ದೊಡ್ಡ ಮನುಷ್ಯನೊಳಗಿನ ಸೂಕ್ಷ್ಮ ಜೀವಿಗಳು

ಆರೋಗ್ಯ ಆಶಯ – ವಿಜಯ ಕರ್ನಾಟಕ: ದೊಡ್ಡ ಮನುಷ್ಯನೊಳಗಿನ ಸೂಕ್ಷ್ಮ ಜೀವಿಗಳು [ಎಪ್ರಿಲ್ 17, 2013, ಬುಧವಾರ] [ನೋಡಿ | ನೋಡಿ]

ನಮ್ಮ ಜೀರ್ಣಾಂಗದೊಳಗಿರುವ ಸೂಕ್ಷ್ಮಜೀವಿಗಳಿಗೆ ಹಿತವಾದುದನ್ನೇ ನಾವು ತಿನ್ನಬೇಕು

ನಮ್ಮೆಲ್ಲರಿಗೆ ಒಂದೊಂದೇ ಹೆಸರು – ರಂಗ, ರಾಬರ್ಟ್, ರಹೀಮ್ ಇತ್ಯಾದಿ. ಒಂದು ದೇಹ, ಒಂದು ಜೀವ ಎಂಬ ಲೆಕ್ಕದಲ್ಲಿ ಒಂದೇ ಹೆಸರು. ಈ ಒಂಟಿ ದೇಹದ ಮೇಲೆ ನಮಗೆ ಬಲು ಮೋಹ, ಬಲು ಹೆಮ್ಮೆ. ಒಂದು ಜೀವಕ್ಕೆ ಒಂದು ಹೆಸರೇ? ಹಾಗಾದರೆ ಒಬ್ಬೊಬ್ಬ ಮನುಷ್ಯನಿಗೂ ಒಂದಲ್ಲ, ನೂರು ಲಕ್ಷ ಕೋಟಿ ಹೆಸರುಗಳಿರಬೇಕಾಗುತ್ತದೆ! ಏಕೆಂದರೆ ಪ್ರತೀ ಮನುಷ್ಯನ ದೇಹದಲ್ಲೂ ಅಷ್ಟೊಂದು ಜೀವಿಗಳು ಸೇರಿಕೊಂಡಿರುತ್ತವೆ! ಅತಿಯಾದ ಹೆಮ್ಮೆಗೂ ಇಂಬಿಲ್ಲ; ಈ ಅನ್ಯ ಜೀವಿಗಳ ನೆರವಿಲ್ಲದೆ ನಮ್ಮೀ ದೊಡ್ಡ ಜೀವವು ಆರೋಗ್ಯದಿಂದಿರಲಾರದು!

ನಮ್ಮ ವಿವಿಧ ಅಂಗಗಳಲ್ಲಿರುವ ಮಾನವ ಜೀವಕಣಗಳ ಸಂಖ್ಯೆ ಸುಮಾರು ಹತ್ತು ಲಕ್ಷ ಕೋಟಿ. ಬರಿ ಕಣ್ಣಿಗೆ ಕಾಣಿಸುವ ಹೇನುಗಳು ಹಾಗೂ ಹುಳುಗಳಂತಹಾ ಪರಾವಲಂಬಿಗಳು ಒಂದಷ್ಟು. ಇವನ್ನೆಲ್ಲ ಮೀರಿಸುವಂತೆ, ಬರಿ ಕಣ್ಣಿಗೆ ಕಾಣಿಸದ ಸಾವಿರಾರು ಬಗೆಯ ಸೂಕ್ಷ್ಮಜೀವಿಗಳು ನಮ್ಮ ದೇಹದಲ್ಲಿ ಹಾಸುಹೊಕ್ಕಾಗಿವೆ. ಹೊರ ಜಗತ್ತಿಗೆ ತೆರೆದುಕೊಂಡಿರುವ ನಮ್ಮ ಚರ್ಮ, ಬಾಯಿ, ಅನ್ನ ನಾಳ, ಕರುಳುಗಳು, ಮೂತ್ರಾಂಗಗಳು ಹಾಗೂ ಶ್ವಾಸನಾಳಗಳಲ್ಲಿ ಮನೆ ಮಾಡಿಕೊಂಡಿರುವ ಸೂಕ್ಷ್ಮಾಣುಗಳ ಸಂಖ್ಯೆ ನೂರು ಲಕ್ಷ ಕೋಟಿಗೂ ಹೆಚ್ಚು! ಅಂದರೆ ನಮ್ಮ ದೇಹದಲ್ಲಿ ನಮ್ಮ ಜೀವಕಣಗಳಿಗಿಂತ ನಾವಲ್ಲದ ಸೂಕ್ಷ್ಮಾಣುಗಳ ಸಂಖ್ಯೆ ಹತ್ತು ಪಟ್ಟು ಹೆಚ್ಚಿಗಿದೆ!

ಬಾಯಿಯಿಂದ ದೊಡ್ಡ ಕರುಳಿನವರೆಗಿನ ನಮ್ಮ ಜೀರ್ಣಾಂಗದಲ್ಲಿ ಈ ಸೂಕ್ಷ್ಮಾಣುಗಳೇ ತುಂಬಿವೆ. ನಮ್ಮ ಕರುಳಿನಲ್ಲಿರುವ ಮಡಿಕೆಗಳನ್ನೂ, ಬೆರಳಿನಂತಹ ವಿಲ್ಲೈಗಳನ್ನೂ ಬಿಡಿಸಿಟ್ಟರೆ ಸುಮಾರು 200 ಚದರ ಮೀಟರಿನಷ್ಟು, ಅಂದರೆ ಒಂದು ಟೆನಿಸ್ ಅಂಗಣದಷ್ಟಾಗುತ್ತದೆ. ಅಷ್ಟೊಂದು ವಿಶಾಲವಾದ ಜಾಗದಲ್ಲಿ 1000ಕ್ಕೂ ಹೆಚ್ಚು ಬಗೆಯ ಬ್ಯಾಕ್ಟೀರಿಯಾಗಳು ನೂರು ಲಕ್ಷ ಕೋಟಿಯಷ್ಟು ಸಂಖ್ಯೆಯಲ್ಲಿ ಜೀವಿಸುತ್ತಿರುತ್ತವೆ. ಅದಕ್ಕಾಗಿ ನಾವು ತಿನ್ನುವ ಆಹಾರವನ್ನೂ, ಕರುಳೊಳಗಿನ ಕೆಲ ಸ್ರಾವಗಳನ್ನೂ ಅವು ಬಳಸಿಕೊಳ್ಳುತ್ತವೆ. ಈ ಜಗತ್ತಿನಲ್ಲಿ ಒಳಿತು-ಕೆಡುಕು ಜೊತೆಗಿರುವಂತೆ ಕರುಳೊಳಗಿನ ಬ್ಯಾಕ್ಟೀರಿಯಾಗಳಲ್ಲೂ ಒಳ್ಳೆಯವು-ಕೆಟ್ಟವು ಇರುತ್ತವೆ. ಒಳ್ಳೆಯ ಬ್ಯಾಕ್ಟೀರಿಯಾಗಳು ಹಲ ತೆರನಾಗಿ ನಮಗೆ ನೆರವಾಗುತ್ತವೆ, ತಮ್ಮ ಋಣ ತೀರಿಸುತ್ತವೆ. ಪರಸ್ಪರ ಪ್ರಯೋಜನವಾಗುವಂತಹ ಸಹಭುಂಜನದ ಸಹಜೀವನ ಅದು. ಇತ್ತ ಕೆಟ್ಟ ಬ್ಯಾಕ್ಟೀರಿಯಾಗಳು ಅಲ್ಲೇ ಹೊಂಚು ಹಾಕುತ್ತಿದ್ದು, ಅವಕಾಶ ಸಿಕ್ಕಾಗ ತೊಂದರೆಯುಂಟು ಮಾಡುತ್ತವೆ, ಉಂಡ ಮನೆಗೇ ಕೇಡು ಬಗೆಯುತ್ತವೆ!

ಈ ಸೂಕ್ಷ್ಮಾಣುಗಳೊಂದಿಗೆ ನಮ್ಮ ಸಹಬಾಳ್ವೆಯು ಹುಟ್ಟಿನ ಮರುಕ್ಷಣದಿಂದಲೇ ತೊಡಗುತ್ತದೆ. ಹೆರಿಗೆಯಾಗಿ ಮಗು ಹೊರಲೋಕವನ್ನು ಪ್ರವೇಶಿಸುತ್ತಿದ್ದಂತೆ ಗರ್ಭನಾಳದಲ್ಲೂ, ಹೊರ ವಾತಾವರಣದಲ್ಲೂ ಇರುವ ಹಲಬಗೆಯ ಬ್ಯಾಕ್ಟೀರಿಯಾಗಳು, ವೈರಸ್ ಗಳು, ಆರ್ಕಿಯಾಗಳು, ಪರೋಪಜೀವಿಗಳು ಹಾಗೂ ಶಿಲೀಂಧ್ರಗಳು ಮಗುವಿನ ಚರ್ಮವನ್ನು ಮೆತ್ತಿಕೊಳ್ಳುತ್ತವೆ, ಶ್ವಾಸನಾಳಗಳನ್ನು ಹೊಕ್ಕುತ್ತವೆ. ತಾಯಿ ಹಾಲೂಡಿಸಲಾರಂಭಿಸಿದಾಗ ಇವು ಬಾಯಿ, ಗಂಟಲುಗಳ ಮಾರ್ಗವಾಗಿ ಶ್ವಾಸಾಂಗವನ್ನೂ, ಅನ್ನನಾಳ, ಜಠರ, ಕರುಳುಗಳನ್ನೂ ತಲುಪಿ ಅಲ್ಲಿ ನೆಲೆಯೂರುತ್ತವೆ. ಆ ಮೊದಲ ದಿನದಿಂದಲೇ ಅವು ನಮ್ಮ ದೇಹದ ಮೇಲೆ ಪ್ರಭಾವ ಬೀರಲಾರಂಭಿಸುತ್ತವೆ. ಅಂಗಗಳ ಬೆಳವಣಿಗೆಯನ್ನು ಪ್ರಚೋದಿಸುವುದು; ಮೆದುಳು ಹಾಗೂ ಜೀರ್ಣಾಂಗದ ನಡುವಿನ ಸಂವಹನವನ್ನು ಸುಸ್ಥಿರಗೊಳಿಸುವುದು; ಹೊರಜಗತ್ತಿನ ಜೀವಿಗಳನ್ನೂ, ಇನ್ನಿತರ ರೋಗಕಾರಕಗಳನ್ನೂ ನಮ್ಮ ರೋಗರಕ್ಷಣಾ ವ್ಯವಸ್ಥೆಗೆ ಪರಿಚಯಿಸಿ ಅದನ್ನು ಬಲಿಷ್ಠಗೊಳಿಸುವುದು ಹಾಗೂ ರೋಗಾಣುಗಳು ಬೆಳೆಯದಂತೆ ತಡೆಯುವುದು,ಬಗೆಬಗೆಯ ಔಷಧಗಳನ್ನೂ, ರಾಸಾಯನಿಕ ಸಂಯುಕ್ತಗಳನ್ನೂ ಒಡೆದು ಅವುಗಳಿಂದಾಗಬಹುದಾದ ಹಾನಿಯನ್ನು ತಡೆಯುವುದು ಇವೇ ಮುಂತಾದ ಅತಿ ಮುಖ್ಯವಾದ ಕೆಲಸಗಳು ಅವುಗಳಿಂದಾಗುತ್ತವೆ. ಅಂದರೆ ನಾವು ನಾವಾಗುವುದು ನಾವಲ್ಲದ ಈ ಸೂಕ್ಷ್ಮಾಣುಗಳಿಂದಲೇ!

ಮಗುವಿಗೆ ಒಂದು ವರ್ಷ ತುಂಬುವುದರೊಳಗೆ ಈ ಸೂಕ್ಷ್ಮಾಣುಗಳೆಲ್ಲ ಭದ್ರವಾಗಿ ತಳವೂರಿಬಿಡುತ್ತವೆ. ಮಗುವು ಮೊದಲ ಆರು ತಿಂಗಳ ಕಾಲ ಎದೆ ಹಾಲನ್ನಷ್ಟೇ ಕುಡಿಯುವುದರಿಂದ ಕರುಳಿನೊಳಗೆ ಆರೋಗ್ಯಕರವಾದ ಬ್ಯಾಕ್ಟೀರಿಯಾಗಳು ಬೆಳೆಯುವುದು ಸಾಧ್ಯವಾಗುತ್ತದೆ. ಇದರಿಂದಾಗಿ ಕರುಳಿನ ಸುಸ್ಥಿರ ಬೆಳವಣಿಗೆಯು ಪ್ರಚೋದಿಸಲ್ಪಡುತ್ತದೆ ಹಾಗೂ ಇಡೀ ದೇಹದ ರೋಗರಕ್ಷಣಾ ವ್ಯವಸ್ಥೆಯು ಬಲಗೊಳ್ಳುತ್ತದೆ. ಈ ಹಂತದಲ್ಲಿ ಎಡವಟ್ಟಾದರೆ ಮುಂದಕ್ಕೆ ಅಸ್ತಮಾ, ಅಲರ್ಜಿ, ಮಧುಮೇಹದಂತಹ ತೊಂದರೆಗಳಿಗೆ ಕಾರಣವಾಗಬಹುದು. ಕೃತಕ ಶಿಶು ಆಹಾರ, ಪ್ರಾಣಿಜನ್ಯ ಹಾಲು ಮುಂತಾದ ಅಸಹಜ ಆಹಾರಗಳಿಂದ ಹಾಗೂ ಪ್ರತಿಜೈವಿಕ (ಆಂಟಿಬಯಾಟಿಕ್) ಔಷಧಗಳನ್ನು ಅನಗತ್ಯವಾಗಿ ಪದೇ ಪದೇ ನೀಡುವುದರಿಂದ ಕರುಳಿನಲ್ಲಿ ಸೂಕ್ಷ್ಮಾಣುಗಳ ಆರೋಗ್ಯಕರ ಬೆಳವಣಿಗೆಗೆ ಅಡ್ಡಿಯಾಗುತ್ತದೆ.

ಮುಂದಕ್ಕೆ ಪೂರ್ಣ ಪ್ರಮಾಣದ ಆಹಾರವನ್ನು ಸೇವಿಸಲಾರಂಭಿಸಿದಾಗ ಅದನ್ನು ಜೀರ್ಣಿಸುವಲ್ಲಿಯೂ, ಅದರಿಂದ ಹಲವು ಪೋಷಕಾಂಶಗಳನ್ನು ಪ್ರತ್ಯೇಕಿಸುವಲ್ಲಿಯೂ ಈ ಬ್ಯಾಕ್ಟೀರಿಯಾಗಳು ನೆರವಾಗುತ್ತವೆ.ಮಿಶ್ರಾಹಾರಿಯಾಗಿರುವ ಮಾನವನ ಸಣ್ಣ ಕರುಳಿನಲ್ಲಿ ಸಸ್ಯಾಹಾರದ ಶರ್ಕರಗಳು ಸಂಪೂರ್ಣವಾಗಿ ಜೀರ್ಣವಾಗುವುದಿಲ್ಲ. ಜೀರ್ಣವಾಗದೇ ಉಳಿದ ಈ ಶರ್ಕರಗಳನ್ನು ದೊಡ್ಡ ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳು ಹುದುಗೆಬ್ಬಿಸಿ, ಪುಟ್ಟ ಮೇದೋ ಆಮ್ಲಗಳಾಗಿ ಪರಿವರ್ತಿಸಿ ಹೀರಲ್ಪಡುವಂತೆ ಮಾಡುತ್ತವೆ. ವಿಟಮಿನ್ ಕೆ,ಬಯೋಟಿನ್, ವಿಟಮಿನ್ ಬಿ12, ಫೋಲಿಕ್ ಆಮ್ಲ, ಪಿರಿಡಾಕ್ಸಿನ್, ಪಾಂಟೊಥೆನಿಕ್ ಆಮ್ಲ ಮುಂತಾದ ಅನ್ನಾಂಗಗಳು ಹಾಗೂ ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೇಸಿಯಂ ಮುಂತಾದ ಖನಿಜಾಂಶಗಳ ಹೀರುವಿಕೆಗೂ ಈ ಬ್ಯಾಕ್ಟೀರಿಯಾಗಳು ನೆರವಾಗುತ್ತವೆ. ಮಕ್ಕಳ ಕರುಳಲ್ಲಿ ಈ ಬ್ಯಾಕ್ಟೀರಿಯಾಗಳು ಸುಸ್ಥಿತಿಯಲ್ಲಿ ಇಲ್ಲದಿದ್ದರೆ ಪೋಷಕಾಂಶಗಳ ಹೀರುವಿಕೆಗೆ ತೊಡಕಾಗಿ ಕುಪೋಷಣೆಗೆ ಕಾರಣವಾಗುತ್ತದೆ.

ನಮ್ಮ ಜೀರ್ಣಾಂಗ ಹಾಗೂ ಮೆದುಳಿನ ನಡುವೆ ಅತಿ ಸಂಕೀರ್ಣವಾದ ಸಂಪರ್ಕ ಜಾಲವಿದೆ. ಕರುಳಿನ ವಿವಿಧ ಭಾಗಗಳಿಂದ ಸ್ರವಿಸಲ್ಪಡುವ ನೂರಕ್ಕೂ ಹೆಚ್ಚು ಹಾರ್ಮೋನುಗಳೂ, ಜೀರ್ಣಾಂಗದ ನರಮಂಡಲವೂ ಜೊತೆಯಾಗಿ ನಾವು ತಿಂದ ಆಹಾರದ ಸ್ವರೂಪ ಹಾಗೂ ಪ್ರಮಾಣವನ್ನು ತಕ್ಷಣವೇ  ನಮ್ಮ ಮೆದುಳಿಗೆ ತಿಳಿಸುತ್ತವೆ. ಈ ವ್ಯವಸ್ಥೆಯಿಂದಲೇ ನಮ್ಮ ಹಸಿವು-ಸಂತೃಪ್ತಿಗಳು ನಿಯಂತ್ರಿಸಲ್ಪಡುತ್ತವೆ. ಕರುಳಿನೊಳಗಿರುವ ಬ್ಯಾಕ್ಟೀರಿಯಾಗಳು ಮತ್ತು ಅವು ಬಿಡುಗಡೆಗೊಳಿಸುವ ಕೆಲ ಸಂಯುಕ್ತಗಳು ಈ ಜಾಲವನ್ನು ಪ್ರಚೋದಿಸಿ ಹಸಿವು-ಸಂತೃಪ್ತಿಗಳ ನಿಯಂತ್ರಣದಲ್ಲಿ ನೆರವಾಗುತ್ತವೆ. ಇದೇ ವ್ಯವಸ್ಥೆಯು ಹೃತ್ಕ್ರಿಯೆ, ರಕ್ತಸಂಚಾರ, ಸ್ನಾಯುಗಳ ಕಾರ್ಯ,ಸಂತಾನೋತ್ಪತ್ತಿ ಮುಂತಾದ ಅತಿ ಮುಖ್ಯ ಪ್ರಕ್ರಿಯೆಗಳ ಮೇಲೆ ನೇರವಾದ ಪ್ರಭಾವವನ್ನು ಬೀರುವುದರಿಂದ ಕರುಳೊಳಗಿನ ಸೂಕ್ಷ್ಮಾಣುಗಳು ಇಡೀ ದೇಹದ ಆಗುಹೋಗುಗಳ ಮೇಲೆ ಪ್ರಭಾವ ಬೀರುವಂತಾಗುತ್ತದೆ. ಅಂದರೆ ನಮ್ಮ ಇಡೀ ದೇಹದ ಆರೋಗ್ಯವು ನಮ್ಮ ಕರುಳೊಳಗಿನ ಸೂಕ್ಷ್ಮಾಣುಗಳನ್ನು, ನಾವು ತಿನ್ನುವ ಆಹಾರವನ್ನು ಅವಲಂಬಿಸಿರುತ್ತದೆ!

ನಮ್ಮ ದೇಹದ ಮೇಲೆ ಇಷ್ಟೊಂದು ಪರಿಣಾಮ ಬೀರಬಲ್ಲ ಸೂಕ್ಷ್ಮಾಣುಗಳನ್ನು ಸುಸ್ಥಿತಿಯಲ್ಲಿಡದಿದ್ದರೆ ತೊಂದರೆ ಖಂಡಿತ. ಮಕ್ಕಳ ನ್ಯೂನ ಪೋಷಣೆ, ಬೊಜ್ಜು, ಮಧುಮೇಹ, ಅಸ್ತಮಾ, ಪಿತ್ತಕೋಶದ ಹರಳುಗಳು, ಯಕೃತ್ತಿನ ಕೆಲ ಕಾಯಿಲೆಗಳು, ಮೇದೋಜೀರಕಾಂಗದ ಉರಿಯೂತ, ರಕ್ತನಾಳಗಳ ಕಾಯಿಲೆ, ಆಟಿಸಂ, ಮಲ್ಟಿಪ್ಲ್ ಸ್ಕ್ಲಿರೋಸಿಸ್ ಹಾಗೂ ಪಾರ್ಕಿನ್ಸನ್ಸ್ ಕಾಯಿಲೆಗಳಂತಹ ನರರೋಗಗಳು, ಸಂಧಿವಾತ, ದೊಡ್ಡ ಕರುಳಿನ ಉರಿಯೂತ (ಕೊಲೈಟಿಸ್), ಜೀರ್ಣಾಂಗದ ಕ್ಯಾನ್ಸರ್ ಗಳು ಇವೇ ಮುಂತಾದ ತೊಂದರೆಗಳಿಗೂ, ಕರುಳಿನ ಸೂಕ್ಷ್ಮಾಣುಗಳಿಗೂ ನಿಕಟವಾದ ಸಂಬಂಧವಿರುವುದನ್ನು ಇತ್ತೀಚಿನ ಅಧ್ಯಯನಗಳು ಸೂಚಿಸಿವೆ. ಮಾನಸಿಕ ಖಿನ್ನತೆ ಹಾಗೂ ಆತಂಕಗಳಂತಹ ತೊಂದರೆಗಳಿಗೂ ಅಂತಹದೇ ಸಂಬಂಧವಿರುವ ಸಾಧ್ಯತೆಗಳ ಬಗ್ಗೆ ಅಧ್ಯಯನಗಳಾಗುತ್ತಿವೆ.

ನಾವು ತಿನ್ನುವ ಆಹಾರವೇ ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳಿಗೂ ಆಹಾರವಾಗುವುದರಿಂದ, ನಮ್ಮ ಆಹಾರವು ಸರಿಯಿಲ್ಲದಿದ್ದರೆ ಉಪಕಾರಿ ಹಾಗೂ ಅಪಕಾರಿ ಬ್ಯಾಕ್ಟೀರಿಯಾಗಳ ಅತಿ ಸೂಕ್ಷ್ಮವಾದ ಸಮತೋಲನವು ಕೆಟ್ಟು ರೋಗಗಳಿಗೆ ಕಾರಣವಾಗಬಹುದೆನ್ನುವ ಆಸಕ್ತಿದಾಯಕವಾದ ಕೆಲವು ಊಹೆಗಳು ಇತ್ತೀಚೆಗೆ ಪ್ರಕಟವಾಗಿವೆ. ನಾವಿಂದು ಕಾಣುತ್ತಿರುವ ಆಧುನಿಕ ರೋಗಗಳಿಗೂ, ನಮ್ಮ ಆಧುನಿಕ ಆಹಾರಕ್ಕೂ ಈ ಸೂಕ್ಷ್ಮಾಣುಗಳೇ ಕೊಂಡಿಗಳಾಗಿರುವ ಸಾಧ್ಯತೆಗಳಿವೆ. ಮನುಷ್ಯನ ಮೂಲ ಆಹಾರವು ನಾರುಭರಿತವಾದ, ಜೀವಂತವಾದ ಸಸ್ಯಗಳಿಂದಲೂ, ಬಗೆಬಗೆಯ ಮೊಟ್ಟೆ, ಮೀನು ಹಾಗೂ ಮಾಂಸಗಳಿಂದಲೂ ಮಾಡಲ್ಪಟ್ಟಿದ್ದರೆ, ಇಂದು ನಾರೂ ಇಲ್ಲದ, ಜೀವವೂ ಇಲ್ಲದ ಸಕ್ಕರೆಭರಿತವಾಗಿರುವ ಸಂಸ್ಕರಿತ ಆಹಾರವನ್ನೇ ನಾವು ತಿನ್ನುತ್ತಿದ್ದೇವೆ. ಇಂತಹಾ ಸಕ್ಕರೆಯ ಮುದ್ದೆಯು ಬಾಯಿಯಲ್ಲೂ, ಕರುಳಲ್ಲೂ ಇರುವ ಉಪಕಾರಿ ಬ್ಯಾಕ್ಟೀರಿಯಾಗಳಿಗೆ ಒಗ್ಗದೆ, ಅಪಕಾರಿ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಪ್ರಚೋದಿಸುತ್ತದೆ ಹಾಗೂ ಹಾನಿಕಾರಕ ಸಂಯುಕ್ತಗಳನ್ನು ಬಿಡುಗಡೆಗೊಳಿಸುತ್ತದೆ. ಇದರಿಂದಾಗಿಯೇ ಒಸಡಿನ ಕಾಯಿಲೆಗಳೂ, ದಂತಕ್ಷಯವೂ ಉಂಟಾಗುತ್ತವೆ; ಹಸಿವು-ಸಂತೃಪ್ತಿಯ ಜಾಲದ ಮೇಲಿನ ದುಷ್ಪರಿಣಾಮಗಳಿಂದಾಗಿ ಬೊಜ್ಜು ಹೆಚ್ಚುತ್ತದೆ; ಉರಿಯೂತವೂ ಹೆಚ್ಚಿ ಕರುಳಿನಲ್ಲೂ, ಇತರ ಅಂಗಗಳಲ್ಲೂ ವಿವಿಧ ಕಾಯಿಲೆಗಳಿಗೆ ಕಾರಣವಾಗುತ್ತದೆ.

ಆದ್ದರಿಂದ ನಾವು ಆರೋಗ್ಯದಿಂದಿರಬೇಕಾದರೆ ನಮ್ಮೊಳಗಿರುವ ಉಪಕಾರಿ ಸೂಕ್ಷ್ಮಜೀವಿಗಳ ಹಿತವನ್ನು ಕಾಯಬೇಕು, ಅವುಗಳಿಗೆ ಹೊಂದುವ ನಿಸರ್ಗದತ್ತವಾದ ಆಹಾರವನ್ನೇ ತಿನ್ನಬೇಕು. ಅನಗತ್ಯವಾಗಿ ಪದೇ ಪದೇ ಆಂಟಿಬಯಾಟಿಕ್  ಗಳನ್ನು ಸೇವಿಸಬಾರದು. ಚರ್ಮವನ್ನು ತೊಳೆಯಲು ಕ್ರಿಮಿನಾಶಕ ಸೋಪುಗಳನ್ನು ಬಳಸದಿರುವುದೇ ಒಳ್ಳೆಯದು.

Leave a Reply

Your email address will not be published. Required fields are marked *