ಒಳ್ಳೆಯ ಆಹಾರ ಹೇಗೆ?

ಆರೋಗ್ಯ ಆಶಯ – ವಿಜಯ ಕರ್ನಾಟಕ: ಸೊಪ್ಪು ತಿನ್ನದಿದ್ದರೆ ತಪ್ಪು, ತಿಂದರೂ ತಪ್ಪು [ಅಕ್ಟೋಬರ್ 29, 2014, ಬುಧವಾರ] [ನೋಡಿ | ನೋಡಿ]

ನಾವೆಲ್ಲ ನಿತ್ಯ ಉಪಯೋಗಿಸುವ ಸಸ್ಯಾಹಾರದಲ್ಲಿ ಅನ್ನಾಂಗ-ಖನಿಜಾಂಶಗಳು ಕಡಿಮೆ, ವಿಷಾಂಶಗಳು ಹೆಚ್ಚು

ಹೃದ್ರೋಗ, ಕ್ಯಾನ್ಸರ್ ಇತ್ಯಾದಿಗಳನ್ನು ದೂರವಿಡಲು ಹಣ್ಣು-ತರಕಾರಿಗಳನ್ನು ಯಥೇಷ್ಟವಾಗಿ ತಿನ್ನಬೇಕೆಂದು ಹೇಳಲಾಗುತ್ತದೆ. ಆದರೆ, ಅವೇ ಹಣ್ಣು-ತರಕಾರಿಗಳಿಗೆ ಸುರಿಯುತ್ತಿರುವ ರಸಗೊಬ್ಬರ-ಕೀಟನಾಶಕಗಳಿಂದ ಇಂತಹಾ ರೋಗಗಳು ಹೆಚ್ಚುತ್ತಿವೆ ಎಂದೂ ಹೇಳಲಾಗುತ್ತದೆ. ಇದೆಂತಹಾ ವಿಪರ್ಯಾಸ? ತಿನ್ನದಿದ್ದರೂ ರೋಗ, ತಿಂದರೂ ರೋಗ!

ತಿನ್ನಬಲ್ಲ ಗಿಡ-ಹೂವು-ಹಣ್ಣುಗಳೆಲ್ಲವೂ ಮೊದಲು ನಿಸರ್ಗಸಹಜ ನೆಲಗೊಬ್ಬರವನ್ನುಂಡು ಬೆಳೆಯುತ್ತಿದ್ದರೆ, ಈ ನೂರು ವರ್ಷಗಳಿಂದ ಕೃತಕ ರಸಗೊಬ್ಬರಗಳು, ಎಪ್ಪತ್ತು ವರ್ಷಗಳಿಂದ ಕೃತಕ ಕೀಟನಾಶಕಗಳು, ಕೃಷಿಯ ಭಾಗವಾದವು. ಮಣ್ಣಿಗೆ ರಂಜಕವನ್ನು ಸೇರಿಸುವುದಕ್ಕೆ ಫಾಸ್ಫೇಟ್, ಸಾರಜನಕಕ್ಕೆ ನೈಟ್ರೇಟ್, ಪೊಟಾಸಿಯಂಗೆ ಪೊಟಾಷ್ ಬಂದವು, ಅವುಗಳನ್ನು ಉತ್ಪಾದಿಸುವ ಬೃಹತ್ ಕಾರ್ಖಾನೆಗಳೂ ಬಂದವು (ಅದೇ ನೈಟ್ರೇಟಿನಿಂದ ಅಗಣಿತ ಯುದ್ಧ-ಕಲಹ-ಸ್ಫೋಟಗಳಲ್ಲಿ ಲಕ್ಷಗಟ್ಟಲೆ ಸಾವುಗಳಾದವು). ಡಿಡಿಟಿ, ಗಾಮಾಕ್ಸೇನ್ ಗಳಿಂದ ತೊಡಗಿ ಬಗೆಬಗೆಯ ಆರ್ಗಾನೋಫಾಸ್ಫೇಟ್, ಪೈರೆಥ್ರಂ ಕೀಟನಾಶಕಗಳೆಲ್ಲ ಬಂದವು. ಇಂದು, ಗೆಡ್ಡೆ-ಬೀಜ ಬಿತ್ತುವಲ್ಲಿಂದ ಫಲದವರೆಗೆ, ಹೂವಿನಿಂದ ಹಣ್ಣಿನವರೆಗೆ ಬಗೆಬಗೆಯ ರಸಗೊಬ್ಬರಗಳು, ಕಳೆ-ಕೀಟ-ಶಿಲೀಂಧ್ರ ನಾಶಕಗಳು, ಕಾಯಿ ಮಾಗಿಸುವ ರಾಸಾಯನಿಕಗಳು, ಮೇಣದ ಹೊದಿಕೆಗಳು ನಮ್ಮ ಸಸ್ಯಾಹಾರವನ್ನು ಸೇರಿಕೊಳ್ಳುತ್ತಿವೆ. ಅನ್ನಾಂಗ-ಖನಿಜಾಂಶ-ಉತ್ಕರ್ಷಣ ನಿರೋಧಕಗಳು ತುಂಬಿರುವ ನೈಸರ್ಗಿಕ ಸಸ್ಯಾಹಾರವು ನಮ್ಮ ಆರೋಗ್ಯಕ್ಕೆ ಪೂರಕವಾಗಿದ್ದರೆ, ರಸಗೊಬ್ಬರ-ಕೀಟನಾಶಕ ನುಂಗಿ ಬೆಳೆದ ಈಗಿನ ಸಸ್ಯಾಹಾರವು ಆರೋಗ್ಯಕ್ಕೆ ಮಾರಕವಾಗುತ್ತಿದೆ.

ಈಗ ಪ್ರತಿ ವರ್ಷ ವಿಶ್ವದಲ್ಲಿ 19 ಕೋಟಿ ಟನ್ನುಗಳಷ್ಟು, ಭಾರತದಲ್ಲಿ 3 ಕೋಟಿ ಟನ್ನುಗಳಷ್ಟು, ರಸಗೊಬ್ಬರಗಳನ್ನು ಬಳಸಲಾಗುತ್ತಿದೆ. ಪ್ರತಿ ವರ್ಷ ವಿಶ್ವದಲ್ಲಿ 25 ಲಕ್ಷ ಟನ್, ನಮ್ಮಲ್ಲಿ 2 ಲಕ್ಷ ಟನ್, ಕಳೆ-ಕೀಟನಾಶಕಗಳನ್ನು ಬಳಸಲಾಗುತ್ತಿದೆ. ಜನಸಂಖ್ಯೆ ಹೆಚ್ಚುತ್ತಾ, ಕೃಷಿಯೋಗ್ಯ ಭೂಮಿಯು ಕಡಿಮೆಯಾಗುತ್ತಿದ್ದಂತೆ ಇವುಗಳನ್ನು ಬಳಸುವ ಒತ್ತಡವೂ ಹೆಚ್ಚುತ್ತಿದೆ. ಹಿತಮಿತ ಬಳಕೆಯ ಮಾನದಂಡಗಳೆಲ್ಲ ಕಡೆಗಣಿಸಲ್ಪಡುತ್ತಿವೆ, ಕಣ್ಗಾವಲು ವಿಫಲವಾಗುತ್ತಿದೆ, ಲಾಭವೊಂದೇ ಮುಖ್ಯವಾಗುತ್ತಿದೆ. ರಸಗೊಬ್ಬರ ಹಾಗೂ ಕೀಟನಾಶಕಗಳ ಅತಿಬಳಕೆಯಿಂದ ಭೂ-ಜಲ-ವಾಯು ಮಾಲಿನ್ಯವಷ್ಟೇ ಅಲ್ಲದೆ, ಸಕಲ ಜೀವರಾಶಿಯ ಮೇಲೆ, ಆಹಾರಸಂಕಲೆಯ ಮೇಲೆ, ಸಸ್ಯ-ಮಾಂಸಾಹಾರಗಳ ಗುಣಮಟ್ಟದ ಮೇಲೆ, ಹಲಬಗೆಯ ದುಷ್ಪರಿಣಾಮಗಳಾಗುತ್ತಿವೆ.

ಇಂದು ತಿನ್ನುತ್ತಿರುವ ಆಹಾರದಲ್ಲಿ ಸಾಕಷ್ಟು ಪೋಷಕಾಂಶಗಳಿಲ್ಲದೆ ವಿಶ್ವದ ಮುನ್ನೂರು ಕೋಟಿ ಜನ ನ್ಯೂನಪೋಷಣೆಯಿಂದ ಬಳಲುತ್ತಿದ್ದಾರೆ. ಕೃತಕ ಗೊಬ್ಬರಗಳಲ್ಲಿ ಸಾರಜನಕ, ರಂಜಕ,ಪೊಟಾಸಿಯಂನಂತಹ ಕೆಲವೇ ಲವಣಾಂಶಗಳಿರುವುದರಿಂದ ಆಹಾರಬೆಳೆಗಳಿಗೂ ಇವಿಷ್ಟೇ ಲಭ್ಯವಾಗುತ್ತವೆ. ಇಂದು ಕೃಷಿಭೂಮಿಯಲ್ಲಿ ಸಾರಜನಕ, ರಂಜಕ, ಪೊಟಾಸಿಯಂಗಳ ಪ್ರಮಾಣವು ಶೇ. 55-85ರಷ್ಟು ಕಡಿಮೆಯಿದೆ, ಕಬ್ಬಿಣ, ಸತುವು, ಅಯೊಡಿನ್, ಸೆಲೆನಿಯಂ, ತಾಮ್ರ, ಮ್ಯಾಂಗನೀಸ್, ಮೊಲಿಬ್ದಿನಂ, ಬೋರಾನ್ ಮುಂತಾದ ಖನಿಜಾಂಶಗಳ ಪ್ರಮಾಣವು ಶೇ. 10-49ರಷ್ಟು ಕಡಿಮೆಯಿದೆ. ಇದರಿಂದಾಗಿ, ಆಹಾರಬೆಳೆಗಳೂ, ಅವನ್ನು ತಿನ್ನುವ ಮನುಷ್ಯರೂ ಅತ್ಯಗತ್ಯವಾದ ಈ ಖನಿಜ-ಲವಣಾಂಶಗಳಿಂದ ವಂಚಿತರಾಗುತ್ತಿದ್ದಾರೆ. ಈ ಖನಿಜಾಂಶಗಳ ಕೊರತೆಯಿಂದ ದೇಹದ ಅಂಗಾಂಗಗಳ ಕಾರ್ಯಗಳು, ರೋಗರಕ್ಷಣಾ ಸಾಮರ್ಥ್ಯ, ಮಕ್ಕಳ ಮನೋದೈಹಿಕ ಬೆಳವಣಿಗೆ, ಬುದ್ಧಿಮತ್ತೆ, ಏಕಾಗ್ರತೆ ಮುಂತಾದೆಲ್ಲವೂ ಬಾಧಿಸಲ್ಪಡುತ್ತವೆ; ಹಸಿವು ಮತ್ತು ಪಚನಕ್ರಿಯೆಗಳು ಬಾಧಿಸಲ್ಪಟ್ಟು ಇತರ ಪೋಷಕಾಂಶಗಳ ಹೀರುವಿಕೆಗೂ ಅಡ್ಡಿಯಾಗುತ್ತದೆ, ಇನ್ನಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇಂದು ವಿಶ್ವದ ಇನ್ನೂರು ಕೋಟಿ ಜನ ಸತುವಿನ ಕೊರತೆಯಿಂದ ಬಗೆಬಗೆಯ ತೊಂದರೆಗಳಿಗೀಡಾಗುತ್ತಿದ್ದಾರೆ, ವರ್ಷಕ್ಕೆ ಎಂಟು ಲಕ್ಷ ಜನ, ಅವರಲ್ಲಿ ನಾಲ್ಕೂವರೆ ಲಕ್ಷ ಮಕ್ಕಳು, ಸಾವನ್ನಪ್ಪುತ್ತಿದ್ದಾರೆ. ನಮ್ಮ ದೇಶದ ಶೇ. 90ಕ್ಕೂ ಹೆಚ್ಚು ಜನರಲ್ಲಿ ಕಬ್ಬಿಣದ ಕೊರತೆಯಿದೆ, ಶೇ. 40-60ರಷ್ಟು ಜನರಲ್ಲಿ (ಶೇ. 85ರಷ್ಟು ಗರ್ಭಿಣಿಯರು, ಶೇ. 74ರಷ್ಟು ಮಕ್ಕಳು ಮತ್ತು ಶೇ. 90ರಷ್ಟು ಹದಿಹರೆಯದ ಹುಡುಗಿಯರಲ್ಲಿ) ರಕ್ತಹೀನತೆಯಿದೆ. ಭಾರತವೂ ಸೇರಿದಂತೆ ವಿಶ್ವದ ಮೂರರಲ್ಲೊಂದು ಮಗುವಿನಲ್ಲಿ, ಆರರಲ್ಲೊಬ್ಬಳು ಗರ್ಭಿಣಿಯಲ್ಲಿ ಎ ಅನ್ನಾಂಗದ ಕೊರತೆಯಿದೆ, ಸುಮಾರು ಆರೂವರೆ ಲಕ್ಷ ಮಕ್ಕಳು ಅದರಿಂದಾಗಿ ಸಾವನ್ನಪ್ಪುತ್ತಿದ್ದಾರೆ, ಐದು ಲಕ್ಷ ಮಕ್ಕಳು ಅಂಧರಾಗುತ್ತಿದ್ದಾರೆ. ಜೊತೆಗೆ, ಕೃತಕ ರಸಗೊಬ್ಬರಗಳಿಂದ ಕ್ಯಾಡ್ಮಿಯಂ, ಸೀಸ, ಪಾದರಸ, ಆರ್ಸೆನಿಕ್, ನಿಕಲ್ ಮುಂತಾದ ಲೋಹಾಂಶಗಳು ಮಣ್ಣನ್ನು ಸೇರಿ, ಕ್ಯಾನ್ಸರ್, ಮೂತ್ರಪಿಂಡಗಳ ಕಾಯಿಲೆ ಇತ್ಯಾದಿಗಳಿಗೆ ಕಾರಣವಾಗಬಹುದೆಂದೂ ಹೇಳಲಾಗುತ್ತಿದೆ.

ಕಳೆ-ಕೀಟನಾಶಕಗಳು ನೇರವಾಗಿಯೂ, ಪರೋಕ್ಷವಾಗಿಯೂ, ನಮ್ಮೊಳಗೆ ಹೊಕ್ಕುತ್ತಿವೆ. ವಿಷಪ್ರೋಕ್ಷಿತ ಧಾನ್ಯ-ಎಲೆ-ಸೊಪ್ಪು-ತರಕಾರಿ-ಹೂವು-ಹಣ್ಣು-ಬೀಜಗಳ ಮೂಲಕವೂ, ಅವನ್ನು ತಿಂದ ಇತರ ಪ್ರಾಣಿ-ಪಕ್ಷಿಗಳ ಹಾಲು ಹಾಗೂ ಮಾಂಸದ ಮೂಲಕವೂ ಇವು ನಮ್ಮ ದೇಹವನ್ನು ಪ್ರವೇಶಿಸುತ್ತವೆ. ಇಂದು ಮಾರುಕಟ್ಟೆಗಳಲ್ಲಿ ದೊರೆಯುವ ಯಾವುದೇ ಆಹಾರವಸ್ತುವೂ ಕೀಟನಾಶಕ ಮುಕ್ತವೆಂದು ಹೇಳಲಾಗದು. ನಮ್ಮ ದೇಶದ ವಿವಿಧೆಡೆಗಳಲ್ಲಿ ನಡೆಸಲಾಗಿರುವ ಪರೀಕ್ಷೆಗಳನುಸಾರ, ಹಣ್ಣು-ತರಕಾರಿಗಳು, ಧಾನ್ಯಗಳು, ಚಹಾ, ಲಘು ಪೇಯಗಳು, ಹಾಲು, ಮೊಟ್ಟೆ, ಮಾಂಸಗಳ ಶೇ. 11ರಿಂದ 85ರಷ್ಟು ಮಾದರಿಗಳಲ್ಲಿ ಬಗೆಬಗೆಯ ಕೀಟನಾಶಕಗಳನ್ನು ಗುರುತಿಸಲಾಗಿದೆ.

ಕೀಟನಾಶಕಗಳ ಬಳಕೆಯಿಂದ ಪರಿಸರ ಹಾಗೂ ಪ್ರಾಣಿ-ಪಕ್ಷಿ ಸಂಕುಲದ ಮೇಲುಂಟಾಗುವ ದುಷ್ಪರಿಣಾಮಗಳ ಬಗ್ಗೆ ಹಲವು ವರದಿಗಳಿದ್ದರೂ, ವಿಷಪ್ರೋಕ್ಷಿತ ಆಹಾರದಿಂದ ಮನುಷ್ಯರ ಮೇಲಾಗುತ್ತಿರುವ ಪರಿಣಾಮಗಳ ಬಗ್ಗೆ ನಿಖರವಾದ ಮಾಹಿತಿಯ ಕೊರತೆಯಿದೆಯೆಂದೇ ಹೇಳಬಹುದು. ಅನ್ಯಪ್ರಾಣಿಗಳಿಗಾಗುವ ಸಮಸ್ಯೆಗಳ ಆಧಾರದಲ್ಲಿ, ಇಂತಹ ವಿಷಯುಕ್ತವಾದ ಆಹಾರವನ್ನು ದೀರ್ಘಕಾಲ ಸೇವಿಸುವುದರಿಂದ ವಿವಿಧ ಕ್ಯಾನ್ಸರುಗಳು, ನಿರ್ನಾಳ ವ್ಯವಸ್ಥೆಯ (ವಿವಿಧ ಹಾರ್ಮೋನುಗಳ) ಸಮಸ್ಯೆಗಳು, ನಿರ್ವೀರ್ಯತೆ ಹಾಗೂ ಬಂಜೆತನ, ನರಮಂಡಲದ ಸಮಸ್ಯೆಗಳು, ಅದರಲ್ಲೂ ವಿಶೇಷವಾಗಿ ಮಕ್ಕಳಲ್ಲಿ ಮನೋದೈಹಿಕ ಬೆಳವಣಿಗೆಯ ಸಮಸ್ಯೆಗಳು, ಯಕೃತ್ತು, ಶ್ವಾಸಾಂಗ ಹಾಗೂ ಮೂತ್ರಪಿಂಡಗಳ ಕಾಯಿಲೆಗಳು ಉಂಟಾಗಬಹುದೆಂದು ಹೇಳಲಾಗುತ್ತದೆ.

ಇವನ್ನೆಲ್ಲ ಪರಿಹರಿಸಲೋಸುಗ ಹೊಸ ಕೃಷಿಕ್ರಾಂತಿಗೆ ಸಿದ್ಧತೆಯಾಗುತ್ತಿದೆ; ಖನಿಜಾಂಶಭರಿತ ಹೊಸ ರಸಗೊಬ್ಬರಗಳನ್ನು, ಪರಿಸರ ಸ್ನೇಹಿಯೆನ್ನಲಾಗುವ ಕಳೆ-ಕೀಟನಾಶಕಗಳನ್ನು, ವಿಷಪೂರಿತವಾದ ಯಾ ಅನ್ನಾಂಗಭರಿತವಾದ ಕುಲಾಂತರಿ ಸಸ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಆದರೆ ಇವುಗಳು ಕಂಪೆನಿಗಳಿಗೆ ಲಾಭವನ್ನಿತ್ತರೂ, ನಮ್ಮ ಆರೋಗ್ಯವನ್ನು ಸುಧಾರಿಸುತ್ತವೆಯೆನ್ನಲಾಗದು. ಅವನ್ನು ಕಾಯಲಾಗದು, ಸಾವಯವ-ಸುಸ್ಥಿತ ಕೃಷಿಪದ್ಧತಿಯನ್ನು ನಂಬಿಕೊಂಡಿದ್ದರೂ ಸಾಲದು. ಹಾಗಿರುವಾಗ, ನಮ್ಮ ದೇಹವನ್ನು ರಕ್ಷಿಸಿಕೊಳ್ಳಬೇಕಾದರೆ, ಲಭ್ಯವಿರುವ ಆಹಾರವಸ್ತುಗಳನ್ನೇ ಜಾಣ್ಮೆಯಿಂದ ಬಳಸಿಕೊಳ್ಳುವ ಉಪಾಯಗಳನ್ನು ಹುಡುಕಬೇಕಾಗುತ್ತದೆ.

ಅಗತ್ಯವುಳ್ಳ ಪೋಷಕಾಂಶಗಳೆಲ್ಲವನ್ನೂ ಪಡೆಯುವುದಕ್ಕಾಗಿ ವೈವಿಧ್ಯಮಯವಾದ ಆಹಾರವನ್ನು ತಿನ್ನಬೇಕು. ಪ್ರಕೃತಿದತ್ತವಾದ, ಸಾಂಪ್ರದಾಯಿಕವಾದ, ಹಳ್ಳಿ-ಕಾಡುಗಳಲ್ಲಿ ದೊರೆಯುವ ಸೊಪ್ಪು-ತರಕಾರಿ-ಕಾಯಿ-ಬೀಜಗಳನ್ನೂ, ದ್ವಿದಳ ಧಾನ್ಯಗಳನ್ನೂ, ಅಣಬೆಗಳನ್ನೂ ಹೆಚ್ಚು ಹೆಚ್ಚು ತಿನ್ನಬೇಕು. ರಸಗೊಬ್ಬರ ಹಾಗೂ ಕೀಟನಾಶಕಗಳಿಲ್ಲದೆಯೇ ಬೆಳೆಯುವ ಹಲಸು, ದೀವಿಹಲಸು, ಬಿದಿರು, ನುಗ್ಗೆ ಮುಂತಾದ ಸಸ್ಯಗಳ ಉತ್ಪನ್ನಗಳನ್ನು, ಚಟ್ಟೆ ಸೊಪ್ಪು, ಕೆಸುವಿನ ಸೊಪ್ಪು, ನೆಲಬಸಳೆ ಮುಂತಾದ ವನ್ಯ ಸೊಪ್ಪು-ತರಕಾರಿಗಳನ್ನು ಹೆಚ್ಚು ಸೇವಿಸಬಹುದು; ಹಾಗೆಯೇ, ಸ್ವತಃ ಬೆಳೆಸಿದ ಅಥವಾ ಪರಿಚಯಸ್ಥರು ಬೆಳೆಸಿದ ವಿಷರಹಿತ ತರಕಾರಿಗಳಿದ್ದರೆ ಒಳ್ಳೆಯದು.

ಮಾರುಕಟ್ಟೆಯಲ್ಲಿ ವಿಷದ ಬಣ್ಣ-ವಾಸನೆಗಳಿಲ್ಲದ, ಮೇಣ ಮೆತ್ತಿಲ್ಲದ, ಸೊಪ್ಪು-ತರಕಾರಿಗಳನ್ನು ಆಯ್ದುಕೊಳ್ಳಬೇಕು. ಹಣ್ಣಿನ ಸೇವನೆಯನ್ನು ಕಡಿತಗೊಳಿಸಿದರೆ ಕೀಟ-ಶಿಲೀಂಧ್ರನಾಶಕಗಳು, ಹಣ್ಣಾಗಿಸುವ ವಿಷಗಳು, ಮೇಣ ಇವೆಲ್ಲವನ್ನೂ ಕಡಿಮೆ ಮಾಡಿದಂತಾಗುತ್ತದೆ, ಜೊತೆಗೆ,  ಸಕ್ಕರೆಯ ಸೇವನೆಯಲ್ಲೂ ಕಡಿತವಾಗುತ್ತದೆ. ತರಕಾರಿಗಳನ್ನು ಶುದ್ಧ ತಣ್ಣೀರಿನಲ್ಲಿ ಐದಾರು ಬಾರಿ ತೊಳೆಯುವುದರಿಂದ 70-80% ಕೀಟನಾಶಕಗಳನ್ನು ನಿರ್ಮೂಲನೆ ಮಾಡಬಹುದು; ಸೊಪ್ಪುಗಳ ಎಲೆ-ಕಾಂಡಗಳನ್ನು ಬೇರ್ಪಡಿಸಿ, 2% ಉಪ್ಪಿನ (ಅಥವಾ 10% ವಿನೆಗರ್) ದ್ರಾವಣದಲ್ಲಿ ತೊಳೆದರೆ ಹೆಚ್ಚಿನ ಕೀಟನಾಶಕಗಳನ್ನು ತೆಗೆಯಬಹುದು. ಸಿಪ್ಪೆಗಳನ್ನು ಕಿತ್ತರೆ ಅಂಟಿರುವ ವಿಷಗಳೂ, ಮೇಣಗಳೂ ನಿರ್ಮೂಲನೆಯಾಗುತ್ತವೆ. ತರಕಾರಿಗಳನ್ನು ತೊಳೆದಾದ ಬಳಿಕ ಸ್ವಲ್ಪ ಹೊತ್ತು ಬಿಸಿನೀರು ಅಥವಾ ಹಬೆಯಲ್ಲಿಟ್ಟರೆ ಕೀಟನಾಶಕಗಳು ಕಳಚಿಕೊಳ್ಳುತ್ತವೆ. ತರಕಾರಿ, ಮಾಂಸ, ಹಾಲುಗಳನ್ನು ಕಾಯಿಸಿ-ಬೇಯಿಸಿದಾಗಲೂ ಕೀಟನಾಶಕಗಳು ಪ್ರತ್ಯೇಕಿಸಲ್ಪಡುತ್ತವೆ.

ಸಂಸ್ಕರಿತ, ಸಿದ್ಧ ತಿನಿಸುಗಳಲ್ಲಿ ಕೀಟನಾಶಕಗಳು ಮತ್ತಿತರ ವಿಷಗಳು ಇರುವುದಿಲ್ಲ; ಆದರೆ ಅವುಗಳಲ್ಲಿ ಅನ್ನಾಂಗ-ಖನಿಜಾಂಶಗಳಂತಹ ಪೋಷಕಾಂಶಗಳೂ ಇರುವುದಿಲ್ಲ, ದೇಹಕ್ಕೆ ಅವು ಒಗ್ಗದೆ ರೋಗಗಳೂ ತಪ್ಪುವುದಿಲ್ಲ.

ಹಿಂದಿನ ಕಾಲದಲ್ಲಿ ಒಳ್ಳೆಯ ಆಹಾರವು ಅದರಷ್ಟಕ್ಕೇ ಬೆಳೆಯುತ್ತಿತ್ತು, ಮನುಷ್ಯರು ಅದನ್ನು ಹುಡುಕಿ ಅಂಡಲೆಯಬೇಕಿತ್ತು, ಇಂದು ಆಹಾರವನ್ನು ನಾವೇ ಬೆಳೆಯುತ್ತಿದ್ದೇವೆ, ಆದರೆ ಶುದ್ಧವಾದ, ಪೌಷ್ಟಿಕವಾದ ಆಹಾರವನ್ನು ಕಾಣುವುದೇ ಕಷ್ಟವಾಗಿದೆ.  ಹಾಗಿರುವಾಗ, ನಮ್ಮ ವಠಾರಗಳಲ್ಲಿ, ತಾರಸಿಗಳಲ್ಲಿ, ಹೂಕುಂಡಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆಬದಿಗಳಲ್ಲಿ, ಎಲ್ಲೆಲ್ಲಿ ಸಾಧ್ಯವೂ ಅಲ್ಲೆಲ್ಲ, ಸುಲಭವಾಗಿ ಬೆಳೆಯಬಲ್ಲ ವನ್ಯ ಸೊಪ್ಪು-ತರಕಾರಿಗಳನ್ನು ಬೆಳೆಸಬಾರದೇಕೆ?

ಆರೋಗ್ಯ ಆಶಯ – ವಿಜಯ ಕರ್ನಾಟಕ: ಒಳ್ಳೆಯ ಮಾಂಸಾಹಾರ ಎಲ್ಲರಿಗೂ ದೊರೆಯಲಿ [ಅಕ್ಟೋಬರ್ 15, 2014, ಬುಧವಾರ] [ನೋಡಿ | ನೋಡಿ]

ಮಾಂಸೋತ್ಪಾದನೆಯನ್ನು ಕಟ್ಟುನಿಟ್ಟಾಗಿ ಪಾರದರ್ಶಕವಾಗಿ ನಿಯಂತ್ರಿಸುವ ಅಗತ್ಯವಿದೆ

ಕೋಳಿಸಾಕಣೆಯಲ್ಲಿ ಪ್ರತಿಜೈವಿಕಗಳ ಬಳಕೆಯಿಂದ ಮನುಷ್ಯರಿಗೆ ಅಪಾಯವಿದೆಯೆಂದು ಇತ್ತೀಚೆಗೆ ವರದಿಯಾಗಿತ್ತು. ಹೆದರಿದ ಕೆಲವರು ಕೋಳಿಸೇವನೆಯನ್ನು ಬಿಟ್ಟದ್ದಾಯಿತು. ನಮ್ಮ ಆಹಾರವು ವ್ಯಾಪಾರದ ಸರಕಾದಂತೆ, ಅದರಲ್ಲಿ ಲಾಭದಾಸೆ ಹೆಚ್ಚಿದಂತೆ ಇಂತಹ ಸುದ್ದಿಗಳು ಹೆಚ್ಚುತ್ತಲೇ ಇವೆ. ಆದರೆ ಆಹಾರೋದ್ಯಮವನ್ನು ನೆಚ್ಚಿಕೊಳ್ಳದೆ ನಾವಿಂದು ಊಟ ಮಾಡಲಾದೀತೇ?

ಮೊದ-ಮೊದಲಲ್ಲಿ ಮನುಷ್ಯನು ಆಹಾರಕ್ಕಾಗಿ ಅಲೆದು-ಬೇಟೆಯಾಡುತ್ತಿದ್ದ; 13-15000 ವರ್ಷಗಳಿಂದೀಚೆಗೆ ಕುರಿ, ಆಡು, ಆಕಳು, ಹಂದಿ, ಕೋಳಿ, ಬಾತು ಮುಂತಾದ ಪ್ರಾಣಿ-ಪಕ್ಷಿಗಳನ್ನೂ, ಕೆಲವು ಸಸ್ಯಗಳನ್ನೂ, ಆಹಾರಕ್ಕಾಗಿ ಪಳಗಿಸಿ, ಸಾಕಿ, ಬೆಳೆಸತೊಡಗಿದ. ಇವುಗಳ ಜೊತೆಗೆ, ಸಿಂಹ, ಚಿರತೆ, ಆನೆ, ಮಂಗ, ಹಾವು, ಕಪ್ಪೆ, ಇಲಿ, ನಾಯಿ ಇತ್ಯಾದಿ ಎಪ್ಪತ್ತರಷ್ಟು ಪ್ರಾಣಿಗಳು ಹಾಗೂ ಕಾಗೆ, ಗೂಬೆ, ಗಿಡುಗ ಮುಂತಾದ ತೊಂಭತ್ತರಷ್ಟು ಪಕ್ಷಿಗಳು ತಿನ್ನಲು ಯೋಗ್ಯವೆಂದು 2000 ವರ್ಷಗಳಿಗೂ ಹಿಂದಿನ ಚರಕ ಸಂಹಿತೆಯಲ್ಲಿ ಪಟ್ಟಿ ಮಾಡಲಾಗಿದೆ. [ಸೂತ್ರಸ್ಥಾನ, 27:35-52] ಕಾಲ ಕಳೆದು, ಕೃಷಿಭೂಮಿ ಹಿಗ್ಗಿ, ಕಾಡುಗಳು ಮರೆಯಾಗಿ, ಬೇಟೆ ದುರ್ಲಭವಾಗಿ ಈಗ ಐದಾರು ಬಗೆಯ ಸಾಕು ಪ್ರಾಣಿ-ಪಕ್ಷಿಗಳಷ್ಟೇ ಮಾಂಸಾಹಾರಕ್ಕೆ ಉಳಿದುಕೊಂಡಿವೆ; ಕೀಟಗಳು, ಹಾವುಗಳು, ಇಲಿ, ನಾಯಿ ಇತ್ಯಾದಿಗಳು ನಮ್ಮ ದೇಶದಲ್ಲೂ, ಇತರೆಡೆಗಳಲ್ಲೂ ಸೀಮಿತವಾಗಿ ಸೇವಿಸಲ್ಪಡುತ್ತಿವೆ.

ಇಂದಿಗೂ ಭಾರತದಲ್ಲಿ ಶೇ. 88ರಷ್ಟು, ಅನ್ಯ ದೇಶಗಳಲ್ಲಿ ಶೇ.95ರಷ್ಟು ಮನುಷ್ಯರು ಮಾಂಸಾಹಾರಿಗಳಾಗಿದ್ದಾರೆ. ಮಾಂಸಾಹಾರವು ಹಸಿವನ್ನು ಬೇಗನೇ ಇಂಗಿಸಿ ಸಂತೃಪ್ತಿಯನ್ನು ನೀಡುವುದರಿಂದಲೂ, ಹೆಚ್ಚಿನ ಪೋಷಕಾಂಶಗಳನ್ನು ಒದಗಿಸಿ ದೇಹಕ್ಕೆ ಬಲ ನೀಡುವುದರಿಂದಲೂ ಹೆಚ್ಚಿನವರು ಅದನ್ನೇ ಬಯಸುತ್ತಾರೆ. ನಮ್ಮ ನಗರಗಳು ಬೆಳೆದು, ಮಧ್ಯಮ ವರ್ಗಗಳು ಬೆಳೆಯುತ್ತಿದ್ದಂತೆ ಮಾಂಸಾಹಾರದ ಬಳಕೆಯು ಇನ್ನಷ್ಟು ಹೆಚ್ಚುತ್ತಲಿದೆ.

ಹೀಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಅತ್ಯಾಧುನಿಕ ವಿಜ್ಞಾನ-ತಂತ್ರಜ್ಞಾನಗಳೆಲ್ಲವನ್ನೂ ಮಾಂಸೋತ್ಪಾದನೆಯಲ್ಲಿ ಬಳಸಲಾಗುತ್ತಿದೆ. ಹದಿನೆಂಟನೇ ಶತಮಾನದ ಮಧ್ಯದವರೆಗೆ ಧಾನ್ಯಗಳನ್ನೂ, ಪ್ರಾಣಿ-ಪಕ್ಷಿಗಳನ್ನೂ ಮನೆಮಂದಿಯೇ ಸಾಕಿ-ಬೆಳೆಸುತ್ತಿದ್ದರೆ, ಈ 150 ವರ್ಷಗಳಲ್ಲಿ ಪಶು-ಪಕ್ಷಿ ಸಾಕಣೆಯು ಒಂದು ಬೃಹತ್ ಉದ್ಯಮವಾಗಿ ಬೆಳೆದಿದೆ; ಇಂದು ಶೇ.50-75ರಷ್ಟು ಮಾಂಸ-ಮೊಟ್ಟೆಗಳು ಉದ್ಯಮ ಮೂಲದ್ದಾಗಿವೆ. ನಮ್ಮ ದೇಶದಲ್ಲಿ ಕೋಳಿಸಾಕಣೆಯು ಬಹುದೊಡ್ಡದಾಗಿ ಬೆಳೆದಿದೆ; ಮತ್ಸ್ಯೋದ್ಯಮವು ಹೆಚ್ಚಾಗಿ ಸಮುದ್ರ-ಸಾಗರಗಳನ್ನೇ ಅವಲಂಬಿಸಿದೆ. ಅಂತಹಾ ಬಲಿಷ್ಠ ಆಹಾರೋದ್ಯಮದ ಪ್ರಭಾವದೆಡೆಯಲ್ಲಿ  ರಹಸ್ಯಗಳು ಹೊರಬರುವುದು ಸುಲಭವಿಲ್ಲ. ಆಹಾರದ ಉತ್ಪಾದನೆ, ಸಂಸ್ಕರಣೆ, ಸಂಗ್ರಹ, ಸಾಗಾಟ, ಮಾರಾಟಗಳಲ್ಲಿ ಇರಬಹುದಾದ ಸಮಸ್ಯೆಗಳನ್ನು ಅರಿಯುವುದೂ ಸುಲಭವಲ್ಲ.

ಹಿಂದೆ ಸಾಕುಪ್ರಾಣಿಗಳಿಗೆ ಹುಲ್ಲು-ಕಡ್ಡಿಗಳೇ ಆಹಾರವಾಗಿದ್ದರೆ, ಈಗ ಜೋಳ, ಸೋಯಾ ಮಂತಾದ ಧಾನ್ಯಗಳನ್ನೂ, ಅವುಗಳ ಹಿಂಡಿಗಳನ್ನೂ ತಿನ್ನಿಸಲಾಗುತ್ತಿದೆ. ಇಂದು ಬೆಳೆಯುವ ಧಾನ್ಯಗಳಲ್ಲಿ ಶೇ. 35ಕ್ಕೂ ಹೆಚ್ಚಿನವು ಸಾಕುಪ್ರಾಣಿಗಳ ಹೊಟ್ಟೆಗಳನ್ನೇ ಸೇರುತ್ತಿವೆ. ನಿಸರ್ಗಸಹಜವಲ್ಲದ ಈ ಧಾನ್ಯಾಹಾರವನ್ನು ಸೇವಿಸುವುದರಿಂದಲೂ, ಕೂಡಿ-ಕಟ್ಟಿ ಬೆಳೆಸುವುದರಿಂದಲೂ ಸಾಕುಪ್ರಾಣಿ-ಪಕ್ಷಿಗಳಿಗೆ ಸೋಂಕಿನ ಅಪಾಯ ಹೆಚ್ಚುತ್ತದೆ. ಪ್ರತಿಜೈವಿಕಗಳನ್ನು ಬಳಸಿದರೆ ಸಾಕುಪ್ರಾಣಿಗಳು ರೋಗರಹಿತವಾಗಿ ಬೇಗನೆ ಬೆಳೆಯುತ್ತವೆ ಎನ್ನುವುದು 1950ರಲ್ಲಿ ಗೊತ್ತಾದ ಬಳಿಕ ಪಶು-ಪಕ್ಷಿ ಆಹಾರಗಳಲ್ಲಿ ಪ್ರತಿಜೈವಿಕಗಳ ಬೆರೆಸುವಿಕೆ ತೊಡಗಿತು. ಇಂದು ಉತ್ಪಾದನೆಯಾಗುವ ಪ್ರತಿಜೈವಿಕಗಳಲ್ಲಿ ಶೇ. 90ರಷ್ಟು ಆಹಾರೋದ್ಯಮಕ್ಕೇ ಹೋಗುತ್ತಿವೆ. ಮನುಷ್ಯರಲ್ಲಿ ಚಿಕಿತ್ಸೆಗಾಗಿ ಬಳಸುವ ಪ್ರತಿಜೈವಿಕಗಳನ್ನು ಸಾಕುಪ್ರಾಣಿ-ಪಕ್ಷಿಗಳಲ್ಲಿ ಬಳಸಬಾರದೆಂಬ ನಿರ್ಬಂಧಗಳಿದ್ದರೂ ಅದರ ಪಾಲನೆಯಾಗುವ ಖಾತರಿಯಿಲ್ಲ.

ಇತ್ತೀಚೆಗೆ ದಿಲ್ಲಿಯಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ಶೇ. 40ರಷ್ಟು ಕೋಳಿಮಾಂಸದ ಮಾದರಿಗಳಲ್ಲಿ ಪ್ರತಿಜೈವಿಕಗಳಿದ್ದುದು ಪತ್ತೆಯಾಗಿತ್ತು. ಅಂತಹಾ ಮಾಂಸವನ್ನು ತಿಂದರೆ ವ್ಯಕ್ತಿಯ ಕರುಳಲ್ಲಿರುವ ಬ್ಯಾಕ್ಟೀರಿಯಾಗಳು ರೋಧಶಕ್ತಿ ಬೆಳೆಸಿಕೊಂಡು, ಚಿಕಿತ್ಸೆಗೆ ಬಗ್ಗದಂತಾಗುತ್ತವೆ ಎನ್ನಲಾಗಿತ್ತು. ಆದರೆ, ಬ್ಯಾಕ್ಟೀರಿಯಾಗಳು ಪ್ರತಿಜೈವಿಕಗಳೆದುರು ರೋಧಶಕ್ತಿ ಬೆಳೆಸಿಕೊಳ್ಳುವುದಕ್ಕೆ ಪ್ರಾಣಿ-ಪಕ್ಷಿ ಸಾಕಣೆಯಲ್ಲಿ ಪ್ರತಿಜೈವಿಕಗಳ ಅತಿ ಬಳಕೆಯೊಂದೇ ಕಾರಣವಲ್ಲ, ಮನುಷ್ಯರಲ್ಲಿ ಅವುಗಳ ಬೇಕಾಬಿಟ್ಟಿ ಬಳಕೆಯೂ ಕಾರಣವಾಗಿದೆ. ಆದ್ದರಿಂದ ಎಲ್ಲೆಡೆ ಪ್ರತಿಜೈವಿಕಗಳ ಬಳಕೆಗೆ ಕಡಿವಾಣ ಹಾಕಬೇಕಾಗಿದೆ. ಕೇವಲ ಕೋಳಿಮಾಂಸ ಸೇವನೆಯನ್ನು ತ್ಯಜಿಸುವುದರಿಂದ ಬ್ಯಾಕ್ಟೀರಿಯಾಗಳಲ್ಲಿ ರೋಧಶಕ್ತಿ ಬೆಳೆಯುವುದನ್ನು ತಡೆಯಲಾಗದು.

ಪ್ರತಿಜೈವಿಕಗಳನ್ನು ಹೆಚ್ಚು ಬಳಸದೆಯೇ ಪಶು-ಪಕ್ಷಿ ಸಾಕಣೆ ಮಾಡುವ ವಿಧಾನಗಳು ಈಗೀಗ ಬಲಗೊಳ್ಳುತ್ತಿವೆ. ಬೇಗನೇ ಬೆಳೆಯಬಲ್ಲ, ಹೆಚ್ಚು ಮಾಂಸವನ್ನು ನೀಡಬಲ್ಲ ಪ್ರಾಣಿ-ಪಕ್ಷಿಗಳ ತಳಿಗಳನ್ನು ಕಳೆದ ಐದಾರು ದಶಕಗಳಲ್ಲಿ ಗುರುತಿಸಿ, ಅಭಿವೃದ್ಧಿಪಡಿಸಲಾಗಿದೆ. ಹೆಚ್ಚಿನ ದೊಡ್ಡ ಸಾಕಣಾಲಯಗಳಲ್ಲಿ ಸ್ವಚ್ಛತೆ, ಉಷ್ಣತೆ, ಆಹಾರ ಇತ್ಯಾದಿಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲಾಗುತ್ತಿದೆ. ನಿರ್ದಿಷ್ಟ ಸೋಂಕುಗಳನ್ನು ತಡೆಯಲು ಲಸಿಕೆಗಳನ್ನೂ ಬಳಸಲಾಗುತ್ತಿದೆ. ಪ್ರತಿಜೈವಿಕಗಳನ್ನು ಆಹಾರದಲ್ಲಿ ಬೆರೆಸದೆ, ಸೋಂಕು ತಗಲಿದರಷ್ಟೇ ನೀಡುವ ಪದ್ಧತಿ ಹೆಚ್ಚುತ್ತಿದೆ. ಆರೇಳು ವಾರಗಳಲ್ಲೇ ಬೆಳೆದು ಉತ್ತಮ ಮಾಂಸ-ಮೊಟ್ಟೆಗಳನ್ನು ನೀಡಬಲ್ಲ ವಿಶೇಷ ಕೋಳಿತಳಿಗಳು ನಮ್ಮ ದೇಶದಲ್ಲೂ ಲಭ್ಯವಿವೆ. ಅಂತಹ ಉತ್ತಮ ಕೋಳಿಮಾಂಸವನ್ನು ನಂಬಲರ್ಹವಾದ, ಸ್ವಚ್ಛತೆಯುಳ್ಳ, ಉತ್ತಮ ಸಂಸ್ಕರಣಾ ಸೌಲಭ್ಯಗಳುಳ್ಳ ಅಂಗಡಿಗಳಿಂದ ಖರೀದಿಸಬಹುದು. ಮೊಟ್ಟೆಗಳನ್ನು ಖರೀದಿಸುವಾಗಲೂ ಹೊಸದಾದ, ಬಿರುಕಿಲ್ಲದೆ ಸರಿಯಾದ ಆಕಾರದಲ್ಲಿರುವ, ಸ್ವಚ್ಛವಾದ, ಹೊರಗಿನ ವಾಸನೆಗಳಿಂದ ಮುಕ್ತವಾಗಿರುವಂತಹವುಗಳನ್ನು ಹುಡುಕಬೇಕು.

ಹೊರದೇಶಗಳಲ್ಲಿ 18-22 ತಿಂಗಳುಗಳಲ್ಲೇ ಬೆಳೆಯಬಲ್ಲ ಆಡು, ಕುರಿ ಮತ್ತಿತರ ಜಾನುವಾರು ತಳಿಗಳನ್ನು ಮಾಂಸಕ್ಕಾಗಿ ಬಳಸಲಾಗುತ್ತದೆ; ನಮ್ಮಲ್ಲಿನ್ನೂ ಹಾಗಿಲ್ಲ. ಅಮೆರಿಕಾದಲ್ಲಿ ಜಾನುವಾರುಗಳ ಬೆಳವಣಿಗೆಯನ್ನು ಪ್ರಚೋದಿಸುವ ಹಾರ್ಮೋನುಗಳನ್ನು ಬಳಸಲಾಗುತ್ತಿದೆಯಾದರೂ, ನಮ್ಮಲ್ಲಿಲ್ಲ. ನಮ್ಮ ದೇಶದ ಆಡು, ಕುರಿ ಮತ್ತಿತರ ಜಾನುವಾರುಗಳು ಹುಲ್ಲಿನ ಮೇವನ್ನೇ ಹೆಚ್ಚಾಗಿ ಅವಲಂಬಿಸಿದ್ದು, ಉತ್ತಮ ಮಾಂಸವನ್ನು ಒದಗಿಸಬಲ್ಲವು. ಬಡಜನರ ನ್ಯೂನ ಪೋಷಣೆಯನ್ನು ನಿವಾರಿಸಲು ಇವು ನೆರವಾಗಬಲ್ಲವು. ಹುಲ್ಲು ಸೇವಿಸಿ, ಅಡ್ಡಾಡಿಕೊಂಡಿದ್ದ ಆಡು-ಜಾನುವಾರುಗಳ ಕೆಂಪು ಮಾಂಸವು ಅತ್ಯುತ್ತಮವಾದ ಪೋಷಕಾಂಶಗಳನ್ನು ಒದಗಿಸುತ್ತದೆಯೆಂದೂ, ಅದರ ಸೇವನೆಯಿಂದ ಮೇದಸ್ಸಿನ (ಕೊಲೆಸ್ಟರಾಲ್) ಪ್ರಮಾಣದ ಮೇಲೆ ಯಾ ಹೃದಯದ ಮೇಲೆ ದುಷ್ಪರಿಣಾಮಗಳಾಗುತ್ತವೆ ಎನ್ನುವುದಕ್ಕಾಗಲೀ, ಕ್ಯಾನ್ಸರಿಗೆ ಕಾರಣವಾಗುತ್ತದೆ ಎನ್ನುವುದಕ್ಕಾಗಲೀ ಆಧಾರಗಳಿಲ್ಲವೆಂದೂ ಹಲವು ವರದಿಗಳಲ್ಲಿ ಹೇಳಲಾಗಿದೆ. [ಮೀಟ್ ಸಯನ್ಸ್, 2014-98(3):452;ಬ್ರಿಟಿಷ್ ಜ ನ್ಯೂಟ್ರಿ, 2012-107(10):1403; ಆರ್ಕೈವ್ಸ್ ಇಂಟ ಮೆಡಿ, 1999-159(12)1331; ಅಮೆ ಜ ಕ್ಲಿನಿ ನ್ಯೂಟ್ರಿ, 2012-96(2):446]

ಮಾಂಸ, ಮೊಟ್ಟೆ, ಮೀನುಗಳು ಕೆಡದಂತೆ ರಕ್ಷಿಸಲು ಶೀತಲೀಕರಣವನ್ನೂ, ಮನುಷ್ಯರಿಗೆ ಹಾನಿಯುಂಟುಮಾಡದ ಉಪ್ಪು ಮತ್ತಿತರ ರಾಸಾಯನಿಕ ಸಂಯುಕ್ತಗಳನ್ನೂ ಬಳಸಲಾಗುತ್ತಿದೆ. ದೇಶದ ಕೆಲವೆಡೆ ಮೀನಿಗೆ ಫಾರ್ಮಲಿನ್ ನಂತಹ ಹಾನಿಕಾರಕ ಸಂಯುಕ್ತಗಳನ್ನು ಬೆರೆಸುವ ಬಗ್ಗೆ ವರದಿಗಳಾಗಿವೆ. ಇದನ್ನು ಬರಿಗಣ್ಣಿನಿಂದ ಗುರುತಿಸುವುದು ಸುಲಭವಲ್ಲ. ಒಳ್ಳೆಯ ಮೀನು ತಾಜಾತನದ, ಮೃದುವಾದ ಪರಿಮಳವನ್ನು ಹೊಂದಿರಬೇಕು, ಗಾಢವಾದ ವಾಸನೆ ಅಥವಾ ದುರ್ನಾತವಿರಬಾರದು; ಗಟ್ಟಿಯಾಗಿದ್ದು, ಹೊಳಪಿರಬೇಕು, ಒತ್ತಿ ಬಿಟ್ಟರೆ ಪುಟಿಯಬೇಕು; ಕಿವಿರುಗಳು ಗಾಢಕೆಂಪಿರಬೇಕು, ಕಣ್ಣುಗಳು ಸ್ವಚ್ಛವಾಗಿ, ಸ್ವಲ್ಪ ಹೊರಕ್ಕೆ ಉಬ್ಬಿರಬೇಕು; ಸಿಗಡಿಯು ಪಾರದರ್ಶಕವಾಗಿ, ವಾಸನೆರಹಿತವಿರಬೇಕು.

ವಿಶ್ವಾದ್ಯಂತ ಆಹಾರದ ಸುರಕ್ಷಿತತೆಯನ್ನು ಖಾತರಿಗೊಳಿಸುವ ವ್ಯವಸ್ಥೆಯನ್ನು ಬಲಪಡಿಸುವ ಪ್ರಯತ್ನಗಳಾಗುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಆಹಾರ ಮತ್ತು ಕೃಷಿ ಸಂಸ್ಥೆಗಳು ರೂಪಿಸಿರುವ ಅಂತರರಾಷ್ಟ್ರೀಯ ಆಹಾರ ಮಾನದಂಡಗಳಲ್ಲಿ (http://www.codexalimentarius.org/standards/en/) ಆಹಾರೋದ್ಯಮವು ಪಾಲಿಸಬೇಕಾದ  ಕಟ್ಟುನಿಟ್ಟಿನ ಕ್ರಮಗಳನ್ನು ಸೂಚಿಸಲಾಗಿದೆ. ನಮ್ಮ ಆಹಾರೋದ್ಯಮದ ಮೇಲೆ ನಿಗಾ ವಹಿಸಲು ಭಾರತೀಯ ಆಹಾರ ಸುರಕ್ಷಿತತೆ ಹಾಗೂ ಮಾನದಂಡಗಳ ಪ್ರಾಧಿಕಾರವನ್ನು (http://www.fssai.gov.in/) ಸ್ಥಾಪಿಸಲಾಗಿದ್ದು, ಜಿಲ್ಲೆಗೊಬ್ಬ ಆಹಾರ ಸುರಕ್ಷಣಾಧಿಕಾರಿಯನ್ನು ನೇಮಿಸಲಾಗುತ್ತಿದೆ.

ವಿಶ್ವದ 680 ಕೋಟಿಗೂ ಹೆಚ್ಚು ಮಾಂಸಾಹಾರಿ ಮನುಷ್ಯರಿಗೆ ಮೀನು-ಮಾಂಸ-ಮೊಟ್ಟೆಗಳನ್ನು ಒದಗಿಸಬೇಕಾದರೆ ಉದ್ಯಮದ ನೆರವಿಲ್ಲದೆ ಸಾಧ್ಯವಾಗದು. ಮನುಷ್ಯರಿಗೆ ಅತ್ಯಗತ್ಯವಾದ ಮೇದಸ್ಸು, ಪ್ರೋಟೀನುಗಳು, ವಿಟಮಿನ್ ಬಿ12, ಕಬ್ಬಿಣ ಮುಂತಾದ ಖನಿಜಾಂಶಗಳನ್ನು ಯಥೇಷ್ಟವಾಗಿ ಒದಗಿಸುವ ಮಾಂಸಾಹಾರವನ್ನು ಕಡಿತಗೊಳಿಸಿದರೆ ಆರೋಗ್ಯಕ್ಕೆ ಒಳಿತಾಗದು. ನಮ್ಮ ದೇಶದಲ್ಲಿ ದೊರೆಯುವ ಮೀನು-ಮೊಟ್ಟೆ-ಮಾಂಸಗಳು ಆರೋಗ್ಯಕರವಾಗಿವಂತೆಯೂ, ಅಗತ್ಯವುಳ್ಳವರೆಲ್ಲರನ್ನೂ ತಲುಪುವಂತೆಯೂ ಮಾಡುವುದಕ್ಕೆ ಸುಸ್ಪಷ್ಟವಾದ ನೀತಿ ನಿರೂಪಣೆ ಹಾಗೂ ನಿಯಂತ್ರಣಾ ವ್ಯವಸ್ಥೆ ಬರಬೇಕಾಗಿದೆ.

Leave a Reply

Your email address will not be published. Required fields are marked *