ಮೂಲಾಹಾರದಿಂದ ಮಧುಮೇಹ ವಿಮೋಚನೆ

ಆರೋಗ್ಯ ಆಶಯ – ವಿಜಯ ಕರ್ನಾಟಕ: ಮೂಲಾಹಾರದಿಂದ ಮಧುಮೇಹ ವಿಮೋಚನೆ [ನವಂಬರ್ 13, 2013, ಬುಧವಾರ] [ನೋಡಿ | ನೋಡಿ]

ನಮ್ಮನ್ನು ಕಾಡುತ್ತಿರುವ ಆಧುನಿಕ ರೋಗಗಳಿಂದ ಮುಕ್ತಿ ಪಡೆಯಬೇಕೆಂದರೆ ಹಳೆ ಶಿಲಾಯುಗದ ಆಹಾರಕ್ಕೆ ಮರಳಬೇಕು

ಈಗ ವಿಶ್ವದಾದ್ಯಂತ ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ ಸುಮಾರು 37 ಕೋಟಿ, ಅದರ ಚಿಕಿತ್ಸೆಗೆ ಮಾಡಲಾಗುತ್ತಿರುವ ಖರ್ಚು ಸುಮಾರು 46500 ಕೋಟಿ ಡಾಲರುಗಳು, ಇದರಲ್ಲಿ ಔಷಧಗಳ ವಹಿವಾಟು ಸುಮಾರು 3500 ಕೋಟಿ ಡಾಲರುಗಳು. ಇನ್ನೈದು ವರ್ಷಗಳಲ್ಲಿ ರೋಗಿಗಳ ಸಂಖ್ಯೆ ಸುಮಾರು 45 ಕೋಟಿಯಷ್ಟಾಗಿ, ಔಷಧಗಳ ವಹಿವಾಟು 5800 ಕೋಟಿ ಡಾಲರುಗಳನ್ನು ಮೀರಬಹುದೆನ್ನುವುದು ಕಂಪೆನಿಗಳ ಲೆಕ್ಕಾಚಾರ.

ಎಂಭತ್ತು ವರ್ಷಗಳಿಗೂ ಹಿಂದೆ ಇನ್ಸುಲಿನ್ ಸ್ರಾವವನ್ನು ಗುರುತಿಸಿದ್ದೊಂದು ಮನ್ವಂತರವಾಗಿತ್ತು. ಅದರೊಂದಿಗೆ, ನಮ್ಮ ಶರೀರವು ಆಹಾರವನ್ನು ಹೇಗೆ ಬಳಸಿಕೊಳ್ಳುತ್ತದೆ, ಇನ್ಸುಲಿನ್ ಹೇಗೆ ಸ್ರವಿಸಲ್ಪಡುತ್ತದೆ ಮತ್ತು ಹೇಗೆ ಕೆಲಸ ಮಾಡುತ್ತದೆ, ಮಧುಮೇಹವು ಹೇಗೆ ಉಂಟಾಗುತ್ತದೆ ಇತ್ಯಾದಿ ವಿವರಗಳೆಲ್ಲವೂ ಅನಾವರಣಗೊಂಡವು. ಮೇದೋಜೀರಕಾಂಗದ ಬೀಟಾ ಕಣಗಳು ನಾಶವಾಗಿ ಇನ್ಸುಲಿನ್ ಸ್ರಾವವೇ ಇಲ್ಲವಾದರೆ ಜೀವಕ್ಕೇ ಅಪಾಯವುಂಟಾಗುವುದನ್ನು ಒಂದನೇ ವಿಧದ ಮಧುಮೇಹವೆಂದೂ, ಇನ್ಸುಲಿನ್ ಸ್ರವಿಸುವಿಕೆ ಅಥವಾ ಅದರ ಕಾರ್ಯಕ್ಷಮತೆಯಲ್ಲಿ ವ್ಯತ್ಯಯವುಂಟಾದಾಗ ರಕ್ತದ ಗ್ಲೂಕೋಸ್ ಏರಿಕೆಯಾಗತೊಡಗುವುದನ್ನು ಎರಡನೇ ವಿಧದ ಮಧುಮೇಹವೆಂದೂ ಗುರುತಿಸಲಾಯಿತು. ಒಂದನೇ ವಿಧದ ಮಧುಮೇಹವುಳ್ಳವರು ಜೀವವುಳಿಸಿಕೊಳ್ಳಲು ಇನ್ಸುಲಿನ್ ಚುಚ್ಚುವಿಕೆ ಅತ್ಯಗತ್ಯವೆಂದಾಯಿತು; ಎರಡನೇ ವಿಧದ ಮಧುಮೇಹವನ್ನು ನಿಯಂತ್ರಿಸಲು ಮೊದಲಲ್ಲಿ ಮಾತ್ರೆಗಳನ್ನು, ಅದಾಗದಿದ್ದರೆ ಇನ್ಸುಲಿನ್ ಅನ್ನು ನೀಡುವ ಚಿಕಿತ್ಸಾ ಕ್ರಮವು ಗಟ್ಟಿಗೊಂಡಿತು.

ಮಧುಮೇಹವನ್ನು ತಡೆಯುವುದಕ್ಕಿಂತಲೂ ಅದರ ಚಿಕಿತ್ಸೆಯೇ ಆದ್ಯತೆಯಾಗಿ, ಹೊಸ ಹೊಸ ಔಷಧಗಳನ್ನು ಅಭಿವೃದ್ಧಿಪಡಿಸುವುದಕ್ಕೆ ಪೈಪೋಟಿಯುಂಟಾಯಿತು. ದುಬಾರಿಯಾದ ಹೊಸ ಬಗೆಯ ಇನ್ಸುಲಿನ್ ಗಳು, ಅವನ್ನು ಚುಚ್ಚುವ ಯಂತ್ರ-ತಂತ್ರಗಳು, ಹಲಬಗೆಯ ಮಾತ್ರೆಗಳು ಲಭ್ಯವಾದಂತೆ ಮಧುಮೇಹದ ವಹಿವಾಟು ಭರ್ಜರಿಯಾಗಿ ಬೆಳೆಯಿತು. ಆದರೆ, ಈ ಹೊಸ ಚಿಕಿತ್ಸೆಗಳು ಹಳೆಯ ಇನ್ಸುಲಿನ್ ಗಳನ್ನು ಯಾ ಔಷಧಗಳನ್ನು ಬಹಳಷ್ಟು ಮೀರಿಸುತ್ತವೆ ಎನ್ನಲಾಗದು, ತೆರುವ ಹೆಚ್ಚು ಹಣಕ್ಕೆ ತಕ್ಕಷ್ಟು ಹೆಚ್ಚು ಪರಿಣಾಮಕಾರಿಯಾಗಿವೆ ಎಂದೂ ಹೇಳಲಾಗದು.

ಇನ್ಸುಲಿನ್ ಬಳಕೆಗೆ ಬಂದ ಮೊದಲ ಆರು ದಶಕಗಳಲ್ಲಿ ಅದನ್ನು ಅನ್ಯ ಪ್ರಾಣಿಗಳ ಮೇದೋಜೀರಕಾಂಗಗಳಿಂದ ಪ್ರತ್ಯೇಕಿಸಿ, ಶುದ್ಧೀಕರಿಸಿ, ಸಿದ್ಧಪಡಿಸಲಾಗುತ್ತಿತ್ತು. ಎಂಭತ್ತರ ದಶಕದಿಂದೀಚೆಗೆ ತಳಿ ತಂತ್ರಜ್ಞಾನದಿಂದ ಕೃತಕವಾಗಿ ಉತ್ಪಾದಿಸಿದ ಇನ್ಸುಲಿನ್ ಬಳಕೆಯಲ್ಲಿದೆ. ಪ್ರಾಣಿಜನ್ಯ ಇನ್ಸುಲಿನ್ ಕೇವಲ 20 ರೂಪಾಯಿಗಳಿಗೆ ದೊರೆಯುತ್ತಿದ್ದರೆ, ಈ ಕೃತಕ ಇನ್ಸುಲಿನ್ ಆರು ಪಟ್ಟು ದುಬಾರಿಯಾಗಿದೆ. ಈಗ ನಾಲ್ಕು ವರ್ಷಗಳಿಂದ ಪ್ರಾಣಿಜನ್ಯ ಇನ್ಸುಲಿನ್ ಮರೆಯಾಗಿದ್ದು, ಎಲ್ಲರೂ ಕೃತಕ ಇನ್ಸುಲಿನ್ ಅನ್ನೇ ಚುಚ್ಚಿಕೊಳ್ಳುವಂತಾಗಿದೆ. ಮೊದಲು ಇನ್ಸುಲಿನ್ ಜೊತೆ ಬೇರೊಂದು ಪ್ರೊಟೀನನ್ನೋ, ಸತುವಿನ ಕಣಗಳನ್ನೋ ಬೆರೆಸಿ ಅದು ನಿಧಾನವಾಗಿ, ಹೆಚ್ಚು ಹೊತ್ತು ವರ್ತಿಸುವಂತೆ ಮಾಡಲಾಗುತ್ತಿತ್ತು. ಇತ್ತೀಚೆಗೆ ಇನ್ಸುಲಿನ್ ತಳಿಯನ್ನೇ ಬದಲಾಯಿಸಿ, ಕ್ಷಿಪ್ರವಾಗಿ ಅಥವಾ ನಿಧಾನವಾಗಿ ವರ್ತಿಸಬಲ್ಲ ಸದೃಶ ಇನ್ಸುಲಿನ್ ಗಳನ್ನು ಬಳಕೆಗೆ ತರಲಾಗಿದೆ. ಇವು ಸಾಮಾನ್ಯ ಇನ್ಸುಲಿನ್ ಗಿಂತ ನಾಲ್ಕರಿಂದ ಎಂಟು ಪಟ್ಟು ದುಬಾರಿಯಾಗಿವೆ. ಪ್ರತಿಷ್ಠಿತ ಕೊಕ್ರೇನ್ ವಿಮರ್ಶೆಯನುಸಾರ, ಈ ಕೃತಕ ಇನ್ಸುಲಿನ್ ಗಳು ಅಥವಾ ಸದೃಶ ಇನ್ಸುಲಿನ್ ಗಳು ಪ್ರಾಣಿಜನ್ಯ ಇನ್ಸುಲಿನ್ ಗಳಿಗಿಂತ ಹೆಚ್ಚು ಪ್ರಯೋಜಕ ಅಥವಾ ಸುರಕ್ಷಿತವಾಗಿವೆ ಎನ್ನುವುದಕ್ಕೆ ಇನ್ನೂ ಆಧಾರಗಳಿಲ್ಲ [ಕೊಕ್ರೇನ್ ವಿಮರ್ಶೆಗಳು 2005(1):ಸಿಡಿ003816; 2007(2):ಸಿಡಿ005613; 2006(2):ಸಿಡಿ003287].

ನಾವು ತಿನ್ನುವ ವಿವಿಧ ಶರ್ಕರಗಳು ಕರುಳಲ್ಲಿ ಹೀರಲ್ಪಡುವಲ್ಲಿಂದ ತೊಡಗಿ, ಮೇದೋಜೀರಕಾಂಗದ ಬೀಟಾಕಣಗಳಲ್ಲಿ ಇನ್ಸುಲಿನ್ ಸ್ರಾವವನ್ನು ಉತ್ತೇಜಿಸಿ, ದೇಹದ ವಿವಿಧ ಅಂಗಗಳಲ್ಲಿ ಅವು ಬಳಸಲ್ಪಡುವ ಸಂಕೀರ್ಣವಾದ ಪ್ರಕ್ರಿಯೆಗಳನ್ನು ಆಧುನಿಕ ವೈದ್ಯವಿಜ್ಞಾನವಿಂದು ಅರಿತುಕೊಂಡಿದೆ. ಈ ಪ್ರಕ್ರಿಯೆಗಳ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸಿ,ರಕ್ತದ ಗ್ಲೂಕೋಸ್ ಪ್ರಮಾಣವನ್ನು ನಿಯಂತ್ರಿಸುವ ಅನೇಕ ಔಷಧಗಳು ಇಂದು ಲಭ್ಯವಿವೆ: ಆಹಾರದ ಶರ್ಕರಗಳು ಕರುಳಿನಲ್ಲಿ ಹೀರಲ್ಪಡದಂತೆ ತಡೆಯುವುದು, ಕರುಳಿನಲ್ಲಿರುವ ಗ್ರಾಹಿಗಳಿಂದ ಬೀಟಾ ಕಣಗಳ ಪ್ರಚೋದನೆಯನ್ನು ಹೆಚ್ಚಿಸುವುದು, ನೇರವಾಗಿ ಬೀಟಾ ಕಣಗಳಲ್ಲಿ ಇನ್ಸುಲಿನ್ ಸ್ರಾವವನ್ನು ಉತ್ತೇಜಿಸುವುದು ಮತ್ತು ಸ್ರವಿಸಲ್ಪಟ್ಟ ಇನ್ಸುಲಿನಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಇತ್ಯಾದಿ. ಎರಡನೇ ವಿಧದ ಮಧುಮೇಹವುಳ್ಳವರಿಗೆ ಈ ಔಷಧಗಳನ್ನು ಒಂಟಿಯಾಗಿ ಅಥವಾ ಜೊತೆಯಾಗಿ ನೀಡಲಾಗುತ್ತದೆ; ಅವು ವಿಫಲವಾದಾಗ ಇನ್ಸುಲಿನ್ ಚುಚ್ಚಬೇಕಾಗುತ್ತದೆ.

ಇನ್ಸುಲಿನ್ ಹಾಗೂ ಇತರ ಔಷಧಗಳ ನಿರಂತರ ಬಳಕೆಯಿಂದ ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು, ಮಧುಮೇಹದ ತೀವ್ರತರನಾದ ಸಮಸ್ಯೆಗಳನ್ನು ನಿಭಾಯಿಸಿ ಜೀವವುಳಿಸಬಹುದು ಹಾಗೂ ದೂರಗಾಮಿ ಸಮಸ್ಯೆಗಳನ್ನು ಮುಂದೂಡಬಹುದು. ಆದರೆ ಈ ಸಮಸ್ಯೆಗಳನ್ನು ಸಂಪೂರ್ಣವಾಗಿ ತಡೆಯುವುದಕ್ಕೆ, ರೋಗವನ್ನು ಗುಣಪಡಿಸುವುದಕ್ಕೆ ಅಥವಾ ಬಾರದಂತೆ ತಡೆಯುವುದಕ್ಕೆ ಇನ್ನೂ ಸಾಧ್ಯವಾಗಿಲ್ಲ. ಅಲ್ಲದೆ, ಮಧುಮೇಹ ಪೀಡಿತರಲ್ಲಿ ಸಾಮಾನ್ಯವಾಗಿರುವ ಬೊಜ್ಜು, ಮೇದಸ್ಸಿನ ಸಮಸ್ಯೆಗಳು, ರಕ್ತನಾಳಗಳ ಕಾಯಿಲೆಗಳು ಇವೇ ಮುಂತಾದ ಸಮಸ್ಯೆಗಳನ್ನು ಈ ಔಷಧಗಳು ಇನ್ನಷ್ಟು ಹೆಚ್ಚಿಸಬಹುದು. ಈ ಔಷಧಗಳನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿದರೆ ಅಥವಾ ತಿಂದ ಆಹಾರವು ಕಡಿಮೆಯಾದರೆ ರಕ್ತದ ಸಕ್ಕರೆಯು ಒಮ್ಮೆಗೇ ಕೆಳಗಿಳಿಯುವ ಸಮಸ್ಯೆಯೂ ಉಂಟಾಗುತ್ತದೆ. ಒಟ್ಟಿನಲ್ಲಿ,ಮಧುಮೇಹವುಳ್ಳವರಿಗೆ ಅತ್ತ ದರಿ, ಇತ್ತ ಪುಲಿ ಎನ್ನುವ ದುಸ್ಥಿತಿ.

ಆಧುನಿಕ ಚಿಕಿತ್ಸೆಯ ಇತಿಮಿತಿಗಳಿಂದಾಗಿ ಕೆಲವು ಮಧುಮೇಹಿಗಳು ಬದಲಿ ಚಿಕಿತ್ಸಾ ಪದ್ಧತಿಗಳ ದೊಡ್ಡ ಜಾಹೀರಾತುಗಳತ್ತ ಆಕರ್ಷಿತರಾಗುತ್ತಾರೆ. ವೈದ್ಯಕೀಯ ಪದ್ಧತಿಯೇ ಅಲ್ಲದ ಯೋಗಾಭ್ಯಾಸದಿಂದಲೂ ಮಧುಮೇಹ ಚಿಕಿತ್ಸೆ ಸಾಧ್ಯವೆಂದು ನಂಬಿ ಬಿಡುತ್ತಾರೆ. ಇಂದು ಇವೆಲ್ಲವುಗಳ ವ್ಯವಹಾರವೂ ಕೋಟಿಗಟ್ಟಲೆಯಾಗಿದೆ. ಆದರೆ ಆಯುರ್ವೇದ, ಹೋಮಿಯೋಪತಿ, ಪ್ರಕೃತಿ ಚಿಕಿತ್ಸೆ ಮುಂತಾದ ಯಾವುದೇ ಬದಲಿ ಪದ್ಧತಿಗಳಿಂದ ಯಾ ಯೋಗಾಭ್ಯಾಸದಿಂದ ಮಧುಮೇಹವನ್ನು ತಡೆಯುವಲ್ಲಿ ಅಥವಾ ಚಿಕಿತ್ಸೆಯಲ್ಲಿ ನಿರ್ದಿಷ್ಟವಾದ ಪ್ರಯೋಜನಗಳಿವೆಯೆನ್ನುವುದಕ್ಕೆ ದೃಢವಾದ ಆಧಾರಗಳು ಇದುವರೆಗೆ ದೊರೆತಿಲ್ಲ.

ಹಾಗೆಂದು ಮಧುಮೇಹಿಗಳು ಹತಾಶರಾಗಬೇಕಿಲ್ಲ. ಮಧುಮೇಹವನ್ನು ನಿಯಂತ್ರಿಸುವಲ್ಲಿ ನಿರೀಕ್ಷಿತ ಯಶಸ್ಸನ್ನು ಪಡೆಯಲಾಗದಿರುವುದು ಒಂದಷ್ಟು ಆಧುನಿಕ ವೈದ್ಯವಿಜ್ಞಾನಿಗಳಲ್ಲಿ ಹೊಸ ಚಿಂತನೆಯನ್ನು ಪ್ರೇರೇಪಿಸಿದೆ, ಹೊಸ ದಾರಿಗಳನ್ನು ತೆರೆದಿದೆ. ನಮ್ಮ ಶರೀರದ ಕಣಕಣಗಳಲ್ಲಿ ನಡೆಯುವ ಅತಿ ಸಂಕೀರ್ಣವಾದ ಪ್ರಕ್ರಿಯೆಗಳು, ನಮ್ಮ ಆಹಾರವು ಅವುಗಳ ಮೇಲುಂಟು ಮಾಡುವ ಪರಿಣಾಮಗಳು, ನಮ್ಮ ಹಸಿವು-ಸಂತೃಪ್ತಿಗಳ ನಿಯಂತ್ರಣ, ನಮ್ಮ ಪಚನಾಂಗಗಳಲ್ಲಿರುವ ಲಕ್ಷ ಕೋಟಿಗಟ್ಟಲೆ ಸೂಕ್ಷ್ಮಾಣುಗಳ ಪಾತ್ರ, ವಿಭಿನ್ನ ಜನಸಮುದಾಯಗಳ ಜೀವನಶೈಲಿಗಳಿಗೂ, ರೋಗಗಳಿಗೂ ಇರುವ ಸಂಬಂಧಗಳು ಇತ್ಯಾದಿಗಳ ಬಗ್ಗೆ ಅತ್ಯಂತ ಆಸಕ್ತಿದಾಯಕವಾದ ಅಧ್ಯಯನಗಳಾಗುತ್ತಿದ್ದು, ಮಧುಮೇಹವೂ ಸೇರಿದಂತೆ ಎಲ್ಲಾ ಆಧುನಿಕ ರೋಗಗಳ ಮೇಲೆ ಹೊಸ ಬೆಳಕನ್ನು ಚೆಲ್ಲುತ್ತಿವೆ.

ವಾನರರಿಂದ ಮಾನವರು ವಿಕಾಸಗೊಂಡ ಸುಮಾರು ಇಪ್ಪತ್ತೈದು ಲಕ್ಷ ವರ್ಷಗಳಿಂದ ಹತ್ತು ಸಾವಿರ ವರ್ಷಗಳ ಹಿಂದಿನ ಹಳೆ ಶಿಲಾಯುಗದ ಕಾಲದಲ್ಲಿ ಮೀನು, ಇತರ ಜಲಚರಗಳು, ಪ್ರಾಣಿಗಳು ಹಾಗೂ ಪಕ್ಷಿಗಳ ಮಾಂಸ, ಹಲಬಗೆಯ ಎಲೆಗಳು ಮತ್ತು ತರಕಾರಿಗಳು, ಬೀಜಗಳು ಹಾಗೂ ಅಪರೂಪಕ್ಕೊಮ್ಮೆ ದೊರೆಯುತ್ತಿದ್ದ ಹಣ್ಣುಗಳೇ ನಮ್ಮ ಪೂರ್ವಜರ ಆಹಾರವಾಗಿದ್ದವು. ಇಂದಿಗೂ ಹಳೆ ಶಿಲಾಯುಗದ ಆಹಾರಕ್ರಮವನ್ನೇ ಪಾಲಿಸುತ್ತಿರುವ ಭಾರತ, ಆಫ್ರಿಕಾ, ಅಮೆರಿಕಾ, ಆಸ್ಟ್ರೇಲಿಯಾ, ಪಪುಅ ನ್ಯೂಗಿನಿ ಮುಂತಾದೆಡೆ ವಾಸವಾಗಿರುವ ಹಲವು ಮೂಲನಿವಾಸಿ ಸಮುದಾಯಗಳಲ್ಲಿ ಮಧುಮೇಹ, ಬೊಜ್ಜು, ಮೂಳೆಸವೆತ, ಕ್ಯಾನ್ಸರ್, ರಕ್ತನಾಳಗಳ ಸಮಸ್ಯೆಗಳಂತಹಾ ಆಧುನಿಕ ರೋಗಗಳಾವುವೂ ಕಾಣಸಿಗುವುದಿಲ್ಲ. ನಮ್ಮ ಆಧುನಿಕ ಆಹಾರದಲ್ಲಿ ಶರ್ಕರಭರಿತವಾದ ಅಕ್ಕಿ,  ಗೋಧಿ,  ರಾಗಿ,  ಓಟ್ಸ್,  ಬಾರ್ಲಿ ಮುಂತಾದ ಧಾನ್ಯಗಳು, ಚಮಚದ ಸಕ್ಕರೆ, ಬಗೆಬಗೆಯ ಹಣ್ಣುಗಳು, ಹಾಲು ಮತ್ತದರ ಉತ್ಪನ್ನಗಳು ಹಾಗೂ ಸಂಸ್ಕರಿತ ಖಾದ್ಯ ತೈಲಗಳೇ ಯಥೇಷ್ಟವಾಗಿದ್ದು, ಹಳೆ ಶಿಲಾಯುಗಕ್ಕೆ ಸೇರಿದ ನಮ್ಮ ದೇಹಕ್ಕೆ ಇವು ಸರಿಹೊಂದದಿರುವುದೇ ಆಧುನಿಕ ರೋಗಗಳಿಗೆ ಕಾರಣವೆನ್ನುವುದು ಸ್ಪಷ್ಟವಾಗುತ್ತಲಿದೆ. ಈ ಆಧುನಿಕ ಆಹಾರದತ್ತ ಹೊರಳಿದ ಮೂಲನಿವಾಸಿಗಳು ಅತಿ ಬೇಗನೆ ಮಧುಮೇಹ ಪೀಡಿತರಾಗುವುದನ್ನೂ, ಮೂಲಾಹಾರಕ್ಕೆ ಮರಳಿದ ಮಧುಮೇಹಿಗಳಲ್ಲಿ ರಕ್ತದ ಸಕ್ಕರೆ ಹಾಗೂ ಮೇದಸ್ಸಿನ ಪ್ರಮಾಣಗಳು ಶೀಘ್ರವೇ ನಿಯಂತ್ರಿಸಲ್ಪಡುವುದನ್ನೂ ಹಲವು ಅಧ್ಯಯನಗಳಲ್ಲಿ ಗುರುತಿಸಲಾಗಿದೆ. (ಡಯಾ ಕೇರ್ 2006;29:1866, ಕಾರ್ಡಿವಾಸ್ಕ್ ಡಯಾಬಿಟೋ 2009;8:35, ಜ ಡಯಾ ಸಯ ಟೆಕ್ 2009;3:1229). ಆಹಾರದಲ್ಲಿ ಶರ್ಕರಗಳ ಪ್ರಮಾಣವನ್ನು ಕಡಿತಗೊಳಿಸುವುದರಿಂದ ಅನೇಕ ಲಾಭಗಳಿವೆಯೆನ್ನುವುದೀಗ ದಿಟವಾಗಿದೆ (ನ್ಯೂಟ್ರಿ ಮೆಟ 2005;2:16, ನ್ಯೂಟ್ರಿ ಮೆಟ 2008;5:9, ಅಮೆ ಜ ಕ್ಲಿನಿ ನುಟ್ರಿ 2007;86:276).

ಹೊಟ್ಟೆ ತುಂಬ ಶರ್ಕರಭರಿತವಾದ ಆಹಾರವನ್ನು ಸೇವಿಸಿ, ರಕ್ತದಲ್ಲಿ ಏರುವ ಗ್ಲೂಕೋಸನ್ನು ನಿಯಂತ್ರಿಸಲು ಬಾಯಿ ತುಂಬ ಔಷಧಗಳನ್ನು ನುಂಗಿ, ಎಲ್ಲಾ ಸಮಸ್ಯೆಗಳಿಂದ ನರಳಿ ಒದ್ದಾಡುವುದಕ್ಕಿಂತ ಆಹಾರವನ್ನೇ ಬದಲಿಸಿಕೊಂಡು ಮಧುಮೇಹ ಮಾತ್ರವಲ್ಲ, ಇತರೆಲ್ಲಾ ಆಧುನಿಕ ರೋಗಗಳಿಂದಲೂ ಮುಕ್ತರಾಗುವುದೇ ಒಳಿತಲ್ಲವೇ?

Leave a Reply

Your email address will not be published. Required fields are marked *