ಆರಿದ ಬಾಯಿಗಳಿಗೆ ಎಲ್ಲಿದೆ ಸಾಂತ್ವನ?

ಆರೋಗ್ಯ ಆಶಯ – ವಿಜಯ ಕರ್ನಾಟಕ: ಆರಿದ ಬಾಯಿಗಳಿಗೆ ಎಲ್ಲಿದೆ ಸಾಂತ್ವನ? [ಮಾರ್ಚ್ 20, 2013, ಬುಧವಾರ] [ನೋಡಿ | ನೋಡಿ]

ಎಲ್ಲಾ ಜೀವಿಗಳ ಕಣಕಣದಲ್ಲೂ ಇರುವ ನೀರು ವ್ಯಾಪಾರದ ಸರಕಾಗಬಾರದು

ಅನಂತಾನಂತವಾದ ಈ ತಾರಾಮಂಡಲದಲ್ಲಿ ಭೂಮಿಯಂತಹ ಕೆಲ ಗ್ರಹಗಳಲ್ಲಷ್ಟೇ ನೀರಿರುವುದು, ಅಲ್ಲಷ್ಟೇ ಜೀವರಾಶಿಯಿರುವುದು. ನಮ್ಮ ದೇಹದೊಳಗೆ ನೀರಿನಂಶ ನೂರಕ್ಕೆ ಅರುವತ್ತರಷ್ಟು. ಯಾವ ಭೂಮಿಯಲ್ಲಿ ನೀರಿನಿಂದ ಜೀವಸಂಕುಲ ಬೆಳೆಯಿತೋ, ಅಲ್ಲೀಗ ಅದೇ ನೀರಿಗೆ ತತ್ವಾರ. ಅಂದಾಜಿನಂತೆ ಇನ್ನು ಹದಿನೈದೇ ವರ್ಷಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ. ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ ಏರುತ್ತಿರುವ ಬೇಡಿಕೆ, ಕ್ಷೀಣಿಸುತ್ತಿರುವ ಜಲಸಂಪನ್ಮೂಲಗಳ ಜೊತೆಗೆ ದುರ್ಬಲಗೊಳ್ಳುತ್ತಿರುವ ಜಲ ಸಂಗ್ರಹಣೆ, ಶೇಖರಣೆ ಹಾಗೂ ವಿತರಣೆ. ಜೀವದ ಹಕ್ಕಾದ ನೀರಿಗೂ ಗಂಟೆಗಟ್ಟಲೆ ನಿದ್ದೆಗೆಟ್ಟು ಕಾದು, ದುಡ್ಡು ಕೊಟ್ಟು ಬೇಡುವ ದುರವಸ್ಥೆ.

ಭೂಮಿಯ ಶೇ. 70 ಭಾಗ ಜಲಾವೃತವಾಗಿದ್ದರೂ, ಅದರಲ್ಲಿ ಸಿಹಿ ನೀರು ಶೇ. 3 ಮಾತ್ರ. ಅದರಲ್ಲೂ ಹಿಮದೊಳಗೂ, ಆಳ ನೆಲದೊಳಗೂ ಹುದುಗಿರುವ ನೀರು ದೊರೆಯುವಂತಿಲ್ಲ. ಸಿಕ್ಕಿದ್ದರಲ್ಲಿ ಕೃಷಿ ಹಾಗೂ ಹೈನುಗಾರಿಕೆಗೆ ಶೇ. 70 ಹಾಗೂ ಉದ್ದಿಮೆಗಳಿಗೆ ಶೇ. 10 ರಷ್ಟು ಬಳಕೆಯಾಗಿ ನಮಗುಳಿಯುವುದು ತೀರಾ ಅಲ್ಪ. ಜಲಸಂಪನ್ಮೂಲಗಳು ವಿರಳವಾದಂತೆ ತಲಾವಾರು ನೀರಿನ ಪೂರೈಕೆಯೂ ಇಳಿಯುತ್ತಲಿದೆ: ನಮ್ಮ ದೇಶದಲ್ಲಿ 1955ರಲ್ಲಿ ಪ್ರತಿಯೋರ್ವನಿಗೂ ವರ್ಷಕ್ಕೆ 5300 ಘನ ಅಡಿಯಷ್ಟು ನೀರು ದೊರೆಯುತ್ತಿದ್ದರೆ, 1996ಕ್ಕೆ ಅದು 2200 ಘನ ಅಡಿಯಷ್ಟಾಗಿದೆ; 2020ಕ್ಕೆ 1600 ಕ್ಕಿಳಿದು ನೀರಿನ ಸಂಕಟ ಉತ್ಕಟವಾಗಲಿದೆ. ನಮ್ಮಲ್ಲಿ ಶೇ. 80ಕ್ಕೂ ಹೆಚ್ಚು ಜನ ಅಂತರ್ಜಲವನ್ನೇ ನೆಚ್ಚಿಕೊಂಡಿದ್ದು, ಅದೀಗ ಬರಿದಾಗುತ್ತಿರುವುದಷ್ಟೇ ಅಲ್ಲ, ಮಲಿನವೂ ಆಗುತ್ತಿದೆ. ಜೀವಜಲ ಬಾಯಿಗೆಟಕುತ್ತಿಲ್ಲ, ಸಿಕ್ಕರೂ ಕುಡಿಯುವಂತಿಲ್ಲ.

ಮನುಷ್ಯನ ಚಟುವಟಿಕೆಗಳ ಹೊಲಸೆಲ್ಲವೂ ಕೆರೆ-ತೊರೆ-ನದಿಗಳಿಂದ ಸಾಗರಗಳವರೆಗೂ, ಭೂಮಿಯ ಮೇಲ್ಮೈಯಿಂದ ಆಗಸ-ಭೂತಳಗಳಿಗೂ ಸೋರಿ ಹೋಗುತ್ತಿವೆ, ಜೀವಜಲ ಕಲುಷಿತಗೊಂಡು ಮರಣಜಲವಾಗುತ್ತಿದೆ. ಮನುಷ್ಯರು ಹಾಗೂ ಸಾಕುಪ್ರಾಣಿಗಳ ಮಲಮೂತ್ರಗಳು ಹಾಗೂ ಬಚ್ಚಲ ಕೊಳೆಗಳು, ಕೈಗಾರಿಕೆಗಳಿಂದ ವಿಸರ್ಜಿಸಲ್ಪಡುವ ರಾಸಾಯನಿಕಗಳು, ಕೃಷಿಯಲ್ಲಿ ಬೇಕಾಬಿಟ್ಟಿ ಬಳಕೆಯಾಗುವ ರಸಗೊಬ್ಬರಗಳು ಹಾಗೂ ಕೀಟನಾಶಕಗಳು, ಭೂಮಿಯೊಳಕ್ಕೋ, ಸಾಗರದೊಳಕ್ಕೋ ಸುರಿಯುವ ಬಗೆಬಗೆಯ ತ್ಯಾಜ್ಯಗಳೆಲ್ಲವೂ ನಾವು ಕುಡಿಯುವ ನೀರಿನೊಂದಿಗೆ ಬೆರೆಯುತ್ತಿವೆ. ಹವಾಮಾನದ ವೈಪರೀತ್ಯಗಳು ಕೆರೆ-ನದಿ-ಸಾಗರಗಳ ನೀರಿನ ಮಟ್ಟದ ಮೇಲೆ ಪರಿಣಾಮ ಬೀರುವುದಷ್ಟೇ ಅಲ್ಲದೆ, ನೀರಿನ ಉಷ್ಣತೆ, ಅದರಲ್ಲಿರುವ ರಾಸಾಯನಿಕಗಳು ಹಾಗೂ ಸೂಕ್ಷ್ಮಾಣುಗಳ ಪ್ರಮಾಣಗಳ ಮೇಲೂ ಪರಿಣಾಮ ಬೀರುತ್ತಿವೆ. ಒಟ್ಟಿನಲ್ಲಿ ಜೀವನದ ಪ್ರತಿ ಸ್ತರದಲ್ಲೂ ದುಡ್ಡನ್ನಷ್ಟೇ ಎಣಿಸುತ್ತಿರುವ ಮನುಕುಲಕ್ಕೆ ತನ್ನ ಅಸ್ತಿತ್ವದ ಲೆಕ್ಕಾಚಾರವೇ ತಪ್ಪಿ ಹೋಗುತ್ತಿದೆ.

ಕುಡಿಯುವುದಕ್ಕೆ ಶುದ್ಧ ನೀರನ್ನೊದಗಿಸುವ 122 ದೇಶಗಳ ಪಟ್ಟಿಯಲ್ಲಿ ನಾವು 120 ರಲ್ಲಿದ್ದೇವೆ. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಹಾಗೂ ಸ್ವಚ್ಛತೆಗಾಗಿ ಹನ್ನೊಂದು ಪಂಚವಾರ್ಷಿಕ ಯೋಜನೆಗಳಲ್ಲಿ 135000 ಕೋಟಿ ರೂಪಾಯಿ ವ್ಯಯಿಸಿದ್ದರೂ ಜಲಜನ್ಯ ರೋಗಗಳಿಂದಾಗಿ ಪ್ರತೀ ವರ್ಷ ಸುಮಾರು 36000 ಕೋಟಿ ರೂಪಾಯಿಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಮೂಲೆ-ಮೂಲೆಗಳಲ್ಲಿ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಲಾಗುತ್ತಿರುವ ನಮ್ಮಲ್ಲಿ ಎಪ್ಪತ್ತು ಕೋಟಿ ಜನರಿಗೆ ಶೌಚಾಲಯಗಳಿಲ್ಲದೆ ಪ್ರತಿ ದಿನ 20000 ಟನ್ನುಗಳಷ್ಟು ಮಲವು ಬಯಲಲ್ಲೇ ವಿಸರ್ಜಿಸಲ್ಪಟ್ಟು ಕುಡಿಯುವ ನೀರಿನ ಮೂಲಗಳನ್ನೂ, ಪುಣ್ಯತೀರ್ಥಗಳನ್ನೂ ಸೇರುತ್ತಿವೆ. ಶೌಚಾಲಯಕ್ಕಿಂತ ಮೊಬೈಲ್ ಫೋನ್ ಆದ್ಯತೆಯಾಗಿ, ಬಯಲ ಕಡೆ ವಿಸರ್ಜಿಸುವಾಗಲೂ ಅದನ್ನು ಕಿವಿಗೊತ್ತಲಾಗುತ್ತಿದೆ. ಬಯಲು ವಿಸರ್ಜನೆಯಿಂದ ಕಲುಷಿತಗೊಳ್ಳುವ ನೀರಿನಿಂದ ವಾಂತಿ-ಬೇಧಿ, ಹೆಪಟೈಟಿಸ್ ಎ ಮತ್ತು ಇ (ಕಾಮಾಲೆ), ಟೈಫಾಯ್ಡ್ ಜ್ವರ, ಎಂಟಮೀಬಾ ಹಾಗೂ ಜಿಯಾರ್ಡಿಯಾ ಆಮಶಂಕೆ, ಜಂತುಬಾಧೆ ಮುಂತಾದ ರೋಗಗಳುಂಟಾಗಿ ಪ್ರತೀ ವರ್ಷ ನಾಲ್ಕು ಕೋಟಿ ಭಾರತೀಯರು ಬಳಲುತ್ತಾರೆ, ಹದಿನೈದು ಲಕ್ಷ (ದಿನವೊಂದಕ್ಕೆ 5000) ಮಕ್ಕಳು ಬೇಧಿಯಿಂದಾಗಿ ಸಾವನ್ನಪ್ಪುತ್ತಾರೆ. ಪದೇ ಪದೇ ಇಂತಹಾ ರೋಗಗಳು ತಗಲುವುದರಿಂದ ಮಕ್ಕಳಲ್ಲಿ ಕುಪೋಷಣೆಗೂ, ಕುಂಠಿತ ಬೌದ್ಧಿಕ-ದೈಹಿಕ ಬೆಳವಣಿಗೆಗಳಿಗೂ ಕಾರಣವಾಗುತ್ತಿದೆ. ದೇಶದ ಕೆಲ ಭಾಗಗಳಲ್ಲಿ ಅಂತರ್ಜಲದಲ್ಲಿ ಬೆರೆತಿರುವ ಫ್ಲೋರೈಡ್, ಆರ್ಸೆನಿಕ್, ಕಬ್ಬಿಣ ಇತ್ಯಾದಿ ಲೋಹಾಂಶಗಳೂ ಕಾಹಿಲೆಗಳಿಗೆ ಕಾರಣವಾಗುತ್ತಿವೆ.

ನಾಗರಿಕರಿಗೆ ನಿರಂತರವಾಗಿ ಶುದ್ಧ ಕುಡಿಯುವ ನೀರನ್ನೊದಗಿಸುವಲ್ಲಿಯೂ, ವಿಸರ್ಜಿತ ಕಶ್ಮಲಗಳನ್ನು ಸರಿಯಾಗಿ ನಿಭಾಯಿಸುವಲ್ಲಿಯೂ ಹೆಚ್ಚಿನ ಪೌರಾಡಳಿತಗಳು ವಿಫಲವಾಗಿರುವುದು ಖಾಸಗಿ ದಂಧೆಗೆ ಹೆದ್ದಾರಿಯನ್ನೇ ತೆರೆದಿದೆ. ನೀರಿನ ಬಾಟಲು-ಪೊಟ್ಟಣಗಳ ಭರ್ಜರಿ ಮಾರಾಟದ ಜೊತೆಗೆ, ನೀರನ್ನು ಶುದ್ಧೀಕರಿಸುವ ಸಾಧನಗಳ ವ್ಯಾಪಾರವೂ ಭರಾಟೆಯಿಂದ ನಡೆಯುತ್ತಿದೆ. ನಾಲ್ಕು ದಶಕಗಳ ಹಿಂದೆ ಯಾರೂ ಗಂಭೀರವಾಗಿ ಪರಿಗಣಿಸದಿದ್ದ ಬಾಟಲು ನೀರಿನ ಉದ್ದಿಮೆ ಇಂದು ಲಕ್ಷ ಕೋಟಿಗಟ್ಟಲೆಯ ವಹಿವಾಟಾಗಿ ಬೆಳೆದಿದೆ. ಈ ಬಾಟಲಿಯ ನೀರೊಳಗೆ ಇಂದಿನ ಅರ್ಥವ್ಯವಸ್ಥೆಯ ಪ್ರತಿಬಿಂಬವಿದೆ: ಎಲ್ಲರಿಗೂ ಉಚಿತವಾಗಿ ಸಿಗಬೇಕಾದ ಅತ್ಯಮೂಲ್ಯ ಪ್ರಾಕೃತಿಕ ಸಂಪನ್ಮೂಲವಾದ ನೀರು, ಅದನ್ನು ಕಟ್ಟುವುದಕ್ಕೆ ಅಷ್ಟೇ ಅಮೂಲ್ಯವಾದ ನೈಸರ್ಗಿಕ ತೈಲದಿಂದ ತೆಗೆದ ಪಾಲಿಎಥಿಲೀನ್ ಟೆರಿಫ್ಥಾಲೇಟ್ (ಪಿಇಟಿ) ಬಾಟಲು, ಅದನ್ನು ಮಾರುವುದಕ್ಕೆ ದೊಡ್ಡ ತಾರೆಯರ ಜಾಹೀರಾತುಗಳು, ಇಡೀ ಬ್ರಹ್ಮಾಂಡದಲ್ಲಿ ಏಕರೂಪದಲ್ಲಿರುವ ನೀರು ಈ ಬಾಟಲುಗಳಲ್ಲಿ ಹತ್ತು ಹಲವು ರೂಪ ತಳೆಯುತ್ತದೆ! ಎಕ್ಸ್ ಟ್ರಾ ಆಕ್ಸಿಜನ್, ಮಿನರಲ್, ವಿಟಮಿನ್ ಎಂಬ ಸುಳ್ಳುಗಳು ಅದರಲ್ಲಿ ಸೇರುತ್ತವೆ! ‘ಸಾರ್, ಬರೇ ನೀರಾ, ಮಿನರಲ್ ವಾಟರಾ’ ಎಂಬ ಮಾಣಿಯೆದುರು ಪ್ರತಿಷ್ಠೆ ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯುಂಟಾಗುತ್ತದೆ! ಆಧುನಿಕ ಜೀವನಶೈಲಿಗೆ ನೀರಿನ ಕೋಡು!

ಈ ಬಾಟಲು ನೀರು ಅತಿ ಶುದ್ಧವೇ? ಅದೂ ಖಂಡಿತವಿಲ್ಲ. ಈ ಬಾಟಲುಗಳಲ್ಲಿರುವ ನೀರು ಬೇರೊಂದು ಲೋಕದಿಂದಲೋ, ಅತಿ ವಿಶೇಷ ಮೂಲದಿಂದಲೋ ಬಂದದ್ದಲ್ಲ. ಸಾಮಾನ್ಯವಾಗಿ ದೊರೆಯುವ ಭೂಜಲವನ್ನೇ ಶುದ್ಧೀಕರಿಸಿ ಈ ಬಾಟಲುಗಳಲ್ಲಿ ತುಂಬಲಾಗುತ್ತದೆ. ಭೂಜಲವನ್ನು ಶುದ್ಧೀಕರಿಸುವುದು ದುಬಾರಿಯೆನಿಸುವೆಡೆಗಳಲ್ಲಿ ನಳ್ಳಿ ನೀರನ್ನೇ ಬಳಸಲಾಗುತ್ತದೆ. ಒಂದು ಬಾಟಲು ತುಂಬಲು ಮೂರು ಬಾಟಲಿನಷ್ಟು ನೀರು ಪೋಲಾಗುತ್ತದೆ. ಗುಟುಕು ನೀರಿಗೆ ಬಾಯಿ ಬಿಡುವಲ್ಲಿ ಈ ಡೌಲು! ಈ ಬಾಟಲು ನೀರು ಕುದಿಸಿ ತಣಿಸಿದ ನೀರಿಗಿಂತ ಶ್ರೇಷ್ಠವೂ ಅಲ್ಲ. ಒಮ್ಮೆ ಈ ಬಾಟಲನ್ನು ತೆರೆದರೆ ಕುಡಿದು ಮುಗಿಸಲೇಬೇಕು, ಹಾಗೇ ಬಿಟ್ಟರೆ ಸೂಕ್ಷ್ಮಾಣುಗಳು ಸೇರಿಕೊಳ್ಳುವ ಸಾಧ್ಯತೆಗಳಿರುತ್ತವೆ. ನಕಲಿಗಳ ಕಾಟ ಬೇರೆ. ಬಾಟಲು ಚಂದವೆಂದು ಮರುಬಳಕೆ ಮಾಡುವುದೂ ಸುರಕ್ಷಿತವಲ್ಲ. ಹಾಗೆಂದು ಎಸೆದರೆ ಅವುಗಳಿಂದ ಪರಿಸರಕ್ಕೂ ಕೇಡು. ಒಟ್ಟಿನಲ್ಲಿ ಬಾಟಲು ನೀರನ್ನು ಮಾರುವವನನ್ನುಳಿದು ಇನ್ನೆಲ್ಲರಿಗೆ ನಷ್ಟವೇ.

ನೀರನ್ನು ಶುದ್ಧೀಕರಿಸುವುದಕ್ಕೆ ಬಗೆಬಗೆಯ ಸೋಸುಕಗಳು, ಅತಿನೇರಳೆ ಕಿರಣಗಳ ಸಾಧನಗಳು, ವಿಪರ್ಯಯ ಪರಾಸರಣ (ಆರ್ ಒ) ಸಾಧನಗಳು ಮುಂತಾದವು ಸಾವಿರಗಟ್ಟಲೆ ಬೆಲೆಗೆ ಭರದಿಂದ ಬಿಕರಿಯಾಗುತ್ತಿವೆ. ಆದರೆ ಇವುಗಳಲ್ಲಿ ನೀರು ಸಂಪೂರ್ಣವಾಗಿ ಶುದ್ಧವಾಗುತ್ತದೆಯೇ ಎನ್ನುವುದು ಯಕ್ಷಪ್ರಶ್ನೆಯೇ. ಪುಣೆಯ ರಾಷ್ಟ್ರೀಯ ವೈರಾಣು ಅಧ್ಯಯನ ಸಂಸ್ಥೆಯ ವರದಿಯಂತೆ, ಟೊಳ್ಳು ತಂತುಗಳ ಪೊರೆ (ಹಾಲೊ ಫೈಬರ್ ಮೆಂಬ್ರೇನ್) ಅಥವಾ ಸೂಕ್ಷ್ಮ ತಂತುಗಳ ಸೋಸುಕಗಳನ್ನುಳ್ಳ ಸಾಧನಗಳು ಮಾತ್ರವೇ ನೀರಿನಲ್ಲಿರುವ ವೈರಾಣುಗಳನ್ನೂ, ಇನ್ನಿತರ ರೋಗಕಾರಕಗಳನ್ನೂ ತಡೆಯುತ್ತವೆ. ಅತಿ ನೇರಳೆ ಕಿರಣಗಳಿಂದ ಶುದ್ಧೀಕರಿಸುವ ಸಾಧನಗಳು ಕೆಲವು ಬ್ಯಾಕ್ಟೀರಿಯಾಗಳನ್ನು ತಾತ್ಕಾಲಿಕವಾಗಿ ತಡೆಯುತ್ತವೆಯಾದರೂ, ಇತರ ಸೂಕ್ಷ್ಮಾಣುಗಳನ್ನು ನಿವಾರಿಸುವುದಿಲ್ಲ. ವಿಪರ್ಯಯ ಪರಾಸರಣ (ಆರ್ ಒ) ಸಾಧನಗಳಲ್ಲೂ ಎಲ್ಲಾ ರಾಸಾಯನಿಕಗಳು ಹಾಗೂ ಸೂಕ್ಷ್ಮಾಣುಗಳು ಪ್ರತ್ಯೇಕಿಸಲ್ಪಡುವುದಿಲ್ಲ. ಇಂತಹಾ ದುಬಾರಿ ಸಾಧನಗಳ ಬದಲಿಗೆ, ನೀರನ್ನು ಶುದ್ಧವಾದ ಬಟ್ಟೆಯಲ್ಲಿ ಅಥವಾ ಒಳ್ಳೆಯ ಸೋಸುಕದಲ್ಲಿ ಸೋಸಿ, ಒಂದು ನಿಮಿಷ ಕುದಿಸಿ ತಣಿಸುವುದರಿಂದ ಅತಿ ಸುಲಭವಾಗಿ ಹಾಗೂ ಪರಿಣಾಮಕಾರಿಯಾಗಿ ಶುದ್ಧೀಕರಿಸಬಹುದು. ಚಾರಣ ಯಾ ಇನ್ನಿತರ ಹೊರ ಪ್ರಯಾಣಗಳ ಸಂದರ್ಭದಲ್ಲಿ ಸೋಸಿದ ಲೀಟರ್ ನೀರಿಗೆ 5 ಬಿಂದು ಅಯೊಡಿನ್ ಟಿಂಕ್ಚರ್ ಬೆರೆಸಿ ಅರ್ಧ ಗಂಟೆಯ ಬಳಿಕ ಬಳಸಬಹುದು. ಆಡಳಿತದ ನೆರವಿನಿಂದ ಕುಡಿಯುವ ನೀರಿನ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಮಾಲಿನ್ಯವನ್ನು ಕಾಲಕಾಲಕ್ಕೆ ಪರೀಕ್ಷಿಸಬಹುದು.

ಲೋಕಾಂತ್ಯವಾಗಬೇಕಾಗಿದ್ದ ಜಲಪ್ರಳಯವು ಹುಸಿಗುಲ್ಲಾಗಿತ್ತು; ಆದರೆ ಬಿಗಡಾಯಿಸುತ್ತಿರುವ ಜಲಕ್ಷಾಮವು ಕಟು ಸತ್ಯವಾಗಿದೆ. ಹೊರಗಿರುವ ನೀರು ಬತ್ತಿ ಹೋದರೆ ದೇಹದೊಳಗಿರುವ ನೀರೂ ಉಳಿಯಲಾರದು. ಆದ್ದರಿಂದಲೇ, ಜಲಸಂಪನ್ಮೂಲಗಳ ಪುನಶ್ಚೇತನಕ್ಕೂ, ಅವುಗಳ ಸ್ವಚ್ಛತೆಯನ್ನು ಕಾಯುವುದಕ್ಕೂ ಪ್ರತಿಯೋರ್ವರೂ ಕಂಕಣಬದ್ಧರಾಗಬೇಕು. ಶುದ್ಧ ನೀರನ್ನು ಪಡೆಯುವುದು ನಮ್ಮೆಲ್ಲರ ಪ್ರಕೃತಿದತ್ತವಾದ, ಸಂವಿಧಾನದತ್ತವಾದ ಹಕ್ಕಾಗಿದೆ. ಸಂಪೂರ್ಣ ಸ್ವಚ್ಛತೆಗಾಗಿ ನಿರ್ಮಲ ಭಾರತ ಅಭಿಯಾನ, ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಕಾರ್ಯಕ್ರಮ ಹಾಗೂ ನಗರಾಡಳಿತಗಳ ಉಸ್ತುವಾರಿಯಲ್ಲಿರುವ ಕುಡಿಯುವ ನೀರಿನ ಯೋಜನೆಗಳೆಲ್ಲವೂ ಫಲಪ್ರದವಾಗಬೇಕಾದರೆ, ಅವುಗಳಿಗಾಗಿ ವ್ಯಯಿಸುತ್ತಿರುವ ಕೋಟಿಗಟ್ಟಲೆ ಹಣವು ಸದ್ಬಳಕೆಯಾಗಬೇಕಾದರೆ, ಆಡಳಿತದ ಮೇಲೆ ಜನರ ಒತ್ತಡವು ಬಿಗಿಯಾಗಬೇಕು. ಹಾಗಾದಾಗ ಮಾರ್ಚ್ 22ರ ವಿಶ್ವ ಜಲ ದಿನಾಚರಣೆ ಸಾರ್ಥಕವಾದೀತು.

Leave a Reply

Your email address will not be published. Required fields are marked *