ಕೊಲೆಸ್ಟರಾಲನ್ನು ಬದಿಗಿಟ್ಟು ಕೊಲೆಸ್ಟರಾಲಿಗೆ ಚಿಕಿತ್ಸೆ

ಆರೋಗ್ಯ ಆಶಯ – ವಿಜಯ ಕರ್ನಾಟಕ: ಕೊಲೆಸ್ಟರಾಲನ್ನು ಬದಿಗಿಟ್ಟು ಕೊಲೆಸ್ಟರಾಲಿಗೆ ಚಿಕಿತ್ಸೆ [ಡಿಸೆಂಬರ್ 11, 2013, ಬುಧವಾರ] [ನೋಡಿ | ನೋಡಿ]

ರಕ್ತದ ಕೊಲೆಸ್ಟರಾಲ್ ಪ್ರಮಾಣಕ್ಕನುಗುಣವಾಗಿ ಸ್ಟಾಟಿನ್ ಔಷಧಗಳನ್ನು ಸೇವಿಸುವ ಅಗತ್ಯ ಇನ್ನಿಲ್ಲ

ಮಧ್ಯವಯಸ್ಕರ ಮಹಾಗುಮ್ಮ ಕೊಲೆಸ್ಟರಾಲ್. ಅದು ಹೆಚ್ಚಿದ್ದರೆ ಹೃದಯಾಘಾತ ಖಂಡಿತವೆಂದು ಹೆದರಿ ಬಹಳಷ್ಟು ಮಂದಿ ವರ್ಷಕ್ಕೆ 2-3 ಬಾರಿ ತಮ್ಮ ರಕ್ತದ ಕೊಲೆಸ್ಟರಾಲ್ ಅನ್ನು ಅಳೆಯುತ್ತಿರುತ್ತಾರೆ. ಅಂತಹಾ ಪರೀಕ್ಷೆಗಳಲ್ಲಿ ಕೊಲೆಸ್ಟರಾಲ್ ಮಟ್ಟವು ಒಂದಿಷ್ಟು ಹೆಚ್ಚಿದ್ದರೂ ಸಾಕು, ಅದನ್ನು ದಪ್ಪಕ್ಷರಗಳಲ್ಲಿ, ಅಡಿಗೆರೆ ಹಾಕಿ ಮುದ್ರಿಸಲಾಗುತ್ತದೆ. ಅದನ್ನು ಕಂಡಾಗಲೇ ಹೃದಯದ ಬಡಿತ ಕಿವಿಗೆ ಹತ್ತಿರವಾಗತೊಡಗುತ್ತದೆ. ಅಲ್ಲಿಂದ ಬಾಳಿನ ದಾರಿಯೇ ಬದಲಾಗಿ, ಆ ದಪ್ಪಕ್ಷರದ ಗುಮ್ಮನನ್ನು ತೆಳುವಾಗಿಸುವ ಹೋರಾಟ ಆರಂಭಗೊಳ್ಳುತ್ತದೆ.

ಇಂದು ಜಗತ್ತಿನ ಸುಮಾರು 30 ಕೋಟಿಗೂ ಹೆಚ್ಚು ಜನ, ಅಮೆರಿಕಾದಲ್ಲಿ 45 ವಯಸ್ಸಿಗೆ ಮೇಲ್ಪಟ್ಟವರಲ್ಲಿ ನಾಲ್ಕರಲ್ಲೊಬ್ಬರು, ಕೊಲೆಸ್ಟರಾಲ್ ಮಟ್ಟವನ್ನು ಕೆಳಗಿಳಿಸುವ ಸ್ಟಾಟಿನ್ ಇತ್ಯಾದಿ ಔಷಧಗಳನ್ನು ಪ್ರತಿನಿತ್ಯವೂ ಸೇವಿಸುತ್ತಾರೆ. ಈ ಔಷಧಗಳ ಜಾಗತಿಕ ವಹಿವಾಟು ವರ್ಷಕ್ಕೆ 155000 ಕೋಟಿ ರೂಪಾಯಿಗಳಷ್ಟು; ಎರಡೇ ಕಂಪೆನಿಗಳ ಎರಡೇ ಮಾತ್ರೆಗಳಿಗೆ ಅದರಲ್ಲಿ ಅರ್ಧದಷ್ಟು ಪಾಲು. ಭಾರತದಲ್ಲೂ ಅವುಗಳ ವಾರ್ಷಿಕ ವಹಿವಾಟು ರೂ. 350 ಕೋಟಿಗೂ ಹೆಚ್ಚು. ಅಂತಿರುವಲ್ಲಿ, ಜಗತ್ತಿನ ಎಲ್ಲ ಪ್ರಜೆಗಳೂ ತಮ್ಮ ರಕ್ತದ ಕೊಲೆಸ್ಟರಾಲ್ ಪ್ರಮಾಣವನ್ನು ಒಂದೇ ಮಟ್ಟಕ್ಕಿಳಿಸುವ ಅಗತ್ಯ ಇನ್ನಿಲ್ಲವೆಂದು ಇದೇ ನವೆಂಬರ್ 15ರಂದು ಘೋಷಿಸಲಾಗಿದೆ; ಕೊಲೆಸ್ಟರಾಲ್ ಪ್ರಮಾಣವನ್ನು ಕಟ್ಟುನಿಟ್ಟಾಗಿ ಇಂತಿಷ್ಟೇ ಮಟ್ಟಕ್ಕಿಳಿಸಿಕೊಳ್ಳುವುದರಿಂದ ವಿಶೇಷವಾದ ಲಾಭವಿಲ್ಲವೆಂದು ಹೇಳಲಾಗಿದೆ. ಅಂತಹಾ ನಿಯಂತ್ರಣದ ಅಗತ್ಯವಿದೆಯೆಂದು ಎಂಭತ್ತರ ದಶಕದಿಂದಲೂ ಸಲಹೆ ನೀಡುತ್ತಾ ಬಂದಿದ್ದವರೇ ಈಗ ಬೇಡವೆನ್ನುತ್ತಿದ್ದಾರೆ!

ರಕ್ತದಲ್ಲಿ ಕೊಲೆಸ್ಟರಾಲ್ ಪ್ರಮಾಣ ಎಷ್ಟಿರಬೇಕು, ಅದಕ್ಕೆ ಯಾವಾಗ ಚಿಕಿತ್ಸೆ ಬೇಕು ಇತ್ಯಾದಿಗಳನ್ನು ಹೇಳುವವರು ಯಾರು? ಅಮೆರಿಕಾದ ರಾಷ್ಟ್ರೀಯ ಆರೋಗ್ಯ ಸಂಸ್ಥೆಯಡಿಯಲ್ಲಿ ರಾಷ್ಟ್ರೀಯ ಹೃದಯ,ಶ್ವಾಸಾಂಗ ಹಾಗೂ ರಕ್ತ ಆರೋಗ್ಯ ಸಂಸ್ಥೆ ಎಂಬುದಿದೆ. ಹೃದ್ರೋಗಗಳು ಹಾಗೂ ರಕ್ತನಾಳಗಳ ಕಾಯಿಲೆಗಳ ಬಗ್ಗೆ ನಡೆಸಲಾಗುತ್ತಿರುವ ಅತ್ಯುನ್ನತ ಮಟ್ಟದ ಸಂಶೋಧನೆಗಳಿಗೆ ಈ ಸಂಸ್ಥೆಯ ಕೊಡುಗೆ ಪಾರವಿಲ್ಲದ್ದು. ಹಾಗಾಗಿ, ಈ ಸಂಸ್ಥೆಯಿಂದ ಹೊರಬರುವ ಸಲಹೆ-ಸೂಚನೆಗಳಿಗೆ ವಿಶೇಷವಾದ ಮಾನ್ಯತೆಯಿರುತ್ತದೆ. ರಾಷ್ಟ್ರೀಯ ಕೊಲೆಸ್ಟರಾಲ್ ಶಿಕ್ಷಣ ಕಾರ್ಯಕ್ರಮದ ಅಂಗವಾಗಿ 80ರ ದಶಕದಿಂದ ಇದುವರೆಗೆ ಈ ಸಂಸ್ಥೆಯಿಂದ ತಜ್ಞರ ನಾಲ್ಕು ಸಮಿತಿಗಳು (ಎಟಿಪಿ 1-4) ನೇಮಕಗೊಂಡಿದ್ದು, ಮೊನ್ನೆಯ ವರದಿಯು ಅವುಗಳಲ್ಲಿ ನಾಲ್ಕನೆಯದು.

ಕಾಲಕಾಲಕ್ಕೆ ಲಭ್ಯವಿರುವ ಹೊಸ ಸಂಶೋಧನೆಗಳ ಆಧಾರದಲ್ಲಿ ಈ ಸಮಿತಿಗಳು ಸಲಹೆಗಳನ್ನು ರೂಪಿಸುತ್ತವೆ. ಮೊದಲ ಎಟಿಪಿ ವರದಿಯಲ್ಲಿ (1988) ಹೃದ್ರೋಗವನ್ನು ತಡೆಯುವುದಕ್ಕಾಗಿ ಎಲ್ ಡಿ ಎಲ್ ಕೊಲೆಸ್ಟರಾಲ್ ಪ್ರಮಾಣವನ್ನು 130ಮಿಗ್ರಾಂ%ಗಿಂತ ಕೆಳಗಿಳಿಸಬೇಕೆಂದು ಹೇಳಿ, ಅದಕ್ಕಾಗಿ ಆಹಾರ ನಿಯಂತ್ರಣ ಹಾಗೂ ಔಷಧಗಳನ್ನು ಸೂಚಿಸಲಾಯಿತು. ಎರಡನೇ ಎಟಿಪಿ ವರದಿಯಲ್ಲಿ (1993),ಹೃದ್ರೋಗವುಳ್ಳವರು ಎಲ್ ಡಿ ಎಲ್ ಕೊಲೆಸ್ಟರಾಲ್ ಪ್ರಮಾಣವನ್ನು 100 ಮಿಗ್ರಾಂ%ಗೂ, ಇನ್ನುಳಿದವರು 130ಮಿಗ್ರಾಂ%ಗೂ ಇಳಿಸಿಕೊಳ್ಳಬೇಕೆಂದು ಹೇಳಲಾಯಿತು. ಮೂರನೇ ಎಟಿಪಿ ವರದಿಯಲ್ಲಿ (2002),ಕೊಲೆಸ್ಟರಾಲ್ ಜೊತೆಗೆ, ಧೂಮಪಾನ, ರಕ್ತದ ಏರೊತ್ತಡ ಇತ್ಯಾದಿಗಳಿಂದ ಹೃದ್ರೋಗದ ಅಪಾಯವು ಹೆಚ್ಚುಳ್ಳವರು ಕೂಡಾ ಈ ಔಷಧಗಳನ್ನು ಸೇವಿಸಬೇಕೆಂಬ ಸಲಹೆಯನ್ನು ಮುಂದಿಡಲಾಯಿತು. ಅದನ್ನು 2004ರಲ್ಲಿ ಪರಿಷ್ಕರಿಸಿ, ಹೃದ್ರೋಗವುಳ್ಳವರು ತಮ್ಮ ಎಲ್ ಡಿ ಎಲ್ ಕೊಲೆಸ್ಟರಾಲ್ ಪ್ರಮಾಣವನ್ನು 70 ಮಿಗ್ರಾಂ%ಗೆ ಇಳಿಸಿಕೊಳ್ಳಬೇಕೆಂದು ಸೂಚಿಸಲಾಯಿತು. ಈಗ ನವಂಬರ್ 15ರಂದು ಪ್ರಕಟವಾಗಿರುವ ಎಟಿಪಿ ನಾಲ್ಕನೇ ವರದಿಯಲ್ಲಿ ಕೊಲೆಸ್ಟರಾಲ್ ಮಟ್ಟವನ್ನು ಇಂತಿಷ್ಟೇ ಮಿಗ್ರಾಂಗಳಿಗೆ ಇಳಿಸಬೇಕೆಂಬ ಸಲಹೆಯನ್ನು ಕೈಬಿಡಲಾಗಿದೆ!

ಯಾಕೆ ಹೀಗೆ? ಈ ಹೊಸ ಸಮಿತಿಯು ಪರಿಶೀಲಿಸಿದ 25 ದೊಡ್ಡ ಅಧ್ಯಯನಗಳಲ್ಲಿ ಎಲ್ ಡಿ ಎಲ್ ಕೊಲೆಸ್ಟರಾಲ್ ಪ್ರಮಾಣವನ್ನು 100 ಅಥವಾ 70ಮಿಗ್ರಾಂ% ಮಟ್ಟಕ್ಕೆ ಇಳಿಸುವ ಪ್ರಯತ್ನಗಳೇ ಆಗಿರಲಿಲ್ಲ. ಅಂದರೆ, 1988ರಿಂದ 2013ರವರೆಗಿನ ಮೂರು ಎಟಿಪಿ ವರದಿಗಳ ಸಲಹೆಗಳನ್ನು ಪ್ರಮಾಣೀಕರಿಸುವ ಒಂದೇ ಒಂದು ಅಧ್ಯಯನವೂ ಎಟಿಪಿ 4ನೇ ಸಮಿತಿಗೆ ಕಾಣಸಿಗಲಿಲ್ಲ! ಇಲ್ಲಿಯವರೆಗೂ ರಕ್ತದ ಕೊಲೆಸ್ಟರಾಲ್ ಪ್ರಮಾಣವು ನೂರಕ್ಕಿಂತ ಹೆಚ್ಚಿದ್ದರೆ ದಪ್ಪಕ್ಷರಗಳಲ್ಲಿ, ಅಡಿಗೆರೆ ಹಾಕಿ ಹೆದರಿಸಿ, ಕೋಟಿಗಟ್ಟಲೆ ಜನರಿಗೆ ಲಕ್ಷ ಕೋಟಿಗಟ್ಟಲೆಯ ಮಾತ್ರೆಗಳನ್ನು ನುಂಗಿಸಿ ನೀರು ಕುಡಿಸಿದ್ದಕ್ಕೆ ಯಾವ ಆಧಾರವೂ ಈ ಸಮಿತಿಗೆ ದೊರೆಯಲಿಲ್ಲ.

ಕೊಲೆಸ್ಟರಾಲ್ ಪ್ರಶ್ನೆಗೆ ಮೊದಲಿನಿಂದಲೂ ಸಮರ್ಪಕವಾದ ಉತ್ತರಗಳಿರಲೇ ಇಲ್ಲ. ಕೊಲೆಸ್ಟರಾಲ್ ನಮ್ಮ ಕಣಕಣಗಳಲ್ಲೂ ಅಡಕವಾಗಿದ್ದು, ಅದಿಲ್ಲದೆ ನಾವು ಬದುಕಲಾರೆವು. ಜೀವಕಣಗಳ ಉಳಿಯುವಿಕೆಗೆ, ಅವುಗಳೊಳಗಿನ ಸಂವಹನಕ್ಕೆ, ರಕ್ತನಾಳಗಳ ಆರೋಗ್ಯಕ್ಕೆ, ನರಮಂಡಲದ ಸುಸೂತ್ರವಾದ ಕಾರ್ಯಗಳಿಗೆ, ರೋಗರಕ್ಷಣೆಗೆ, ಪಿತ್ತರಸಸ್ರಾವಕ್ಕೆ,  ಎ, ಡಿ, ಇ, ಕೆ ಮುಂತಾದ ಅನ್ನಾಂಗಗಳಿಗೆ, ಹಲಬಗೆಯ ಹಾರ್ಮೋನುಗಳ ತಯಾರಿಗೆ ಕೊಲೆಸ್ಟರಾಲ್ ಬೇಕೇ ಬೇಕು. ಮೂವತ್ತರ ದಶಕದಲ್ಲಿ ಪೆಡಸಾದ ರಕ್ತನಾಳಗಳ ಭಿತ್ತಿಯಲ್ಲಿ ಕೊಲೆಸ್ಟರಾಲ್ ಗುರುತಿಸಲ್ಪಡುವುದರೊಂದಿಗೆ ಅದರ ಮಾನಹರಣದ ಪಿಡುಗು ಆರಂಭಗೊಂಡಿತು. ರಕ್ತದ ಕೊಲೆಸ್ಟರಾಲಿಗೂ, ಪೆಡಸಾದ ನಾಳಗಳಲ್ಲಿ ಅದರ ಶೇಖರಣೆಗೂ ಸಂಬಂಧಗಳಿಲ್ಲವೆನ್ನುವುದನ್ನು ಅದೆಷ್ಟೋ ಅಧ್ಯಯನಗಳು ಸುಸ್ಪಷ್ಟವಾಗಿ ತೋರಿಸಿದರೂ, ಈ ತೆಗಳುವಿಕೆ ನಿಲ್ಲಲಿಲ್ಲ. ಕೊಲೆಸ್ಟರಾಲ್ ಸಂಶ್ಲೇಷಣೆಯನ್ನು ತಡೆಯಬಲ್ಲ ಸ್ಟಾಟಿನ್ ಔಷಧಗಳನ್ನು ಎಟಿಪಿ ವರದಿಗಳು ಬೆಂಬಲಿಸಿದ ಬಳಿಕ ಇದು ಇನ್ನಷ್ಟು ಗಟ್ಟಿಗೊಂಡಿತು.

ಸ್ಟಾಟಿನ್ ಔಷಧಗಳ ಸುರಕ್ಷತೆಯ ಬಗೆಗೂ ಪ್ರಶ್ನೆಗಳಿವೆ. ಅವನ್ನು ಬಳಸತೊಡಗಿದವರಲ್ಲಿ ಸ್ನಾಯುವೇದನೆ ಹಾಗೂ ಸ್ನಾಯುಗಳ ಗಂಭೀರ ಸಮಸ್ಯೆಗಳು, ಮಧುಮೇಹ, ಯಕೃತ್ತಿನ ತೊಂದರೆಗಳು, ಕಣ್ಣಿನ ಪೊರೆ, ಲೈಂಗಿಕ ನಿಶ್ಶಕ್ತಿ, ಮರೆಗುಳಿತನ ಮತ್ತಿತರ ನರಮಂಡಲದ ತೊಂದರೆಗಳು, ಮೂತ್ರಪಿಂಡಗಳ ವೈಫಲ್ಯ, ರಕ್ತನಾಳಗಳ ಕ್ಯಾಲ್ಸೀಕರಣ ಹಾಗೂ ಮುಚ್ಚವಿಕೆ, ಕೆಲವು ಕ್ಯಾನ್ಸರ್ ಗಳು, ಸೋಂಕುಗಳು ಇವೇ ಮುಂತಾದ ಹಲವು ಗಂಭೀರ ಸಮಸ್ಯೆಗಳನ್ನು ಗುರುತಿಸಲಾಗಿದೆ. ಹೃದಯದ ವೈಫಲ್ಯವುಳ್ಳವರಲ್ಲೂ, ಹಿರಿವಯಸ್ಕರಲ್ಲೂ ಈ ಔಷಧಗಳು ಲಾಭಕ್ಕಿಂತ ಹೆಚ್ಚು ಹಾನಿಯನ್ನೇ ಉಂಟುಮಾಡಬಹುದು. ಅದಾಗಲೇ ಹೃದಯಾಘಾತಕ್ಕೊಳಗಾಗಿರುವವರಲ್ಲಿ ಈ ಔಷಧಗಳಿಂದ ಅತ್ಯಲ್ಪ ಪ್ರಯೋಜನವಾಗಬಹುದಾದರೂ, ರಕ್ತನಾಳಗಳ ಕಾಯಿಲೆಯಿಲ್ಲದವರಲ್ಲಿ ಅವು ಉಪಯುಕ್ತವೆನ್ನಲು ಬಲವಾದ ಆಧಾರಗಳೇ ಇಲ್ಲ. (ಒಜೆಇಎಂಡಿ 2013;3:179)

ಆದರೆ, ಕೊಲೆಸ್ಟರಾಲ್ ಮಟ್ಟವನ್ನು ಇಳಿಸುವುದಕ್ಕಲ್ಲದಿದ್ದರೂ ಹೃದಯದ ಒಳಿತಿಗಾಗಿ ಇನ್ನೂ ಹೆಚ್ಚು ಜನರು ಸ್ಟಾಟಿನ್ ಗಳನ್ನು ಸೇವಿಸಬೇಕು ಎಂದು ಹೊಸ ಎಟಿಪಿ ಸೂತ್ರಗಳು ಸಲಹೆ ನೀಡಿವೆ! ಅದಾಗಲೇ ಹೃದಯಾಘಾತ, ಪಾರ್ಶ್ವವಾಯುಗಳಿಗೆ ತುತ್ತಾದವರು, ಅನುವಂಶೀಯವಾಗಿ ಕೊಲೆಸ್ಟರಾಲ್ ಹೆಚ್ಚುಳ್ಳವರು (ಎಲ್ ಡಿ ಎಲ್ >190ಮಿಗ್ರಾಂ%), 40-75 ವಯಸ್ಸಿನ ಎಲ್ಲಾ ಮಧುಮೇಹಿಗಳು ಹಾಗೂ ಇವಿಲ್ಲದಿದ್ದರೂ, ಮುಂದಿನ 10 ವರ್ಷಗಳಲ್ಲಿ ರಕ್ತನಾಳಗಳ ತೊಂದರೆಯುಂಟಾಗುವ ಸಾಧ್ಯತೆ ಶೇ. 7.5ಕ್ಕಿಂತ ಹೆಚ್ಚುಳ್ಳವರು ಸ್ಟಾಟಿನ್ ಗಳನ್ನು ಸೇವಿಸಬೇಕು ಎಂದು ಈ ವರದಿಯಲ್ಲಿ ಹೇಳಲಾಗಿದೆ. ಲಿಂಗ, ವಯಸ್ಸು, ಜನಾಂಗ, ಕೊಲೆಸ್ಟರಾಲ್ ಮಟ್ಟ, ರಕ್ತದೊತ್ತಡ, ಮಧುಮೇಹ ಹಾಗೂ ಧೂಮಪಾನಗಳ ಆಧಾರದಲ್ಲಿ ಹತ್ತು ವರ್ಷಗಳ ಅಪಾಯವನ್ನು ಲೆಕ್ಕ ಹಾಕುವುದಕ್ಕೆ ಒಂದು ಗಣಕವನ್ನು ಸಮಿತಿಯೇ ಅಂತರಜಾಲದಲ್ಲಿ ಉಚಿತವಾಗಿ ಒದಗಿಸಿದೆ! ರಕ್ತದೊತ್ತಡ >110, ಒಟ್ಟು ಕೊಲೆಸ್ಟರಾಲ್ >170, ಎಚ್ ಡಿ ಎಲ್ <50 ಇದ್ದರೆ ಈ ಗಣಕದ ಲೆಕ್ಕ ಶುರುವಾಗುತ್ತದೆ. ನಲುವತ್ತರ ವಯಸ್ಸನ್ನು ಮೀರಿದ ಹಲವರನ್ನೂ, 63 ಮೀರಿದ ಎಲ್ಲಾ ಪುರುಷರು ಹಾಗೂ 71 ಮೀರಿದ ಎಲ್ಲಾ ಮಹಿಳೆಯರನ್ನೂ ಇದು ಚಿಕಿತ್ಸೆಗೆ ದೂಡುತ್ತದೆ.

ಅಂತೂ ಇಂತೂ ಸ್ಟಾಟಿನ್ ಮಾತ್ರೆಗಳನ್ನು ನುಂಗಿಸಲೆಳಸುವ ಇಂತಹಾ ವರದಿಗಳನ್ನು ಬದಿಗೊತ್ತಬಾರದೇಕೆ? ಆಧುನಿಕ ಆಹಾರ ಹಾಗೂ ಜೀವನಶೈಲಿ, ದೈಹಿಕ ವ್ಯಾಯಾಮವಿಲ್ಲದ ಆಲಸ್ಯ, ಧೂಮಪಾನ, ನಿಯಂತ್ರಣದಲ್ಲಿಲ್ಲದ ರಕ್ತದೊತ್ತಡ ಹಾಗೂ ಮಧುಮೇಹಗಳು ರಕ್ತನಾಳಗಳ ಪೆಡಸಾಗುವಿಕೆಗೂ, ಕೊಲೆಸ್ಟರಾಲ್ ಹೆಚ್ಚಳಕ್ಕೂ ಮುಖ್ಯ ಕಾರಣಗಳಾಗಿವೆ. ಆದ್ದರಿಂದ ಹಾಲು, ಸಕ್ಕರೆ, ಇತರ ಸಿಹಿಪದಾರ್ಥಗಳು, ಸಂಸ್ಕರಿತ ಧಾನ್ಯಗಳು, ಕರಿದ ತಿನಿಸುಗಳು ಇತ್ಯಾದಿಗಳನ್ನು ಸಂಪೂರ್ಣವಾಗಿ ವರ್ಜಿಸುವುದು, ಧೂಮಪಾನ, ಮದ್ಯಪಾನಗಳಿಂದ ದೂರವಿರುವುದು, ರಕ್ತದೊತ್ತಡ ಹಾಗೂ ಮಧುಮೇಹಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವುದು ಅತ್ಯಗತ್ಯ. ತರಕಾರಿಗಳು, ಬೀಜಗಳು, ಮೀನು ಇತ್ಯಾದಿಗಳನ್ನು ಹೆಚ್ಚಾಗಿ ಸೇವಿಸುವುದು ರಕ್ತನಾಳಗಳ ಆರೋಗ್ಯಕ್ಕೆ ಒಳ್ಳೆಯದು. ಆಹಾರದಲ್ಲಿರುವ ಕೊಲೆಸ್ಟರಾಲ್ ರಕ್ತದ ಕೊಲೆಸ್ಟರಾಲ್ ಮೇಲೆ ಕೇವಲ 0-4%ದಷ್ಟೇ ಪ್ರಭಾವ ಬೀರುವುದರಿಂದ ಮೊಟ್ಟೆ ಹಾಗೂ ಮಾಂಸಾಹಾರವನ್ನು ಹಿತಮಿತವಾಗಿ ಸೇವಿಸಬಹುದು. ನಿತ್ಯವೂ ಒಂದಷ್ಟು ದೈಹಿಕ ವ್ಯಾಯಾಮದ ಜೊತೆಗೆ ಬಿಸಿಲಿಗೆ ಮೈಯೊಡ್ಡುವುದರಿಂದಲೂ ರಕ್ತನಾಳಗಳನ್ನು ಸುಸ್ಥಿತಿಯಲ್ಲಿಡಲು ನೆರವಾಗುತ್ತದೆ.

ಅಂತೂ ದಪ್ಪಕ್ಷರಗಳಲ್ಲಿ ಅಡಿಗೆರೆ ಹಾಕಿದ ಕೊಲೆಸ್ಟರಾಲ್ ವರದಿಗಳನ್ನು ಕಂಡು ಹೌಹಾರುವ ದಿನಗಳು ಮುಗಿದವೆನ್ನಲು ಅಡ್ಡಿಯಿಲ್ಲ. ಅದಾಗಲೇ ಹೃದಯಾಘಾತವಾದವರು ಅಡ್ಡಪರಿಣಾಮಗಳಿಲ್ಲದಿದ್ದರೆ ಕೆಲಕಾಲ ಸ್ಟಾಟಿನ್ ಔಷಧಗಳನ್ನು ಸೇವಿಸಬಹುದು; ಇನ್ನುಳಿದವರಲ್ಲಿ ಈ ಔಷಧಗಳಿಂದ ಪ್ರಯೋಜನವಿದೆಯೆನ್ನಲು ಸದ್ಯಕ್ಕೆ ಆಧಾರಗಳಿಲ್ಲ.

Leave a Reply

Your email address will not be published. Required fields are marked *