಿಂದೆ ಹುಡುಗಿಯರು 14-16ರ ವಯಸ್ಸಿಗೆ ಮೈನೆರೆಯುತ್ತಿದ್ದರೆ, ಈಗ 11-12ಕ್ಕೇ ಮೈನೆರೆಯುತ್ತಿದ್ದಾರೆ. ಅಮೆರಿಕಾದಂತಹ ದೇಶಗಳಲ್ಲಿ ಶೇ. 16ರಷ್ಟು ಹುಡುಗಿಯರು 7ನೇ ವಯಸ್ಸಿನಲ್ಲಿ, ಶೇ. 30ರಷ್ಟು ಹುಡುಗಿಯರು 8ನೇ ವಯಸ್ಸಿನಲ್ಲಿ ಪ್ರೌಢರಾಗುತ್ತಿದ್ದಾರೆ. ನಗರವಾಸಿ ಮಕ್ಕಳು ಹಳ್ಳಿಗಳಲ್ಲಿರುವ ಮಕ್ಕಳಿಗಿಂತ 2-3 ವರ್ಷ ಮೊದಲೇ ಪ್ರೌಢರಾಗುತ್ತಾರೆ.

ಇಂದಿನ ಪೀಳಿಗೆಯವರು ಬೇಗನೇ ಪ್ರೌಢರಾಗುವುದಕ್ಕೂ, ನಂತರ ಸಂತಾನಸಾಮರ್ಥ್ಯದ ಕೊರತೆಯಿಂದ ಬಳಲುವುದಕ್ಕೂ ಕಾರಣಗಳೇನು? ಕಳೆದೆರಡು ದಶಕಗಳಲ್ಲಿ ನಮ್ಮ ಜೀವನ ಶೈಲಿ, ಒತ್ತಡಗಳು, ಆಹಾರಕ್ರಮಗಳು, ಪರಿಸರ ಮಾಲಿನ್ಯ ಇತ್ಯಾದಿಗಳಲ್ಲಾಗಿರುವ ಬದಲಾವಣೆಗಳು ಉತ್ತರ ನೀಡಬಹುದು.

ಮನುಷ್ಯರ ಸಂತಾನೋತ್ಪತ್ತಿಯ ವ್ಯವಸ್ಥೆಯು ಅತ್ಯಂತ ಸಂಕೀರ್ಣವೂ, ಸೂಕ್ಷ್ಮಸಂವೇದಿಯೂ ಆಗಿದೆ. ನರಮಂಡಲ, ಹೆಚ್ಚಿನೆಲ್ಲಾ ನಿರ್ನಾಳ ಗ್ರಂಥಿಗಳು ಮತ್ತವುಗಳ ಸ್ರಾವಗಳು ಹಾಗೂ ದೇಹದ ಎಲ್ಲಾ ಪ್ರಮುಖ ಅಂಗಗಳು ಈ ವ್ಯವಸ್ಥೆಯಲ್ಲಿ ಭಾಗವಹಿಸುತ್ತವೆ. ನರಮಂಡಲ ಹಾಗೂ ನಿರ್ನಾಳ ಸ್ರಾವಗಳ (ಹಾರ್ಮೋನುಗಳ) ಸಂವಹನವು ದೇಹದೊಳಗಿನ ಹಾಗೂ ಹೊರಪರಿಸರದ ಸ್ಥಿತಿಗತಿಗಳಿಗನುಗುಣವಾಗಿ ಈ ವ್ಯವಸ್ಥೆಯನ್ನು ನಿಯಂತ್ರಿಸುತ್ತದೆ. ನಮ್ಮ ಜೀವನ ಶೈಲಿ ಹಾಗೂ ಆಹಾರಗಳಿಂದಾಗಿ ಈ ಸೂಕ್ಷ್ಮ ತಾಳಮೇಳವು ಕೆಡಬಹುದೆನ್ನಲು ಪುರಾವೆಗಳೀಗ ದೊರೆಯತೊಡಗಿವೆ.

ಗಂಡು-ಹೆಣ್ಣಿನ ಜನನಾಂಗಗಳಲ್ಲಿ ವೀರ್ಯಾಣುಗಳು/ಅಂಡಾಣುಗಳು ಬೆಳೆಯುತ್ತವೆ ಹಾಗೂ ಇಸ್ಟ್ರೋಜನ್, ಪ್ರೊಜೆಸ್ಟರಾನ್ ಮತ್ತು ಟೆಸ್ಟೊಸ್ಟಿರಾನ್ ಎಂಬ ಸ್ತ್ರೀ-ಪುರುಷ ಸಂಬಂಧಿ ಹಾರ್ಮೋನುಗಳು ಸ್ರವಿಸಲ್ಪಡುತ್ತವೆ. ಇವು ಮೆದುಳೊಳಗೆ ಹುದುಗಿರುವ ಪಿಟ್ಯುಟರಿ ಗ್ರಂಥಿಯಿಂದ ಸ್ರವಿಸಲ್ಪಡುವ ಎರಡು ಜನನಾಂಗ ಪ್ರಚೋದಕ ಹಾರ್ಮೋನುಗಳಿಂದ ನಿಯಂತ್ರಿಸಲ್ಪಡುತ್ತವೆ, ಈ ಪಿಟ್ಯುಟರಿ ಸ್ರಾವಗಳು ಹೈಪೊಥಲಮಸಿನ ಪ್ರಚೋದನೆಯಿಂದ ಪ್ರಭಾವಿತವಾಗುತ್ತವೆ. ಈ ಹೈಪೊಥಲಮಸ್ ದೇಹದ ಒಳ-ಹೊರಗಿನ ಬದಲಾವಣೆಗಳಿಂದ ಪ್ರಭಾವಿತಗೊಂಡು ಅದಕ್ಕನುಗುಣವಾಗಿ ಸಂತಾನೋತ್ಪತ್ತಿಯ ವ್ಯವಸ್ಥೆಯನ್ನು ನಿಯಂತ್ರಿಸುತ್ತದೆ. ಇಂದಿನ ಆಹಾರ ಹಾಗೂ ಪರಿಸರಗಳು ಈ ಹೈಪೊಥಲಮಸ್-ಪಿಟ್ಯುಟರಿ-ಜನಾಂಗಗಳ ಅಕ್ಷದ ಮೇಲೆ ದುಷ್ಪರಿಣಾಮ ಬೀರುತ್ತವೆ.

ನಮ್ಮ ದೇಹದಲ್ಲಿ ಮೇದಸ್ಸನ್ನು ತುಂಬಿಕೊಳ್ಳುವ ಜೀವಕೋಶಗಳು ಲೆಪ್ಟಿನ್ ಎಂಬ ಹಾರ್ಮೋನನ್ನು ಸ್ರವಿಸುತ್ತವೆ. ಈ ಲೆಪ್ಟಿನ್ ದೇಹದಲ್ಲಿ ಅದೆಷ್ಟು ಆಹಾರವು (ಮೇದಸ್ಸು) ಸಂಚಯವಾಗಿದೆಯೆನ್ನುವ ಮಾಹಿತಿಯನ್ನು ಹೈಪೊಥಲಮಸಿಗೆ ನೀಡುತ್ತದೆ. ಅದಕ್ಕನುಗುಣವಾಗಿ ಜನನಾಂಗಗಳ ಕಾರ್ಯವನ್ನು ಹೈಪೊಥಲಮಸ್ ಪ್ರಚೋದಿಸುತ್ತದೆ. ಅಂದರೆ ನಾವು ತಿನ್ನುವ ಆಹಾರದ ಪ್ರಮಾಣ ಹಾಗೂ ಅದರಿಂದ ದೇಹದೊಳಗೆ ಸಂಚಯವಾಗುವ ಮೇದಸ್ಸಿನ ಪ್ರಮಾಣಗಳು ನಾವು ಪ್ರೌಢಾವಸ್ಥೆಗೆ ತಲುಪುವುದನ್ನೂ, ನಮ್ಮ ಸಂತಾನಶಕ್ತಿಯನ್ನೂ ನಿರ್ಧರಿಸುತ್ತವೆ. ಎಷ್ಟು ಅಗತ್ಯವೋ ಅಷ್ಟೇ ತಿಂದರೆ ಇವು ಸುಸೂತ್ರವಾಗಿರುತ್ತದೆ, ಅಗತ್ಯಕ್ಕಿಂತ ಹೆಚ್ಚು ತಿಂದು ಬೊಜ್ಜು ಹೆಚ್ಚಿದರೆ ಲೆಪ್ಟಿನ್ ಏರಿ ಪ್ರೌಢಾವಸ್ಥೆ ಬೇಗನೇ ಬರುತ್ತದೆ, ನಂತರ ಜನನಾಂಗಗಳ ಪ್ರಚೋದನೆ ವಿಪರೀತವಾಗಿ ಸಂತಾನೋತ್ಪತ್ತಿಗೆ ತೊಂದರೆಯಾಗುತ್ತದೆ.

ಮೇದೋಜೀರಕಾಂಗದ ಬೀಟಾ ಕಣಗಳು ಸ್ರವಿಸುವ ಇನ್ಸುಲಿನ್ ಹಾರ್ಮೋನು ಕೂಡಾ ನಮ್ಮ ಸಂತಾನಶಕ್ತಿಯ ಮೇಲೆ ಸಾಕಷ್ಟು ಪ್ರಭಾವ ಬೀರುತ್ತದೆ. ನಾವು ತಿನ್ನುವ ಶರ್ಕರಗಳೆಲ್ಲವೂ ಇನ್ಸುಲಿನ್ ಸ್ರಾವವನ್ನು ಪ್ರಚೋದಿಸುತ್ತವೆ, ಇನ್ಸುಲಿನ್ ಈ ಶರ್ಕರಗಳನ್ನು ಮೇದಸ್ಸಾಗಿ ಪರಿವರ್ತಿಸಲು ಕಾರಣವಾಗಿ, ಬೊಜ್ಜು ಹೆಚ್ಚುತ್ತದೆ, ಅದರಿಂದ ಲೆಪ್ಟಿನ್ ಏರುತ್ತದೆ. ಹೀಗೆ ನಾವು ಶರ್ಕರಗಳನ್ನು ಹೆಚ್ಚು-ಹೆಚ್ಚು ತಿಂದಷ್ಟು ಇನ್ಸುಲಿನ್ ಹಾಗೂ ಲೆಪ್ಟಿನ್ ಎರಡೂ ಏರುತ್ತವೆ. ಇನ್ಸುಲಿನ್ ಏರಿದಂತೆ ಟೆಸ್ಟೊಸ್ಟಿರಾನ್ ಪ್ರಮಾಣವೂ ಏರುತ್ತದೆ, ಅದರಿಂದಾಗಿ ಪಿಟ್ಯುಟರಿಯಿಂದ ಸ್ರವಿಸಲ್ಪಡುವ ಪ್ರಚೋದಕ ಹಾರ್ಮೋನುಗಳು ಏರುಪೇರಾಗುತ್ತವೆ, ಜನನಾಂಗಗಳ ಕೆಲಸವೆಲ್ಲವೂ ಕೆಡುತ್ತದೆ. ಮಹಿಳೆಯರಲ್ಲಿ ಹಲವು ಅಂಡಾಣುಗಳು ಅರ್ಧಂಬರ್ಧ ಬೆಳೆಯುವುದರಿಂದ (ಪಾಲಿ ಸಿಸ್ಟಿಕ್ ಓವರಿ ಅಥವಾ ಪಿಸಿಒ) ಋತುಚಕ್ರವು ಅವ್ಯವಸ್ಥಿತವಾಗುತ್ತದೆ. ಇಂದು ಶೇ.50ರಷ್ಟು ಮಹಿಳೆಯರಲ್ಲಿ ಸಂತಾನಹೀನತೆಗೆ ಪಿಸಿಓ ಕಾರಣವಾಗಿದೆ. ಪುರುಷರಲ್ಲಿ ಇಂತಹ ಬದಲಾವಣೆಗಳಿಂದ ವೀರ್ಯಾಣುಗಳ ಬೆಳವಣಿಗೆಗೆ ತೊಂದರೆಯಾಗುತ್ತದೆ.

ಹೆಣ್ಮಕ್ಕಳಲ್ಲಿ ಇನ್ಸುಲಿನ್ ಹೆಚ್ಚಿ ಟೆಸ್ಟೊಸ್ಟಿರಾನ್ ಪ್ರಮಾಣವು ಏರಿದಾಗ ಗಂಡಸರಂತೆ ಕೂದಲುಗಳು ಬೆಳೆಯುತ್ತವೆ. ಗಂಡು ಮಕ್ಕಳಲ್ಲಿ ಬೊಜ್ಜಿನಿಂದಾಗಿ ಸ್ತ್ರೀಸಹಜ ಹಾರ್ಮೋನಾದ ಇಸ್ಟ್ರೋಜನ್ ಏರತೊಡಗುತ್ತದೆ, ಅದರಿಂದಾಗಿ ಅವರ ಲೈಂಗಿಕ ಬೆಳವಣಿಗೆಗೆ ತೊಂದರೆಯಾಗುತ್ತದೆ, ಕೆಲವರಲ್ಲಿ ಸ್ತನಗಳ ಗಾತ್ರವು ಬೆಳೆಯುತ್ತದೆ. ಒಟ್ಟಿನಲ್ಲಿ ಮಕ್ಕಳು ವಿಪರೀತ ಪ್ರಮಾಣದಲ್ಲಿ ಶರ್ಕರಗಳನ್ನು ಸೇವಿಸುವುದರಿಂದ ಅವರ ಲೈಂಗಿಕ ಬೆಳವಣಿಗೆಯ ಮೇಲೆ ಗಂಭೀರವಾದ ಪರಿಣಾಮಗಳಾಗುವ ಸಾಧ್ಯತೆಗಳಿವೆ.

ಶರ್ಕರಗಳ ಅತಿಸೇವನೆ ಮಾತ್ರವಲ್ಲ, ಇನ್ನು ಕೆಲವು ಅಂಶಗಳಿಂದಲೂ ಸಂತಾನಶಕ್ತಿಯಲ್ಲಿ ಕುಂದುಂಟಾಗಬಹುದೆಂದು ಶಂಕಿಸಲಾಗಿದೆ. ಪಶು ಹಾಲಿನ ಸೇವನೆಯು ಇನ್ಸುಲಿನ್ ಹಾಗೂ ಇನ್ಸುಲಿನ್ ನಂತಹ ಬೆಳೆತಕಾರಕಗಳ ಪ್ರಮಾಣವನ್ನು ಹೆಚ್ಚಿಸುತ್ತದೆಯಲ್ಲದೆ, ಇಸ್ಟ್ರೋಜನ್ ಹಾಗೂ ಪ್ರೊಜೆಸ್ಟರಾನ್ ಗಳ ಹೆಚ್ಚಳಕ್ಕೂ ಕಾರಣವಾಗುತ್ತದೆ. ಪಶು ಹಾಲು ಮತ್ತದರ ಉತ್ಪನ್ನಗಳನ್ನು ಹೆಚ್ಚಾಗಿ ಸೇವಿಸುವ ಹೆಣ್ಮಕ್ಕಳಲ್ಲಿ ಪಿಸಿಒ ಹಾಗೂ ಅತಿಕೂದಲಿನಂತಹ ಸಮಸ್ಯೆಗಳು ಮತ್ತು ಗಂಡು ಮಕ್ಕಳಲ್ಲಿ ಲೈಂಗಿಕ ಬೆಳವಣಿಗೆಯ ಸಮಸ್ಯೆಗಳು ಹೆಚ್ಚಿರುವ ಸಾಧ್ಯತೆಗಳಿವೆಯೆಂದು ಅಧ್ಯಯನಗಳು ತೋರಿಸಿವೆ. ಸೋಯಾ ಮತ್ತದರ ಉತ್ಪನ್ನಗಳಲ್ಲಿ ಸಸ್ಯಜನ್ಯ ಇಸ್ಟ್ರೋಜನ್ ಹೆಚ್ಚಿರುವುದರಿಂದ ಜನನಾಂಗಗಳ ಮೇಲೆ ಪ್ರಭಾವ ಬೀರಬಹುದೆಂದು ಹೇಳಲಾಗಿದೆ. ಪಾಲಿಕಾರ್ಬನೇಟ್ ಪ್ಲಾಸ್ಟಿಕ್ (ಬಾಟಲು ಇತ್ಯಾದಿ) ಹಾಗೂ ಪಿವಿಸಿ ಪ್ಲಾಸ್ಟಿಕ್ (ಆಟಿಕೆ, ನಳ್ಳಿ, ಪರದೆಗಳು ಇತ್ಯಾದಿ) ಗಳಲ್ಲಿರುವ ಬಿಸ್ಫಿನಾಲ್ ಎ ಮತ್ತು ಥಾಲೇಟ್ ನಂತಹ ಸಂಯುಕ್ತಗಳು ಸೂಕ್ಷ್ಮಸಂವೇದಿಯಾದ ನಿರ್ನಾಳ ವ್ಯವಸ್ಥೆಯ ಮೇಳೆ ದುಷ್ಪರಿಣಾಮ ಬೀರಬಲ್ಲವೆಂದು ಗುರುತಿಸಲಾಗಿದೆ. ಅದೇ ರೀತಿ ಡಿಡಿಟಿ, ಎಂಡೋಸಲ್ಫಾನ್ ನಂತಹ ಕೀಟನಾಶಕಗಳು, ವಾಹನದ ಇಂಧನಗಳು, ಇತರ ಔದ್ಯಮಿಕ ರಾಸಾಯನಿಕಗಳು ಕೂಡಾ ಈ ವ್ಯವಸ್ಥೆಯ ಮೇಲೆ ಪ್ರಭಾವ ಬೀರಬಹುದಾಗಿದೆ. ಜೊತೆಗೆ, ವ್ಯಾಯಾಮದ ಕೊರತೆ, ಮದ್ಯಪಾನ ಹಾಗೂ ಧೂಮಪಾನ, ವಿಪರೀತ ಒತ್ತಡಗಳು, ಅನಗತ್ಯ ಔಷಧ ಸೇವನೆ ಇತ್ಯಾದಿಗಳೂ ಸಂತಾನಶಕ್ತಿಯನ್ನು ಕುಂಠಿತಗೊಳಿಸಬಲ್ಲವು.

ಆದ್ದರಿಂದ ನಮ್ಮ ಸಂತಾನಶಕ್ತಿಯು ಆರೋಗ್ಯಕರವಾಗಿ ಉಳಿಯಬೇಕಾದರೆ ಎಳೆಯ ವಯಸ್ಸಿನಿಂದಲೇ ಅದನ್ನು ಕಾಪಾಡಬೇಕಾದದ್ದು ಅತ್ಯಗತ್ಯ. ಅದು ಸಾಧ್ಯವಾಗಬೇಕಿದ್ದರೆ ಪುಟ್ಟ ಮಕ್ಕಳಾದಿಯಾಗಿ ಎಲ್ಲರೂ ಆರೋಗ್ಯಕರ ಆಹಾರವನ್ನು ಹಿತಮಿತವಾಗಿ ಸೇವಿಸುವುದು ಅತಿ ಮುಖ್ಯ. ಸಕ್ಕರೆ, ಸಿಹಿಭರಿತವಾದ ಎಲ್ಲಾ ತಿನಿಸುಗಳು ಹಾಗೂ ಪೇಯಗಳು; ಹಣ್ಣುಗಳು ಹಾಗೂ ರಸಗಳು; ಪಶು ಹಾಲು ಮತ್ತದರ ಉತ್ಪನ್ನಗಳು; ಐಸ್ ಕ್ರೀಂ; ಬ್ರೆಡ್, ನೂಡಲ್ಸ್, ಬಿಸ್ಕತ್ತು ಮುಂತಾದ ಸಂಸ್ಕರಿತ ಶರ್ಕರಗಳು; ಸೋಯಾ ಮತ್ತದರ ಉತ್ಪನ್ನಗಳು ಇತ್ಯಾದಿಗಳನ್ನು ಸೇವಿಸದಿರುವುದೇ ಒಳ್ಳೆಯದು. ಇನ್ನುಳಿದ ಪ್ರಕೃತಿದತ್ತ ಆಹಾರವಸ್ತುಗಳನ್ನು ಹಿತಮಿತವಾಗಿ, ಹಸಿವಿಗನುಗುಣವಾಗಿ ತಿನ್ನುವುದೊಳ್ಳೆಯದು. ನಿರ್ನಾಳ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರಬಲ್ಲ ಸಂಯುಕ್ತಗಳನ್ನು ದೂರವಿಡುವುದೊಳ್ಳೆಯದು.

ಸಂತಾನಹೀನತೆಗೆ ನಾಗದೋಷ, ಪಾಪಕರ್ಮ, ಅನ್ಯರ ಶಾಪ ಇತ್ಯಾದಿಗಳಿಗಿಂತ ನಮ್ಮ ಆಹಾರ ಹಾಗೂ ಜೀವನಶೈಲಿಗಳಿಂದಾಗಿ ಲೆಪ್ಟಿನ್, ಇನ್ಸುಲಿನ್, ಟೆಸ್ಟೋಸ್ಟಿರಾನ್, ಇಸ್ಟ್ರೋಜನ್ ಮುಂತಾದ ಹಾರ್ಮೋನುಗಳಲ್ಲಾಗುವ ಏರುಪೇರುಗಳೇ ಕಾರಣವೆನ್ನಲು ಅಡ್ಡಿಯಿರಲಾರದು. ಆದ್ದರಿಂದ ಸಂತಾನರಹಿತರು ದೋಷ-ಪಾಪ-ಶಾಪ ಪರಿಹಾರಕ್ಕೆಳಸುವ ಬದಲು ತಮ್ಮ ಲೆಪ್ಟಿನ್-ಇನ್ಸುಲಿನ್ ಇತ್ಯಾದಿಗಳು ಸುಸೂತ್ರವಾಗಿದೆಯೇ ಎಂದು ನೋಡಿಕೊಂಡರೆ ಹೆಚ್ಚು ಪ್ರಯೋಜನವಾದೀತು. ಹಾಗೆಯೇ ಗರ್ಭಧಾರಣೆಗೆ ನೆರವಾಗುವ ಅತ್ಯಾಧುನಿಕ ಚಿಕಿತ್ಸೆಯ ಮೊರೆ ಹೋಗುವ ಮೊದಲು ಇಂದಿನ ಸಂಸ್ಕರಿತ ಆಹಾರ ಸೇವನೆಯನ್ನು ತೊರೆದು ಹಿಂದಿನ ಹಿತಮಿತವಾದ ಆಹಾರದತ್ತ ಹೊರಳಿ ನೋಡುವುದೊಳ್ಳೆಯದು.

ಬಾಯಿ ಕಟ್ಟಿ, ನೆಲ ಮೆಟ್ಟಿದರೆ ಹೃದಯ ಗಟ್ಟಿ

ಆರೋಗ್ಯ ಆಶಯ – ವಿಜಯ ಕರ್ನಾಟಕ: ಬಾಯಿ ಕಟ್ಟಿ, ನೆಲ ಮೆಟ್ಟಿದರೆ ಹೃದಯ ಗಟ್ಟಿ [ಅಕ್ಟೋಬರ್ 1, 2014, ಬುಧವಾರ] [ನೋಡಿ | ನೋಡಿ]

ಸರಳ ಜೀವನ, ಮಿತ ಆಹಾರ, ನಿಯತ ವ್ಯಾಯಾಮಗಳು ಹೃದ್ರೋಗವನ್ನು ತಡೆಯಬಲ್ಲವು, ಯೋಗಾಭ್ಯಾಸವಲ್ಲ

ಸೆಪ್ಟೆಂಬರ್ 29ರ ವಿಶ್ವ ಹೃದಯ ದಿನಾಚರಣೆ ಮುಗಿದು 48 ಗಂಟೆಗಳಲ್ಲಿ ಮತ್ತೊಂದು ಲಕ್ಷ ಜನ ಹೃದಯ ಹಾಗೂ ರಕ್ತನಾಳಗಳ ಕಾಯಿಲೆಯಿಂದ ಮೃತರಾಗಿರುತ್ತಾರೆ. ಮನುಕುಲವನ್ನು ಕಾಡುವ ಈ ನಂ. 1 ಕಾಯಿಲೆ, ಮೂರರಲ್ಲೊಂದು ಸಾವಿಗೆ ಕಾರಣವಾಗುತ್ತಿದೆ. ನಮ್ಮ ದೇಶದಲ್ಲೂ ಸಾವಿಗೆ ಅತಿ ಸಾಮಾನ್ಯ ಕಾರಣ ಅದುವೇ; ಪ್ರತೀ ವರ್ಷ ಅದಕ್ಕೆ ಬಲಿಯಾಗುವ ಭಾರತೀಯರ ಸಂಖ್ಯೆ ಸುಮಾರು 30 ಲಕ್ಷದಷ್ಟು. ನಲುವತ್ತರ ವಯಸ್ಸು ದಾಟಿದರೆ ಇಬ್ಬರಲ್ಲೊಬ್ಬ ಗಂಡಸಿಗೆ, ಮೂರರಲ್ಲೊಬ್ಬ ಹೆಂಗಸಿಗೆ ಹೃದಯಾಘಾತದ ಅಪಾಯ ಎದುರಾಗುತ್ತದೆ.

ಹೃದಯ ದಿನಾಚರಣೆಯಂತಹ ಕಾರ್ಯಕ್ರಮಗಳು ಎಡೆಬಿಡದೆ ನಡೆಯುತ್ತಿದ್ದಂತೆ ಹೃದ್ರೋಗಗಳಿಗೆ ಬಲಿಯಾಗುತ್ತಿರುವವರ ಸಂಖ್ಯೆಯೂ ಏರುತ್ತಲಿದೆ. ಬಹಳಷ್ಟು ಜನ ಹೃದ್ರೋಗವಿಲ್ಲದಿದ್ದರೂ ಬಗೆಬಗೆಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುತ್ತಿರುತ್ತಾರೆ, ಅತ್ತ ನಿಜಕ್ಕೂ ಹೃದ್ರೋಗವುಳ್ಳ ಹಲವರು ಅಜ್ಞಾನದಿಂದಲೋ, ಔದಾಸೀನ್ಯದಿಂದಲೋ ಅದನ್ನು ಕಡೆಗಣಿಸಿ ಕಷ್ಟಕ್ಕೊಳಗಾಗುತ್ತಿರುತ್ತಾರೆ. ಹಾಗೆಯೇ, ಎದೆಬೇನೆ ಎಂದವರಲ್ಲೆಲ್ಲ ವೈದ್ಯರು ಇಸಿಜಿ, ಆಂಜಿಯೋಗ್ರಾಂ ಇತ್ಯಾದಿ ಮಾಡಿಸುವುದಿದೆ, ಆದರೆ ನಿಜಕ್ಕೂ ಹೃದ್ರೋಗದ ಲಕ್ಷಣಗಳುಳ್ಳವರಲ್ಲಿ ಇವನ್ನು ಮರೆಯುವುದೂ ಇದೆ. ಅಂತೂ ಹೃದ್ರೋಗಗಳಿಂದಾಗಿ ವರ್ಷಕ್ಕೆ 60 ಲಕ್ಷ ಕೋಟಿಯಷ್ಟು ವೆಚ್ಚವಾಗುತ್ತಿದೆ, 1.7 ಕೋಟಿಗೂ ಹೆಚ್ಚು ಜನ ಸಾಯುತ್ತಿದ್ದಾರೆ; 2030ರ ವೇಳೆಗೆ ಇದು 2.3 ಕೋಟಿಯಷ್ಟಾಗಲಿದೆ.

ಒಂದೆರಡು ದಶಕಗಳ ಹಿಂದೆ ಹೃದಯಾಘಾತವು 60-70ರ ವಯಸ್ಸಿನವರಲ್ಲಿ ಹೆಚ್ಚು ಸಾಮಾನ್ಯವಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ 20-30 ವಯಸ್ಸಿನವರೂ ಹೃದಯಾಘಾತಕ್ಕೀಡಾಗುತ್ತಿದ್ದಾರೆ. ಆಗ ಮುಟ್ಟು ನಿಂತ, ಹಿರಿವಯಸ್ಸಿನ ಮಹಿಳೆಯರಲ್ಲಷ್ಟೇ ಹೃದಯಾಘಾತವಾಗುತ್ತಿದ್ದರೆ, ಈಗೀಗ 30-40ರ ಮಹಿಳೆಯರಲ್ಲೂ ಆಗುತ್ತಿದೆ. ಮೊದಲು ನಗರಗಳಲ್ಲೇ ಹೆಚ್ಚಿದ್ದುದು ಈಗ ಹಳ್ಳಿಗಳನ್ನೂ ಕಾಡುತ್ತಿದೆ, ಅಲ್ಲಿ ಸೌಲಭ್ಯಗಳ ಕೊರತೆಯಿಂದ ಸಾವುಗಳೂ ಹೆಚ್ಚುತ್ತಿವೆ. ಈ ಎರಡು ದಶಕಗಳಲ್ಲಿ ಮಾರುಕಟ್ಟೆ ಮುಕ್ತವಾಗಿ, ಸ್ವಂತ ಕೃಷಿ ದೂರವಾಗಿ, ಹಗಲು-ರಾತ್ರಿ ದುಡಿತವಾಗಿ, ಸಿದ್ಧತಿನಿಸುಗಳೇ ಆಹಾರವಾದ ಬಳಿಕ ಆಧುನಿಕ ರೋಗಗಳೂ ಹೆಚ್ಚತೊಡಗಿವೆ, ಕಿರಿಯರನ್ನೂ ಕಾಡತೊಡಗಿವೆ.

ದೇಹದಲ್ಲಿ ಉರಿಯೂತ ಹೆಚ್ಚುವುದರಿಂದ ರಕ್ತನಾಳಗಳು ಹಾನಿಗೀಡಾಗಿ ಹೃದಯಾಘಾತ, ಮಿದುಳಿನ ಆಘಾತ (ಪಾರ್ಶ್ವವಾಯು)ಗಳಂತಹ ಮಾರಕ ಸಮಸ್ಯೆಗಳುಂಟಾಗುತ್ತವೆ ಎನ್ನುವುದಕ್ಕೆ ಪ್ರಬಲವಾದ ಆಧಾರಗಳೀಗ ಲಭ್ಯವಾಗುತ್ತಿವೆ. ಅನೈಸರ್ಗಿಕವಾದ, ಶರ್ಕರಭರಿತವಾದ, ಸಂಸ್ಕರಿಸಲ್ಪಟ್ಟ ಆಹಾರವೂ, ಧೂಮಪಾನ, ಮದ್ಯಪಾನ, ವ್ಯಾಯಾಮದ ಕೊರತೆಗಳೂ ನಮ್ಮ ದೇಹದಲ್ಲಿ ಉರಿಯೂತವನ್ನು ಹೆಚ್ಚಿಸುತ್ತವೆ, ರಕ್ತನಾಳಗಳಿಗೆ ಹಾನಿಯುಂಟು ಮಾಡುತ್ತವೆ. ಬೊಜ್ಜು, ಮಧುಮೇಹ, ರಕ್ತದಲ್ಲಿ ಅಧಿಕ ಕೊಬ್ಬಿನಾಂಶ, ಅಧಿಕ ರಕ್ತದೊತ್ತಡಗಳೂ ಇವೇ ಕಾರಣಗಳಿಂದಾಗುತ್ತವೆ, ಇವಿದ್ದವರಿಗೆ ಹೃದಯಾಘಾತದ ಅಪಾಯವೂ ಹೆಚ್ಚಿರುತ್ತದೆ. ರಕ್ತನಾಳಗಳಿಗೆ ಹಾನಿಯಾಗುವ ಪ್ರಕ್ರಿಯೆಯು ತೀರಾ ಎಳವೆಯಲ್ಲಿ, ಗರ್ಭಸ್ಥ ಶಿಶುವಾಗಿರುವಾಗಲೇ, ತೊಡಗುತ್ತದೆ. ಹಿಂದಿನವರು 50-60 ವರ್ಷಗಳಲ್ಲಿ ತಿಂದು, ಸೇದಿ ಉಂಟುಮಾಡುತ್ತಿದ್ದ ಹಾನಿಯನ್ನು ಇಂದಿನವರು ಹತ್ತಿಪ್ಪತ್ತು ವರ್ಷಗಳಲ್ಲೇ ಮಾಡುತ್ತಿರುವುದರಿಂದ ಅಷ್ಟೇ ಬೇಗನೆ ರೋಗಗ್ರಸ್ತರಾಗುತ್ತಿದ್ದಾರೆ.

ಕಳೆದೆರಡು ದಶಕಗಳಿಂದ ಈ ರಕ್ತನಾಳಘಾತಕ ಸಮಸ್ಯೆಗಳು ಹೆಚ್ಚಾಗುತ್ತಿವೆ. ರಕ್ತದ ಏರೊತ್ತಡದಿಂದ ಬಳಲುವವರ ಪ್ರಮಾಣವು ನಗರಗಳಲ್ಲಿ ಶೇ. 25-40ಕ್ಕೆ, ಹಳ್ಳಿಗಳಲ್ಲಿ ಶೇ. 10-15ಕ್ಕೆ ತಲುಪಿದೆ. ಮಧುಮೇಹವುಳ್ಳವರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಿ, ನಗರಗಳಲ್ಲಿ ಶೇ. 10-15 ಹಾಗೂ ಹಳ್ಳಿಗಳಲ್ಲಿ ಶೇ.3-5 ರಷ್ಟಾಗಿದೆ. ಎಲ್ಲೆಡೆ ಬೊಜ್ಜಿನ ಸಮಸ್ಯೆಯೂ ಹೆಚ್ಚುತ್ತಿದೆ, ರಕ್ತದ ಕೊಲೆಸ್ಟರಾಲ್, ಟ್ರೈಗ್ಲಿಸರೈಡ್ ನಂತಹ ಕೊಬ್ಬಿನ ಪ್ರಮಾಣಗಳಲ್ಲಿ ಏರಿಕೆಯಾಗುತ್ತಲಿದೆ. ಧೂಮಪಾನ, ಮದ್ಯಪಾನಗಳ ಪಿಡುಗು ಹೆಚ್ಚುತ್ತಿದೆ, ಎಲ್ಲ ರೀತಿಯ ಒತ್ತಡಗಳೂ ಹೆಚ್ಚುತ್ತಿವೆ, ತಿನ್ನುವುದು ಹೆಚ್ಚಿ ವ್ಯಾಯಾಮ ಕಡಿಮೆಯಾಗುತ್ತಿದೆ.

ಹೃದಯದ ಸ್ನಾಯುಗಳಿಗೆ ನಿರಂತರವಾಗಿ ರಕ್ತ ಪೂರೈಸುವುದಕ್ಕೆ ಬಲಭಾಗದಲ್ಲೊಂದು, ಎಡ ಭಾಗದಲ್ಲೆರಡು ಪರಿಧಮನಿಗಳಿವೆ. ಈ ಮೂರರಲ್ಲಿ ಯಾವುದೊಂದು ಮುಚ್ಚಿ ಹೋದರೂ ಹೃದಯದ ಸ್ನಾಯು ಹಾನಿಗೀಡಾಗಿ, ಹೃದಯಾಘಾತವಾಗುತ್ತದೆ. ರಕ್ತನಾಳದ ಒಳವ್ಯಾಸವು 70% ಕಡಿಮೆಯಾದಾಗ ರಕ್ತಪೂರೈಕೆಯು ಗಣನೀಯವಾಗಿ ಕಡಿಮೆಯಾಗಿ, ಹೃದಯಕ್ಕಾಗುವ ಕಷ್ಟಗಳು ಪ್ರಕಟಗೊಳ್ಳುತ್ತವೆ. ಶೇ.90ರಷ್ಟು ಮುಚ್ಚಿಕೊಂಡಾಗ ಅವು ತೀವ್ರವಾಗುತ್ತವೆ, ಪೂರ್ತಿ ಮುಚ್ಚಿದಾಗ ಹೃದಯಾಘಾತವಾಗುತ್ತದೆ. ಒಂದೇ ರಕ್ತನಾಳದಲ್ಲಿ ತೊಂದರೆಯಿದ್ದವರಿಗೆ ಕಷ್ಟಗಳು ಕಡಿಮೆ, ಮೂರೂ ರಕ್ತನಾಳಗಳಲ್ಲಿ ಕಾಯಿಲೆಯಿದ್ದವರಿಗೆ ಹೆಚ್ಚು.

ಹೃದಯಾಘಾತಕ್ಕೊಳಗಾಗುವ ಹೆಚ್ಚಿನವರಲ್ಲಿ ಒಂದಲ್ಲೊಂದು ರೀತಿಯ ಲಕ್ಷಣಗಳು ಇದ್ದೇ ಇರುತ್ತವೆ. ಯಾವುದೇ ಪೂರ್ವಲಕ್ಷಣಗಳಿಲ್ಲದೆ ಹಠಾತ್ ಹೃದಯಾಘಾತವಾಗುವುದು ವಿರಳವೇ. ಹೆಚ್ಚಿನ ಹೃದ್ರೋಗಿಗಳು ನಡೆದಾಡುವಾಗ, ಕೆಲಸ ಮಾಡುವಾಗ, ಅಥವಾ ಹೊಟ್ಟೆ ತುಂಬ ತಿಂದಾಗ ಕಷ್ಟಗಳನ್ನು ಅನುಭವಿಸುತ್ತಾರೆ. ನಡೆದಾಡುವಾಗ ಎದೆ ಯಾ ಕತ್ತು ಹಿಂಡಿದಂತಾಗುವುದು, ಎದೆ ಉಬ್ಬಿ ಬಂದಂತಾಗುವುದು ಯಾ ಭಾರವೆನಿಸುವುದು, ಎದೆಯ ಮಧ್ಯದಲ್ಲಿ, ಭುಜಗಳಲ್ಲಿ, ಕತ್ತಿನಲ್ಲಿ, ಬೆನ್ನಿನ ಮೇಲ್ಭಾಗದಲ್ಲಿ, ದವಡೆಯಲ್ಲಿ ನೋವು ಅಥವಾ ಸೆಳೆತ ಉಂಟಾಗುವುದು, ಉಸಿರಾಟಕ್ಕೆ ಕಷ್ಟವೆನಿಸುವುದು, ಎದೆ ಬಡಿತ ಹೆಚ್ಚುವುದು,ತಲೆ ಸುತ್ತಿದಂತಾಗುವುದು – ಇವೆಲ್ಲವೂ ಹೃದ್ರೋಗದ ಲಕ್ಷಣಗಳಾಗಿರಬಹುದು. ಎದೆ ನೋವಷ್ಟೇ ಹೃದ್ರೋಗದ ಲಕ್ಷಣವಲ್ಲ, ಎದೆ ನೋವಿಗೆ ಹೃದ್ರೋಗವೊಂದೇ ಕಾರಣವೂ ಅಲ್ಲ. ಆದ್ದರಿಂದ ನಡೆದಾಡುವಾಗ ಅಥವಾ ದುಡಿಯುವಾಗ ಯಾವುದೇ ರೀತಿಯ ಕಷ್ಟವೆನಿಸಿದರೂ ಜಾಗೃತರಾಗಬೇಕು, ಕೂಡಲೇ ವೈದ್ಯರನ್ನು ಕಾಣಬೇಕು. ವೈದ್ಯರೂ ಇಂತಹಾ ಲಕ್ಷಣಗಳಿರುವವರನ್ನು ಹೃದ್ರೋಗದ ಸಾಧ್ಯತೆಗಳಿಗಾಗಿ ಪರೀಕ್ಷೆಗಳಿಗೆ ಒಳಪಡಿಸಬೇಕು.

ಹೃದಯದ ರಕ್ತನಾಳಗಳ ಕಾಯಿಲೆಯನ್ನು ಗುರುತಿಸಲು ಇಸಿಜಿಯಂತಹ ಸರಳ ಪರೀಕ್ಷೆಗಳಿಂದ ಹಿಡಿದು ಆಂಜಿಯೋಗ್ರಾಂನಂತಹ ಅತಿ ನಿಖರವಾದ ಪರೀಕ್ಷೆಗಳು ಲಭ್ಯವಿವೆ. ಹೃದ್ರೋಗದ ಲಕ್ಷಣಗಳುಳ್ಳವರಲ್ಲಿ ಈ ಪರೀಕ್ಷೆಗಳನ್ನು ನಡೆಸುವುದು ಅತ್ಯಗತ್ಯ. ಆದರೆ ಯಾವುದೇ ಲಕ್ಷಣಗಳಿಲ್ಲದವರಲ್ಲಿ ಇವನ್ನು ನಡೆಸಿದರೆ ಲಾಭಕ್ಕಿಂತ ಹೆಚ್ಚು ನಷ್ಟವೇ ಆಗಬಹುದು, ಗೊಂದಲ, ಆತಂಕಗಳಿಗೂ, ಇನ್ನಷ್ಟು ಅನಗತ್ಯ ಪರೀಕ್ಷೆ-ಚಿಕಿತ್ಸೆಗಳಿಗೂ ದಾರಿಯಾಗಬಹುದು.

ಪರಿಧಮನಿಗಳ ಕಾಯಿಲೆಯುಳ್ಳವರಲ್ಲಿ ಕೆಲವೊಮ್ಮೆ ಇಸಿಜಿಯಲ್ಲಿ ಯಾವುದೇ ಬದಲಾವಣೆಗಳು ಗೋಚರಿಸುವುದಿಲ್ಲ. ಇನ್ನು ಕೆಲವರಲ್ಲಿ ಇಸಿಜಿಯಲ್ಲಿ ಬದಲಾವಣೆಗಳಿದ್ದರೂ ಹೃದ್ರೋಗವಿಲ್ಲದಿರಬಹುದು. ಆದ್ದರಿಂದ ಇಸಿಜಿಯೊಂದನ್ನೇ ನೋಡಿ ಹೃದ್ರೋಗದ ಬಗ್ಗೆ ಖಚಿತವಾಗಿ ಹೇಳಲಾಗದು. ಅಂಥ ಸನ್ನಿವೇಶಗಳಲ್ಲಿ ಟ್ರೆಡ್ ಮಿಲ್ ಪರೀಕ್ಷೆಯನ್ನು ನಡೆಸಬೇಕಾಗಬಹುದು.

ಆಂಜಿಯೋಗ್ರಾಂ ಪರೀಕ್ಷೆಯಲ್ಲಿ ಹೃದಯದ ಪರಿಧಮನಿಗಳೊಳಕ್ಕೆ ಸೂಕ್ಷ್ಮವಾದ ನಳಿಕೆಯೊಂದನ್ನು ತೂರಿಸಿ, ಅವುಗಳ ಮೂಲಕ ವಿಶೇಷ ಸಂಯುಕ್ತವೊಂದನ್ನು ಹರಿಸಿ, ಅವುಗಳ ಕ್ಷಕಿರಣ ಚಿತ್ರವನ್ನು ಪಡೆದು,ಯಾವ್ಯಾವ ಪರಿಧಮನಿಗಳಿಗೆ ಎಷ್ಟು ಹಾನಿಯಾಗಿದೆ ಎನ್ನುವುದನ್ನು ನಿಖರವಾಗಿ ನೋಡಬಹುದು. ಅಲ್ಲದೆ, ಮುಚ್ಚಿರಬಹುದಾದ ರಕ್ತನಾಳಗಳನ್ನು ಅದೇ ತೂರುನಳಿಕೆಯ ಮೂಲಕ ತೆರೆದು ಸರಿಪಡಿಸಬಹುದು. ಆಗ ತಾನೇ ಹೃದಯಾಘಾತವಾದವರಲ್ಲಿ, ಅಥವಾ ಹೃದಯಾಘಾತವಾಗುವ ಅಪಾಯವು ತೀವ್ರವಾಗುಳ್ಳವರಲ್ಲಿ ಈ ಪರೀಕ್ಷೆ-ಚಿಕಿತ್ಸೆಗಳು ಸಂಜೀವಿನಿಯಾಗುತ್ತವೆ.

ಆದರೆ ಇಂದು ಶೇ. 25ಕ್ಕೂ ಹೆಚ್ಚು ಸಂದರ್ಭಗಳಲ್ಲಿ ಇಂತಹ ದುಬಾರಿ ಪರೀಕ್ಷೆ-ಚಿಕಿತ್ಸೆಗಳನ್ನು ಹೃದ್ರೋಗದ ಯಾವುದೇ ಲಕ್ಷಣಗಳಿಲ್ಲದವರಲ್ಲಿ ಅನಗತ್ಯವಾಗಿ ನಡೆಸಲಾಗುತ್ತಿದೆ. ಈ ಅತ್ಯಾಧುನಿಕ ಚಿಕಿತ್ಸೆಗಳು ಖಾಸಗಿ ಆಸ್ಪತ್ರೆಗಳಲ್ಲೇ ಹೆಚ್ಚಾಗಿ ಲಭ್ಯವಿರುವುದರಿಂದ ಜನಸಾಮಾನ್ಯರಿಗೆ ಎಟಕುವುದಿಲ್ಲ; ಮಾತ್ರವಲ್ಲ, ಲಾಭಕ್ಕಾಗಿ ದುರುಪಯೋಗವಾಗುವ ಸಾಧ್ಯತೆಗಳೂ ಹೆಚ್ಚುತ್ತವೆ. ಸರಕಾರಕ್ಕೆ ಮನಸ್ಸಿದ್ದರೆ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಈ ಸೌಲಭ್ಯಗಳನ್ನು ಒದಗಿಸುವುದಕ್ಕೆ ಕಷ್ಟವೇನಿಲ್ಲ.

ನಮ್ಮ ಆಹಾರ ಹಾಗೂ ಜೀವನಶೈಲಿಗಳನ್ನು ಸರಿಪಡಿಸಿಕೊಂಡರೆ ಹೃದ್ರೋಗವನ್ನಷ್ಟೇ ಅಲ್ಲ, ಇತರ ಆಧುನಿಕ ರೋಗಗಳನ್ನೂ ತಡೆಯುವುದಕ್ಕೆ ಸಾಧ್ಯವಿದೆ. ಗರ್ಭಸ್ಥ ಮಗುವನ್ನು ರಕ್ಷಿಸುವಲ್ಲಿಂದಲೇ ಈ ಕೆಲಸ ತೊಡಗಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಸಿಹಿಯ ಸೇವನೆಯನ್ನು – ಸಕ್ಕರೆ, ಸಿಹಿತಿಂಡಿಗಳು, ಚಾಕಲೇಟು, ಲಘುಪೇಯಗಳು, ಐಸ್ ಕ್ರೀಂ ಇತ್ಯಾದಿಗಳನ್ನು, ಸಂಪೂರ್ಣವಾಗಿ ತ್ಯಜಿಸಬೇಕು, ಹಣ್ಣು ಮತ್ತು ಹಣ್ಣಿನ ರಸಗಳನ್ನು ವಿಪರೀತವಾಗಿ ಸೇವಿಸುವುದನ್ನು ಬಿಡಬೇಕು, ಬ್ರೆಡ್ಡು, ಬಿಸ್ಕತ್ತು, ನೂಡಲ್ಸ್, ಪೀಜಾ ಮುಂತಾದ ಎಲ್ಲಾ ಸಂಸ್ಕರಿತ ತಿನಿಸುಗಳನ್ನು ಬಿಡಬೇಕು. ಹಾಗೆಯೇ ಕರಿದ ತಿನಿನಿಸುಗಳನ್ನೂ ತ್ಯಜಿಸಬೇಕು. ಪ್ರಾಣಿಜನ್ಯ ಹಾಲು ಮತ್ತದರ ಉತ್ಪನ್ನಗಳನ್ನೂ ಬಿಟ್ಟರೆ ಒಳ್ಳೆಯದು. ಉಪ್ಪಿನ ಬಳಕೆಗೂ ಮಿತಿಯಿರಬೇಕು.  ತರಕಾರಿ, ಮೊಳೆತ ಕಾಳುಗಳು, ಬೀಜಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು, ಮೀನು ಕೂಡಾ ಒಳ್ಳೆಯದು. ಮೊಟ್ಟೆ, ಮಾಂಸಗಳನ್ನು ಹಿತಮಿತವಾಗಿ ಸೇವಿಸಬಹುದು. ಧೂಮಪಾನ, ಮದ್ಯಪಾನಗಳನ್ನು ಸಂಪೂರ್ಣವಾಗಿ ವರ್ಜಿಸಬೇಕು. ಪ್ರತಿನಿತ್ಯ 30-40 ನಿಮಿಷ ವೇಗವಾಗಿ ನಡೆಯುವುದು ಅಥವಾ ಈಜುವುದು ಒಳ್ಳೆಯದು. ಯೋಗಾಭ್ಯಾಸದಿಂದ ಹೃದಯಾಘಾತವನ್ನು ತಡೆಯಬಹುದೆನ್ನುವುದಕ್ಕೆ ದೃಢವಾದ ಆಧಾರಗಳಿಲ್ಲ (ಕೊಕ್ರೇನ್ ಡಾಟಾಬೇಸ್, 2014(5):ಸಿಡಿ0100722012 ಹಾಗೂ 2012(12)ಸಿಡಿ009506). ವಿಪರೀತ ಆಹಾರ, ಧೂಮಪಾನ, ಮದ್ಯಪಾನಗಳಿಲ್ಲದಂತೆ ಬಾಯಿ ಕಟ್ಟಿಕೊಂಡರೆ, ನಿತ್ಯವೂ ನಡೆದಾಡುತ್ತಿದ್ದರೆ ಹೃದಯಾಘಾತವನ್ನು ತಡೆಯಬಹುದು, ಯೋಗಾಭ್ಯಾಸದಿಂದಲ್ಲ.

ಒಳ್ಳೆಯ ಆಹಾರ ಹೇಗೆ?

ಆರೋಗ್ಯ ಆಶಯ – ವಿಜಯ ಕರ್ನಾಟಕ: ಸೊಪ್ಪು ತಿನ್ನದಿದ್ದರೆ ತಪ್ಪು, ತಿಂದರೂ ತಪ್ಪು [ಅಕ್ಟೋಬರ್ 29, 2014, ಬುಧವಾರ] [ನೋಡಿ | ನೋಡಿ]

ನಾವೆಲ್ಲ ನಿತ್ಯ ಉಪಯೋಗಿಸುವ ಸಸ್ಯಾಹಾರದಲ್ಲಿ ಅನ್ನಾಂಗ-ಖನಿಜಾಂಶಗಳು ಕಡಿಮೆ, ವಿಷಾಂಶಗಳು ಹೆಚ್ಚು

ಹೃದ್ರೋಗ, ಕ್ಯಾನ್ಸರ್ ಇತ್ಯಾದಿಗಳನ್ನು ದೂರವಿಡಲು ಹಣ್ಣು-ತರಕಾರಿಗಳನ್ನು ಯಥೇಷ್ಟವಾಗಿ ತಿನ್ನಬೇಕೆಂದು ಹೇಳಲಾಗುತ್ತದೆ. ಆದರೆ, ಅವೇ ಹಣ್ಣು-ತರಕಾರಿಗಳಿಗೆ ಸುರಿಯುತ್ತಿರುವ ರಸಗೊಬ್ಬರ-ಕೀಟನಾಶಕಗಳಿಂದ ಇಂತಹಾ ರೋಗಗಳು ಹೆಚ್ಚುತ್ತಿವೆ ಎಂದೂ ಹೇಳಲಾಗುತ್ತದೆ. ಇದೆಂತಹಾ ವಿಪರ್ಯಾಸ? ತಿನ್ನದಿದ್ದರೂ ರೋಗ, ತಿಂದರೂ ರೋಗ!

ತಿನ್ನಬಲ್ಲ ಗಿಡ-ಹೂವು-ಹಣ್ಣುಗಳೆಲ್ಲವೂ ಮೊದಲು ನಿಸರ್ಗಸಹಜ ನೆಲಗೊಬ್ಬರವನ್ನುಂಡು ಬೆಳೆಯುತ್ತಿದ್ದರೆ, ಈ ನೂರು ವರ್ಷಗಳಿಂದ ಕೃತಕ ರಸಗೊಬ್ಬರಗಳು, ಎಪ್ಪತ್ತು ವರ್ಷಗಳಿಂದ ಕೃತಕ ಕೀಟನಾಶಕಗಳು, ಕೃಷಿಯ ಭಾಗವಾದವು. ಮಣ್ಣಿಗೆ ರಂಜಕವನ್ನು ಸೇರಿಸುವುದಕ್ಕೆ ಫಾಸ್ಫೇಟ್, ಸಾರಜನಕಕ್ಕೆ ನೈಟ್ರೇಟ್, ಪೊಟಾಸಿಯಂಗೆ ಪೊಟಾಷ್ ಬಂದವು, ಅವುಗಳನ್ನು ಉತ್ಪಾದಿಸುವ ಬೃಹತ್ ಕಾರ್ಖಾನೆಗಳೂ ಬಂದವು (ಅದೇ ನೈಟ್ರೇಟಿನಿಂದ ಅಗಣಿತ ಯುದ್ಧ-ಕಲಹ-ಸ್ಫೋಟಗಳಲ್ಲಿ ಲಕ್ಷಗಟ್ಟಲೆ ಸಾವುಗಳಾದವು). ಡಿಡಿಟಿ, ಗಾಮಾಕ್ಸೇನ್ ಗಳಿಂದ ತೊಡಗಿ ಬಗೆಬಗೆಯ ಆರ್ಗಾನೋಫಾಸ್ಫೇಟ್, ಪೈರೆಥ್ರಂ ಕೀಟನಾಶಕಗಳೆಲ್ಲ ಬಂದವು. ಇಂದು, ಗೆಡ್ಡೆ-ಬೀಜ ಬಿತ್ತುವಲ್ಲಿಂದ ಫಲದವರೆಗೆ, ಹೂವಿನಿಂದ ಹಣ್ಣಿನವರೆಗೆ ಬಗೆಬಗೆಯ ರಸಗೊಬ್ಬರಗಳು, ಕಳೆ-ಕೀಟ-ಶಿಲೀಂಧ್ರ ನಾಶಕಗಳು, ಕಾಯಿ ಮಾಗಿಸುವ ರಾಸಾಯನಿಕಗಳು, ಮೇಣದ ಹೊದಿಕೆಗಳು ನಮ್ಮ ಸಸ್ಯಾಹಾರವನ್ನು ಸೇರಿಕೊಳ್ಳುತ್ತಿವೆ. ಅನ್ನಾಂಗ-ಖನಿಜಾಂಶ-ಉತ್ಕರ್ಷಣ ನಿರೋಧಕಗಳು ತುಂಬಿರುವ ನೈಸರ್ಗಿಕ ಸಸ್ಯಾಹಾರವು ನಮ್ಮ ಆರೋಗ್ಯಕ್ಕೆ ಪೂರಕವಾಗಿದ್ದರೆ, ರಸಗೊಬ್ಬರ-ಕೀಟನಾಶಕ ನುಂಗಿ ಬೆಳೆದ ಈಗಿನ ಸಸ್ಯಾಹಾರವು ಆರೋಗ್ಯಕ್ಕೆ ಮಾರಕವಾಗುತ್ತಿದೆ.

ಈಗ ಪ್ರತಿ ವರ್ಷ ವಿಶ್ವದಲ್ಲಿ 19 ಕೋಟಿ ಟನ್ನುಗಳಷ್ಟು, ಭಾರತದಲ್ಲಿ 3 ಕೋಟಿ ಟನ್ನುಗಳಷ್ಟು, ರಸಗೊಬ್ಬರಗಳನ್ನು ಬಳಸಲಾಗುತ್ತಿದೆ. ಪ್ರತಿ ವರ್ಷ ವಿಶ್ವದಲ್ಲಿ 25 ಲಕ್ಷ ಟನ್, ನಮ್ಮಲ್ಲಿ 2 ಲಕ್ಷ ಟನ್, ಕಳೆ-ಕೀಟನಾಶಕಗಳನ್ನು ಬಳಸಲಾಗುತ್ತಿದೆ. ಜನಸಂಖ್ಯೆ ಹೆಚ್ಚುತ್ತಾ, ಕೃಷಿಯೋಗ್ಯ ಭೂಮಿಯು ಕಡಿಮೆಯಾಗುತ್ತಿದ್ದಂತೆ ಇವುಗಳನ್ನು ಬಳಸುವ ಒತ್ತಡವೂ ಹೆಚ್ಚುತ್ತಿದೆ. ಹಿತಮಿತ ಬಳಕೆಯ ಮಾನದಂಡಗಳೆಲ್ಲ ಕಡೆಗಣಿಸಲ್ಪಡುತ್ತಿವೆ, ಕಣ್ಗಾವಲು ವಿಫಲವಾಗುತ್ತಿದೆ, ಲಾಭವೊಂದೇ ಮುಖ್ಯವಾಗುತ್ತಿದೆ. ರಸಗೊಬ್ಬರ ಹಾಗೂ ಕೀಟನಾಶಕಗಳ ಅತಿಬಳಕೆಯಿಂದ ಭೂ-ಜಲ-ವಾಯು ಮಾಲಿನ್ಯವಷ್ಟೇ ಅಲ್ಲದೆ, ಸಕಲ ಜೀವರಾಶಿಯ ಮೇಲೆ, ಆಹಾರಸಂಕಲೆಯ ಮೇಲೆ, ಸಸ್ಯ-ಮಾಂಸಾಹಾರಗಳ ಗುಣಮಟ್ಟದ ಮೇಲೆ, ಹಲಬಗೆಯ ದುಷ್ಪರಿಣಾಮಗಳಾಗುತ್ತಿವೆ.

ಇಂದು ತಿನ್ನುತ್ತಿರುವ ಆಹಾರದಲ್ಲಿ ಸಾಕಷ್ಟು ಪೋಷಕಾಂಶಗಳಿಲ್ಲದೆ ವಿಶ್ವದ ಮುನ್ನೂರು ಕೋಟಿ ಜನ ನ್ಯೂನಪೋಷಣೆಯಿಂದ ಬಳಲುತ್ತಿದ್ದಾರೆ. ಕೃತಕ ಗೊಬ್ಬರಗಳಲ್ಲಿ ಸಾರಜನಕ, ರಂಜಕ,ಪೊಟಾಸಿಯಂನಂತಹ ಕೆಲವೇ ಲವಣಾಂಶಗಳಿರುವುದರಿಂದ ಆಹಾರಬೆಳೆಗಳಿಗೂ ಇವಿಷ್ಟೇ ಲಭ್ಯವಾಗುತ್ತವೆ. ಇಂದು ಕೃಷಿಭೂಮಿಯಲ್ಲಿ ಸಾರಜನಕ, ರಂಜಕ, ಪೊಟಾಸಿಯಂಗಳ ಪ್ರಮಾಣವು ಶೇ. 55-85ರಷ್ಟು ಕಡಿಮೆಯಿದೆ, ಕಬ್ಬಿಣ, ಸತುವು, ಅಯೊಡಿನ್, ಸೆಲೆನಿಯಂ, ತಾಮ್ರ, ಮ್ಯಾಂಗನೀಸ್, ಮೊಲಿಬ್ದಿನಂ, ಬೋರಾನ್ ಮುಂತಾದ ಖನಿಜಾಂಶಗಳ ಪ್ರಮಾಣವು ಶೇ. 10-49ರಷ್ಟು ಕಡಿಮೆಯಿದೆ. ಇದರಿಂದಾಗಿ, ಆಹಾರಬೆಳೆಗಳೂ, ಅವನ್ನು ತಿನ್ನುವ ಮನುಷ್ಯರೂ ಅತ್ಯಗತ್ಯವಾದ ಈ ಖನಿಜ-ಲವಣಾಂಶಗಳಿಂದ ವಂಚಿತರಾಗುತ್ತಿದ್ದಾರೆ. ಈ ಖನಿಜಾಂಶಗಳ ಕೊರತೆಯಿಂದ ದೇಹದ ಅಂಗಾಂಗಗಳ ಕಾರ್ಯಗಳು, ರೋಗರಕ್ಷಣಾ ಸಾಮರ್ಥ್ಯ, ಮಕ್ಕಳ ಮನೋದೈಹಿಕ ಬೆಳವಣಿಗೆ, ಬುದ್ಧಿಮತ್ತೆ, ಏಕಾಗ್ರತೆ ಮುಂತಾದೆಲ್ಲವೂ ಬಾಧಿಸಲ್ಪಡುತ್ತವೆ; ಹಸಿವು ಮತ್ತು ಪಚನಕ್ರಿಯೆಗಳು ಬಾಧಿಸಲ್ಪಟ್ಟು ಇತರ ಪೋಷಕಾಂಶಗಳ ಹೀರುವಿಕೆಗೂ ಅಡ್ಡಿಯಾಗುತ್ತದೆ, ಇನ್ನಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇಂದು ವಿಶ್ವದ ಇನ್ನೂರು ಕೋಟಿ ಜನ ಸತುವಿನ ಕೊರತೆಯಿಂದ ಬಗೆಬಗೆಯ ತೊಂದರೆಗಳಿಗೀಡಾಗುತ್ತಿದ್ದಾರೆ, ವರ್ಷಕ್ಕೆ ಎಂಟು ಲಕ್ಷ ಜನ, ಅವರಲ್ಲಿ ನಾಲ್ಕೂವರೆ ಲಕ್ಷ ಮಕ್ಕಳು, ಸಾವನ್ನಪ್ಪುತ್ತಿದ್ದಾರೆ. ನಮ್ಮ ದೇಶದ ಶೇ. 90ಕ್ಕೂ ಹೆಚ್ಚು ಜನರಲ್ಲಿ ಕಬ್ಬಿಣದ ಕೊರತೆಯಿದೆ, ಶೇ. 40-60ರಷ್ಟು ಜನರಲ್ಲಿ (ಶೇ. 85ರಷ್ಟು ಗರ್ಭಿಣಿಯರು, ಶೇ. 74ರಷ್ಟು ಮಕ್ಕಳು ಮತ್ತು ಶೇ. 90ರಷ್ಟು ಹದಿಹರೆಯದ ಹುಡುಗಿಯರಲ್ಲಿ) ರಕ್ತಹೀನತೆಯಿದೆ. ಭಾರತವೂ ಸೇರಿದಂತೆ ವಿಶ್ವದ ಮೂರರಲ್ಲೊಂದು ಮಗುವಿನಲ್ಲಿ, ಆರರಲ್ಲೊಬ್ಬಳು ಗರ್ಭಿಣಿಯಲ್ಲಿ ಎ ಅನ್ನಾಂಗದ ಕೊರತೆಯಿದೆ, ಸುಮಾರು ಆರೂವರೆ ಲಕ್ಷ ಮಕ್ಕಳು ಅದರಿಂದಾಗಿ ಸಾವನ್ನಪ್ಪುತ್ತಿದ್ದಾರೆ, ಐದು ಲಕ್ಷ ಮಕ್ಕಳು ಅಂಧರಾಗುತ್ತಿದ್ದಾರೆ. ಜೊತೆಗೆ, ಕೃತಕ ರಸಗೊಬ್ಬರಗಳಿಂದ ಕ್ಯಾಡ್ಮಿಯಂ, ಸೀಸ, ಪಾದರಸ, ಆರ್ಸೆನಿಕ್, ನಿಕಲ್ ಮುಂತಾದ ಲೋಹಾಂಶಗಳು ಮಣ್ಣನ್ನು ಸೇರಿ, ಕ್ಯಾನ್ಸರ್, ಮೂತ್ರಪಿಂಡಗಳ ಕಾಯಿಲೆ ಇತ್ಯಾದಿಗಳಿಗೆ ಕಾರಣವಾಗಬಹುದೆಂದೂ ಹೇಳಲಾಗುತ್ತಿದೆ.

ಕಳೆ-ಕೀಟನಾಶಕಗಳು ನೇರವಾಗಿಯೂ, ಪರೋಕ್ಷವಾಗಿಯೂ, ನಮ್ಮೊಳಗೆ ಹೊಕ್ಕುತ್ತಿವೆ. ವಿಷಪ್ರೋಕ್ಷಿತ ಧಾನ್ಯ-ಎಲೆ-ಸೊಪ್ಪು-ತರಕಾರಿ-ಹೂವು-ಹಣ್ಣು-ಬೀಜಗಳ ಮೂಲಕವೂ, ಅವನ್ನು ತಿಂದ ಇತರ ಪ್ರಾಣಿ-ಪಕ್ಷಿಗಳ ಹಾಲು ಹಾಗೂ ಮಾಂಸದ ಮೂಲಕವೂ ಇವು ನಮ್ಮ ದೇಹವನ್ನು ಪ್ರವೇಶಿಸುತ್ತವೆ. ಇಂದು ಮಾರುಕಟ್ಟೆಗಳಲ್ಲಿ ದೊರೆಯುವ ಯಾವುದೇ ಆಹಾರವಸ್ತುವೂ ಕೀಟನಾಶಕ ಮುಕ್ತವೆಂದು ಹೇಳಲಾಗದು. ನಮ್ಮ ದೇಶದ ವಿವಿಧೆಡೆಗಳಲ್ಲಿ ನಡೆಸಲಾಗಿರುವ ಪರೀಕ್ಷೆಗಳನುಸಾರ, ಹಣ್ಣು-ತರಕಾರಿಗಳು, ಧಾನ್ಯಗಳು, ಚಹಾ, ಲಘು ಪೇಯಗಳು, ಹಾಲು, ಮೊಟ್ಟೆ, ಮಾಂಸಗಳ ಶೇ. 11ರಿಂದ 85ರಷ್ಟು ಮಾದರಿಗಳಲ್ಲಿ ಬಗೆಬಗೆಯ ಕೀಟನಾಶಕಗಳನ್ನು ಗುರುತಿಸಲಾಗಿದೆ.

ಕೀಟನಾಶಕಗಳ ಬಳಕೆಯಿಂದ ಪರಿಸರ ಹಾಗೂ ಪ್ರಾಣಿ-ಪಕ್ಷಿ ಸಂಕುಲದ ಮೇಲುಂಟಾಗುವ ದುಷ್ಪರಿಣಾಮಗಳ ಬಗ್ಗೆ ಹಲವು ವರದಿಗಳಿದ್ದರೂ, ವಿಷಪ್ರೋಕ್ಷಿತ ಆಹಾರದಿಂದ ಮನುಷ್ಯರ ಮೇಲಾಗುತ್ತಿರುವ ಪರಿಣಾಮಗಳ ಬಗ್ಗೆ ನಿಖರವಾದ ಮಾಹಿತಿಯ ಕೊರತೆಯಿದೆಯೆಂದೇ ಹೇಳಬಹುದು. ಅನ್ಯಪ್ರಾಣಿಗಳಿಗಾಗುವ ಸಮಸ್ಯೆಗಳ ಆಧಾರದಲ್ಲಿ, ಇಂತಹ ವಿಷಯುಕ್ತವಾದ ಆಹಾರವನ್ನು ದೀರ್ಘಕಾಲ ಸೇವಿಸುವುದರಿಂದ ವಿವಿಧ ಕ್ಯಾನ್ಸರುಗಳು, ನಿರ್ನಾಳ ವ್ಯವಸ್ಥೆಯ (ವಿವಿಧ ಹಾರ್ಮೋನುಗಳ) ಸಮಸ್ಯೆಗಳು, ನಿರ್ವೀರ್ಯತೆ ಹಾಗೂ ಬಂಜೆತನ, ನರಮಂಡಲದ ಸಮಸ್ಯೆಗಳು, ಅದರಲ್ಲೂ ವಿಶೇಷವಾಗಿ ಮಕ್ಕಳಲ್ಲಿ ಮನೋದೈಹಿಕ ಬೆಳವಣಿಗೆಯ ಸಮಸ್ಯೆಗಳು, ಯಕೃತ್ತು, ಶ್ವಾಸಾಂಗ ಹಾಗೂ ಮೂತ್ರಪಿಂಡಗಳ ಕಾಯಿಲೆಗಳು ಉಂಟಾಗಬಹುದೆಂದು ಹೇಳಲಾಗುತ್ತದೆ.

ಇವನ್ನೆಲ್ಲ ಪರಿಹರಿಸಲೋಸುಗ ಹೊಸ ಕೃಷಿಕ್ರಾಂತಿಗೆ ಸಿದ್ಧತೆಯಾಗುತ್ತಿದೆ; ಖನಿಜಾಂಶಭರಿತ ಹೊಸ ರಸಗೊಬ್ಬರಗಳನ್ನು, ಪರಿಸರ ಸ್ನೇಹಿಯೆನ್ನಲಾಗುವ ಕಳೆ-ಕೀಟನಾಶಕಗಳನ್ನು, ವಿಷಪೂರಿತವಾದ ಯಾ ಅನ್ನಾಂಗಭರಿತವಾದ ಕುಲಾಂತರಿ ಸಸ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಆದರೆ ಇವುಗಳು ಕಂಪೆನಿಗಳಿಗೆ ಲಾಭವನ್ನಿತ್ತರೂ, ನಮ್ಮ ಆರೋಗ್ಯವನ್ನು ಸುಧಾರಿಸುತ್ತವೆಯೆನ್ನಲಾಗದು. ಅವನ್ನು ಕಾಯಲಾಗದು, ಸಾವಯವ-ಸುಸ್ಥಿತ ಕೃಷಿಪದ್ಧತಿಯನ್ನು ನಂಬಿಕೊಂಡಿದ್ದರೂ ಸಾಲದು. ಹಾಗಿರುವಾಗ, ನಮ್ಮ ದೇಹವನ್ನು ರಕ್ಷಿಸಿಕೊಳ್ಳಬೇಕಾದರೆ, ಲಭ್ಯವಿರುವ ಆಹಾರವಸ್ತುಗಳನ್ನೇ ಜಾಣ್ಮೆಯಿಂದ ಬಳಸಿಕೊಳ್ಳುವ ಉಪಾಯಗಳನ್ನು ಹುಡುಕಬೇಕಾಗುತ್ತದೆ.

ಅಗತ್ಯವುಳ್ಳ ಪೋಷಕಾಂಶಗಳೆಲ್ಲವನ್ನೂ ಪಡೆಯುವುದಕ್ಕಾಗಿ ವೈವಿಧ್ಯಮಯವಾದ ಆಹಾರವನ್ನು ತಿನ್ನಬೇಕು. ಪ್ರಕೃತಿದತ್ತವಾದ, ಸಾಂಪ್ರದಾಯಿಕವಾದ, ಹಳ್ಳಿ-ಕಾಡುಗಳಲ್ಲಿ ದೊರೆಯುವ ಸೊಪ್ಪು-ತರಕಾರಿ-ಕಾಯಿ-ಬೀಜಗಳನ್ನೂ, ದ್ವಿದಳ ಧಾನ್ಯಗಳನ್ನೂ, ಅಣಬೆಗಳನ್ನೂ ಹೆಚ್ಚು ಹೆಚ್ಚು ತಿನ್ನಬೇಕು. ರಸಗೊಬ್ಬರ ಹಾಗೂ ಕೀಟನಾಶಕಗಳಿಲ್ಲದೆಯೇ ಬೆಳೆಯುವ ಹಲಸು, ದೀವಿಹಲಸು, ಬಿದಿರು, ನುಗ್ಗೆ ಮುಂತಾದ ಸಸ್ಯಗಳ ಉತ್ಪನ್ನಗಳನ್ನು, ಚಟ್ಟೆ ಸೊಪ್ಪು, ಕೆಸುವಿನ ಸೊಪ್ಪು, ನೆಲಬಸಳೆ ಮುಂತಾದ ವನ್ಯ ಸೊಪ್ಪು-ತರಕಾರಿಗಳನ್ನು ಹೆಚ್ಚು ಸೇವಿಸಬಹುದು; ಹಾಗೆಯೇ, ಸ್ವತಃ ಬೆಳೆಸಿದ ಅಥವಾ ಪರಿಚಯಸ್ಥರು ಬೆಳೆಸಿದ ವಿಷರಹಿತ ತರಕಾರಿಗಳಿದ್ದರೆ ಒಳ್ಳೆಯದು.

ಮಾರುಕಟ್ಟೆಯಲ್ಲಿ ವಿಷದ ಬಣ್ಣ-ವಾಸನೆಗಳಿಲ್ಲದ, ಮೇಣ ಮೆತ್ತಿಲ್ಲದ, ಸೊಪ್ಪು-ತರಕಾರಿಗಳನ್ನು ಆಯ್ದುಕೊಳ್ಳಬೇಕು. ಹಣ್ಣಿನ ಸೇವನೆಯನ್ನು ಕಡಿತಗೊಳಿಸಿದರೆ ಕೀಟ-ಶಿಲೀಂಧ್ರನಾಶಕಗಳು, ಹಣ್ಣಾಗಿಸುವ ವಿಷಗಳು, ಮೇಣ ಇವೆಲ್ಲವನ್ನೂ ಕಡಿಮೆ ಮಾಡಿದಂತಾಗುತ್ತದೆ, ಜೊತೆಗೆ,  ಸಕ್ಕರೆಯ ಸೇವನೆಯಲ್ಲೂ ಕಡಿತವಾಗುತ್ತದೆ. ತರಕಾರಿಗಳನ್ನು ಶುದ್ಧ ತಣ್ಣೀರಿನಲ್ಲಿ ಐದಾರು ಬಾರಿ ತೊಳೆಯುವುದರಿಂದ 70-80% ಕೀಟನಾಶಕಗಳನ್ನು ನಿರ್ಮೂಲನೆ ಮಾಡಬಹುದು; ಸೊಪ್ಪುಗಳ ಎಲೆ-ಕಾಂಡಗಳನ್ನು ಬೇರ್ಪಡಿಸಿ, 2% ಉಪ್ಪಿನ (ಅಥವಾ 10% ವಿನೆಗರ್) ದ್ರಾವಣದಲ್ಲಿ ತೊಳೆದರೆ ಹೆಚ್ಚಿನ ಕೀಟನಾಶಕಗಳನ್ನು ತೆಗೆಯಬಹುದು. ಸಿಪ್ಪೆಗಳನ್ನು ಕಿತ್ತರೆ ಅಂಟಿರುವ ವಿಷಗಳೂ, ಮೇಣಗಳೂ ನಿರ್ಮೂಲನೆಯಾಗುತ್ತವೆ. ತರಕಾರಿಗಳನ್ನು ತೊಳೆದಾದ ಬಳಿಕ ಸ್ವಲ್ಪ ಹೊತ್ತು ಬಿಸಿನೀರು ಅಥವಾ ಹಬೆಯಲ್ಲಿಟ್ಟರೆ ಕೀಟನಾಶಕಗಳು ಕಳಚಿಕೊಳ್ಳುತ್ತವೆ. ತರಕಾರಿ, ಮಾಂಸ, ಹಾಲುಗಳನ್ನು ಕಾಯಿಸಿ-ಬೇಯಿಸಿದಾಗಲೂ ಕೀಟನಾಶಕಗಳು ಪ್ರತ್ಯೇಕಿಸಲ್ಪಡುತ್ತವೆ.

ಸಂಸ್ಕರಿತ, ಸಿದ್ಧ ತಿನಿಸುಗಳಲ್ಲಿ ಕೀಟನಾಶಕಗಳು ಮತ್ತಿತರ ವಿಷಗಳು ಇರುವುದಿಲ್ಲ; ಆದರೆ ಅವುಗಳಲ್ಲಿ ಅನ್ನಾಂಗ-ಖನಿಜಾಂಶಗಳಂತಹ ಪೋಷಕಾಂಶಗಳೂ ಇರುವುದಿಲ್ಲ, ದೇಹಕ್ಕೆ ಅವು ಒಗ್ಗದೆ ರೋಗಗಳೂ ತಪ್ಪುವುದಿಲ್ಲ.

ಹಿಂದಿನ ಕಾಲದಲ್ಲಿ ಒಳ್ಳೆಯ ಆಹಾರವು ಅದರಷ್ಟಕ್ಕೇ ಬೆಳೆಯುತ್ತಿತ್ತು, ಮನುಷ್ಯರು ಅದನ್ನು ಹುಡುಕಿ ಅಂಡಲೆಯಬೇಕಿತ್ತು, ಇಂದು ಆಹಾರವನ್ನು ನಾವೇ ಬೆಳೆಯುತ್ತಿದ್ದೇವೆ, ಆದರೆ ಶುದ್ಧವಾದ, ಪೌಷ್ಟಿಕವಾದ ಆಹಾರವನ್ನು ಕಾಣುವುದೇ ಕಷ್ಟವಾಗಿದೆ.  ಹಾಗಿರುವಾಗ, ನಮ್ಮ ವಠಾರಗಳಲ್ಲಿ, ತಾರಸಿಗಳಲ್ಲಿ, ಹೂಕುಂಡಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆಬದಿಗಳಲ್ಲಿ, ಎಲ್ಲೆಲ್ಲಿ ಸಾಧ್ಯವೂ ಅಲ್ಲೆಲ್ಲ, ಸುಲಭವಾಗಿ ಬೆಳೆಯಬಲ್ಲ ವನ್ಯ ಸೊಪ್ಪು-ತರಕಾರಿಗಳನ್ನು ಬೆಳೆಸಬಾರದೇಕೆ?

ಆರೋಗ್ಯ ಆಶಯ – ವಿಜಯ ಕರ್ನಾಟಕ: ಒಳ್ಳೆಯ ಮಾಂಸಾಹಾರ ಎಲ್ಲರಿಗೂ ದೊರೆಯಲಿ [ಅಕ್ಟೋಬರ್ 15, 2014, ಬುಧವಾರ] [ನೋಡಿ | ನೋಡಿ]

ಮಾಂಸೋತ್ಪಾದನೆಯನ್ನು ಕಟ್ಟುನಿಟ್ಟಾಗಿ ಪಾರದರ್ಶಕವಾಗಿ ನಿಯಂತ್ರಿಸುವ ಅಗತ್ಯವಿದೆ

ಕೋಳಿಸಾಕಣೆಯಲ್ಲಿ ಪ್ರತಿಜೈವಿಕಗಳ ಬಳಕೆಯಿಂದ ಮನುಷ್ಯರಿಗೆ ಅಪಾಯವಿದೆಯೆಂದು ಇತ್ತೀಚೆಗೆ ವರದಿಯಾಗಿತ್ತು. ಹೆದರಿದ ಕೆಲವರು ಕೋಳಿಸೇವನೆಯನ್ನು ಬಿಟ್ಟದ್ದಾಯಿತು. ನಮ್ಮ ಆಹಾರವು ವ್ಯಾಪಾರದ ಸರಕಾದಂತೆ, ಅದರಲ್ಲಿ ಲಾಭದಾಸೆ ಹೆಚ್ಚಿದಂತೆ ಇಂತಹ ಸುದ್ದಿಗಳು ಹೆಚ್ಚುತ್ತಲೇ ಇವೆ. ಆದರೆ ಆಹಾರೋದ್ಯಮವನ್ನು ನೆಚ್ಚಿಕೊಳ್ಳದೆ ನಾವಿಂದು ಊಟ ಮಾಡಲಾದೀತೇ?

ಮೊದ-ಮೊದಲಲ್ಲಿ ಮನುಷ್ಯನು ಆಹಾರಕ್ಕಾಗಿ ಅಲೆದು-ಬೇಟೆಯಾಡುತ್ತಿದ್ದ; 13-15000 ವರ್ಷಗಳಿಂದೀಚೆಗೆ ಕುರಿ, ಆಡು, ಆಕಳು, ಹಂದಿ, ಕೋಳಿ, ಬಾತು ಮುಂತಾದ ಪ್ರಾಣಿ-ಪಕ್ಷಿಗಳನ್ನೂ, ಕೆಲವು ಸಸ್ಯಗಳನ್ನೂ, ಆಹಾರಕ್ಕಾಗಿ ಪಳಗಿಸಿ, ಸಾಕಿ, ಬೆಳೆಸತೊಡಗಿದ. ಇವುಗಳ ಜೊತೆಗೆ, ಸಿಂಹ, ಚಿರತೆ, ಆನೆ, ಮಂಗ, ಹಾವು, ಕಪ್ಪೆ, ಇಲಿ, ನಾಯಿ ಇತ್ಯಾದಿ ಎಪ್ಪತ್ತರಷ್ಟು ಪ್ರಾಣಿಗಳು ಹಾಗೂ ಕಾಗೆ, ಗೂಬೆ, ಗಿಡುಗ ಮುಂತಾದ ತೊಂಭತ್ತರಷ್ಟು ಪಕ್ಷಿಗಳು ತಿನ್ನಲು ಯೋಗ್ಯವೆಂದು 2000 ವರ್ಷಗಳಿಗೂ ಹಿಂದಿನ ಚರಕ ಸಂಹಿತೆಯಲ್ಲಿ ಪಟ್ಟಿ ಮಾಡಲಾಗಿದೆ. [ಸೂತ್ರಸ್ಥಾನ, 27:35-52] ಕಾಲ ಕಳೆದು, ಕೃಷಿಭೂಮಿ ಹಿಗ್ಗಿ, ಕಾಡುಗಳು ಮರೆಯಾಗಿ, ಬೇಟೆ ದುರ್ಲಭವಾಗಿ ಈಗ ಐದಾರು ಬಗೆಯ ಸಾಕು ಪ್ರಾಣಿ-ಪಕ್ಷಿಗಳಷ್ಟೇ ಮಾಂಸಾಹಾರಕ್ಕೆ ಉಳಿದುಕೊಂಡಿವೆ; ಕೀಟಗಳು, ಹಾವುಗಳು, ಇಲಿ, ನಾಯಿ ಇತ್ಯಾದಿಗಳು ನಮ್ಮ ದೇಶದಲ್ಲೂ, ಇತರೆಡೆಗಳಲ್ಲೂ ಸೀಮಿತವಾಗಿ ಸೇವಿಸಲ್ಪಡುತ್ತಿವೆ.

ಇಂದಿಗೂ ಭಾರತದಲ್ಲಿ ಶೇ. 88ರಷ್ಟು, ಅನ್ಯ ದೇಶಗಳಲ್ಲಿ ಶೇ.95ರಷ್ಟು ಮನುಷ್ಯರು ಮಾಂಸಾಹಾರಿಗಳಾಗಿದ್ದಾರೆ. ಮಾಂಸಾಹಾರವು ಹಸಿವನ್ನು ಬೇಗನೇ ಇಂಗಿಸಿ ಸಂತೃಪ್ತಿಯನ್ನು ನೀಡುವುದರಿಂದಲೂ, ಹೆಚ್ಚಿನ ಪೋಷಕಾಂಶಗಳನ್ನು ಒದಗಿಸಿ ದೇಹಕ್ಕೆ ಬಲ ನೀಡುವುದರಿಂದಲೂ ಹೆಚ್ಚಿನವರು ಅದನ್ನೇ ಬಯಸುತ್ತಾರೆ. ನಮ್ಮ ನಗರಗಳು ಬೆಳೆದು, ಮಧ್ಯಮ ವರ್ಗಗಳು ಬೆಳೆಯುತ್ತಿದ್ದಂತೆ ಮಾಂಸಾಹಾರದ ಬಳಕೆಯು ಇನ್ನಷ್ಟು ಹೆಚ್ಚುತ್ತಲಿದೆ.

ಹೀಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಅತ್ಯಾಧುನಿಕ ವಿಜ್ಞಾನ-ತಂತ್ರಜ್ಞಾನಗಳೆಲ್ಲವನ್ನೂ ಮಾಂಸೋತ್ಪಾದನೆಯಲ್ಲಿ ಬಳಸಲಾಗುತ್ತಿದೆ. ಹದಿನೆಂಟನೇ ಶತಮಾನದ ಮಧ್ಯದವರೆಗೆ ಧಾನ್ಯಗಳನ್ನೂ, ಪ್ರಾಣಿ-ಪಕ್ಷಿಗಳನ್ನೂ ಮನೆಮಂದಿಯೇ ಸಾಕಿ-ಬೆಳೆಸುತ್ತಿದ್ದರೆ, ಈ 150 ವರ್ಷಗಳಲ್ಲಿ ಪಶು-ಪಕ್ಷಿ ಸಾಕಣೆಯು ಒಂದು ಬೃಹತ್ ಉದ್ಯಮವಾಗಿ ಬೆಳೆದಿದೆ; ಇಂದು ಶೇ.50-75ರಷ್ಟು ಮಾಂಸ-ಮೊಟ್ಟೆಗಳು ಉದ್ಯಮ ಮೂಲದ್ದಾಗಿವೆ. ನಮ್ಮ ದೇಶದಲ್ಲಿ ಕೋಳಿಸಾಕಣೆಯು ಬಹುದೊಡ್ಡದಾಗಿ ಬೆಳೆದಿದೆ; ಮತ್ಸ್ಯೋದ್ಯಮವು ಹೆಚ್ಚಾಗಿ ಸಮುದ್ರ-ಸಾಗರಗಳನ್ನೇ ಅವಲಂಬಿಸಿದೆ. ಅಂತಹಾ ಬಲಿಷ್ಠ ಆಹಾರೋದ್ಯಮದ ಪ್ರಭಾವದೆಡೆಯಲ್ಲಿ  ರಹಸ್ಯಗಳು ಹೊರಬರುವುದು ಸುಲಭವಿಲ್ಲ. ಆಹಾರದ ಉತ್ಪಾದನೆ, ಸಂಸ್ಕರಣೆ, ಸಂಗ್ರಹ, ಸಾಗಾಟ, ಮಾರಾಟಗಳಲ್ಲಿ ಇರಬಹುದಾದ ಸಮಸ್ಯೆಗಳನ್ನು ಅರಿಯುವುದೂ ಸುಲಭವಲ್ಲ.

ಹಿಂದೆ ಸಾಕುಪ್ರಾಣಿಗಳಿಗೆ ಹುಲ್ಲು-ಕಡ್ಡಿಗಳೇ ಆಹಾರವಾಗಿದ್ದರೆ, ಈಗ ಜೋಳ, ಸೋಯಾ ಮಂತಾದ ಧಾನ್ಯಗಳನ್ನೂ, ಅವುಗಳ ಹಿಂಡಿಗಳನ್ನೂ ತಿನ್ನಿಸಲಾಗುತ್ತಿದೆ. ಇಂದು ಬೆಳೆಯುವ ಧಾನ್ಯಗಳಲ್ಲಿ ಶೇ. 35ಕ್ಕೂ ಹೆಚ್ಚಿನವು ಸಾಕುಪ್ರಾಣಿಗಳ ಹೊಟ್ಟೆಗಳನ್ನೇ ಸೇರುತ್ತಿವೆ. ನಿಸರ್ಗಸಹಜವಲ್ಲದ ಈ ಧಾನ್ಯಾಹಾರವನ್ನು ಸೇವಿಸುವುದರಿಂದಲೂ, ಕೂಡಿ-ಕಟ್ಟಿ ಬೆಳೆಸುವುದರಿಂದಲೂ ಸಾಕುಪ್ರಾಣಿ-ಪಕ್ಷಿಗಳಿಗೆ ಸೋಂಕಿನ ಅಪಾಯ ಹೆಚ್ಚುತ್ತದೆ. ಪ್ರತಿಜೈವಿಕಗಳನ್ನು ಬಳಸಿದರೆ ಸಾಕುಪ್ರಾಣಿಗಳು ರೋಗರಹಿತವಾಗಿ ಬೇಗನೆ ಬೆಳೆಯುತ್ತವೆ ಎನ್ನುವುದು 1950ರಲ್ಲಿ ಗೊತ್ತಾದ ಬಳಿಕ ಪಶು-ಪಕ್ಷಿ ಆಹಾರಗಳಲ್ಲಿ ಪ್ರತಿಜೈವಿಕಗಳ ಬೆರೆಸುವಿಕೆ ತೊಡಗಿತು. ಇಂದು ಉತ್ಪಾದನೆಯಾಗುವ ಪ್ರತಿಜೈವಿಕಗಳಲ್ಲಿ ಶೇ. 90ರಷ್ಟು ಆಹಾರೋದ್ಯಮಕ್ಕೇ ಹೋಗುತ್ತಿವೆ. ಮನುಷ್ಯರಲ್ಲಿ ಚಿಕಿತ್ಸೆಗಾಗಿ ಬಳಸುವ ಪ್ರತಿಜೈವಿಕಗಳನ್ನು ಸಾಕುಪ್ರಾಣಿ-ಪಕ್ಷಿಗಳಲ್ಲಿ ಬಳಸಬಾರದೆಂಬ ನಿರ್ಬಂಧಗಳಿದ್ದರೂ ಅದರ ಪಾಲನೆಯಾಗುವ ಖಾತರಿಯಿಲ್ಲ.

ಇತ್ತೀಚೆಗೆ ದಿಲ್ಲಿಯಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ಶೇ. 40ರಷ್ಟು ಕೋಳಿಮಾಂಸದ ಮಾದರಿಗಳಲ್ಲಿ ಪ್ರತಿಜೈವಿಕಗಳಿದ್ದುದು ಪತ್ತೆಯಾಗಿತ್ತು. ಅಂತಹಾ ಮಾಂಸವನ್ನು ತಿಂದರೆ ವ್ಯಕ್ತಿಯ ಕರುಳಲ್ಲಿರುವ ಬ್ಯಾಕ್ಟೀರಿಯಾಗಳು ರೋಧಶಕ್ತಿ ಬೆಳೆಸಿಕೊಂಡು, ಚಿಕಿತ್ಸೆಗೆ ಬಗ್ಗದಂತಾಗುತ್ತವೆ ಎನ್ನಲಾಗಿತ್ತು. ಆದರೆ, ಬ್ಯಾಕ್ಟೀರಿಯಾಗಳು ಪ್ರತಿಜೈವಿಕಗಳೆದುರು ರೋಧಶಕ್ತಿ ಬೆಳೆಸಿಕೊಳ್ಳುವುದಕ್ಕೆ ಪ್ರಾಣಿ-ಪಕ್ಷಿ ಸಾಕಣೆಯಲ್ಲಿ ಪ್ರತಿಜೈವಿಕಗಳ ಅತಿ ಬಳಕೆಯೊಂದೇ ಕಾರಣವಲ್ಲ, ಮನುಷ್ಯರಲ್ಲಿ ಅವುಗಳ ಬೇಕಾಬಿಟ್ಟಿ ಬಳಕೆಯೂ ಕಾರಣವಾಗಿದೆ. ಆದ್ದರಿಂದ ಎಲ್ಲೆಡೆ ಪ್ರತಿಜೈವಿಕಗಳ ಬಳಕೆಗೆ ಕಡಿವಾಣ ಹಾಕಬೇಕಾಗಿದೆ. ಕೇವಲ ಕೋಳಿಮಾಂಸ ಸೇವನೆಯನ್ನು ತ್ಯಜಿಸುವುದರಿಂದ ಬ್ಯಾಕ್ಟೀರಿಯಾಗಳಲ್ಲಿ ರೋಧಶಕ್ತಿ ಬೆಳೆಯುವುದನ್ನು ತಡೆಯಲಾಗದು.

ಪ್ರತಿಜೈವಿಕಗಳನ್ನು ಹೆಚ್ಚು ಬಳಸದೆಯೇ ಪಶು-ಪಕ್ಷಿ ಸಾಕಣೆ ಮಾಡುವ ವಿಧಾನಗಳು ಈಗೀಗ ಬಲಗೊಳ್ಳುತ್ತಿವೆ. ಬೇಗನೇ ಬೆಳೆಯಬಲ್ಲ, ಹೆಚ್ಚು ಮಾಂಸವನ್ನು ನೀಡಬಲ್ಲ ಪ್ರಾಣಿ-ಪಕ್ಷಿಗಳ ತಳಿಗಳನ್ನು ಕಳೆದ ಐದಾರು ದಶಕಗಳಲ್ಲಿ ಗುರುತಿಸಿ, ಅಭಿವೃದ್ಧಿಪಡಿಸಲಾಗಿದೆ. ಹೆಚ್ಚಿನ ದೊಡ್ಡ ಸಾಕಣಾಲಯಗಳಲ್ಲಿ ಸ್ವಚ್ಛತೆ, ಉಷ್ಣತೆ, ಆಹಾರ ಇತ್ಯಾದಿಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲಾಗುತ್ತಿದೆ. ನಿರ್ದಿಷ್ಟ ಸೋಂಕುಗಳನ್ನು ತಡೆಯಲು ಲಸಿಕೆಗಳನ್ನೂ ಬಳಸಲಾಗುತ್ತಿದೆ. ಪ್ರತಿಜೈವಿಕಗಳನ್ನು ಆಹಾರದಲ್ಲಿ ಬೆರೆಸದೆ, ಸೋಂಕು ತಗಲಿದರಷ್ಟೇ ನೀಡುವ ಪದ್ಧತಿ ಹೆಚ್ಚುತ್ತಿದೆ. ಆರೇಳು ವಾರಗಳಲ್ಲೇ ಬೆಳೆದು ಉತ್ತಮ ಮಾಂಸ-ಮೊಟ್ಟೆಗಳನ್ನು ನೀಡಬಲ್ಲ ವಿಶೇಷ ಕೋಳಿತಳಿಗಳು ನಮ್ಮ ದೇಶದಲ್ಲೂ ಲಭ್ಯವಿವೆ. ಅಂತಹ ಉತ್ತಮ ಕೋಳಿಮಾಂಸವನ್ನು ನಂಬಲರ್ಹವಾದ, ಸ್ವಚ್ಛತೆಯುಳ್ಳ, ಉತ್ತಮ ಸಂಸ್ಕರಣಾ ಸೌಲಭ್ಯಗಳುಳ್ಳ ಅಂಗಡಿಗಳಿಂದ ಖರೀದಿಸಬಹುದು. ಮೊಟ್ಟೆಗಳನ್ನು ಖರೀದಿಸುವಾಗಲೂ ಹೊಸದಾದ, ಬಿರುಕಿಲ್ಲದೆ ಸರಿಯಾದ ಆಕಾರದಲ್ಲಿರುವ, ಸ್ವಚ್ಛವಾದ, ಹೊರಗಿನ ವಾಸನೆಗಳಿಂದ ಮುಕ್ತವಾಗಿರುವಂತಹವುಗಳನ್ನು ಹುಡುಕಬೇಕು.

ಹೊರದೇಶಗಳಲ್ಲಿ 18-22 ತಿಂಗಳುಗಳಲ್ಲೇ ಬೆಳೆಯಬಲ್ಲ ಆಡು, ಕುರಿ ಮತ್ತಿತರ ಜಾನುವಾರು ತಳಿಗಳನ್ನು ಮಾಂಸಕ್ಕಾಗಿ ಬಳಸಲಾಗುತ್ತದೆ; ನಮ್ಮಲ್ಲಿನ್ನೂ ಹಾಗಿಲ್ಲ. ಅಮೆರಿಕಾದಲ್ಲಿ ಜಾನುವಾರುಗಳ ಬೆಳವಣಿಗೆಯನ್ನು ಪ್ರಚೋದಿಸುವ ಹಾರ್ಮೋನುಗಳನ್ನು ಬಳಸಲಾಗುತ್ತಿದೆಯಾದರೂ, ನಮ್ಮಲ್ಲಿಲ್ಲ. ನಮ್ಮ ದೇಶದ ಆಡು, ಕುರಿ ಮತ್ತಿತರ ಜಾನುವಾರುಗಳು ಹುಲ್ಲಿನ ಮೇವನ್ನೇ ಹೆಚ್ಚಾಗಿ ಅವಲಂಬಿಸಿದ್ದು, ಉತ್ತಮ ಮಾಂಸವನ್ನು ಒದಗಿಸಬಲ್ಲವು. ಬಡಜನರ ನ್ಯೂನ ಪೋಷಣೆಯನ್ನು ನಿವಾರಿಸಲು ಇವು ನೆರವಾಗಬಲ್ಲವು. ಹುಲ್ಲು ಸೇವಿಸಿ, ಅಡ್ಡಾಡಿಕೊಂಡಿದ್ದ ಆಡು-ಜಾನುವಾರುಗಳ ಕೆಂಪು ಮಾಂಸವು ಅತ್ಯುತ್ತಮವಾದ ಪೋಷಕಾಂಶಗಳನ್ನು ಒದಗಿಸುತ್ತದೆಯೆಂದೂ, ಅದರ ಸೇವನೆಯಿಂದ ಮೇದಸ್ಸಿನ (ಕೊಲೆಸ್ಟರಾಲ್) ಪ್ರಮಾಣದ ಮೇಲೆ ಯಾ ಹೃದಯದ ಮೇಲೆ ದುಷ್ಪರಿಣಾಮಗಳಾಗುತ್ತವೆ ಎನ್ನುವುದಕ್ಕಾಗಲೀ, ಕ್ಯಾನ್ಸರಿಗೆ ಕಾರಣವಾಗುತ್ತದೆ ಎನ್ನುವುದಕ್ಕಾಗಲೀ ಆಧಾರಗಳಿಲ್ಲವೆಂದೂ ಹಲವು ವರದಿಗಳಲ್ಲಿ ಹೇಳಲಾಗಿದೆ. [ಮೀಟ್ ಸಯನ್ಸ್, 2014-98(3):452;ಬ್ರಿಟಿಷ್ ಜ ನ್ಯೂಟ್ರಿ, 2012-107(10):1403; ಆರ್ಕೈವ್ಸ್ ಇಂಟ ಮೆಡಿ, 1999-159(12)1331; ಅಮೆ ಜ ಕ್ಲಿನಿ ನ್ಯೂಟ್ರಿ, 2012-96(2):446]

ಮಾಂಸ, ಮೊಟ್ಟೆ, ಮೀನುಗಳು ಕೆಡದಂತೆ ರಕ್ಷಿಸಲು ಶೀತಲೀಕರಣವನ್ನೂ, ಮನುಷ್ಯರಿಗೆ ಹಾನಿಯುಂಟುಮಾಡದ ಉಪ್ಪು ಮತ್ತಿತರ ರಾಸಾಯನಿಕ ಸಂಯುಕ್ತಗಳನ್ನೂ ಬಳಸಲಾಗುತ್ತಿದೆ. ದೇಶದ ಕೆಲವೆಡೆ ಮೀನಿಗೆ ಫಾರ್ಮಲಿನ್ ನಂತಹ ಹಾನಿಕಾರಕ ಸಂಯುಕ್ತಗಳನ್ನು ಬೆರೆಸುವ ಬಗ್ಗೆ ವರದಿಗಳಾಗಿವೆ. ಇದನ್ನು ಬರಿಗಣ್ಣಿನಿಂದ ಗುರುತಿಸುವುದು ಸುಲಭವಲ್ಲ. ಒಳ್ಳೆಯ ಮೀನು ತಾಜಾತನದ, ಮೃದುವಾದ ಪರಿಮಳವನ್ನು ಹೊಂದಿರಬೇಕು, ಗಾಢವಾದ ವಾಸನೆ ಅಥವಾ ದುರ್ನಾತವಿರಬಾರದು; ಗಟ್ಟಿಯಾಗಿದ್ದು, ಹೊಳಪಿರಬೇಕು, ಒತ್ತಿ ಬಿಟ್ಟರೆ ಪುಟಿಯಬೇಕು; ಕಿವಿರುಗಳು ಗಾಢಕೆಂಪಿರಬೇಕು, ಕಣ್ಣುಗಳು ಸ್ವಚ್ಛವಾಗಿ, ಸ್ವಲ್ಪ ಹೊರಕ್ಕೆ ಉಬ್ಬಿರಬೇಕು; ಸಿಗಡಿಯು ಪಾರದರ್ಶಕವಾಗಿ, ವಾಸನೆರಹಿತವಿರಬೇಕು.

ವಿಶ್ವಾದ್ಯಂತ ಆಹಾರದ ಸುರಕ್ಷಿತತೆಯನ್ನು ಖಾತರಿಗೊಳಿಸುವ ವ್ಯವಸ್ಥೆಯನ್ನು ಬಲಪಡಿಸುವ ಪ್ರಯತ್ನಗಳಾಗುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಆಹಾರ ಮತ್ತು ಕೃಷಿ ಸಂಸ್ಥೆಗಳು ರೂಪಿಸಿರುವ ಅಂತರರಾಷ್ಟ್ರೀಯ ಆಹಾರ ಮಾನದಂಡಗಳಲ್ಲಿ (http://www.codexalimentarius.org/standards/en/) ಆಹಾರೋದ್ಯಮವು ಪಾಲಿಸಬೇಕಾದ  ಕಟ್ಟುನಿಟ್ಟಿನ ಕ್ರಮಗಳನ್ನು ಸೂಚಿಸಲಾಗಿದೆ. ನಮ್ಮ ಆಹಾರೋದ್ಯಮದ ಮೇಲೆ ನಿಗಾ ವಹಿಸಲು ಭಾರತೀಯ ಆಹಾರ ಸುರಕ್ಷಿತತೆ ಹಾಗೂ ಮಾನದಂಡಗಳ ಪ್ರಾಧಿಕಾರವನ್ನು (http://www.fssai.gov.in/) ಸ್ಥಾಪಿಸಲಾಗಿದ್ದು, ಜಿಲ್ಲೆಗೊಬ್ಬ ಆಹಾರ ಸುರಕ್ಷಣಾಧಿಕಾರಿಯನ್ನು ನೇಮಿಸಲಾಗುತ್ತಿದೆ.

ವಿಶ್ವದ 680 ಕೋಟಿಗೂ ಹೆಚ್ಚು ಮಾಂಸಾಹಾರಿ ಮನುಷ್ಯರಿಗೆ ಮೀನು-ಮಾಂಸ-ಮೊಟ್ಟೆಗಳನ್ನು ಒದಗಿಸಬೇಕಾದರೆ ಉದ್ಯಮದ ನೆರವಿಲ್ಲದೆ ಸಾಧ್ಯವಾಗದು. ಮನುಷ್ಯರಿಗೆ ಅತ್ಯಗತ್ಯವಾದ ಮೇದಸ್ಸು, ಪ್ರೋಟೀನುಗಳು, ವಿಟಮಿನ್ ಬಿ12, ಕಬ್ಬಿಣ ಮುಂತಾದ ಖನಿಜಾಂಶಗಳನ್ನು ಯಥೇಷ್ಟವಾಗಿ ಒದಗಿಸುವ ಮಾಂಸಾಹಾರವನ್ನು ಕಡಿತಗೊಳಿಸಿದರೆ ಆರೋಗ್ಯಕ್ಕೆ ಒಳಿತಾಗದು. ನಮ್ಮ ದೇಶದಲ್ಲಿ ದೊರೆಯುವ ಮೀನು-ಮೊಟ್ಟೆ-ಮಾಂಸಗಳು ಆರೋಗ್ಯಕರವಾಗಿವಂತೆಯೂ, ಅಗತ್ಯವುಳ್ಳವರೆಲ್ಲರನ್ನೂ ತಲುಪುವಂತೆಯೂ ಮಾಡುವುದಕ್ಕೆ ಸುಸ್ಪಷ್ಟವಾದ ನೀತಿ ನಿರೂಪಣೆ ಹಾಗೂ ನಿಯಂತ್ರಣಾ ವ್ಯವಸ್ಥೆ ಬರಬೇಕಾಗಿದೆ.

ನಾವಿನ್ನು ಕೊಲೆಸ್ಟರಾಲನ್ನು ತಿನ್ನಬಹುದಂತೆ!

ಆರೋಗ್ಯ ಪ್ರಭ: ನಾವಿನ್ನು ಕೊಲೆಸ್ಟರಾಲನ್ನು ತಿನ್ನಬಹುದಂತೆ! [ಕನ್ನಡ ಪ್ರಭ, ಆಗಸ್ಟ್ 20, 2015, ಗುರುವಾರ]

ಕೊಬ್ಬಿನ ಅತಿಸೇವನೆಯಿಂದ ಕೊಲೆಸ್ಟರಾಲ್ ಹೆಚ್ಚಿ ಹೃದಯಾಘಾತಕ್ಕೆ ಕಾರಣವಾಗುತ್ತದೆ ಎಂದು ಕಳೆದ ಅರುವತ್ತು ವರ್ಷಗಳಿಂದ ಹೆದರಿಸಲಾಗುತ್ತಿತ್ತು. ಕೊಬ್ಬು ನಿಗ್ರಹವು ಲಕ್ಷಗಟ್ಟಲೆ ಕೋಟಿಯ ಉದ್ಯಮವಾಗಿ ಬೆಳೆದಿತ್ತು. ಈ ಕೊಬ್ಬಿನ ಭೂತದ ವಿಮೋಚನೆಗೆ ಕೊನೆಗೂ ಕಾಲ ಕೂಡಿಬಂದಿದೆ.

ಹೊಟ್ಟೆ ತುಂಬ ತಿನ್ನಬಲ್ಲ ಮನುಷ್ಯರ ಬಾಯಿಗೆ ಕಳೆದ ಅರುವತ್ತು ವರ್ಷಗಳಿಂದ ಅಡ್ಡಿಯಾಗುತ್ತಿರುವ ಪೆಡಂಭೂತ ಕೊಲೆಸ್ಟರಾಲ್. ‘ನೀವಿನ್ನು ಮಾಂಸ-ಮೊಟ್ಟೆ ತಿನ್ನಲೇಬಾರದು, ಬೆಣ್ಣೆ, ತೆಂಗಿನೆಣ್ಣೆ ಬಿಟ್ಟು ಬಿಡಿ’ ಎಂಬುದು ಎಲ್ಲ ಹೃದ್ರೋಗಿಗಳಿಗೆ ದೊರೆಯುವ ಕಟ್ಟಪ್ಪಣೆ. ಕೊಲೆಸ್ಟರಾಲ್ ಭಯದಿಂದ ಇವನ್ನೆಲ್ಲ ತಿನ್ನದವರಿಗೂ ಹೃದಯಾಘಾತವಾಗುತ್ತಿರುವುದೇಕೆ? ಚಿಕಿತ್ಸಾರ್ಥಿಗಳು ಇದನ್ನು ಕೇಳುವುದಿಲ್ಲ, ಕೇಳಿದರೂ ವೈದ್ಯರು ಹೇಳುವುದಿಲ್ಲ.

ವೈದ್ಯರಾದರೂ ಹೇಗೆ ಹೇಳಿಯಾರು? ಮಾಂಸ, ಮೊಟ್ಟೆ, ಎಣ್ಣೆ, ಬೆಣ್ಣೆಗಳಲ್ಲಿರುವ ಕೊಬ್ಬುಗಳೇ ಮನುಷ್ಯರ ಅತಿ ದೊಡ್ಡ ಶತ್ರುಗಳೆಂದು ಐವತ್ತರ ದಶಕದಿಂದಲೇ ಕೂಗಲಾಗುತ್ತಿದೆ. ಕೊಬ್ಬು ದೇಹದ ಕಣಕಣದಲ್ಲೂ, ಮಿದುಳಿನಲ್ಲೂ ತುಂಬಿಕೊಂಡಿದೆ, ದೇಹದ ಎಲ್ಲ ಪ್ರಕ್ರಿಯೆಗಳಿಗೂ ಅತ್ಯಗತ್ಯವಾಗಿದೆ, ಆದ್ದರಿಂದ ಅದು ಶತ್ರುವಾಗಲು ಸಾಧ್ಯವಿಲ್ಲ ಎಂದ ವೈದ್ಯವಿಜ್ಞಾನಿಗಳ ಪ್ರತಿರೋಧವನ್ನೆಲ್ಲ ಅತಿ ವ್ಯವಸ್ಥಿತವಾಗಿ ಮಟ್ಟ ಹಾಕಲಾಗಿದೆ. ಈ ಗದ್ದಲ-ಗೊಂದಲದಲ್ಲಿ ಹೃದ್ರೋಗಕ್ಕೆ ನಿಜವಾದ ಕಾರಣವೇನೆನ್ನುವುದು ಅಡಗಿ ಹೋಗಿದೆ.

ಕಳೆದ ಮೂವತ್ತು ವರ್ಷಗಳಲ್ಲಿ ಕೊಬ್ಬು ದೂಷಣೆಯು ಬೃಹತ್ ಉದ್ಯಮವಾಗಿ ಬೆಳೆದಿದೆ. ಸೊನ್ನೆ ಕೊಬ್ಬು, ಕಡಿಮೆ ಕೊಬ್ಬು, ಒಳ್ಳೆ ಕೊಬ್ಬು ಎಂಬ ಹೆಸರಲ್ಲಿ 15000ಕ್ಕೂ ಹೆಚ್ಚು ತಿನಿಸುಗಳು ವರ್ಷಕ್ಕೆ ಮೂರು ಲಕ್ಷ ಕೋಟಿ ಡಾಲರು (200 ಲಕ್ಷ ಕೋಟಿ ರೂ.) ಗಳಿಗೂ ಹೆಚ್ಚು ವಹಿವಾಟು ಮಾಡುತ್ತಿವೆ, ಇವುಗಳ ಪ್ರಚಾರಕ್ಕೆಂದೇ ಸಾವಿರಗಟ್ಟಲೆ ಕೋಟಿ ಖರ್ಚಾಗುತ್ತಿದೆ. ಕೊಬ್ಬಿಳಿಸುವ ಶಸ್ತ್ರಚಿಕಿತ್ಸೆಗಳು, ವ್ಯಾಯಾಮ ಶಾಲೆಗಳು, ಯೋಗ ಶಾಲೆಗಳು ಇನ್ನೊಂದಷ್ಟು ಸಾವಿರ ಕೋಟಿ ಸೆಳೆಯುತ್ತಿವೆ. ಕೊಲೆಸ್ಟರಾಲ್ ಇಳಿಸುವ ಸ್ಟಾಟಿನ್ ಗಳಿಂದ ವರ್ಷಕ್ಕೆ ಒಂದೂವರೆ ಲಕ್ಷ ಕೋಟಿ ರೂಪಾಯಿಗೂ ಮಿಕ್ಕಿದ ಆದಾಯವಿದೆ. ಕೊಬ್ಬಿನ ಭೂತಕ್ಕೆ ಕಾಣಿಕೆಯೆಷ್ಟು!

ಆದರೆ ಕೊಬ್ಬಿನ ಭೂತದ ಅಂತ್ಯಕಾಲ ಸನ್ನಿಹಿತವಾದಂತಿದೆ, ಲಕ್ಷಗಟ್ಟಲೆ ಕೋಟಿಯ ಕೊಬ್ಬು ನಿಗ್ರಹ ವಹಿವಾಟಿನ ಅಡಿಪಾಯವೇ ಅಲುಗಾಡತೊಡಗಿದೆ.

ಅಮೆರಿಕದ ಹೃದ್ರೋಗ ತಜ್ಞರು ನವಂಬರ್ 2013ರಲ್ಲಿ ಪ್ರಕಟಿಸಿದ ಹೊಸ ವರದಿಯಲ್ಲಿ, ರಕ್ತದ ಕೊಲೆಸ್ಟರಾಲ್ ಪ್ರಮಾಣವನ್ನಿಳಿಸಲು ಔಷಧಗಳನ್ನು ಸೇವಿಸುವ ಅಗತ್ಯವಿಲ್ಲವೆಂದೂ, ಹಾಗೆ ಇಳಿಸುವುದರಿಂದ ಹೃದಯಾಘಾತವೂ ಸೇರಿದಂತೆ ರಕ್ತನಾಳಗಳ ಕಾಯಿಲೆಯನ್ನು ತಡೆಯಬಹುದೆನ್ನುವುದಕ್ಕೆ ಸಾಕಷ್ಟು ಆಧಾರಗಳಿಲ್ಲವೆಂದೂ ಸ್ಪಷ್ಟವಾಗಿ ಹೇಳಲಾಗಿದೆ. ಕೊಲೆಸ್ಟರಾಲ್ ಗುಮ್ಮನನ್ನು ತೋರಿದ್ದವರೇ ಅದಕ್ಕಿನ್ನು ಮದ್ದಿನ ಅಗತ್ಯವಿಲ್ಲ ಎಂದಿದ್ದಾರೆ.

ಮತ್ತೀಗ ಫೆಬ್ರವರಿಯಲ್ಲಿ ಅಮೆರಿಕದ ಸರಕಾರವು ಪ್ರತೀ ಐದು ವರ್ಷಗಳಿಗೊಮ್ಮೆ ಪ್ರಕಟಿಸುವ ಆಹಾರ ಮಾರ್ಗದರ್ಶಿಯ ಕರಡು ಹೊರಬಿದ್ದಿದೆ; ಸೇವಿಸುವ ಆಹಾರದಲ್ಲಿ ಕೊಲೆಸ್ಟರಾಲ್ ಪ್ರಮಾಣವು ದಿನಕ್ಕೆ 300ಮಿಗ್ರಾಂ ಮೀರಬಾರದೆಂದು ಈ ಹಿಂದೆ ನೀಡಲಾಗಿದ್ದ ಸಲಹೆಯನ್ನು ಕೈಬಿಡಲಾಗುತ್ತಿದೆಯೆಂದೂ, ಆಹಾರದ ಕೊಲೆಸ್ಟರಾಲ್ ಪ್ರಮಾಣಕ್ಕೂ, ರಕ್ತದ ಕೊಲೆಸ್ಟರಾಲ್ ಪ್ರಮಾಣಕ್ಕೂ ಸಂಬಂಧಗಳಿಲ್ಲವೆನ್ನುವುದು ಸ್ಪಷ್ಟವಾಗಿದೆಯೆಂದೂ, ಕೊಲೆಸ್ಟರಾಲ್ ಅತಿ ಸೇವನೆಯ ಬಗ್ಗೆ ಕಾಳಜಿಯ ಅಗತ್ಯವಿಲ್ಲವೆಂದೂ ಈ ಕರಡಿನಲ್ಲಿ ಹೇಳಲಾಗಿದೆ. ನಲುವತ್ತು ವರ್ಷಗಳಿಂದ ಕೊಲೆಸ್ಟರಾಲ್ ಭೂತವನ್ನು ಕುಣಿಸುತ್ತಿದ್ದ ಅಮೆರಿಕದ ಸರಕಾರವೇ ಈಗ ಭೂತ ವಿಮೋಚನೆಗೆ ಮುಂದಾಗಿದೆ.

ಈ ಹಿಂಪಡೆತಕ್ಕೆ ಕಾರಣಗಳೇನೆನ್ನುವುದೂ ಆ ಕರಡಿನಲ್ಲಿದೆ. ಅಮೆರಿಕದಲ್ಲಿ ಹನ್ನೆರಡು ಕೋಟಿ ಜನರು, ಜನಸಂಖ್ಯೆಯ ಅರ್ಧದಷ್ಟು, ರಕ್ತದೊತ್ತಡ, ಮಧುಮೇಹ, ಹೃದ್ರೋಗ, ಕ್ಯಾನ್ಸರ್ ಮುಂತಾದ ಆಧುನಿಕ ರೋಗಗಳಿಂದ ನರಳುತ್ತಿದ್ದಾರೆ; ಮೂವರಲ್ಲಿ ಇಬ್ಬರಿಗಿಂತಲೂ ಹೆಚ್ಚು ವಯಸ್ಕರು, ಹಾಗೂ ಮೂವರಲ್ಲಿ ಒಬ್ಬರಿಗಿಂತಲೂ ಹೆಚ್ಚು ಮಕ್ಕಳು ಮತ್ತು ಯುವಜನರು ಅತಿ ತೂಕ ಯಾ ಬೊಜ್ಜು ಪೀಡಿತರಾಗಿದ್ದಾರೆ. ಆಹಾರಕ್ಕೆ ಸಂಬಂಧಿಸಿದ ಈ ಸಮಸ್ಯೆಗಳನ್ನು ತಡೆಯುವುದಕ್ಕೆ ದೃಢವಾದ, ನೂತನವಾದ ಕಾರ್ಯಯೋಜನೆಯನ್ನು ಧೈರ್ಯದಿಂದ ಕೈಗೊಳ್ಳಬೇಕಾಗಿದೆ ಎಂದು ಕರಡಿನಲ್ಲಿ ಹೇಳಲಾಗಿದೆ. ಅಮೆರಿಕದ ಸರಕಾರಕ್ಕೆ ತನ್ನ ಹಳೆಯ ಸುಳ್ಳನ್ನು ತಿದ್ದುವುದಕ್ಕೆ ಹೊಸ ಧೈರ್ಯ ಬೇಕಾಗಿದೆ!

ಕೊಬ್ಬು ಮನುಷ್ಯನ ಮೊದಲ ವೈರಿ ಎಂಬ ವಾದವು ಹುಟ್ಟಿದ್ದು 1950ರ ಮೊದಲಲ್ಲಿ. ಅಮೆರಿಕದ ಮಿನೆಸೋಟ ವಿಶ್ವವಿದ್ಯಾಲಯದಲ್ಲಿ ಶರೀರ ವಿಜ್ಞಾನಿಯಾಗಿದ್ದ ಆನ್ಸೆಲ್ ಕೀಸ್ ಅವರನ್ನು ಈ ಸಿದ್ಧಾಂತದ ಜನಕನೆಂದು ಪರಿಗಣಿಸಲಾಗುತ್ತದೆ. ಎರಡನೇ ಮಹಾಯುದ್ಧದ ನಂತರದಲ್ಲಿ ಅಮೆರಿಕದ ಶ್ರೀಮಂತರಲ್ಲಿ ಹೃದಯಾಘಾತವು ಹೆಚ್ಚುತ್ತಿದ್ದರೆ, ಯುದ್ಧದಿಂದ ಕಂಗೆಟ್ಟಿದ್ದ ಯೂರೋಪಿನಲ್ಲಿ ಅದು ಕಡಿಮೆಯಾಗುತ್ತಿದ್ದುದನ್ನು ಕೀಸ್ ಗಮನಿಸಿದ್ದರು. ಅಮೆರಿಕದ ಶ್ರೀಮಂತರು ಬಹಳಷ್ಟು ಕೊಬ್ಬಿನಂಶವಿರುವ ಆಹಾರವನ್ನು ಸೇವಿಸುತ್ತಿರುವುದರಿಂದ, ಅದೇ ಕೊಬ್ಬು ಕೊಲೆಸ್ಟರಾಲನ್ನು ಹೆಚ್ಚಿಸಿ, ಅದುವೇ ರಕ್ತನಾಳಗಳೊಳಕ್ಕೆ ಸೇರಿ ಉಬ್ಬುಗಳನ್ನುಂಟು ಮಾಡಿ ಹೃದಯಾಘಾತವನ್ನುಂಟು ಮಾಡುತ್ತದೆ ಎನ್ನುವ ತರ್ಕವನ್ನು ಕೀಸ್ ಮುಂದಿಟ್ಟರು. ಶ್ರೀಮಂತರು ತಿನ್ನುವುದೂ ಹೆಚ್ಚು, ಅವರಲ್ಲಿ ಹೃದಯಾಘಾತವೂ ಹೆಚ್ಚು ಎನ್ನುವುದು ನಿಜವಿದ್ದರೂ, ಕೊಬ್ಬು ತಿಂದು ರಕ್ತನಾಳ ಕೆಡುತ್ತದೆ ಎನ್ನುವುದಕ್ಕೆ ಯಾವ ಆಧಾರವೂ ಇರಲಿಲ್ಲ. ಹಾಗಿದ್ದರೂ ಕೀಸ್ ಸಿದ್ಧಾಂತವನ್ನು ಹಲವರು ಅಪ್ಪಿಕೊಂಡರು.

ಅಮೆರಿಕದ ಹೃದ್ರೋಗ ಸಂಘವು ಕೀಸ್ ಅವರ ವಾದವನ್ನು ಹಾಗೆಯೇ ಒಪ್ಪಿಕೊಂಡಿತು; ಬೆಣ್ಣೆ, ಮೊಟ್ಟೆ, ಪಶು ಮಾಂಸಗಳ ಸೇವನೆಯು ಹೃದಯದ ರಕ್ತನಾಳಗಳ ಕಾಯಿಲೆಗೆ ಕಾರಣವಾಗುತ್ತದೆಂದು 1956ರಲ್ಲಿ ಘೋಷಿಸಿಯೇ ಬಿಟ್ಟಿತು. ಅದೇ ಸಂಘವು 1961ರಲ್ಲಿ ಇನ್ನೊಂದು ವರದಿಯನ್ನು ಹೊರಡಿಸಿ, ಮೊಟ್ಟೆ, ಇಡೀ ಹಾಲು, ಕೆನೆ, ಗಿಣ್ಣು, ಬೆಣ್ಣೆ, ತೆಂಗಿನೆಣ್ಣೆ, ಮಾಂಸಗಳು ಪರ್ಯಾಪ್ತ ಮೇದಸ್ಸನ್ನು ಹೊಂದಿರುವುದರಿಂದ ಕೊಲೆಸ್ಟರಾಲ್ ಹೆಚ್ಚಳಕ್ಕೆ ಕಾರಣವಾಗಬಲ್ಲವೆಂದೂ, ಜೋಳದ ಎಣ್ಣೆ, ಹತ್ತಿ ಎಣ್ಣೆ, ಸೋಯಾ ಎಣ್ಣೆಗಳು ಅದನ್ನು ಇಳಿಸಬಲ್ಲವೆಂದೂ ಹೇಳಿತು.

ಅಲ್ಲಿಗೆ ಕೊಬ್ಬಿನ ಭೂತ ದೊಡ್ಡದಾಗಿ ಎದ್ದು ನಿಂತಿತು; ಶತಶತಮಾನಗಳಿಂದ ಬಳಸಲಾಗುತ್ತಿದ್ದ ತೆಂಗಿನೆಣ್ಣೆ, ಮಾಂಸ, ಮೊಟ್ಟೆ ಇತ್ಯಾದಿಗಳು ಶತ್ರುಗಳಾಗಿ, ಆಗಿನ್ನೂ ಹೊಸದಾಗಿದ್ದ ಸಂಸ್ಕರಿತ ಖಾದ್ಯತೈಲಗಳು, ಕೆನೆ ತೆಗೆದ ಹಾಲು ಮಿತ್ರರಾದವು, ಬೃಹತ್ ಉದ್ಯಮಗಳಾದವು. ಇವಕ್ಕೆಲ್ಲ ಆಧಾರಗಳೇನೆಂದು ಹೆಚ್ಚಿನವರು ಕೇಳಲಿಲ್ಲ, ಕೇಳಿದವರನ್ನು ಯಾರೂ ಗಮನಿಸಲಿಲ್ಲ. ಸಂಪೂರ್ಣವಾಗಿ ಮಾಂಸಾಹಾರವನ್ನೇ ನೆಚ್ಚಿಕೊಂಡ ಕೆನ್ಯಾದ ಮಸಾಯಿ ಬುಡಕಟ್ಟಿನವರಲ್ಲಿ ಹೃದ್ರೋಗವೆಂಬುದೇ ಇಲ್ಲವೆಂದು ಪ್ರತಿಷ್ಠಿತ ವಾಂಡರ್ ಬಿಲ್ ವಿಶ್ವವಿದ್ಯಾಲಯದ ಜಾರ್ಜ್ ಮಾನ್ ಆಗಲೇ ಶ್ರುತ ಪಡಿಸಿದರಾದರೂ ಯಾರಿಗೂ ಅದು ಬೇಡವಾಯಿತು. ಸಕ್ಕರೆಯ ಸೇವನೆಯೇ ಆಧುನಿಕ ರೋಗಗಳಿಗೆ ಕಾರಣವೆಂದು ಅದಕ್ಕೂ ಮೊದಲು ಹಲವರು ಹೇಳಿದ್ದುದು ಮೂಲೆ ಸೇರಿತು.

ಹೆಚ್ಚಿನ ಆಧಾರಗಳಿಲ್ಲದೆಯೂ ಕೊಬ್ಬು ವಿರೋಧಿ ಸಿದ್ಧಾಂತವು ಹೀಗೆ ಬೆಳೆಯುತ್ತಲೇ ಹೋಯಿತು; 1977ರಲ್ಲಿ ಕೆಲ ವಿಜ್ಞಾನಿಗಳು ಮತ್ತು ರಾಜಕಾರಣಿಗಳ ಒತ್ತಾಸೆಯಿಂದ ಅಮೆರಿಕಾದ ಸರಕಾರವು ಆಹಾರ ಮಾರ್ಗದರ್ಶಿಯನ್ನು ಪ್ರಕಟಿಸಿ, ಕೊಬ್ಬಿನ ಬಳಕೆಗೆ ಗಟ್ಟಿಯಾದ ಕಡಿವಾಣ ಹಾಕಿತು, 1983ರಲ್ಲಿ ಬ್ರಿಟಿಷ್ ಸರಕಾರವೂ ಅದನ್ನು ಹಿಂಬಾಲಿಸಿತು. ವಿಜ್ಞಾನಿ ಡೇವಿಡ್ ಕ್ರಿಚೆವ್ ಸ್ಕಿ ಹೇಳಿದಂತೆ,  ಅಮೆರಿಕನರಿಗೆ ದೇವರು ಮತ್ತು ಕಮ್ಯೂನಿಸ್ಟರಿಗಿಂತ ಕೊಬ್ಬಿನ ಭಯವೇ ಹೆಚ್ಚಾಯಿತು!

ಹೀಗೆ ಕೊಬ್ಬಿನ ಸೇವನೆಯನ್ನು ಕಡಿತಗೊಳಿಸಿದ ಬಳಿಕ ಆಧುನಿಕ ರೋಗಗಳು ಕಡಿಮೆಯಾದವೇ? ಇಲ್ಲ, ಹೆಚ್ಚಾದವು! ಕೊಬ್ಬನ್ನು ಬಿಟ್ಟು ಸಕ್ಕರೆ-ಸಂಸ್ಕರಿತ ತಿನಿಸುಗಳ ಸೇವನೆ ಹೆಚ್ಚಿದಂತೆ ಬೊಜ್ಜು ಹೆಚ್ಚುತ್ತಲೇ ಹೋಯಿತು, ಹೃದ್ರೋಗ, ಮಧುಮೇಹಗಳೂ ಹೆಚ್ಚಿದವು, ಕಿರಿಯರನ್ನೂ ಕಾಡತೊಡಗಿದವು. ಹಾಗಿದ್ದರೂ ಕೊಬ್ಬೇ ಪರಮ ವೈರಿಯೆಂದು ಸಾಧಿಸಲು 1988ರಲ್ಲಿ ಅಮೆರಿಕದ ಸರಕಾರವು ಸಮಿತಿಯೊಂದನ್ನು ರಚಿಸಿತು; ಹತ್ತು ವರ್ಷ ಹುಡುಕಿದರೂ ಕೊಬ್ಬನ್ನು ಹಳಿಯುವುದಕ್ಕೆ ಆಧಾರಗಳು ದೊರೆಯದೆ ಸಮಿತಿಯು ಸುಮ್ಮನಾಗಬೇಕಾಯಿತು. ಈ ಸಮಿತಿಯ ಕೆಲ ಸದಸ್ಯರ ಹೇಳಿಕೆಗಳನ್ನಾಧರಿಸಿ ಅಮೆರಿಕದ ಹಿರಿಯ ಪತ್ರಕರ್ತ ಗಾರಿ ಟಾಬ್ಸ್ ಪ್ರತಿಷ್ಠಿತ ಸಯನ್ಸ್ ಪತ್ರಿಕೆಯಲ್ಲಿ ‘ಆಹಾರದಲ್ಲಿ ಕೊಬ್ಬಿನಂಶದ ಹಸಿ ವಿಜ್ಞಾನ’ ಎಂಬ ಲೇಖನವನ್ನೇ ಬರೆದರು.(ಸಯನ್ಸ್, 2001;292:2536-45)

ಪರ್ಯಾಪ್ತ ಕೊಬ್ಬು ಅಥವಾ ಕೊಲೆಸ್ಟರಾಲ್ ಭರಿತ ಆಹಾರದ ಸೇವನೆಯಿಂದ ಆಧುನಿಕ ರೋಗಗಳು ಹೆಚ್ಚುವುದಿಲ್ಲ, ಬದಲಿಗೆ ಸಕ್ಕರೆಭರಿತವಾದ ಆಹಾರದಿಂದ ಹೆಚ್ಚುತ್ತವೆ ಎನ್ನುವುದಕ್ಕೆ ಗಟ್ಟಿಯಾದ ಆಧಾರಗಳು ಈಗ ಲಭ್ಯವಿವೆ. ಹಾವರ್ಡ್ ವಿದ್ಯಾಲಯವು ಮೂರು ಲಕ್ಷ ಅಮೆರಿಕನರಲ್ಲಿ ನಡೆಸಿದ ಅಧ್ಯಯನಗಳು, ನಾರ್ವೇ ವಿಶ್ವವಿದ್ಯಾಲಯದಲ್ಲಿ 52000 ವಯಸ್ಕರಲ್ಲಿ ನಡೆಸಲಾದ ಅಧ್ಯಯನ, ಆರು ಲಕ್ಷಕ್ಕೂ ಹೆಚ್ಚು ಜನರನ್ನೊಳಗೊಂಡಿದ್ದ 76 ಅಧ್ಯಯನಗಳ ಮಹಾವಿಮರ್ಶೆ, ಮೂರೂವರೆ ಲಕ್ಷ ಜನರನ್ನು 5-23 ವರ್ಷಗಳ ಕಾಲ ಗಮನಿಸಿದ್ದ 21 ಅಧ್ಯಯನಗಳ ಇನ್ನೊಂದು ವಿಮರ್ಶೆ ಕೆಲವು ಉದಾಹರಣೆಗಳಷ್ಟೇ.

ಇದೇ ಕಾರಣಕ್ಕೆ ಅಮೆರಿಕದ ಸರಕಾರವು ಕೊಬ್ಬಿನ ಮೇಲೆ ಹೊರಿಸಿದ್ದ ಮಿಥ್ಯಾಪವಾದವನ್ನು ಈಗ ಹಿಂಪಡೆಯಹೊರಟಿದೆ. ಆಹಾರದ ಕೊಲೆಸ್ಟರಾಲ್ ಪ್ರಮಾಣವನ್ನು ಪರಿಗಣಿಸಬೇಕಾಗಿಲ್ಲ ಎಂದು ಸ್ಪಷ್ಟವಾಗಿ ಹೇಳಿರುವುದರ ಜೊತೆಗೆ, ತರಕಾರಿಗಳು, ಜಲಚರಗಳು, ದ್ವಿದಳ ಧಾನ್ಯಗಳು, ಬೀಜಗಳು ಆರೋಗ್ಯಕ್ಕೆ ಒಳ್ಳೆಯವೆಂದೂ, ಕೆಂಪು ಮಾಂಸವನ್ನು ಹಿತಮಿತವಾಗಿ ಸೇವಿಸಬಹುದೆಂದೂ ಹೊಸ ಆಹಾರ ಮಾರ್ಗದರ್ಶಿಯ ಕರಡಿನಲ್ಲಿ ಹೇಳಲಾಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ, ಸಕ್ಕರೆ, ಸಿಹಿತಿನಿಸುಗಳು, ಪೇಯಗಳು ಹಾಗೂ ಸಂಸ್ಕರಿತ ಧಾನ್ಯಗಳ ಸಿದ್ಧತಿನಿಸುಗಳು ಎಲ್ಲಾ ಆಧುನಿಕ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತವೆ ಎಂದು ಅದರಲ್ಲಿ ಹೇಳಲಾಗಿದೆ. ಆ ಮೂಲಕ, ಕೊಬ್ಬಿಗಿಂತ ಸಕ್ಕರೆಯೇ ಮನುಷ್ಯನ ಆದ್ಯ ವೈರಿ ಎನ್ನುವುದನ್ನು ಕೊನೆಗೂ ಒಪ್ಪಿಕೊಂಡಂತಾಗಿದೆ. ನೀವಿನ್ನು ಸಕ್ಕರೆಯನ್ನು ವರ್ಜಿಸಿದರಾಯಿತು, ತೆಂಗಿನೆಣ್ಣೆ, ಬೆಣ್ಣೆ, ಮೊಟ್ಟೆ, ಮೀನು ತಿನ್ನಬಹುದು!

ಸಸ್ಯಾಹಾರ ದಿನದಂದು ಆಗಲಿ ಸತ್ಯಶೋಧನೆ

ಆರೋಗ್ಯ ಪ್ರಭ: ಸಸ್ಯಾಹಾರ ದಿನದಂದು ಆಗಲಿ ಸತ್ಯಶೋಧನೆ [ಕನ್ನಡ ಪ್ರಭ, ಅಕ್ಟೋಬರ್ 1, 2015, ಗುರುವಾರ]

ಮೀನು, ಮಾಂಸ, ಮೊಟ್ಟೆಗಳನ್ನು ತಿಂದು ಮನುಷ್ಯರಾದವರು ಮತ್ತೆ ಸಸ್ಯಾಹಾರಿಗಳಾಗುವುದೆಂದರೆ ಜೀವವಿಕಾಸವನ್ನು 30-40 ಲಕ್ಷ ವರ್ಷ ಹಿನ್ನಡೆಸಿದಂತೆ, ಗಳಿಸಿದ ಮನೋದೈಹಿಕ ಸಾಮರ್ಥ್ಯಗಳನ್ನು ನಿರಾಕರಿಸಿದಂತೆ. ಹಾಗಾಗಿ, ಮನುಷ್ಯರನ್ನು ಸಂಪೂರ್ಣ ಸಸ್ಯಾಹಾರಿಗಳಾಗುವಂತೆ ಪ್ರೇರೇಪಿಸುವುದರಿಂದ ಲಾಭಕ್ಕಿಂತ ಹೆಚ್ಚು ನಷ್ಟವೇ ಆಗಬಹುದು.

ಇಂದು, ಅಕ್ಟೋಬರ್ 1, ವಿಶ್ವ ಸಸ್ಯಾಹಾರ ದಿನ. ರಾಷ್ಟ್ರೀಯ ಆರೋಗ್ಯ ಜಾಲಕಿಂಡಿಯನುಸಾರ, ಸಸ್ಯಾಹಾರದ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಿ, ಜನರನ್ನು ಸಸ್ಯಾಹಾರಿಗಳಾಗುವಂತೆ ಪ್ರೇರೇಪಿಸುವುದು ಈ ದಿನಾಚರಣೆಯ ಉದ್ದೇಶ. ಆದರೆ ಮನುಷ್ಯರ ವಿಕಾಸ, ದೇಹದ ರಚನೆ ಮತ್ತು ಕ್ರಿಯೆಗಳು, ಆಹಾರದ ಒಳಿತು-ಕೆಡುಕುಗಳು ಎಲ್ಲವೂ ಶತಸಿದ್ಧಗೊಳ್ಳುತ್ತಿರುವಾಗ, ಶೇ. 95ರಷ್ಟಿರುವ ಮಿಶ್ರಾಹಾರಿ ಮನುಷ್ಯರನ್ನು ಸಸ್ಯಾಹಾರಿಗಳಾಗುವಂತೆ ಉತ್ತೇಜಿಸುವುದು ಫಲದಾಯಕವೇ?

ಭೂಮಿಯ ಮೇಲೆ ಈಗಿರುವ ಎಲ್ಲಾ ಮನುಷ್ಯರೂ ಹೋಮೋ ಸಾಪಿಯನ್ಸ್ ಸಾಪಿಯೆನ್ಸ್ ಎಂಬ ಪ್ರಾಣಿಗಳು; ಎರಡು ಲಕ್ಷ ವರ್ಷಗಳ ಹಿಂದೆ ಆಫ್ರಿಕಾದ ಸೀಳು ಕಣಿವೆಗಳಲ್ಲಿ ವಿಕಾಸ ಹೊಂದಿದವರ ಸಂತಾನದವರು. ಎಲ್ಲಾ ಮನುಜರ ನಡುವೆ ಶೇ. 99.9ರಷ್ಟು ಸಾಮ್ಯತೆ (ಹೊರಚಹರೆಯಷ್ಟೇ ಬೇರೆ) [Science 2002;298(5602):2381]; ನಾವೆಲ್ಲರೂ ಒಂದೇ ಜಾತಿ, ಒಂದೇ ಮತ, ಒಂದೇ ಕುಲ.

ಸಸ್ಯಾಹಾರಿ ವಾನರರು ಮಿಶ್ರಾಹಾರಿ ಮಾನವರಾಗುವುದಕ್ಕೆ 30-40 ಲಕ್ಷ ವರ್ಷಗಳೇ ಬೇಕಾದವು.[Science 2014;345(6192):1236828] ಪರಿಸರದ ವೈಪರೀತ್ಯಗಳಿಂದ, ಅದರಲ್ಲೂ 26 ಲಕ್ಷ ವರ್ಷಗಳ ಹಿಂದೆ ತೊಡಗಿದ ಹಿಮಯುಗದಿಂದ, ಸಸ್ಯರಾಶಿಯು ಬಾಧಿತವಾದಾಗ ನಮ್ಮ ಪೂರ್ವಜರಿಗೆ ಆಹಾರವು ದುರ್ಲಭವಾಯಿತು. ಆಗ ಸೀಳು ಕಣಿವೆಯ ಕೊಳ್ಳಗಳಿದ್ದ ಮೀನು, ಆಮೆ, ಮೊಸಳೆ ಮುಂತಾದ ಜಲಚರಗಳನ್ನು ತಿನ್ನಬೇಕಾಯಿತು, ಅದರಿಂದಾಗಿ ಮಿದುಳು ಬಲಿಯಿತು.[PNAS 2010;107(2):10002, Quat Sci Rev, 2014;101:1] ಮಿದುಳು ಬೆಳೆದಂತೆ ಬೇಟೆಯಾಡುವ ಕೌಶಲವೂ ಬೆಳೆಯಿತು, ಪ್ರಾಣಿ-ಪಕ್ಷಿಗಳ ಮಾಂಸವೂ ದಕ್ಕಿತು. ಆಹಾರವಸ್ತುಗಳನ್ನು ಜಜ್ಜಿ ಮೆದುಗೊಳಿಸಿ, ಬೆಂಕಿಯಲ್ಲಿ ಬೇಯಿಸಿ, ತಿನ್ನತೊಡಗಿದ್ದರಿಂದ ಅವು ಸುಲಭವಾಗಿ ಜೀರ್ಣಗೊಂಡು ಇನ್ನಷ್ಟು ಪೌಷ್ಠಿಕಾಂಶಗಳು ದೊರೆಯುವಂತಾಯಿತು. ಇವೆಲ್ಲವುಗಳಿಂದ ಪಚನಾಂಗ ಕಿರಿದಾಯಿತು, ಮಿದುಳು ಹಿಗ್ಗಿ ಅತಿ ಸಂಕೀರ್ಣವಾಯಿತು, ದೇಹ ದೊಡ್ಡದಿದ್ದರೂ ಹೆಚ್ಚು ಸಕ್ರಿಯವಾಯಿತು, ಉನ್ನತ ಸಾಮಾಜಿಕ ಕೌಶಲಗಳನ್ನು ಬೆಳೆಸಿಕೊಳ್ಳುವುದಕ್ಕೂ ಸಾಧ್ಯವಾಯಿತು.[Evol Anthro: Iss, News, Rev 1999;8(1):11, Comp Biochem Phys 2003;136(1):35, Science 2007;316:1558, Annu Rev Nutr 2010;30:291] ಮಾಂಸಾಹಾರವು ಆದಿಮಾನವರ ಸಂತಾನಶಕ್ತಿಯನ್ನೂ ಹೆಚ್ಚಿಸಿತು; ಚಿಂಪಾಂಜಿಗಳ ಆಯುಸ್ಸು 60 ವರ್ಷ, ಮಕ್ಕಳಿಗೆ ಮೊಲೆಯೂಡಿಸುವ ಅವಧಿ 4-5 ವರ್ಷಗಳಿರುವಲ್ಲಿ, ಮನುಷ್ಯರ ಆಯುಸ್ಸು 120 ವರ್ಷ, ಮೊಲೆಯೂಡಿಸುವ ಅವಧಿ ಕೇವಲ 2 ವರ್ಷ 4 ತಿಂಗಳು ಆಗುವಂತಾಯಿತು.[PLoS ONE 2012;7(4):e32452]

ಮೀನು, ಮಾಂಸ, ಮೊಟ್ಟೆಗಳನ್ನು ತಿಂದು ಮನುಷ್ಯರಾದವರು ಮತ್ತೆ ಸಸ್ಯಾಹಾರಿಗಳಾಗುವುದೆಂದರೆ ಜೀವವಿಕಾಸವನ್ನು 30-40 ಲಕ್ಷ ವರ್ಷ ಹಿನ್ನಡೆಸಿದಂತೆ, ಗಳಿಸಿದ ಮನೋದೈಹಿಕ ಸಾಮರ್ಥ್ಯಗಳನ್ನು ನಿರಾಕರಿಸಿದಂತೆ. ಶಿಶುಗಳು ಹಾಗೂ ಮಕ್ಕಳ ಮನೋದೈಹಿಕ ಬೆಳವೆಣಿಗೆಗೆ ಪ್ರೊಟೀನು, ಮೇದಸ್ಸುಗಳು ಇಂದಿಗೂ ಬೇಕು; ದಿನವಿಡೀ ತಿನ್ನಬಲ್ಲ ಶ್ರೀಮಂತರ ಮಕ್ಕಳಿಗೆ ಇವು ಸಸ್ಯಾಹಾರದಿಂದ ಸಿಕ್ಕರೂ, ಬಡತನದಲ್ಲಿರುವವರಿಗೆ ಮೊಟ್ಟೆ-ಮಾಂಸಗಳಿಂದಲೇ ಸಿಗಬೇಕು.[J Nutr 2003;133(11):3886S] ರಾಜಸಿಕ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಮಾಂಸಾಹಾರವೊಂದೇ ದಾರಿಯಾಗಿದೆ, ಹಗಲಿರುಳು ದುಡಿಯುವ ಜನರನ್ನು ಸಸ್ಯಾಹಾರಿಗಳಾಗುವಂತೆ ಬಲಾತ್ಕರಿಸಿದರೆ ದೇಶದ ಸ್ವಾತಂತ್ರ್ಯವೇ ನಾಶವಾಗುತ್ತದೆ ಎಂದು ಸ್ವಾಮಿ ವಿವೇಕಾನಂದರೂ ಹೇಳಿದ್ದರು.[ಸಂಪೂರ್ಣ ಕೃತಿಗಳು, 4;486]

ಎರಡು ಲಕ್ಷ ವರ್ಷಗಳ ಹಿಂದೆ ಮಿಶ್ರಾಹಾರಿಗಳಾಗಿ ವಿಕಾಸಗೊಂಡ ಮನುಷ್ಯರು, ಹತ್ತು ಸಾವಿರ ವರ್ಷಗಳಿಂದೀಚೆಗೆ ಧಾನ್ಯಗಳನ್ನು ಬೆಳೆಸತೊಡಗಿದ ಬಳಿಕ ಸಸ್ಯಾಹಾರವನ್ನೇ ಹೆಚ್ಚು ಸೇವಿಸುವಂತಾಯಿತು; ಮಾಂಸಪ್ರಧಾನ ಆಹಾರವು ಧಾನ್ಯಪ್ರಧಾನ ಆಹಾರವಾಗಿ ಬದಲಾಯಿತು. ಹಳೆ ಶಿಲಾಯುಗದ ಆಹಾರದಲ್ಲಿ ಶೇ. 70ರಷ್ಟು ಮೀನು, ಮಾಂಸ, ಮೊಟ್ಟೆಗಳೂ, ಇನ್ನುಳಿದಂತೆ ತರಕಾರಿಗಳು, ಬೀಜಗಳು, ಗೆಡ್ಡೆಗಳು ಹಾಗೂ ಅಪರೂಪಕ್ಕೊಮ್ಮೆ ಕಾಡಿನ ಹಣ್ಣುಗಳೂ ಇರುತ್ತಿದ್ದವು. ಧಾನ್ಯಗಳು ಹಾಗೂ ಅವುಗಳನ್ನು ಅರೆದು ತಯಾರಿಸಿದ ಬ್ರೆಡ್ಡು ಇತ್ಯಾದಿಗಳ ಬಳಕೆ ಹೆಚ್ಚಿದಂತೆ ತರಕಾರಿಗಳೂ, ಮೀನು-ಮಾಂಸಗಳೂ ಬದಿಗೆ ಸರಿದವು. ಮೂರು ಸಾವಿರ ವರ್ಷಗಳಿಂದೀಚೆಗೆ ಸಕ್ಕರೆಯ ಬಳಕೆಯೂ ತೊಡಗಿ, ಕಳೆದ ಮುನ್ನೂರು ವರ್ಷಗಳಲ್ಲಿ 60-100 ಪಟ್ಟು ಹೆಚ್ಚಿತು. ಮಾಂಸಜನ್ಯ ಕೊಲೆಸ್ಟರಾಲ್ ಹಾಗೂ ಪರ್ಯಾಪ್ತ ಮೇದಸ್ಸು ಹೃದ್ರೋಗಕ್ಕೆ ಕಾರಣವೆಂದು 1955ರಿಂದ ಹೇಳತೊಡಗಿದ ಬಳಿಕ, ಅದರಲ್ಲೂ 1980ರಲ್ಲಿ ಅಮೆರಿಕದ ಸರಕಾರವು ಪ್ರಕಟಿಸಿದ ಆಹಾರಸೂಚಿಯಲ್ಲಿ ಇವನ್ನು ಮಿತಿಗೊಳಿಸಬೇಕೆಂದು ಹೇಳಿದ ಬಳಿಕ, ಮೊಟ್ಟೆ-ಮಾಂಸಗಳ ಸೇವನೆಯು ಅಲ್ಪಪ್ರಮಾಣಕ್ಕಿಳಿಯತೊಡಗಿತು, ಧಾನ್ಯಗಳು, ಹಣ್ಣುಗಳು, ಸಕ್ಕರೆ ಹಾಗೂ ಹಾಲಿನ ಉತ್ಪನ್ನಗಳೆಂಬ ಸಸ್ಯಾಹಾರದ ಪ್ರಮಾಣವು ಶೇ. 70-80ಕ್ಕೇರಿತು.[Am J Clin Nutr 2000;71(3):682] ಈಗೀಗ ಪೌಷ್ಠಿಕತೆಗಿಂತ ರುಚಿಯೇ ಪ್ರಧಾನವಾಗಿ, ಸಂಸ್ಕರಿತ ಸಸ್ಯಾಹಾರಗಳೇ ಹೊಟ್ಟೆ ತುಂಬತೊಡಗಿವೆ.

ಸಸ್ಯಾಹಾರವು ಮನೋದೈಹಿಕ ಆರೋಗ್ಯಕ್ಕೆ ಪೂರಕವೆಂದು ಹೇಳಲಾಗುತ್ತಿದ್ದರೂ, ವಾಸ್ತವವು ಬೇರೆಯೇ ಆಗಿದೆ. ಬ್ರೆಡ್ ಮುಂತಾದ ಧಾನ್ಯಾಹಾರದ ಸೇವನೆಯು ಹೆಚ್ಚಿದಂತೆ, ದಂತಕ್ಷಯ, ರಕ್ತನಾಳಗಳ ಕಾಯಿಲೆ ಮುಂತಾದ ರೋಗಗಳೂ ಕಾಣಿಸತೊಡಗಿದವು ಎನ್ನುವುದಕ್ಕೆ ಈಜಿಪ್ಟಿನ ಮಮ್ಮಿಗಳಲ್ಲೇ ಪುರಾವೆಗಳಿವೆ.[JAMA. 2009;302(19):2091] ಅಮೆರಿಕ ಸರಕಾರದ ಸಲಹೆಯಂತೆ ಮಾಂಸಾಹಾರವನ್ನು ಕಡಿತಗೊಳಿಸಿ, ಸಸ್ಯಾಹಾರವನ್ನು ಹೆಚ್ಚಿಸಿದ ಬಳಿಕ ಬೊಜ್ಜು, ಮಧುಮೇಹಗಳು ಮೂರು ಪಟ್ಟು ಹೆಚ್ಚಾಗಿವೆ, ಮಕ್ಕಳನ್ನೂ ಕಾಡತೊಡಗಿವೆ.

ಮಾಂಸ ಹಾಗೂ ಸೊಪ್ಪು-ತರಕಾರಿಗಳಿದ್ದ ಹಳೆ ಶಿಲಾಯುಗದ ಆಹಾರವು ಕರುಳಲ್ಲಿ ಮೆಲ್ಲಗೆ ಸಾಗಿ, ಅಲ್ಪಸ್ವಲ್ಪ ಜೀರ್ಣವಾಗಿ, ಶರ್ಕರಗಳನ್ನು ಅತಿ ನಿಧಾನವಾಗಿ ಬಿಡುಗಡೆಗೊಳಿಸುವಂತಿದ್ದರೆ, ಸಕ್ಕರೆ, ಹಣ್ಣಿನ ರಸ, ಸಂಸ್ಕರಿತ ಧಾನ್ಯಗಳೇ ತುಂಬಿರುವ ಆಧುನಿಕ ಆಹಾರವು ಕರುಳಲ್ಲಿ ಅತಿ ಬೇಗನೆ ಸಾಗಿ, ಅತಿ ಬೇಗನೆ ಜೀರ್ಣವಾಗಿ ರಕ್ತಕ್ಕೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಶರ್ಕರಾಂಶಗಳನ್ನು ಸೇರಿಸುತ್ತದೆ. ಹೀಗೆ ಸಸ್ಯಾಹಾರದಿಂದ ವಿಪರೀತ ಪ್ರಮಾಣದಲ್ಲಿ ರಕ್ತವನ್ನು ಸೇರುವ ಗ್ಲೂಕೋಸ್ ಹಾಗೂ ಫ್ರಕ್ಟೋಸ್ ಶರ್ಕರಾಂಶಗಳು ನಮ್ಮ ಉಪಾಪಚಯವನ್ನು ತೊಂದರೆಗೀಡು ಮಾಡಿ, ಆಧುನಿಕ ರೋಗಗಳಿಗೆ ಕಾರಣವಾಗುತ್ತವೆ ಎನ್ನುವುದೀಗ ದೃಢಗೊಳ್ಳುತ್ತಿದೆ.

ಮಾಂಸಾಹಾರದಲ್ಲಿರುವ ಮೇದಸ್ಸು ಹಾಗೂ ಪ್ರೊಟೀನುಗಳು ಘ್ರೆಲಿನ್ ಎಂಬ ಹಾರ್ಮೋನನ್ನು ತಗ್ಗಿಸಿ ಹಸಿವನ್ನು ಇಂಗಿಸುತ್ತವೆ, ಲೆಪ್ಟಿನ್ ಎಂಬ ಹಾರ್ಮೋನನ್ನು ಹೆಚ್ಚಿಸಿ ಸಂತೃಪ್ತಿಯನ್ನುಂಟು ಮಾಡುತ್ತವೆ. ಹಾಗೆಯೇ, ಪಚನಾಂಗದಿಂದ ಸ್ರವಿಸಲ್ಪಡುವ ಕೋಲೆಸಿಸ್ಟೋಕೈನಿನ್, ಜಿಎಲ್ ಪಿ – 1, ಪಿವೈವೈ ಗಳಂತಹ ಇನ್ನಿತರ ಸಂತೃಪ್ತಿಜನಕ ಹಾರ್ಮೋನುಗಳನ್ನೂ ಮಾಂಸಾಹಾರವೇ ಹೆಚ್ಚು ಪ್ರಚೋದಿಸುತ್ತದೆ. ಶರ್ಕರಗಳು ಇದಕ್ಕೆ ತದ್ವಿರುದ್ಧವಾಗಿ ವರ್ತಿಸುವುದರಿಂದ ಸಂತೃಪ್ತಿಯು ಕಡಿಮೆಯಾಗಿ, ಹಸಿವು ಹೆಚ್ಚಿ, ಪದೇ ಪದೇ ತಿನ್ನುವಂತಾಗುತ್ತದೆ.[J Clin Endo Metab 2004;89:2963, Br J Nutr 2015;113(4):574]

ಸಸ್ಯಾಹಾರವಾದ ಶರ್ಕರಗಳೇ ಶರಾಬಿನ ಮೂಲವಾಗಿದ್ದು, ಶರಾಬಿನಂತೆಯೇ ವರ್ತಿಸುತ್ತವೆ; ಅವು ಚಟವನ್ನುಂಟು ಮಾಡುವುದಷ್ಟೇ ಅಲ್ಲದೆ, ಯಕೃತ್ತಿಗೂ ಹಾನಿಯುಂಟು ಮಾಡುತ್ತವೆ.[Adv Nutr 2013;4:226] ಸಕ್ಕರೆ, ಹಣ್ಣಿನ ರಸ ಹಾಗೂ ಸಂಸ್ಕರಿತ ಧಾನ್ಯಗಳ ಅತಿ ಸೇವನೆಯಿಂದ ರಕ್ತದಲ್ಲಿ ಟ್ರೈಗ್ಲಿಸರೈಡ್, ಕೊಲೆಸ್ಟರಾಲ್ ಹಾಗೂ ಯೂರಿಕಾಮ್ಲಗಳು ಏರುತ್ತವೆ; ಬೊಜ್ಜು, ಮಧುಮೇಹ, ರಕ್ತದ ಏರೊತ್ತಡ, ಹೃದ್ರೋಗ, ಯಕೃತ್ತು, ಮಿದುಳು ಹಾಗೂ ಮೂತ್ರಪಿಂಡಗಳ ಕಾಯಿಲೆಗಳಿಗೂ, ಕ್ಯಾನ್ಸರ್ ಇತ್ಯಾದಿಗಳಿಗೂ ದಾರಿಯಾಗುತ್ತದೆ.[Am J Clin Nutr 2007;86:899, Physiol Rev 2010;90(1):23, Nature Rev Gastro Hepatol 2010;7:251, Nature 2012;482(7383):27, Am J Pub Health 2012;102(9):1630, Pediatric Obesity 2015;10.1111/ijpo.12048]

ಸಸ್ಯಾಹಾರವನ್ನು ಜೀರ್ಣಿಸಲು ಜೊಲ್ಲುರಸದಿಂದ ಹಿಡಿದು ದೊಡ್ಡ ಕರುಳೊಳಗಿನ ಶತಲಕ್ಷ ಕೋಟಿ ಸೂಕ್ಷ್ಮಾಣುಗಳು ಬೇಕಾಗುತ್ತವೆ. ಸಕ್ಕರೆಯ ಅತಿ ಸೇವನೆಯಿಂದ ಬಾಯಿ ಹಾಗೂ ಕರುಳೊಳಗಿನ ಸೂಕ್ಷ್ಮಾಣುಗಳಿಗೆ ತೊಂದರೆಯಾಗಿ ಹಲ್ಲು ಹಾಗೂ ಒಸಡಿನ ರೋಗಗಳಿಗೂ, ಹಲತರದ ಮನೋದೈಹಿಕ ಸಮಸ್ಯೆಗಳಿಗೂ ದಾರಿಯಾಗುತ್ತದೆ.[Diab Meta Syn Ob: Tar Ther. 2012;5:175, J Psych Res 2015;63:1]

ಶರ್ಕರಗಳು ಹಾಗೂ ಖಾದ್ಯತೈಲಗಳು ಆತಂಕ, ಖಿನ್ನತೆ, ಇಚ್ಛಿತ್ತ ವಿಕಲತೆ, ಗಮನ ಹೀನತೆ ಹಾಗೂ ಚಡಪಡಿಕೆ, ಕೋಪ ಹಾಗೂ ದಾಳಿಕೋರತನ ಮುಂತಾದ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಬಹುದೆಂದೂ, ಇದಕ್ಕಿದಿರಾಗಿ, ಮೀನಿನಂತಹ ಮಾಂಸಾಹಾರವು ಇವನ್ನು ತಡೆಯಬಲ್ಲದೆಂದೂ ಹಲವು ಅಧ್ಯಯನಗಳು ತೋರಿಸಿವೆ.[Biol Psych 1984;19(3):385, Dep Anx 2002;16:118, Eur J Clin Nutr 2004;58(1):24, Brit J Psych 2009;195(4):366, Inj Prev 2012;18(4):259, Am J Clin Nutr 2015;ajcn103846, PLoS One 2015;10(3):e0120220, J Health Psychol 2015;20(6):785]

ಸಸ್ಯಾಹಾರದ ಶರ್ಕರಗಳ ಅತಿ ಸೇವನೆಯೇ ಮನೋದೈಹಿಕ ರೋಗಗಳಿಗೆ ಕಾರಣವಾಗುತ್ತಿದೆಯೆನ್ನುವುದು ದೃಢಗೊಳ್ಳುತ್ತಿರುವಲ್ಲಿ, ಹಳೆ ಶಿಲಾಯುಗದ ಆಹಾರಕ್ರಮವನ್ನು ಈಗಲೂ ಅನುಸರಿಸುತ್ತಿರುವ ಬುಡಕಟ್ಟುಗಳಲ್ಲಿ ಅಂತಹಾ ರೋಗಗಳಿಲ್ಲವೆನ್ನುವುದೂ ಸ್ಪಷ್ಟವಾಗುತ್ತಿದೆ.[Scand J Nutr 2005;49 (2):75] ಅಲ್ಲದೆ, ಆಹಾರದಲ್ಲಿ ಶರ್ಕರಗಳನ್ನು ಗಣನೀಯವಾಗಿ ಕಡಿತಗೊಳಿಸಿದರೆ ಅಂತಹಾ ರೋಗಗಳನ್ನು ನಿಯಂತ್ರಿಸಲು ಸಾಧ್ಯವೆನ್ನುವುದನ್ನೂ ಹಲವು ಅಧ್ಯಯನಗಳು ತೋರಿಸಿವೆ.[Nutrition 2015;31(1):1] ಹಾಗಿರುವಾಗ, ಮನುಷ್ಯರನ್ನು ಸಸ್ಯಾಹಾರಿಗಳಾಗುವಂತೆ ಪ್ರೇರೇಪಿಸುವುದರಿಂದ ಲಾಭಕ್ಕಿಂತ ಹೆಚ್ಚು ನಷ್ಟವೇ ಆಗಬಹುದು.

ಕರುಳಿನ ಸೂಕ್ಷ್ಮಾಣುಗಳಲ್ಲಿದೆ ಎರಡನೇ ಮಿದುಳು

ಆರೋಗ್ಯ ಪ್ರಭ: ಕರುಳಿನ ಸೂಕ್ಷ್ಮಾಣುಗಳಲ್ಲಿದೆ ಎರಡನೇ ಮಿದುಳು [ಕನ್ನಡ ಪ್ರಭ, ಅಕ್ಟೋಬರ್ 15, 2015, ಗುರುವಾರ]

ನಮ್ಮ ಕರುಳಿನೊಳಗೆ ವಾಸಿಸುವ ಶತಲಕ್ಷ ಕೋಟಿ ಸೂಕ್ಷ್ಮಾಣುಗಳು ನಾವು ಜೀರ್ಣಿಸಲಾಗದ ಶರ್ಕರಗಳನ್ನು ಬಳಸಿಕೊಂಡು ಹಲಬಗೆಯ ವಿಶೇಷ ಸಂಯುಕ್ತಗಳನ್ನು ಸ್ರವಿಸುತ್ತವೆ. ಇವು ನಮ್ಮ ಮನಸ್ಥಿತಿಯ ಮೇಲೂ, ವರ್ತನೆಯ ಮೇಲೂ ಪ್ರಭಾವ ಬೀರುತ್ತವೆ. ಹಾಗಾಗಿ ಈ ಸೂಕ್ಷ್ಮಾಣುಗಳನ್ನು ಸುಸ್ಥಿತಿಯಲ್ಲಿಡಬೇಕಾದುದು ಅತಿ ಮುಖ್ಯ.

ಭಯ, ಆತಂಕ, ಪ್ರೀತಿ ಎಂಬಿತ್ಯಾದಿ ಭಾವನೆಗಳನ್ನು ಹೃದಯಕ್ಕೆ ಬದಲಾಗಿ ಕರುಳಿನೊಂದಿಗೆ ತಳುಕು ಹಾಕುವ ಕಾಲ ಬಂದಿದೆ. ಕರುಳು ಹಾಗೂ ಅದರೊಳಗಿನ ಶತಲಕ್ಷ ಕೋಟಿ ಸೂಕ್ಷ್ಮಾಣುಗಳು ಮಿದುಳಿನ ಮೇಲೆ ಪ್ರಭಾವ ಬೀರಿ ನಮ್ಮ ಭಾವನೆಗಳನ್ನೂ, ವರ್ತನೆಯನ್ನೂ ನಿರ್ಧರಿಸುತ್ತವಂತೆ!

ನಮ್ಮ ಪಚನಾಂಗಕ್ಕೆ ಅದರದ್ದೇ ಆದ ನರಮಂಡಲವಿದೆ. ಅದು ನಾವು ತಿಂದ ಆಹಾರದ ಗುಣಾವಗುಣಗಳನ್ನೂ, ಪಚನಾಂಗದ ಸಂವೇದನೆಗಳನ್ನೂ ಗ್ರಹಿಸುತ್ತದೆ, ಹಾಗೂ ಅದಕ್ಕನುಗುಣವಾಗಿ ಕರುಳಿನ ಚಲನೆಯನ್ನೂ, ಸ್ರಾವಗಳನ್ನೂ ನಿಯಂತ್ರಿಸುತ್ತದೆ. ಮುಂಗರುಳಿನುದ್ದಕ್ಕೂ ಹುದುಗಿರುವ ವಿಶೇಷ ಗ್ರಾಹಿಗಳಿಂದ ಸ್ರವಿಸಲ್ಪಡುವ ವಿವಿಧ ಪೆಪ್ಟೈಡ್ ಹಾರ್ಮೋನುಗಳು ಇದಕ್ಕೆ ಪೂರಕವಾಗಿ ಕೆಲಸ ಮಾಡುತ್ತವೆ. ಪಚನಾಂಗದ ಈ ಆಗುಹೋಗುಗಳೆಲ್ಲವೂ ಕರುಳಿನ ನರಗಳು ಹಾಗೂ ಪೆಪ್ಟೈಡುಗಳ ಮೂಲಕ ಸುಪ್ತವಾಗಿ ಮಿದುಳಿಗೆ ತಿಳಿಯುತ್ತಿರುತ್ತವೆ; ಇವುಗಳ ಆಧಾರದಲ್ಲಿ ಮಿದುಳು ನಮ್ಮ ಹಸಿವು-ಸಂತೃಪ್ತಿಗಳನ್ನೂ, ಪಚನಾಂಗದ ಕಾರ್ಯಗಳನ್ನೂ ನಿಯಂತ್ರಿಸುತ್ತದೆ.

ಪ್ರತಿಯೋರ್ವ ಮನುಷ್ಯನ ಕರುಳಿನೊಳಗೆ, ಅದರಲ್ಲೂ ದೊಡ್ಡ ಕರುಳಿನೊಳಗೆ, 700-1000 ವಿಧಗಳಿಗೆ ಸೇರಿದ ಶತಲಕ್ಷ ಕೋಟಿ ಸೂಕ್ಷ್ಮಾಣುಗಳು ವಾಸಿಸುತ್ತವೆ. ನಮ್ಮ ಕರುಳು ಜೀರ್ಣಿಸಲಾಗದ, ಸೊಪ್ಪು-ತರಕಾರಿಗಳಲ್ಲೂ, ಮೂಳೆ-ಮಾಂಸಗಳಲ್ಲೂ ಇರುವ, ಕೆಲವು ಸಂಕೀರ್ಣ ಶರ್ಕರಗಳು ಈ ಸೂಕ್ಷ್ಮಾಣುಗಳಿಗೆ ಆಹಾರವಾಗುತ್ತವೆ; ಅವನ್ನು ಮೇದೋ ಆಮ್ಲಗಳಾಗಿ, ಅನ್ನಾಂಗಗಳಾಗಿ ಪರಿವರ್ತಿಸಿ, ತಾವೂ ಬದುಕಿಕೊಂಡು, ತಾವಿರುವ ಮನುಷ್ಯದೇಹಕ್ಕೂ ನೆರವಾಗುತ್ತವೆ.

ಸೂಕ್ಷ್ಮಾಣುಗಳೊಂದಿಗೆ ನಮ್ಮ ಸಹಬಾಳ್ವೆಯು ಹುಟ್ಟಿದಾಕ್ಷಣದಿಂದ ಆರಂಭಗೊಳ್ಳುತ್ತದೆ. ಮಗು ಹುಟ್ಟುತ್ತಲೇ ತಾಯಿಯ ದೇಹದಲ್ಲಿರುವ ಸೂಕ್ಷ್ಮಾಣುಗಳು ಮೈಯನ್ನು ಮೆತ್ತಿಕೊಳ್ಳುತ್ತವೆ, ಸ್ತನಪಾನದೊಂದಿಗೆ ಕರುಳಿನೊಳಕ್ಕೂ ಪ್ರವೇಶಿಸುತ್ತವೆ. ಮಗು ಬೆಳೆದಂತೆ ಇನ್ನೂ ಹಲವು ವಿಧಗಳ ಸೂಕ್ಷ್ಮಾಣುಗಳು ಕರುಳನ್ನು ಸೇರಿಕೊಳ್ಳುತ್ತವೆ. ಮಗುವಿನ ಪಚನಾಂಗ, ರೋಗರಕ್ಷಣಾ ವ್ಯವಸ್ಥೆ ಹಾಗೂ ಮಿದುಳಿನ ಬೆಳವಣಿಗೆಯಲ್ಲಿ ಈ ಸೂಕ್ಷ್ಮಾಣುಗಳಿಗೆ ಮಹತ್ವದ ಪಾತ್ರವಿದೆಯೆಂದು ಈಗ ಗುರುತಿಸಲಾಗಿದೆ.

ಸೂಕ್ಷ್ಮಾಣುಗಳು ಮನುಷ್ಯರಲ್ಲಿ ಮಾತ್ರವಲ್ಲ, ಇನ್ನಿತರ ಪ್ರಾಣಿಗಳಲ್ಲೂ ಸಹಬಾಳ್ವೆ ನಡೆಸುತ್ತವೆ. ಕೆಲವು ಸೂಕ್ಷ್ಮಾಣುಗಳು ಪ್ರಾಣಿಗಳ ನರಮಂಡಲದ ಮೇಲೆ ಪ್ರಭಾವ ಬೀರಿ, ಅವುಗಳ ವರ್ತನೆಯನ್ನೇ ಬದಲಾಯಿಸಿ, ತಮ್ಮ ಬೆಳವಣಿಗೆಯನ್ನು ಮುಂದುವರಿಸಲು ಅನುಕೂಲ ಮಾಡಿಕೊಳ್ಳುತ್ತವೆ! ಉದಾಹರಣೆಗೆ, ಶಿಲೀಂಧ್ರವೊಂದು ಮರದಲ್ಲಿ ಗೂಡು ಕಟ್ಟುವ ಬಡಗಿ ಇರುವೆಗಳನ್ನು ಹೊಕ್ಕಿ, ಅವುಗಳು ಆಯ ತಪ್ಪಿ ಗೂಡಿನಿಂದ ಹೊರಬೀಳುವಂತೆ ಮಾಡಿ, ಅವುಗಳ ತಲೆಯೊಳಗೆ ಬೆಳೆಯುತ್ತದೆ. ಕೆಲವು ಸೂಕ್ಷ್ಮಹುಳುಗಳು ಮಿಡತೆ ಹಾಗೂ ಇರುವೆಗಳೊಳಕ್ಕೆ ಹೊಕ್ಕಿ, ಅವನ್ನು ನೀರಲ್ಲಿ ಮುಳುಗುವಂತೆ ಮಾಡಿ, ತಾವೇ ನೀರಲ್ಲಿ ಬೆಳೆಯುತ್ತವೆ. ಟೋಕ್ಸೋಪ್ಲಾಸ್ಮಾ ಎಂಬ ಪರೋಪಜೀವಿಯು ಇಲಿಯ ಮಿದುಳೊಳಗೆ ಸೇರಿ, ಬೆಕ್ಕಿನ ಭಯವನ್ನು ನಿವಾರಿಸಿ, ಬೆಕ್ಕಿಗೆ ಸುಲಭವಾಗಿ ಸಿಗುವಂತೆ ಮಾಡಿ, ಆ ಮೂಲಕ ಬೆಕ್ಕಿನ ದೇಹವನ್ನು ಪ್ರವೇಶಿಸಿ ಅಲ್ಲಿ ಬೆಳೆಯುತ್ತದೆ!

ನಮ್ಮ ಕರುಳೊಳಗಿರುವ ಸೂಕ್ಷ್ಮಾಣುಗಳು ನಮ್ಮ ಮಿದುಳಿನ ಮೇಲೆ ಅದೆಂತಹ ಪರಿಣಾಮಗಳನ್ನುಂಟು ಮಾಡುತ್ತವೆ ಎನ್ನುವ ಬಗ್ಗೆ ಬಹು ಆಸಕ್ತಿದಾಯಕವಾದ ಅಧ್ಯಯನಗಳೀಗ ನಡೆಯುತ್ತಿವೆ. ಕರುಳೊಳಗಿನ ನೂರು ಲಕ್ಷ ಕೋಟಿ ಸೂಕ್ಷ್ಮಾಣುಗಳ ಒಟ್ಟು ತೂಕವು ಒಂದೂವರೆ ಕಿಲೋಗ್ರಾಂನಷ್ಟಿದ್ದು, ನಮ್ಮ ಮಿದುಳಿಗೆ ಸರಿದೂಗುತ್ತದೆ. ಈ ಸೂಕ್ಷ್ಮಾಣುಗಳು ಸ್ರವಿಸುವ ಹಲತರದ ಸಂಯುಕ್ತಗಳು ಕರುಳಿನ ಮೇಲೂ, ಅಲ್ಲಿರುವ ನರಗಳ ಮೇಲೂ, ಆ ಮೂಲಕ ಮಿದುಳಿನ ಮೇಲೂ ಪ್ರಭಾವ ಬೀರುತ್ತವೆ ಎನ್ನುವುದನ್ನು ಹಲವು ಅಧ್ಯಯನಗಳು ತೋರಿಸಿವೆ. ಅಂದರೆ ನಮ್ಮ ಕರುಳೊಳಗಿನ ಸೂಕ್ಷ್ಮಾಣುಗಳು ನಮ್ಮ ಭಾವನೆಗಳ ಮೇಲೂ, ವರ್ತನೆಯ ಮೇಲೂ ಪ್ರಭಾವ ಬೀರುವ ಎರಡನೇ ಮಿದುಳಿನಂತೆ ಕಾರ್ಯಾಚರಿಸುತ್ತವೆ!

ಮಗು ಜನಿಸಿದಾಗ ಮಿದುಳು ಇನ್ನೂ ಅಪಕ್ವವಾಗಿರುತ್ತದೆ. ತಾಯಿಯ ಎದೆಹಾಲಿನಲ್ಲಿ ತುಂಬಿರುವ ಹಲವು ವಿಶಿಷ್ಠ ಸಂಯುಕ್ತಗಳು ಮಗುವಿನ ಮಿದುಳನ್ನು ಪೋಷಿಸಿ ಬೆಳೆಸುತ್ತವೆ. ಸ್ತನಪಾನದ ಮೂಲಕ ಕರುಳನ್ನು ಸೇರುವ ಸೂಕ್ಷ್ಮಾಣುಗಳು ಕೂಡ ಮಗುವಿನ ಮಿದುಳಿನ ಬೆಳವಣಿಗೆಗೆ ನೆರವಾಗುತ್ತವೆ. ನವಮಾಸ ತುಂಬಿದ, ಸಹಜವಾಗಿ ಹೆರಿಗೆಯಾದ, ಎದೆಹಾಲನ್ನಷ್ಟೇ ಕುಡಿದ, ಪ್ರತಿಜೈವಿಕಗಳನ್ನು ಸೇವಿಸದ ಶಿಶುಗಳಲ್ಲಿ ಸೂಕ್ಷ್ಮಾಣುಗಳ ಬೆಳವಣಿಗೆಯು ಅತ್ಯುತ್ತಮವಾಗಿರುತ್ತದೆ, ಇದೇ ಕಾರಣಕ್ಕೆ ಮಿದುಳಿನ ಪೋಷಣೆಯೂ ಚೆನ್ನಾಗಿ ನಡೆಯುತ್ತದೆ. ಡಬ್ಬದ ಪುಡಿ ಹಾಗೂ ಪಶುವಿನ ಹಾಲುಗಳು ಮಾನವ ಶಿಶುವಿನ ಮಿದುಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವುದಿಲ್ಲ, ಮಾತ್ರವಲ್ಲ, ಸ್ತನಪಾನದಿಂದ ದೊರೆಯುವ ಸೂಕ್ಷ್ಮಾಣುಗಳನ್ನೂ ಒದಗಿಸುವುದಿಲ್ಲ. ಪಶುವಿನ ಹಾಲು ಅದರ ಕರುಗಳಿಗಷ್ಟೇ ಸೂಕ್ತ, ನಮ್ಮ ಶಿಶುಗಳಿಗಲ್ಲ.

ನರಮಂಡಲದಲ್ಲಿ ವಾಹಕಗಳಾಗಿ ವರ್ತಿಸುವ ಸೆರೊಟೊನಿನ್, ಗಾಬಾ, ಡೋಪಮಿನ್, ನಾರ್ ಎಪಿನೆಫ್ರಿನ್ ಮುಂತಾದ ಸಂಯುಕ್ತಗಳನ್ನು ಕರುಳೊಳಗಿನ ಸೂಕ್ಷ್ಮಾಣುಗಳು ಕೂಡ ಸ್ರವಿಸುತ್ತವೆ; ನಮ್ಮ ದೇಹದಲ್ಲಿರುವ ಶೇ. 90ರಷ್ಟು ಸೆರೊಟೊನಿನ್ ಹಾಗೂ ಶೇ. 50ರಷ್ಟು ಡೋಪಮಿನ್ ಕರುಳಿನಲ್ಲೇ ಉತ್ಪತ್ತಿಯಾಗುತ್ತದೆ. ಈ ಸೂಕ್ಷ್ಮಾಣುಗಳು ಆಹಾರದ ಶರ್ಕರಗಳನ್ನು ಒಡೆದು ಬಿಡುಗಡೆಗೊಳಿಸುವ ಬ್ಯುಟಿರೇಟ್, ಪ್ರೊಪಿಯೋನೇಟ್, ಅಸಿಟೇಟ್ ಮುಂತಾದ ಕಿರು ಮೇದೋ ಆಮ್ಲಗಳು ಕೂಡ ಮಿದುಳಿನ ಮೇಲೆ ಪ್ರಭಾವ ಬೀರುತ್ತವೆ. ಈ ಸಂಯುಕ್ತಗಳು ಮಿದುಳಿನ ನರವರ್ಧಕ ಪ್ರೊಟೀನ್ (ಬಿಡಿಎನ್ಎಫ್) ಅನ್ನು ಪ್ರಚೋದಿಸುವ ಮೂಲಕ ನರಕೋಶಗಳನ್ನು ಸುಸ್ಥಿತಿಯಲ್ಲಿರಿಸುವುದಕ್ಕೆ ಹಾಗೂ ಹೊಸ ನರಕೋಶಗಳನ್ನು ಬೆಳೆಸುವುದಕ್ಕೆ ನೆರವಾಗುತ್ತವೆ. ನವಜಾತ ಶಿಶುವಿನ ಮಿದುಳಿನಲ್ಲಿ ಅರಿಯುವಿಕೆ, ನೆನಪು, ಸಾಮಾಜಿಕ ಚಟುವಟಿಕೆ ಮುಂತಾದ ಮೂಲಭೂತ ಕಾರ್ಯಗಳಿಗೆ ಸಂಬಂಧಿಸಿದ ಭಾಗಗಳ ಬೆಳವಣಿಗೆಯಲ್ಲಿ ಬಿಡಿಎನ್ಎಫ್ ಹಾಗೂ ಇತರ ಸೂಕ್ಷ್ಮಾಣುಜನ್ಯ ಸಂಯುಕ್ತಗಳು ಮಹತ್ವದ ಪಾತ್ರ ವಹಿಸುತ್ತವೆ ಎನ್ನಲಾಗಿದೆ.

ಒತ್ತಡ, ಭಯ, ಆತಂಕಗಳ ನಿಭಾವಣೆ, ಸಾಮಾಜಿಕ ಪ್ರತಿಸ್ಪಂದನ, ನಿರ್ಧರಿಸುವ ಜಾಣ್ಮೆ, ಹಸಿವು-ಸಂತೃಪ್ತಿಗಳ ನಿಯಂತ್ರಣ ಇತ್ಯಾದಿ ಸಾಮರ್ಥ್ಯಗಳ ಬೆಳವಣಿಗೆಯೂ ತಾಯಿಯ ಆರೈಕೆ, ಎದೆಹಾಲಿನ ಪ್ರಮಾಣ ಹಾಗೂ ಕರುಳಿನ ಸೂಕ್ಷ್ಮಾಣುಗಳ ಸ್ಥಿತಿಗತಿಗಳನ್ನು ಅವಲಂಬಿಸಿರುತ್ತದೆ. ಕರುಳೊಳಗೆ ಪರಸ್ಪರ ಸಹಜೀವನ ನಡೆಸುವ ನೂರಾರು ಜಾತಿಯ ಸೂಕ್ಷ್ಮಾಣುಗಳು ಮನುಷ್ಯರಲ್ಲೂ ಸಾಮಾಜಿಕ ಸಹಬಾಳ್ವೆ ಹಾಗೂ ಪ್ರತಿಸ್ಪಂದನಗಳ ಸ್ವಭಾವವನ್ನು ಬೆಳೆಸುತ್ತವೆ ಎನ್ನಲಾಗಿದೆ. ಮನುಷ್ಯರೊಳಗಿನ ಇಂತಹ ಸಹಬಾಳ್ವೆಯು ಈ ಸೂಕ್ಷ್ಮಾಣುಗಳ ಹರಡುವಿಕೆಗೆ (ತಾಯಿಂದ ಮಗುವಿಗೆ, ಆಹಾರದ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ) ನೆರವಾಗುವುದರಿಂದ ಸೂಕ್ಷ್ಮಾಣುಗಳಿಗೂ ಅದರಿಂದ ಲಾಭವಾಗುತ್ತದೆ! ಎಳವೆಯಲ್ಲಿ ಇಂತಹ ಬೆಳವಣಿಗೆಯಲ್ಲಿ ಲೋಪಗಳಾದರೆ ಜೀವನವಿಡೀ ಸಮಸ್ಯೆಗಳಾಗುವ ಸಾಧ್ಯತೆಗಳಿವೆ.

ಸಾಮಾಜಿಕ ಪ್ರತಿಸ್ಪಂದನೆಗೆ ತೊಡಕುಂಟಾಗುವ ಸ್ವಲೀನತೆಯಂತಹ (ಆಟಿಸಂ) ಸಮಸ್ಯೆಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವುದಕ್ಕೆ ಕರುಳಿನ ಸೂಕ್ಷ್ಮಾಣುಗಳಲ್ಲಾಗುವ ವ್ಯತ್ಯಯಗಳೇ ಕಾರಣವಾಗಿರಬಹುದೆಂದು ಈಗ ತರ್ಕಿಸಲಾಗುತ್ತಿದೆ. ಆಧುನಿಕ ಸಸ್ಯಾಹಾರದ (ಸಕ್ಕರೆ, ಸಂಸ್ಕರಿತ ಧಾನ್ಯಗಳು) ಅತಿಸೇವನೆ, ಗರ್ಭಿಣಿಯರಲ್ಲೂ, ಶಿಶುಗಳಲ್ಲೂ ಪ್ರತಿಜೈವಿಕಗಳ ಅತಿಬಳಕೆ ಇತ್ಯಾದಿಗಳಿಂದ ಶಿಶುಗಳಲ್ಲಿ ಸೂಕ್ಷ್ಮಾಣುಗಳ ಬೆಳವಣಿಗೆಗೆ ತೊಂದರೆಯಾಗಿ, ಮಿದುಳಿನ ಬೆಳವಣಿಗೆಯಲ್ಲಿ ನ್ಯೂನತೆಗಳಾಗಬಹುದೆಂದು ಹೇಳಲಾಗುತ್ತಿದೆ. ಸ್ವಲೀನತೆಯ ಸಮಸ್ಯೆಯುಳ್ಳ ಹೆಚ್ಚಿನ ಮಕ್ಕಳಲ್ಲಿ ಪಚನಾಂಗದ ಸಮಸ್ಯೆಗಳೂ ಸಾಮಾನ್ಯವಾಗಿರುವುದು ಈ ವಾದವನ್ನು ಪುಷ್ಠೀಕರಿಸುವಂತಿದೆ.

ಕರುಳಿನಲ್ಲಿರುವ ಸೂಕ್ಷ್ಮಾಣುಗಳಿಗೆ ಇಷ್ಟವಾದ ಆಹಾರವನ್ನೇ ಮನುಷ್ಯರು ತಿನ್ನುವಂತೆ ಅವು ಪ್ರಭಾವ ಬೀರುವ ಸಾಧ್ಯತೆಗಳೂ ಇವೆ. ಒಂದೇ ಥರದ ಆಹಾರವನ್ನು ಹೆಚ್ಚಾಗಿ ಸೇವಿಸುವವರಲ್ಲಿ ಆ ಆಹಾರಕ್ಕೆ ಸರಿಹೊಂದುವ ಸೂಕ್ಷ್ಮಾಣುಗಳು ಹೆಚ್ಚಿನ ಸಂಖ್ಯೆಯಲ್ಲಿ ವೃದ್ಧಿಯಾಗುತ್ತವೆ. ಅಂಥವರು ತಮ್ಮ ಆಹಾರವನ್ನು ಬದಲಿಸಿದರೆ ಆ ಸೂಕ್ಷ್ಮಾಣುಗಳು ಕಷ್ಟಕ್ಕೀಡಾಗುತ್ತವೆ, ವಿಷಕಾರಿ ಸಂಯುಕ್ತಗಳನ್ನು ಸ್ರವಿಸತೊಡಗುತ್ತವೆ. ಇದರಿಂದ ರುಚಿ ಕೆಡುತ್ತದೆ, ಅನಾರೋಗ್ಯದ ಅನುಭವವೂ, ಬೇಸರಿಕೆಯೂ ಉಂಟಾಗುತ್ತದೆ; ತ್ಯಜಿಸಿದ್ದ ಆಹಾರವನ್ನು ಮತ್ತೆ ತಿನ್ನಬೇಕಾದ ಒತ್ತಡವುಂಟಾಗುತ್ತದೆ. ವಿಪರೀತವಾಗಿ ಸಕ್ಕರೆ-ಸಿಹಿಗಳನ್ನು ತಿನ್ನುವವರು ಅವನ್ನು ತ್ಯಜಿಸಿದಾಗ ಕಷ್ಟಕ್ಕೀಡಾಗಿ ಮತ್ತೆ ಸಕ್ಕರೆ-ಸಿಹಿಯ ದಾಸ್ಯಕ್ಕೆ ಬೀಳುವುದು ಹೀಗೆಯೇ.

ವಯಸ್ಕರಲ್ಲಿಯೂ ಕರುಳೊಳಗಿನ ಸೂಕ್ಷ್ಮಾಣುಗಳು ಏರುಪೇರಾದರೆ ಮನಸ್ಥಿತಿ ಹಾಗೂ ವರ್ತನೆಯ ಮೇಲೆ ಪರಿಣಾಮಗಳಾಗಬಹುದು. ಸಕ್ಕರೆ ಹಾಗೂ ಸಂಸ್ಕರಿತ ಧಾನ್ಯಗಳ ಸೇವನೆಯಿಂದ ಕರುಳಿನ ಸೂಕ್ಷ್ಮಾಣುಗಳಲ್ಲಾಗುವ ಬದಲಾವಣೆಗಳು ಖಿನ್ನತೆ, ಆತಂಕ ಮುಂತಾದ ಮಾನಸಿಕ ಸಮಸ್ಯೆಗಳಿಗೂ, ಬೊಜ್ಜು, ಮಧುಮೇಹ, ಹೃದ್ರೋಗ ಮುಂತಾದ ದೈಹಿಕ ಸಮಸ್ಯೆಗಳಿಗೂ ದಾರಿ ಮಾಡುತ್ತವೆ ಎನ್ನಲಾಗಿದೆ. ಟೋಕ್ಸೋಪ್ಲಾಸ್ಮ ಪರೋಪಜೀವಿಯಿಂದ ಸೂಕ್ಷ್ಮಾಣುಗಳಿಗೆ ತೊಂದರೆಯಾಗಿ, ಡೋಪಮಿನ್ ಸ್ರಾವದಲ್ಲಿ ಬದಲಾವಣೆಗಳಾಗಿ ಇಚ್ಛಿತ್ತ ವಿಕಲತೆಗೆ ಕಾರಣವಾಗಬಹುದೆಂಬ ಸಂದೇಹಗಳೂ ವ್ಯಕ್ತವಾಗಿವೆ. ಹಿರಿವಯಸ್ಕರಲ್ಲಿ ಕಂಡುಬರುವ ಅಲ್ಜೀಮರ್ಸ್ ಕಾಯಿಲೆ, ಪಾರ್ಕಿನ್ಸನ್ಸ್ ಕಾಯಿಲೆ ಮುಂತಾದ ಮಿದುಳಿನ ಸಮಸ್ಯೆಗಳಿಗೆ ಸೂಕ್ಷ್ಮಾಣುಮೂಲದ ಡೋಪಮಿನ್ ಇತ್ಯಾದಿ ಸಂಯುಕ್ತಗಳ ಕೊರತೆಯು ಕಾರಣವಿರಬಹುದೇ ಎಂಬ ಬಗ್ಗೆ ಅಧ್ಯಯನಗಳಾಗಬೇಕಿದೆ.

ನಮ್ಮ ಮಿದುಳಿನ ಮೇಲೂ, ಆ ಮೂಲಕ ನಮ್ಮ ಮನಸ್ಥಿತಿ ಹಾಗೂ ವರ್ತನೆಯ ಮೇಲೂ ಪ್ರಭಾವ ಬೀರಬಲ್ಲ ನಮ್ಮೊಳಗಿನ ಸೂಕ್ಷ್ಮಾಣುಗಳನ್ನು ಸುಸ್ಥಿತಿಯಲ್ಲಿಡಬೇಕಾದುದು ಅತಿ ಮುಖ್ಯ. ಸೊಪ್ಪು, ತರಕಾರಿಗಳನ್ನು ಹೆಚ್ಚು ಸೇವಿಸಿ ಒಳ್ಳೆಯ ಸೂಕ್ಷ್ಮಾಣುಗಳನ್ನು ವೃದ್ಧಿಸಬೇಕು, ಸಕ್ಕರೆ ಹಾಗೂ ಸಂಸ್ಕರಿತ ಧಾನ್ಯಗಳನ್ನು ವರ್ಜಿಸಿ ಕೆಟ್ಟ ಸೂಕ್ಷ್ಮಾಣುಗಳನ್ನು ತಡೆಯಬೇಕು. ಪ್ರತಿಜೈವಿಕಗಳು, ನೋವು ನಿವಾರಕಗಳು ಹಾಗೂ ಆಮ್ಲ ನಿರೋಧಕಗಳನ್ನು ಅತಿ ಕಡಿಮೆ ಬಳಸಬೇಕು. ಹೆಚ್ಚೆಚ್ಚು ಊರುಗಳಿಗೆ ಭೇಟಿಯಿತ್ತು, ಅಲ್ಲಿನ ನೀರು-ಆಹಾರಗಳ ಮೂಲಕ ಹೆಚ್ಚೆಚ್ಚು ಬಗೆಯ ಸೂಕ್ಷ್ಮಾಣುಗಳನ್ನು ಪಡೆಯಬೇಕು.